ಮೂರ್ನಾಡು, ಫೆ. 27: ಮೂರ್ನಾಡು ವಿದ್ಯಾಸಂಸ್ಥೆಯ ಪ್ರಥಮ ದರ್ಜೆ ಕಾಲೇಜಿನಲ್ಲಿ ಹರದಾಸ ಅಪ್ಪಚ್ಚಕವಿ 150ನೇ ಜನ್ಮೋತ್ಸವದ ನೆನಪಿನಲ್ಲಿ ಗೀತಗಾಯನ ಕಾರ್ಯಕ್ರಮ ಜರುಗಿತು.

ವಿದ್ಯಾಸಂಸ್ಥೆಯ ಕಾವೇರಿ ಸಭಾಂಗಣದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಅಡ್ಡಂಡ ಕಾರ್ಯಪ್ಪ ರಚಿಸಿ ನಿರ್ದೇಶಿಸಿದ ಹರದಾಸ ಅಪ್ಪಚ್ಚ ಕವಿಯ ಕಾವ್ಯಗಳನ್ನು ಸುಶ್ರಾವ್ಯವಾಗಿ ಆಂಗೀರ ಕುಸುಮ್, ಲೋಹಿತ್ ಭೀಮಯ್ಯ ಹಾಡಿ ಸಭಿಕರ ಮನಗೆದ್ದರು. ಹಾಡುಗಳಿಗೆ ಶ್ರೀನಿವಾಸ್ ಕೀಬೋರ್ಡ್ ನುಡಿಸಿ, ಚಂದ್ರನ್ ತಬಲ ಬಾರಿಸಿ ಸಾಥ್ ನೀಡಿದರು.

ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಅಡ್ಡಂಡ ಕಾರ್ಯಪ್ಪ ಮಾತನಾಡಿ, ಹರದಾಸ ಅಪ್ಪಚ್ಚಕವಿ ಕೊಡಗಿನ ವರಕವಿ, ತತ್ವ್ವಜ್ಞಾನಿ, ಚಿಂತಕ, ಸಮಾಜ ಸುಧಾಕರರಾಗಿದ್ದರು. ತಮ್ಮ ಕವಿತೆ ನಾಟಕಗಳ ಮೂಲಕ ಸಮಾಜದಲ್ಲಿ ಸುಧಾರಣೆಗಳನ್ನು ತರಲು ಶ್ರಮಿಸಿದರು. ಪಳ್ಳೋಳ ಪಳಮೆ ಜಾನಪದ ಲೋಕದ ಪ್ರಪ್ರಥಮ ಪುಸ್ತಕವಾಗಿದೆ ಎಂದು ತಿಳಿಸಿದರು. ಮೂರ್ನಾಡು ವಿದ್ಯಾಸಂಸ್ಥೆಯ ಅಧ್ಯಕ್ಷ ಬಾಚ್ಚೇಟಿರ ಜಿ. ಮಾದಪ್ಪ ಅಧ್ಯಕ್ಷತೆ ವಹಿಸಿದರು. ಕೊಡವ ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಮಡೆಯಂಡ ವಿಠಲ್ ಬೆಳ್ಳಪ್ಪ, ಪ್ರಾಂಶುಪಾಲ ಪ್ರೊ. ಪಟ್ಟಡ ಪೂವಣ್ಣ, ವಿದ್ಯಾಸಂಸ್ಥೆ ನಿರ್ದೇಶಕ ಪೆಮ್ಮುಡಿಯಂಡ ವೇಣು ಅಪ್ಪಣ್ಣ, ದಂಬೆಕೋಡಿ ಸುಶೀಲ, ಉಪನ್ಯಾಸಕ ವೃಂದದವರು ಉಪಸ್ಥಿತರಿದ್ದರು. ಈ ಸಂದರ್ಭ ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಅಡ್ಡಂಡ ಕಾರ್ಯಪ್ಪ ಅವರನ್ನು ಸನ್ಮಾನಿಸಲಾಯಿತು.