ವೀರಾಜಪೇಟೆ, ಫೆ. 27: ರಾಷ್ಟ್ರ ನಿರ್ಮಾಣ ಆಗಬೇಕಾದರೆ ರಾಜಕೀಯ ಕರ್ತವ್ಯದ ಅರಿವಿರಬೇಕು. ಚುನಾವಣೆ ಒಂದು ದಿನದ ಆಚರಣೆಯಾಗಿರದೆ ವ್ಯವಸ್ಥೆ ಒಂದರ ಸಂರಚನೆಯಾಗಿದ್ದು, ಅದು ನಮ್ಮ ಮೇಲೆ ಬೀರುವ ಪರಿಣಾಮವನ್ನು ಗಮನದಲ್ಲಿಟ್ಟುಕೊಂಡು ಮತದಾನ ಮಾಡುವಂತಾಗಬೇಕು ಎಂದು ಕೊಡಗು ಪ್ರೆಸ್ ಕ್ಲಬ್‍ನ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಹೇಳಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗ ಮತ್ತು ಮಂಗಳೂರು ವಿ.ವಿ.ಯ ರಾಜ್ಯಶಾಸ್ತ್ರ ವಿಭಾಗದಿಂದ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕ ಆಡಳಿತದಲ್ಲಿ ರಾeಕೀಯ ಅಸ್ಥಿರತೆ ಎಂಬ ವಿಷಯದ ಬಗ್ಗೆ ಮಾತನಾಡಿದ ಅವರು ಚುನಾವಣಾ ಆಯೋಗ ಕ್ರಿಮಿನಲ್ ಹಿನ್ನೆಲೆಯ ರಾಜಕಾರಣಿಗೆ ಅವಕಾಶ ನೀಡದೆ ಯುವ ಸಮುದಾಯವು ರಾಜಕೀಯದಲ್ಲಿ ಪಾಲ್ಗೊಳ್ಳುವಂತೆ ಮಾಡಿ ಉತ್ತಮ ಆಡಳಿತ ನೀಡಲು ಅನುವು ಮಾಡಿಕೊಡಬೇಕು. ಕುಲಗೆಟ್ಟ ರಾಜಕೀಯ ವ್ಯವಸ್ಥೆಯ ಬಗ್ಗೆ ವಿದ್ಯಾರ್ಥಿಗಳು ಜಾಗೃತರಾಗಿ ತಮ್ಮ ಕರ್ತವ್ಯವನ್ನು ಅರಿತು ಮತದಾನ ಮಾಡಬೇಕು. ಪ್ರಸ್ತುತ ಚುನಾವಣೆಯಲ್ಲಿ ಹಲವು ಸುಧಾರಣೆಗಳಾಗಿದ್ದು, ಮತದಾರರಿಗೆ ನೋಟಾದಂತಹ ಅವಕಾಶಗಳು ಬಂದಿದೆ ಎಂದು ಹೇಳಿದರು.

ಪ್ರಾಂಶುಪಾಲ ಟಿ.ಕೆ. ಬೋಪಯ್ಯ ಮಾತನಾಡಿ, ಪ್ರಸ್ತುತ ರಾeಕೀಯದಲ್ಲಿ ಹಲವು ದೋಷಗಳಿದ್ದು ಯುವಜನರು ಇದರ ಬಗ್ಗೆ ಜಾಗೃತಿ ಮೂಡಿಸಿ ಉತ್ತಮ ರಾಜಕೀಯ ವ್ಯವಸ್ಥೆ ಬರುವಂತೆ ಎಲ್ಲರೂ ಸೇರಿ ಆಂದೋಲನ ನಡೆಸುವಂತಾಗಬೇಕು. ಇಂತಹ ವಿಚಾರಗೋಷ್ಠಿಗಳಲ್ಲಿ ಚರ್ಚೆ ನಡೆಸಿ ನಿರ್ಣಯ ಕ್ಯೆಗೊಂಡು ಸರ್ಕಾರದ ಗಮನ ಸೆಳೆಯಬೇಕು ಎಂದರು.

ಈ ಸಂದರ್ಭ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿ ಕಾವೇರಿ ಕಾಲೇಜಿಗೆ ನೇಮಕಗೊಂಡ ಅಕ್ಷತಾ ನಾಯ್ಕ್ ಹಾಗೂ ಕಾಲೇಜಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಹೆಚ್.ಆರ್. ಮಣಿ ಇವರುಗಳನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ರಾಜ್ಯಶಾಸ್ತ್ರ ಪ್ರಾದ್ಯಾಪಕಿ ಪ್ರೊ. ಆರ್. ದಿವ್ಯ, ಪ್ರೊ. ಎಂ.ಎನ್. ವನಿತ್‍ಕುಮಾರ್, ಪ್ರೊ. ಎಂ.ಬಿ. ದಿವ್ಯ, ಪ್ರೊ. ವೇಣುಗೋಪಾಲ್ ಉಪಸ್ಥಿತರಿದ್ದರು.