ಸೋಮವಾರಪೇಟೆ,ಫೆ.26: ಕಳೆದ ತಾ. 14ರಂದು ಕಾಶ್ಮೀರಾದ ಪುಲ್ವಮಾದಲ್ಲಿ ನಡೆದ ಭಯೋತ್ಪಾದಕರ ಧಾಳಿಯಲ್ಲಿ ಹುತಾತ್ಮರಾದ ಸೈನಿಕರಿಗೆ ಪಟ್ಟಣದಲ್ಲಿ ಶ್ರದ್ಧಾಂಜಲಿ ಸಲ್ಲಿಸಿದ ಫೆ.15ರಂದು ರೇಂಜರ್ ಬ್ಲಾಕ್ ನಲ್ಲಿ ಪಟಾಕಿ ಸಿಡಿಸಿ ಸೈನಿಕರ ಸಾವನ್ನು ಸಂಭ್ರಮಿಸಿದ ಆರೋಪದಲ್ಲಿ ಮೊಕದ್ದಮೆ ದಾಖಲಿಸಲ್ಪಟ್ಟಿರುವ ಷಂಶುದ್ದೀನ್ ನನ್ನು ಬಂಧಿಸುವಂತೆ ಆಗ್ರಹಿಸಿ ಸೋಮವಾರಪೇಟೆ ಪಟ್ಟಣ ಬಂದ್ ಆಚರಿಸಲಾಯಿತು.

ಕಳೆದ ತಾ. 15ರಂದು ರಾತ್ರಿ ರೇಂಜರ್ ಬ್ಲಾಕ್ ನ ನಿವಾಸಿ, ಇನ್ ಟಚ್ ಮೊಬೈಲ್ ಅಂಗಡಿಯ ಮಾಲೀಕ ಷಂಶುದ್ದೀನ್ ತನ್ನ ಮನೆಯ ಮುಂಭಾಗ ಪಟಾಕಿ ಸಿಡಿಸಿ ಹುತಾತ್ಮ ಸೈನಿಕರ ಸಾವನ್ನು ಸಂಭ್ರಮಿಸಿದ್ದು, ದೇಶದ್ರೋಹ ಎಸಗಿದಂತಾಗಿದೆ. ಇಂತಹ ಕ್ರಮದಿಂದ ದೇಶಾಭಿಮಾನಿಗಳ ಭಾವನೆಗಳಿಗೆ ಧಕ್ಕೆಯಾಗಿದೆ. ದೇಶದಲ್ಲಿದ್ದುಕೊಂಡು ಇಂತಹ ಕೃತ್ಯ ಎಸಗಿದ ಆರೋಪಿಯನ್ನು ತಕ್ಷಣ ಬಂಧಿಸಬೇಕೆಂದು ರಾಷ್ಟ್ರೀಯ ಸುರಕ್ಷಾ ಸಮಿತಿಯ ಪ್ರಮುಖರಾದ ಈರಪ್ಪ ಆಗ್ರಹಿಸಿದರು.

ರಾಷ್ಟ್ರೀಯ ಸುರಕ್ಷಾ ಸಮಿತಿ ಮತ್ತು ಜೈ ಜವಾನ್ ಮಾಜೀ ಸೈನಿಕರ ಸಂಘದ ವತಿಯಿಂದ ಕರೆ ನೀಡಲಾಗಿದ್ದ ಪಟ್ಟಣ ಬಂದ್‍ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಬೆಳಗ್ಗೆ 6 ರಿಂದ ಸಂಜೆ 6 ಗಂಟೆಯವರೆಗೆ ಕರೆ ನೀಡಲಾಗಿದ್ದ ಬಂದ್ ಯಶಸ್ವಿಯಾಯಿತು. ಪತ್ರಿಕೆ ಮಾರಾಟ ಅಂಗಡಿ, ಮೆಡಿಕಲ್, ಹಾಲು ಮಾರಾಟ ಕೇಂದ್ರಗಳನ್ನು ಹೊರತುಪಡಿಸಿದರೆ ಪಟ್ಟಣದ ಇತರ ಎಲ್ಲಾ ಅಂಗಡಿಮುಂಗಟ್ಟುಗಳನ್ನು ಸ್ವಯಂಪ್ರೇರಿತವಾಗಿ ಮುಚ್ಚಿ ವರ್ತಕರು ಪಟ್ಟಣ ಬಂದ್‍ಗೆ ಬೆಂಬಲ ನೀಡಿದರು.

ಪಟ್ಟಣ ಸುತ್ತಮುತ್ತಲಿನ ಕೆಲ ಖಾಸಗಿ ಶಾಲಾ - ಕಾಲೇಜುಗಳಿಗೆ ಆಡಳಿತ ಮಂಡಳಿ ರಜೆ ನೀಡಿದ್ದರಿಂದ ತರಗತಿಗಳು ನಡೆಯಲಿಲ್ಲ. ಇಲ್ಲಿನ ಕಕ್ಕೆಹೊಳೆ ಜಂಕ್ಷನ್, ಜೂನಿಯರ್ ಕಾಲೇಜು ಸಮೀಪದ ಚನ್ನಬಸಪ್ಪ ಸಭಾಂಗಣ, ಬಾಣಾವರ ರಸ್ತೆಯ ಅಂಬೇಡ್ಕರ್ ವೃತ್ತದಿಂದ ಪಟ್ಟಣದ ಒಳಗಿನ ಎಲ್ಲಾ ಅಂಗಡಿಗಳು ಬಂದ್ ಆಗಿದ್ದವು.

ಆಟೋ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದರೆ, ಖಾಸಗಿ ವಾಹನಗಳ ಓಡಾಟಕ್ಕೆ ಯಾವದೇ ತಡೆ ಇರಲಿಲ್ಲ. ಪಟ್ಟಣವನ್ನು ಸಂಪರ್ಕಿಸುವ ಪ್ರಮುಖ ಜಂಕ್ಷನ್ ಗಳಲ್ಲಿ ಪ್ರತಿಭಟನಾಕಾರರು ಜಮಾಯಿಸಿ ಬಂದ್ ನ ಬಗ್ಗೆ ಹೊರಭಾಗದವರಿಗೆ ಮನವರಿಕೆ ಮಾಡುತ್ತಿದ್ದರು. ಬಂದ್ ಬಗ್ಗೆ ಮಾಹಿತಿ ಇಲ್ಲದೇ ಪಟ್ಟಣಕ್ಕೆ ಆಗಮಿಸಿದ ಮಂದಿ ತಮ್ಮ ದೈನಂದಿನ ವ್ಯವಹಾರಗಳಿಗೆ ಪರದಾಡಿದರು.

ಮಧ್ಯಾಹ್ನದ ವೇಳೆಗೆ ಇಲ್ಲಿನ ವಿವೇಕಾನಂದ ವೃತ್ತದಿಂದ ಪಟ್ಟಣದ ಮುಖ್ಯರಸ್ತೆಯಲ್ಲಿ ನೂರಾರು ಮಂದಿ ಪ್ರತಿಭಟನಾಕಾರರು ಮೆರವಣಿಗೆ ನಡೆಸಿ, ಪಟಾಕಿ ಸಿಡಿಸಿದ ಆರೋಪಿಯನ್ನು ಬಂಧಿಸುವಂತೆ ಘೋಷಣೆ ಕೂಗಿದರು. ನಂತರ ತಾಲೂಕು ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. ಇದಾದ ನಂತರ ಪೊಲೀಸ್ ಠಾಣೆಗೆ ತೆರಳಿದ ಪ್ರತಿಭಟನಾಕಾರರು, ಆರೋಪಿಯ ಬಂಧನಕ್ಕೆ ಪೊಲೀಸರು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಆರೋಪಿಸಿ ಧಿಕ್ಕಾರದ ಘೋಷಣೆ ಕೂಗಿದರು. ಮುಂದಿನ 7 ದಿನಗಳ ಒಳಗೆ ಆರೋಪಿಯನ್ನು ಬಂಧಿಸದಿದ್ದರೆ ತಾಲೂಕು, ಕೊಡಗು ಜಿಲ್ಲಾ ಬಂದ್ ಗೆ ಕರೆ ನೀಡಲಾಗುವದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿ, ಮನವಿ ಸಲ್ಲಿಸಿದರು.

ದೇಶದ ವಿಚಾರದಲ್ಲಿ ಪ್ರತಿಯೋರ್ವ ಭಾರತೀಯನೂ ಜಾತಿ,ಮತ,ಧರ್ಮ, ರಾಜಕೀಯ ಮರೆತು ಒಂದಾಗಬೇಕು. ದೇಶಸೇವೆ ಯಲ್ಲಿ ಪ್ರಾಣಾರ್ಪಣೆ ಮಾಡಿದ ಸೈನಿಕರ ಸಾವನ್ನು ಸಂಭ್ರಮಿಸುವ ಮನಸ್ಥಿತಿಯನ್ನು ಎಲ್ಲರೂ ಖಂಡಿಸಲೇಬೇಕು ಎಂದು ಜೈಜವಾನ್ ಮಾಜೀ ಸೈನಿಕರ ಸಂಘದ ಅಧ್ಯಕ್ಷರೂ ಆಗಿರುವ ಈರಪ್ಪ ಅಭಿಪ್ರಾಯಿಸಿದರು.

ಪ್ರತಿಭಟನೆಯಲ್ಲಿ ಮಾಜೀ ಸೈನಿಕರ ಸಂಘದ ಗೌರವಾಧ್ಯಕ್ಷ ಮೇಜರ್ ಮಂದಪ್ಪ, ಪದಾಧಿಕಾರಿ ಗಳಾದ ಮಾಚಯ್ಯ, ಸುಕುಮಾರ್, ಮಹೇಶ್, ವಿಧಾನ ಪರಿಷತ್ ಮಾಜೀ ಸದಸ್ಯ ಎಸ್.ಜಿ. ಮೇದಪ್ಪ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬಿ.ಡಿ. ಮಂಜುನಾಥ್, ಜಿ.ಪಂ. ಸದಸ್ಯ ಬಿ.ಜೆ. ದೀಪಕ್, ಪ್ರಮುಖರಾದ ಎಸ್.ಬಿ. ಭರತ್ ಕುಮಾರ್, ಮನು ರೈ, ಕಿಬ್ಬೆಟ್ಟ ಮಧು, ಗೌಡಳ್ಳಿ ಸುನಿಲ್, ಹಿಂದೂ ಜಾಗರಣಾ ವೇದಿಕೆಯ ಸುಭಾಶ್ ತಿಮ್ಮಯ್ಯ, , ಎಂ.ಬಿ. ಉಮೇಶ್, ದರ್ಶನ್ ಜೋಯಪ್ಪ, ಪ್ರಮುಖರಾದ ರಮೇಶ್, ಮಾದಪ್ಪ, ಮಹೇಶ್, ಸಿ.ಪಿ. ಗೋಪಾಲ್, ಮೋಟಾರ್ ಯೂನಿಯನ್ ಅಧ್ಯಕ್ಷ .ಸಿ.ಸಿ. ನಂದ, ಆಟೋ ಯೂನಿಯನ್ ಅಧ್ಯಕ್ಷ ಮೋಹನ್ ಸೇರಿದಂತೆ ಜೈಜವಾನ್ ಮಾಜೀ ಸೈನಿಕರ ಸಂಘದ ಪದಾಧಿಕಾರಿಗಳು, ವಿವಿಧ ಹಿಂದೂಪರ ಸಂಘಟನೆಯ ಕಾರ್ಯಕರ್ತರು ಭಾಗವಹಿಸಿದ್ದರು.

ಸೋಮವಾರಪೇಟೆ ಉಪ ವಿಭಾಗದ ಡಿವೈಎಸ್‍ಪಿ ಮುರಳೀಧರ್, ಪೊಲೀಸ್ ವೃತ್ತ ನಿರೀಕ್ಷಕ ನಂಜುಂಡೇಗೌಡ, ಠಾಣಾಧಿಕಾರಿ ಶಿವಶಂಕರ್, 2 ಡಿಎಆರ್ ತುಕಡಿ ಸೇರಿದಂತೆ ಠಾಣಾ ಸಿಬ್ಬಂದಿಗಳು ಅಗತ್ಯ ಪೊಲೀಸ್ ಬಂದೋಬಸ್ತ್ ಕಲ್ಪಿಸಿದ್ದರು.