ಕುಶಾಲನಗರ, ಫೆ. 27: ಕ್ರೀಡಾಕೂಟಗಳು ಸಾಮರಸ್ಯ ಬೆಸೆಯುವ ವೇದಿಕೆಗಳಾಗಿದ್ದು ಗ್ರಾಮೀಣ ಪ್ರತಿಭೆಗಳ ಬೆಳವಣಿಗೆಗೆ ಪೂರಕವಾಗಿವೆ ಎಂದು ಮಡಿಕೇರಿ ಕ್ಷೇತ್ರ ಶಾಸಕ ಅಪ್ಪಚ್ಚು ರಂಜನ್ ಹೇಳಿದರು.

ಕುಶಾಲನಗರ ಕಾವೇರಿ ಯುವಕ ಸಂಘದ ವತಿಯಿಂದ ಜೂನಿಯರ್ ಕಾಲೇಜು ಮೈದಾನದಲ್ಲಿ ಹಮ್ಮಿ ಕೊಂಡಿದ್ದ ಜಿಲ್ಲಾಮಟ್ಟದ ಹೊನಲು ಬೆಳಕಿನ ಕೆಪಿಎಲ್ ಕ್ರಿಕೆಟ್ ಪಂದ್ಯಾಟ ಉದ್ಘಾಟಿಸಿ ಮಾತನಾಡಿದ ಅವರು, ಕ್ರೀಡಾಕೂಟಗಳ ಮೂಲಕ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಸಿಕೊಳ್ಳಲು ಸಾಧ್ಯ ಎಂದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ವೀರಾಜಪೇಟೆ ಕ್ಷೇತ್ರ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಹಾಕಿಯ ತವರೂರು ಕೊಡಗು ಜಿಲ್ಲೆಯಲ್ಲಿ ಇತರೆ ಕ್ರೀಡಾಕೂಟಗಳು ಜರುಗುತ್ತಿರುವದು ಶ್ಲಾಘನೀಯ ವಿಚಾರ. ವಿವಿಧ ರೀತಿಯ ಆಟೋಗಳನ್ನು ಹಮ್ಮಿ ಕೊಳ್ಳುವ ಮೂಲಕ ಸಂಘಸಂಸ್ಥೆಗಳ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕಿದೆ ಎಂದರು.

ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಚಿಲ್ಲನ ಗಣಿಪ್ರಸಾದ್, ಸ್ಥಳೀಯ ಪ್ರಮುಖರಾದ ಹೆಚ್.ಎಂ. ಮಧುಸೂದನ್, ನಿಸಾರ್ ಅಹಮ್ಮದ್, ಯುವಕ ಸಂಘದ ಅಧ್ಯಕ್ಷ ಅನೀಶ್, ಪ್ರಮುಖರಾದ ಪೆಮ್ಮಯ್ಯ, ಸಂತೋಷ್ ಮತ್ತಿತರರು ಇದ್ದರು.