ವೀರಾಜಪೇಟೆ, ಫೆ. 27: ವೀರಾಜಪೇಟೆಯ ಸಂತ ಅನ್ನಮ್ಮ ಪದವಿ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು ಶಾಸಕರ ಕಚೇರಿಗೆ ಭೇಟಿ ನೀಡಿ ಶಾಸಕ ಕೆ.ಜಿ.ಬೋಪಯ್ಯ ಅವರೊಂದಿಗೆ ಸಂವಾದ ನಡೆಸಿದರು. ಬಜೆಟ್‍ನ ಸ್ವರೂಪ, ವ್ಯಾಪ್ತಿ ಮತ್ತು ಅನುದಾನದ ಹಂಚಿಕೆ ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಚರ್ಚೆ ನಡೆಸಿದರು. ಅರ್ಥಶಾಸ್ತ್ರದ ವಿದ್ಯಾರ್ಥಿಗಳು ಶಾಸಕರೊಂದಿಗೆ ಸಂವಾದವನ್ನು ನಡೆಸಿ ಹಲವಾರು ವಿಚಾರಗಳನ್ನು ತಿಳಿದುಕೊಂಡರು. ಅನುದಾನವನ್ನು ಹೇಗೆ ವಿಂಗಡಣೆ ಮಾಡಲಾಗುತ್ತದೆ ಮತ್ತು ಈ ಪ್ರಸಕ್ತ ಬಜೆಟ್‍ನಲ್ಲಿ ಜಿಲ್ಲೆಗೆ ಏನು ಕೊಡುಗೆ ದೊರಕಿದೆ, ಕೊಡಗು ಜಿಲ್ಲೆಯಲ್ಲಿ ಪ್ರಸ್ತುತವಿರುವ ಸಮಸ್ಯೆಗಳ ಬಗ್ಗೆ ಪ್ರಶ್ನೆಗಳನ್ನು ಕೇಳುವದರ ಮೂಲಕ ತಮ್ಮ ಸಂದೇಹವನ್ನು ಬಗೆಹರಿಸಿದರು. ಮಾತ್ರವಲ್ಲದೆ ಅದರಲ್ಲೂ ವಿಶೇಷವಾಗಿ ಶಿಕ್ಷಣ ಕ್ಷೇತ್ರಕ್ಕೆ ಬಜೆಟ್‍ನಲ್ಲಿರುವ ಅವಕಾಶಗಳು ಮತ್ತು ಶೈಕಣಿಕ ಅಭಿವೃದ್ದಿ ಕಾರ್ಯಕ್ರಮಗಳ ಬಗ್ಗೆ ತಿಳಿದುಕೊಂಡರು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದ ಶಾಸಕ ಕೆ.ಜಿ ಬೋಪಯ್ಯ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಸರ್ಕಾರವು ಇಂದು ಹಲವು ಅಭಿವೃದ್ಧಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಅನುದಾನವು ಸಮರ್ಪಕವಾಗಿ ಬಂದರೆ ಸಮಯಕ್ಕೆ ಅನುಗುಣವಾಗಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತವೆ. ತಮ್ಮ ಅಧಿಕಾರವಧಿಯಲ್ಲಿ ಜಿಲ್ಲೆಯ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಪ್ರಾಮಾಣಿಕವಾದ ಪ್ರಯತ್ನ ಮಾಡುತ್ತೇನೆ. ಕೊಡಗು ಜಲ ಪ್ರವಾಹವನ್ನು ಸಮರ್ಥವಾಗಿ ನಾವು ನಿಭಾಯಿಸಿದ್ದೇವೆ. ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸುವದು ನಮ್ಮ ಉದ್ದೇಶ ಎಂದರು. ಜಿಲ್ಲೆಗೆ ಮಾರಕವಾಗಿರುವ ಕಸ್ತೂರಿ ರಂಗನ್ ವರದಿ ಜಾರಿಗೆ ತಮ್ಮ ಸಂಪೂರ್ಣ ವಿರೋಧ ಇದೆ ಎಂದರು. ಈ ಸಂದರ್ಭದಲ್ಲಿ ಸಂತ ಅನ್ನಮ್ಮ ಪದವಿ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ವಿ.ಎನ್. ಶಾಂತಿಭೂಷಣ್ ಶಾಸಕರ ಆಪ್ತ ಕಾರ್ಯದರ್ಶಿ ಮಲ್ಲಂಡ ಮಧು ದೇವಯ್ಯ ಅವರು ಹಾಜರಿದ್ದರು. - ರಜಿತಾ ಕಾರ್ಯಪ್ಪ