ವೀರಾಜಪೇಟೆ, ಫೆ. 27: ರಾಜ್ಯ ಸರಕಾರವು ದಕ್ಷಿಣ ಕೊಡಗಿನ ಪೊನ್ನಂಪೇಟೆ, ಉತ್ತರ ಕೊಡಗಿನ ಕುಶಾಲನಗರವನ್ನು ಪ್ರತ್ಯೇಕ ತಾಲೂಕುಗಳನ್ನಾಗಿ ರಚಿಸಲು ತೀರ್ಮಾನಿಸಿರುವದರಿಂದ ಪ್ರತ್ಯೇಕ ತಾಲೂಕಿಗಾಗಿ ಹೋರಾಡುತ್ತಿದ್ದ ಎಲ್ಲ ಹೋರಾಟ ಸಮಿತಿಗಳಿಗೆ ಜಯ ಸಂದಂತಾಗಿದೆ. ಸಮ್ಮಿಶ್ರ ಸರ್ಕಾರದ ಮುಖಂಡ ಕುಮಾರಸ್ವಾಮಿ ಈ ತನಕವಿದ್ದ ಗೊಂದಲಗಳಿಗೆ ತೆರೆ ಎಳೆದಿದ್ದಾರೆ ಎಂದು ಜೆ.ಡಿಎಸ್ ಪಕ್ಷದ ಜಿಲ್ಲಾ ಸಮಿತಿ ಉಪಾಧ್ಯಕ್ಷ ಎಸ್.ಎಚ್.ಮೈನುದ್ದೀನ್ ತಿಳಿಸಿದ್ದಾರೆ.

ತಾ. 28ರಂದು (ಇಂದು) ಕೊಡಗಿಗೆ ಆಗಮಿಸುವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಅದ್ಧೂರಿಯ ಸ್ವಾಗತ ಹಾಗೂ ಕೊಡಗಿನ ಜನತೆ ರಾಜಕೀಯ ರಹಿತವಾಗಿ ಅಭಿನಂದನೆಗಳನ್ನು ಸಲ್ಲಿಸಲಿದ್ದಾರೆ. ಇದರಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಎರಡು ತಾಲೂಕುಗಳ ರಚನೆಗೆ ಸರಕಾರದೊಂದಿಗೆ ವಿಚಾರ ವಿನಿಮಯ ಮಾಡಿ ಕೊಡಗಿನ ಜನತೆಗೆ ಸಹಕರಿಸಿದ್ದಾರೆ. ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಪ್ರತ್ಯೇಕ ತಾಲೂಕುಗಳ ಜನತೆಯ ಬೇಡಿಕೆಯನ್ನು ಜೆಡಿಎಸ್ ಪಕ್ಷ ಈಡೇರಿಸಿದಂತಾಗಿದೆ ಎಂದು ಮೈನುದ್ದೀನ್ ಹೇಳಿದ್ದಾರೆ.