ಮಡಿಕೇರಿ, ಫೆ. 27: ಬೇಸಿಗೆ ಅವಧಿಯಲ್ಲಿ ನೀರಿನಿಂದ ಹರಡುವ ಕಾಲರಾ, ಕರುಳು ಬೇನೆ, ವಾಂತಿಬೇಧಿ, ಅತಿಸಾರ ಭೇದಿ, ಕಾಮಾಲೆ ಮತ್ತಿತರ ರೋಗಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸುವದು ಅಗತ್ಯ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ. ಮೋಹನ್ ಸಲಹೆಯಿತ್ತರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ರಾಷ್ಟ್ರೀಯ ಆರೋಗ್ಯ ಅಭಿಯಾನ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಹಾಗೂ ಕಾರ್ಯನಿರತ ಪತ್ರಕರ್ತರ ಸಂಘ ಸಹಕಾರದಲ್ಲಿ ನಗರದ ಡಿಎಚ್‍ಒ ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಕುರಿತು ಮಾಧ್ಯಮದವರಿಗೆ ಏರ್ಪಡಿಸಲಾಗಿದ್ದ ಮಾಹಿತಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮನೆಯಿಂದ ಹೊರಗೆ ಹೋಗುವಾಗ ತಪ್ಪದೇ ಶುದ್ಧ ಕುಡಿಯುವ ನೀರು ತೆಗೆದುಕೊಂಡು ಹೋಗುವಂತಾಗಬೇಕು. ಬಿಸಿಲಿನಲ್ಲಿ ಹೊರಗೆ ಕಾರ್ಯನಿರ್ವಹಿಸುವವರು ಮಧ್ಯಾಹ್ನದ ವೇಳೆಯಲ್ಲಿ ಬಿಡುವು ಮಾಡಿಕೊಳ್ಳಬೇಕು.

ತೆಳುವಾದ ಹತ್ತಿ ಬಟ್ಟೆ ಧರಿಸುವದು ಒಳ್ಳೆಯದು. ಮಜ್ಜಿಗೆ, ಎಳನೀರು, ಕುಡಿಯಬೇಕು. ಬೆಚ್ಚಗಿನ ಮಸಾಲೆ ರಹಿತ ಸಾತ್ವಿಕ ಆಹಾರ ಸೇವಿಸಬೇಕು. ಹಣ್ಣಿನ ರಸ ಪಾನಕ ಕುಡಿಯುವದು ಬೇಸಿಗೆ ಅವಧಿಯಲ್ಲಿ ಉತ್ತಮ ಹಾಗೆಯೇ ಗಾಳಿಯಾಡು ವಂತಿರುವ ಪಾದರಕ್ಷೆ ಧರಿಸಬೇಕು

ನೈರ್ಮಲ್ಯ ಮತ್ತು ಶುಚಿತ್ವಕ್ಕೆ ಒತ್ತು ನೀಡಬೇಕು. ಶೌಚಾಲಯಗಳನ್ನು ಪ್ರತೀ ನಿತ್ಯ ಬ್ಲೀಚಿಂಗ್, ಪಿನಾಯಿಲ್ ಹಾಕಿ ಸ್ವಚ್ಛಗೊಳಿಸಬೇಕು. ಕುಡಿಯುವ ನೀರು ಸುರಕ್ಷತೆ ಬಗ್ಗೆ ಎಚ್ಚರ ವಹಿಸಬೇಕು. ಕುಡಿಯುವ ನೀರಿನ ಮೂಲ ಸ್ಥಾನದ ಹತ್ತಿರ ಮಲ, ಮೂತ್ರ ವಿಸರ್ಜನೆ ಮಾಡಬಾರದು. ಬಟ್ಟೆಗಳನ್ನು ಒಗೆಯಬಾರದು, ಕಸ ಬಿಸಾಡಬಾರದು. ಕುಡಿಯುವ ನೀರಿನ ಮೂಲಗಳಿಗೆ ಕ್ಲೋರಿನೇಷನ್ ಮಾಡುವದು, ಟ್ಯಾಂಕ್‍ನ್ನು ವಾರಕ್ಕೊಮ್ಮೆ ತೊಳೆಯು ವದು ಹೀಗೆ ಮಾಡುವದರಿಂದ ಬೇಸಿಗೆಯಲ್ಲಿ ಬರುವ ರೋಗಗಳನ್ನು ತಡೆಯಬಹುದು ಎಂದು ಡಾ. ಮೋಹನ್ ಹೇಳಿದರು.

ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷೆ ಸವಿತಾ ರೈ ಅವರು ಮಾತನಾಡಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಹಲವು ಕಾರ್ಯಕ್ರಮಗಳಿದ್ದು, ಇವುಗಳನ್ನು ಸಾರ್ವಜನಿಕರಿಗೆ ತಲಪಿಸುವಂತಾಗಬೇಕು. ಆರೋಗ್ಯ ಸಂಬಂಧಿಸಿದಂತೆ ಹೆಚ್ಚಿನ ಜಾಗೃತಿ ಮೂಡಿಸುವಂತಾಗಬೇಕು ಎಂದು ನುಡಿದರು.

ಆರ್.ಸಿ.ಹೆಚ್. ಅಧಿಕಾರಿ ಡಾ. ಆನಂದ್ ಮಾತನಾಡಿ, ಪ್ರತಿಯೊಬ್ಬರೂ ಸುರಕ್ಷಿತ ಆರೋಗ್ಯದ ಕಡೆ ಗಮನಹರಿಸಬೇಕು. ಮಕ್ಕಳ ಅಪೌಷ್ಠಿಕತೆ ನಿವಾರಣೆಗೆ ಕೈಜೋಡಿಸಬೇಕು ಎಂದರಲ್ಲದೆ, ರಕ್ತಹೀನತೆ ತಡೆಯಲು ಅಗತ್ಯ ಕ್ರಮ ಕೈಗೊಳ್ಳಬೇಕು. ರಾಷ್ಟ್ರೀಯ ಸ್ವಸ್ಥ ಕಾರ್ಯಕ್ರಮ, ನಗು-ಮಗು, ವಾತ್ಸಲ್ಯ ವಾಣಿ, ರಾಷ್ಟ್ರೀಯ ಕುಟುಂಬ ಕಲ್ಯಾಣ ಕಾರ್ಯಕ್ರಮಗಳು, ರಾಷ್ಟ್ರೀಯ ಅಂಧತ್ವ ನಿವಾರಣಾ ಕಾರ್ಯಕ್ರಮ ಮತ್ತಿತರ ಯೋಜನೆಗಳ ಬಗ್ಗೆ ಅವರು ನೀಡಿದರು.

ಸಾಂಕ್ರಾಮಿಕ ರೋಗಗಳ ನಿಯಂತ್ರಣಾಧಿಕಾರಿ ಡಾ. ಎಂ. ಶಿವಕುಮಾರ್ ಮಾತನಾಡಿ, ಮಲೇರಿಯಾ, ಡೆಂಗ್ಯೂ ಹಾಗೂ ಚಿಕನ್‍ಗುನ್ಯಾ ನಿಯಂತ್ರಣ ಬಗ್ಗೆ ಗಮನಹರಿಸಬೇಕು. ಅಯೋಡಿನ್ ಅಂಶವುಳ್ಳ ಆಹಾರ ಪದಾರ್ಥಗಳನ್ನು ಸೇವಿಸಬೇಕು. ಮದ್ಯಪಾನ ಹಾಗೂ ಧೂಮಪಾನಗಳಿಂದ ದೂರವಿರಬೇಕು. ಮಧುಮೇಹ, ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆಗಳು, ಕ್ಯಾನ್ಸರ್ ಮತ್ತಿತರ ಕಾಯಿಲೆಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಅವರು ತಿಳಿಸಿದರು. ಜಿಲ್ಲಾ ಏಡ್ಸ್ ನಿಯಂತ್ರ ಣಾಧಿಕಾರಿ ಡಾ. ಎ.ಸಿ. ಶಿವಕುಮಾರ್ ಅವರು ಹೆಚ್.ಐ.ವಿ. ಏಡ್ಸ್ ಹರಡದಂತೆ ಮುನ್ನೆಚ್ಚರಿಕೆ ವಹಿಸಬೇಕಿದೆ ಎಂದರು. ಮನೋವೈದ್ಯರಾದ ಡೆವಿನ್ ಮಾನಸಿಕ ಆರೋಗ್ಯದ ಬಗ್ಗೆ ಪ್ರತಿಯೊಬ್ಬರಲ್ಲೂ ತಿಳುವಳಿಕೆ ಇರಬೇಕು ಎಂದರು. ಸರ್ವರಿಗೂ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಆಯುಷ್ಮಾನ್ ಭಾರತ ಹಾಗೂ ಆರೋಗ್ಯ ಕರ್ನಾಟಕ ಕಾರ್ಯಕ್ರಮ ಜಾರಿಗೊಳಿಸಿದೆ ಎಂದು ಸಮನ್ವ ಯಾಧಿಕಾರಿ ತೇಜಸ್ ಮಾಹಿತಿ ನೀಡಿದರು.

ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ರಮೇಶ್ ಅವರು ಮತದಾನದ ಮಹತ್ವ ಕುರಿತು ಪ್ರತಿಜ್ಞಾವವಿಧಿ ಭೋದಿಸಿದರು. ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಮಾಹಿತಿಗಳ ಕೈಪಿಡಿಯನ್ನು ವಾರ್ತಾಧಿಕಾರಿ ಚಿನ್ನಸ್ವಾಮಿ ಅವರು ಬಿಡುಗಡೆ ಮಾಡಿದರು.

ರಾಷ್ಟ್ರೀಯ ಆರೋಗ್ಯ ಅಭಿಯಾನ ಕಾರ್ಯಕ್ರಮ ವ್ಯವಸ್ಥಾಪಕ ದೇವರಾಜು, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ಮೇಲ್ವಿಚಾರಕಿ ಸುನಿತಾ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ರಮೇಶ್ ಅವರು ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.