ರಾಜಕೀಯ ಬೇಡ:ಅಭಿನಂದನ್ ಪತ್ನಿ ಆಕ್ರೋಶ
ನವದೆಹಲಿ, ಫೆ. 28: ಸೈನಿಕರ ತ್ಯಾಗದ ವಿಷಯದಲ್ಲಿ ಯಾರೂ ಕೂಡಾ ರಾಜಕೀಯ ಮಾಡಬಾರದು ಎಂದು ಪಾಕಿಸ್ತಾನ ವಶದಲ್ಲಿರುವ ವಿಂಗ್ ಕಮಾಂಡರ್ ಅಭಿನಂದನ್ ಅವರ ಪತ್ನಿ ಆಕ್ರೋಶದ ಮಾತುಗಳನ್ನಾಡಿದ್ದಾರೆ. ಅಭಿನಂದನ್ ಅವರ ಪತ್ನಿ ಮಾಡಿರುವ ಸೆಲ್ಪೀ ವೀಡಿಯೋದಲ್ಲಿ, ಸೈನಿಕರ ಕುಟುಂಬದ ಪರವಾಗಿ ರಾಜಕೀಯ ಮುಖಂಡರಲ್ಲಿ ಮನವಿ ಮಾಡಿಕೊಳ್ಳುವದೇನೆಂದರೆ, ಯಾರೂ ಕೂಡಾ ಸೈನಿಕರ ತ್ಯಾಗದ ವಿಷಯದಲ್ಲಿ ರಾಜಕೀಯ ಮಾಡಬಾರದು, ಒಬ್ಬ ಸೈನಿಕನಾಗಬೇಕಾದರೆ ಅವರು ಬಹಳಷ್ಟು ತ್ಯಾಗ ಮಾಡಿರಬೇಕಾಗುತ್ತದೆ. ಇದೀಗ ಅಭಿನಂದನ್ ಕುಟುಂಬ ಎದುರಿಸುತ್ತಿರುವ ನೋವನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದಿದ್ದಾರೆ. ಭಾರತ-ಪಾಕ್ ಗಡಿಯಲ್ಲಿ ಪ್ರಕ್ಷುಬ್ದ ವಾತಾವರಣ ಕಡಿಮೆಯಾಗುವವರೆಗೂ ರಾಜಕೀಯ ಪಕ್ಷಗಳು ರಾಜಕೀಯ ರಾಲಿಗಳನ್ನು ನಿಲ್ಲಿಸಬೇಕು, ಸೈನಿಕರ ತ್ಯಾಗ-ಬಲಿದಾನಗಳನ್ನು ರಾಜಕೀಯಕ್ಕಾಗಿ ಕಸಿದುಕೊಳ್ಳುವದನ್ನು ಹಾಗೂ ಬಳಸುವದನ್ನು ಕೂಡಲೇ ನಿಲ್ಲಿಸಬೇಕು ಎಂದು ಅವರು ವಿನಂತಿಸಿಕೊಂಡಿದ್ದಾರೆ
ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ
ಬೆಂಗಳೂರು, ಫೆ. 28: ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಮಾ. 1 ರಿಂದ 18 ರವರೆಗೂ ನಡೆಯಲಿದ್ದು, ಪದವಿಪೂರ್ವ ಶಿಕ್ಷಣ ಇಲಾಖೆ ಪರೀಕ್ಷಾ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ. ಈ ವರ್ಷ 3,38,868 ವಿದ್ಯಾರ್ಥಿಗಳು, 3,34,738 ವಿದ್ಯಾರ್ಥಿನಿಯರೂ ಸೇರಿದಂತೆ ಒಟ್ಟು 6,73,606 ವಿದ್ಯಾರ್ಥಿಗಳು 1013 ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲಿದ್ದಾರೆ. ಈ ಪೈಕಿ 5,60,395 ವಿದ್ಯಾರ್ಥಿಗಳು ಮೊದಲ ಬಾರಿಗೆ ಪರೀಕ್ಷೆ ಬರೆಯಲಿದ್ದಾರೆ. ವಿದ್ಯಾರ್ಥಿಗಳು ಯಾವದೇ ಅಡ್ಡಿ ಆತಂಕವಿಲ್ಲದೆ ನಿರಾತಂಕವಾಗಿ ಪರೀಕ್ಷೆ ಬರೆಯಲು ಮಂಡಳಿ ಎಲ್ಲ ಸಿದ್ಧತೆಗಳನ್ನು ಅಂತಿಮಗೊಳಿಸಿದೆ. ಪರೀಕ್ಷಾ ಕೇಂದ್ರಗಳಿಗೆ ಬಿಗಿ ಪೆÇಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಎಲ್ಲೆಡೆ ಸಿಸಿಟಿವಿಗಳನ್ನು ಅಳವಡಿಸಲಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ಯಾವದೇ ಅಕ್ರಮಗಳು ನಡೆಯದಂತೆ ಎಚ್ಚರಿಕೆ ವಹಿಸಲಾಗಿದೆ. ಪರೀಕ್ಷಾ ಅಕ್ರಮಗಳನ್ನು ತಡೆಗಟ್ಟಲು 2026 ವಿಶೇಷ ಮೇಲ್ವಿಚಾರಕರು, ಜಿಲ್ಲಾಮಟ್ಟದಲ್ಲಿ ಸ್ವ್ಕಾಡ್‍ಗಳನ್ನು ನಿಯೋಜಿಸಲಾಗಿದೆ. ಈ ಬಾರಿ 54 ಕೇಂದ್ರಗಳಲ್ಲಿ ಮೌಲ್ಯಮಾಪನ ಪ್ರಕ್ರಿಯೆ ನಡೆಯಲಿದೆ. ಇದೇ ಮೊದಲ ಬಾರಿಗೆ ಆನ್‍ಲೈನ್ ಮೂಲಕ ಮೌಲ್ಯಮಾಪನ ಮಾಡಿದ ಅಂಕಗಳು ಕೇಂದ್ರದಿಂದಲೇ ನೇರವಾಗಿ ಅಪ್‍ಲೋಡ್ ಆಗಲಿದೆ. ಪ್ರಶ್ನೆ ಪತ್ರಿಕೆ ಸಾಗಿಸುವ ವಾಹನಗಳಿಗೆ ಜಿಪಿಎಸ್ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಸಲಾಗಿದ್ದು, ಉತ್ತರ ಪತ್ರಿಕೆ ಕೊಠಡಿಗಳಿಗೆ 24 ಗಂಟೆಗಳ ಕಾಲ ಪೆÇಲೀಸ್ ಭದ್ರತೆ ಏರ್ಪಡಿಸಲಾಗಿದೆ.
ಒಂದೇ ಪಂದ್ಯದಲ್ಲಿ 46 ಸಿಕ್ಸರ್...!
ಸೆಂಟ್‍ಜಾರ್ಜ್, ಫೆ. 28: ಇಂಗ್ಲೆಂಡ್ ಮತ್ತು ವೆಸ್ಟ್‍ಇಂಡೀಸ್ ನಡುವಿನ ನಾಲ್ಕನೇ ಏಕದಿನ ಪಂದ್ಯ ರನ್‍ಗಳ ಸುನಾಮಿಯನ್ನೇ ಕಂಡಿದ್ದು, ಅಕ್ಷರಶಃ ಉಭಯ ತಂಡಗಳ ಬೌಲರ್‍ಗಳ ಮಾರಣ ಹೋಮ ನಡೆದಿದೆ ಎನ್ನಬಹುದು. ಒಟ್ಟು 98 ಓವರ್‍ಗಳಲ್ಲಿ 46 ಸಿಕ್ಸರ್‍ಗಳು ಮತ್ತು 64 ಬೌಂಡರಿಗಳ ಸಮೇತ ಬರೊಬ್ಬರಿ 807 ರನ್‍ಗಳು ಹರಿದು ಬಂದಿವೆ. ಈ ಪೈಕಿ 3 ಶತಕಗಳೂ ಸೇರಿವೆ. ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ ನಿಗದಿತ 50 ಓವರ್‍ಗಳಲ್ಲಿ ನಾಯಕ ಇಯಾನ್ ಮಾರ್ಗನ್ (103 ರನ್), ಜಾಸ್ ಬಟ್ಲರ್ (150 ರನ್), ಅಲೆಕ್ಸ್ ಹೇಲ್ಸ್ (82 ರನ್) ಮತ್ತು ಜಾನಿ ಬೇರ್ ಸ್ಟೋವ್ (56 ರನ್) ಅವರ ಸಿಡಿಲಬ್ಬರದ ಬ್ಯಾಟಿಂಗ್ ನೆರವಿನಿಂದ 6 ವಿಕೆಟ್ ಕಳೆದುಕೊಂಡು 418 ರನ್‍ಗಳನ್ನು ಪೇರಿಸಿತು. ಈ ಬೃಹತ್ ಮೊತ್ತವನ್ನು ಬೆನ್ನು ಹತ್ತಿದ ವೆಸ್ಟ್‍ಇಂಡೀಸ್ ತಂಡ ದೈತ್ಯ ಆಟಗಾರ ಕ್ರಿಸ್ ಗೇಯ್ಲ್ (162 ರನ್) ಅವರ ಅದ್ಭುತ ಬ್ಯಾಟಿಂಗ್ ನೆರವಿನಿಂದಾಗಿ 48 ಓವರ್‍ಗಳಲ್ಲಿ 389 ರನ್‍ಗಳಿಸಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಕೇವಲ 29 ರನ್‍ಗಳ ಅಂತರದಲ್ಲಿ ಇಂಗ್ಲೆಂಡ್ ಶರಣಾಯಿತು. ಒಂದು ಹಂತದಲ್ಲಿಯಂತೂ ಈ ಪಂದ್ಯದಲ್ಲಿ ವಿಂಡೀಸ್ ತಂಡ ಬ್ರಿಟೀಷರಿಗೆ ಸೋಲಿನ ಭೀತಿ ಮೂಡಿಸಿತ್ತು. ಅಂತಿಮ ಕ್ಷಣಗಳಲ್ಲಿ ಕಾರ್ಲೋಸ್ ಬ್ರಾಥ್ ವೇಟ್ (50 ರನ್) ಮಧ್ಯಮ ಕ್ರಮಾಂಕದಲ್ಲಿ ಡರೆನ್ ಬ್ರಾವೋ (61 ರನ್) ಭರ್ಜರಿ ಬ್ಯಾಟಿಂಗ್ ಮೂಲಕ ವಿಂಡೀಸ್‍ಗೆ ಗೆಲುವಿನ ಆಸೆ ಚಿಗುರಿಸಿದ್ದರು. ಆದರೆ ಕೆಳ ಕ್ರಮಾಂಕದ ಆಟಗಾರರು ದಿಢೀರ್ ವಿಕೆಟ್ ಒಪ್ಪಿಸಿದ್ದರಿಂದ ವಿಂಡೀಸ್ ತಂಡ ಸೋಲೊಪ್ಪಿಕೊಳ್ಳಬೇಕಾಯಿತು.