ಮಡಿಕೇರಿ, ಫೆ. 28: ಬಹು ವರ್ಷದ ಬೇಡಿಕೆಯಾದ; ಹಿಂದಿನ ಯಾವ ಸರ್ಕಾರಗಳು ಕೂಡ ಸ್ಪಂದಿಸದ ಕುಶಾಲನಗರ ಪೊನ್ನಂಪೇಟೆ ತಾಲೂಕು ರಚನೆಗೆ ನಮ್ಮ ಸರ್ಕಾರದ ಸಚಿವ ಸಂಪುಟ ಒಪ್ಪಿಗೆ ನೀಡಿದ್ದು, ಕುಶಾಲನಗರ ಪೊನ್ನಂಪೇಟೆ ತಾಲೂಕು ರಚನೆ ಖಚಿತ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಸ್ಪಷ್ಟಪಡಿಸಿದರು.ಜಿಲ್ಲೆಗೆ ಭೇಟಿ ನೀಡಿದ್ದ ಅವರು ಹಾರಂಗಿ ಹೆಲಿಪ್ಯಾಡ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಕೊಡಗು ಜಿಲ್ಲೆಯನ್ನು ಸರ್ಕಾರಗಳು ಕಡೆಗಣಿಸುತ್ತಿವೆ ಎಂಬ ಆರೋಪವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಬಜೆಟ್ ನಲ್ಲಿ ಸಾಕಷ್ಟು ಅನುದಾನವನ್ನು ಕೊಡಗಿಗೆ ನೀಡಲಾಗಿದೆ. ಪ್ರಾಕೃತಿಕ ವಿಕೋಪದಿಂದಾದ ಬೆಳೆ ನಷ್ಟಕ್ಕೆ ಎನ್ ಡಿ ಆರ್ ಎಫ್ ನಿಯಮದಡಿ ನೀಡುವ ಪರಿಹಾರ ಎಲ್ಲೆಲ್ಲಿಗೂ ಸಾಕಾಗುವದಿಲ್ಲ; ಈ ನಿಟ್ಟಿನಲ್ಲಿ ಬೆಳೆಗಾರರೊಂದಿಗೆ ಚರ್ಚಿಸಿ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ ಬೆಳೆಗಾರರಿಗೆ ಹೆಚ್ಚಿನ ಆರ್ಥಿಕ ನೆರವು ನೀಡಲು ಪ್ರಯತ್ನಿ ಸುವದಾಗಿ ಸಿಎಂ ಭರವಸೆಯಿತ್ತರು. ಮಳೆ ಅನಾಹುತಕ್ಕೆ ಸಂಬಂಧಿಸಿದ ಕಾಮಗಾರಿಗಳ ಪ್ರಗತಿಯ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ಕೆಲಸಗಳನ್ನು ಚುರುಕುಗೊಳಿಸಲು ಸೂಚಿಸುತ್ತೇನೆ ಎಂದರು.
ಬಿಜೆಪಿ ವಿರುದ್ಧ ಟೀಕೆಭಾರತ ಪಾಕ್ ನಡುವಿನ ಘರ್ಷಣೆ ಸಂಬಂಧ ಬಿಜೆಪಿ ಸರ್ಕಾರ ವಾಸ್ತವತೆಯನ್ನು (ಮೊದಲ ಪುಟದಿಂದ) ತಿಳಿಸುವಲ್ಲಿ ವಿಫಲವಾಗಿದೆ. ಬಿಜೆಪಿ ಯೋಧರ ಜೀವದ ಜೊತೆ ಚೆಲ್ಲಾಟವಾಡುತ್ತಿದೆಯೇನೋ ಎಂಬಂತಹ ಭಾವನೆ ಜನರ ಮನದಲ್ಲಿ ಮೂಡುವ ರೀತಿ ಬಿಜೆಪಿ ವರ್ತಿಸುತ್ತಿದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಆರೋಪಿಸಿದರು. ಅಧಿಕಾರಕ್ಕಾಗಿ ಬಿಜೆಪಿಯಿಂದ ಯೋಧರ ದುರ್ಬಳಕೆ ಆಗುತ್ತಿದೆ ಎಂದು ಗಂಭೀರ ಆರೋಪ ಮಾಡಿದ ಹೆಚ್ಡಿಕೆ ಸಿಆರ್ಪಿಎಫ್ ಯೋಧ ಮಂಡ್ಯದ ದಿ.ಗುರು ಪತ್ನಿಗೆ ಸರ್ಕಾರಿ ಉದ್ಯೋಗ ನೀಡಲು ಸರ್ಕಾರ ಸಿದ್ಧವಿದೆ ಎಂದರು.
ಈ ಸಂದರ್ಭ ಉಸ್ತುವಾರಿ ಸಚಿವ ಸಾ.ರಾ. ಮಹೇಶ್, ಸಣ್ಣ ನೀರಾವರಿ ಮಂತ್ರಿ ಪುಟ್ಟರಾಜು, ಎಂಎಲ್ಸಿ ವೀಣಾ ಅಚ್ಚಯ್ಯ, ಮಾಜಿ ಸಚಿವ ಜೀವಿಜಯ, ರಾಜ್ಯ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಪದ್ಮಿನಿ ಪೊನ್ನಪ್ಪ, ಮಾಜಿ ಎಂಎಲ್ಸಿ ಅರುಣ್ ಮಾಚಯ್ಯ, ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್,ಎಸ್ಪಿ ಡಾ.ಸುಮನ್, ಸಿಇಒ ಲಕ್ಷ್ಮಿಪ್ರಿಯ, ಮಡಿಕೇರಿ ನಗರಸಭಾಧ್ಯಕ್ಷೆ ಕಾವೇರಮ್ಮ ಸೋಮಣ್ಣ ಮತ್ತಿತರರು ಇದ್ದರು.