ಮಡಿಕೇರಿ, ಫೆ. 27: ಕಾಶ್ಮೀರದ ಪುಲ್ವಾಮದಲ್ಲಿ ಇತ್ತೀಚೆಗೆ ನಡೆದ ಉಗ್ರರ ಧಾಳಿಯಿಂದ ಹುತಾತ್ಮರಾದ ಯೋಧರಿಗೆ ನಗರದ ಮಾರುಕಟ್ಟೆ ಸಂತೆ ವ್ಯಾಪಾರಿಗಳ ಹಿತರಕ್ಷಣಾ ಸಮಿತಿ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು. ನಗರದ ಸಂತೆ ಮಾರುಕಟ್ಟೆ ಬಳಿ ಜಮಾಯಿಸಿದ ಸಂತೆ ವ್ಯಾಪಾರಿಗಳ ಹಿತರಕ್ಷಣಾ ಸಮಿತಿಯ ಪ್ರಮುಖರು ಹಾಗೂ ವ್ಯಾಪಾರಸ್ಥರು ಹುತಾತ್ಮರಾದ ಯೋಧರ ಭಾವಚಿತ್ರವುಳ್ಳ ಬ್ಯಾನರ್ ಹಿಡಿದು ಮೌನಾಚರಣೆ ಸಲ್ಲಿಸಿ, ಪಾಕಿಸ್ತಾನದ ವಿರುದ್ಧ ಘೋಷಣೆ ಕೂಗಿದರು.

ಈ ಸಂದರ್ಭ ಮಾರುಕಟ್ಟೆ ಸಂತೆ ವ್ಯಾಪಾರಿಗಳ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಎಂ.ಎಂ ಇಸ್ಮಾಯಿಲ್ ಮಾತನಾಡಿ, ಉಗ್ರರ ಸಂಚಿಗೆ ಒಳಗಾಗಿ ಹುತಾತ್ಮರಾದ ಯೋಧರ ಆತ್ಮಕ್ಕೆ ಶಾಂತಿ ದೊರೆಯಲಿ. ಭಾರತೀಯ ಪ್ರಜೆಗಳಾದ ನಾವು ಎಲ್ಲರೂ ಭಾರತೀಯ ಸೈನಿಕರ ಬೆಂಬಲಕ್ಕೆ ನಿಲ್ಲಬೇಕಿದೆ. ಮೃತರ ಕುಟುಂಬದ ದುಃಖದಲ್ಲೂ ನಾವು ಭಾಗಿಗಳಾಗೋಣ. ಸಂದರ್ಭ ಬಂದರೆ ಸೈನಿಕರೊಡಗೂಡಿ ಹೋರಾಟ ಮಾಡಲು ಸಿದ್ಧ ಎಂದರು.

ಸಮಿತಿಯ ಕಾರ್ಯದರ್ಶಿ ರಜಾಕ್ ಮಾತನಾಡಿ, ಅನ್ಯಾಯ ದಿಂದ ಧಾಳಿ ಮಾಡುವ ಪಾಕಿಸ್ತಾನದ ನಡೆಯನ್ನು ಭಾರತೀಯ ಪ್ರಜೆಗಳಾದ ನಾವು ಖಂಡಿಸಬೇಕಿದೆ ಎಂದರು. ಪ್ರಮುಖರಾದ ಎಂ.ಬಿ. ಶರೀಫ್, ರಮೇಶ್, ನಗರಸಭಾ ಸದಸ್ಯ ಪೀಟರ್ ಮತ್ತಿತರರು ಇದ್ದರು.