ಕೂಡಿಗೆ, ಫೆ. 26 : ಕೂಡಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮದಲಾಪುರ ಸಮೀಪದಲ್ಲಿರುವ ಬ್ಯಾಡಗೊಟ್ಟ ಗ್ರಾಮಕ್ಕೆ ಕೊಡಗು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಭೇಟಿ ನೀಡಿ ಪರಿಶಿಷ್ಟ ಜಾತಿ ನಿವಾಸಿಗಳ ಮೂಲಭೂತ ಸೌಲಭ್ಯಗಳ ಕೊರತೆ ಹಾಗೂ ಇನ್ನಿತರ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದರು.

ಒಂದು ತಿಂಗಳ ಹಿಂದೆ ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಬ್ಯಾಡಗೊಟ್ಟ ಗ್ರಾಮದ ನಿವಾಸಿಗಳು ಮೂಲಭೂತ ಸೌಲಭ್ಯಗಳನ್ನು ಒದಗಿಸುವಂತೆ ಕೂಡಿಗೆ ಗ್ರಾಮ ಪಂಚಾಯ್ತಿ ಎದುರು ಮತ್ತು ಜಿಲ್ಲಾಧಿಕಾರಿಗಳ ಕಛೇರಿ ಎದುರು ಪ್ರತಿಭಟನೆ ನಡೆಸಿ, ಮನವಿ ಪತ್ರ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಮಂಗಳವಾರ ಜಿಲ್ಲಾಧಿಕಾರಿಯವರು ಸ್ಥಳಕ್ಕೆ ಭೇಟಿ ನೀಡಿ, ವ್ಯವಸ್ಥೆಗಳ ಬಗ್ಗೆ ಪರಿಶೀಲನೆ ನಡೆಸಿ, ಸಂಬಂಧಪಟ್ಟ ಅಧಿಕಾರಿಗಳಿಂದ ಸೂಕ್ತ ಮಾಹಿತಿ ಪಡೆದರು. ನಂತರ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ತುರ್ತು ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.

ರಾಜೀವ್ ಗಾಂಧಿ ವಸತಿ ಯೋಜನೆ ನಿಗಮದ ವತಿಯಿಂದ ತುರ್ತಾಗಿ 13 ಫಲಾನುಭವಿಗಳಿಗೆ ಮನೆಗಳನ್ನು ನಿರ್ಮಿಸಬೇಕು. ವಸತಿ ರಹಿತರಿಗೆ ಅಂಬೇಡ್ಕರ್ ಯೋಜನೆಯಡಿಯಲ್ಲಿ ಈ ಸಾಲಿನಲ್ಲಿ ಸೇರ್ಪಡೆಗೊಳ್ಳದ 17 ಮಂದಿಗೆ ಮನೆಗಳನ್ನು ನಿರ್ಮಿಸಲು ಹೆಸರು ಸೇರ್ಪಡೆಗೊಳಿಸಿ ಹಾಗೂ ಹಕ್ಕು ಪತ್ರಗಳಿಗೆ ಸಂಬಂಧಪಟ್ಟಂತೆ ಸ್ಥಳ ಪರಿಶೀಲಿಸಿ, ಹಕ್ಕು ಪತ್ರಗಳನ್ನು ವಿತರಿಸುವಂತೆ ಸ್ಥಳದಲ್ಲಿದ್ದ ತಾಲೂಕು ತಹಶೀಲ್ದಾರ್ ಅವರಿಗೆ ಸೂಚಿಸಿದರು.

ಮೂಲಭೂತ ಸೌಕರ್ಯವನ್ನು ಒದಗಿಸುವ ಬಗ್ಗೆ ಮೂರು ದಿನದೊಳಗೆ ಸಂಬಂಧಪಟ್ಟ ಮಾಹಿತಿಯೊಂದಿಗೆ ತಾಲೂಕು ಕಾರ್ಯನಿರ್ವಹಣಾಧಿಕಾರಿಗಳ ಗಮನಕ್ಕೆ ತಂದು ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಿಗೆ ಮಾಹಿತಿ ನೀಡಿ, ಅದರ ಮಾಹಿತಿ ಯನ್ನು ತನ್ನ ಗಮನಕ್ಕೆ ತರುವ ಮೂಲಕ ಕ್ರಮಕೈಗೊಳ್ಳಲು ಆದೇಶಿಸಿ ದರು. ಈ ಸಂದರ್ಭ ಜಿ.ಪಂ. ಮಾಜಿ ಅಧ್ಯಕ್ಷ ಹಾಗೂ ಬಸವನಹಳ್ಳಿ ಗಿರಿಜನ ಸಹಕಾರ ಸಂಘದ ಅಧ್ಯಕ್ಷ ಎಸ್.ಎನ್.ರಾಜಾರಾವ್ ಅವರು ಜಿಲ್ಲಾಧಿಕಾರಿಯವರಿಗೆ ಈ ಸಾಲಿನಲ್ಲಿ ಲೋಕೋಪಯೋಗಿ ಸಚಿವ ರೇವಣ್ಣ ಅವರು ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿಗೆ ಹಣ ಮಂಜೂರು ಮಾಡಿರುವ ಬಗ್ಗೆ ತಿಳಿಸಿದರು. ಕಾಮಗಾರಿಯನ್ನು ಗುತ್ತಿಗೆದಾರರು ಸಮರ್ಪಕವಾಗಿ ನಿರ್ವಹಿಸುವಂತೆ ಲೋಕೋಪಯೋಗಿ ಇಲಾಖೆÉಗೆ ಜಿಲ್ಲಾಧಿಕಾರಿ ಸೂಚಿಸಿದರು.

ಸ್ಥಳದಲ್ಲಿ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಭಾರತಿ, ಜಿಲ್ಲಾ ಗಿರಿಜನ ಯೋಜನ ಸಮನ್ವಯ ಅಧಿಕಾರಿ ಶಿವಕುಮಾರ್, ತಾಲೂಕು ತಹಶೀಲ್ದಾರ್ ಗೋವಿಂದರಾಜ್, ತಾಲೂಕು ಗಿರಿಜನ ಯೋಜನಾ ಸಹಾಯಕ ನಿರ್ದೇಶಕ ಶೇಖರ್, ಕೂಡಿಗೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಗಿರೀಶ್, ಬಸವನಹಳ್ಳಿ ಗಿರಿಜನ ಸಹಕಾರ ಸಂಘದ ಅಧ್ಯಕ್ಷ ಎಸ್.ಎನ್.ರಾಜಾರಾವ್, ವಿವಿಧ ಸಂಘಟನೆಗಳ ಪ್ರಮುಖರು ಇದ್ದರು.