ಮಡಿಕೇರಿ, ಫೆ. 26: ಕಳೆದ ತಾ. 14 ರಂದು ಕಾಶ್ಮೀರದ ಪುಲ್ವಾಮಾ ಬಳಿಯ ಆವಂತಿಪುರದಲ್ಲಿ ಭಾರತೀಯ ಅರೆಸೇನಾ ಪಡೆ ಮೇಲೆ ಕಾರ್‍ಬಾಂಬ್ ಧಾಳಿ ಮೂಲಕ ಸೈನಿಕರನ್ನು ಬಲಿ ಪಡೆದಿದ್ದಕ್ಕೆ ಪ್ರತಿಯಾಗಿ ಇಂದು ನಸುಕಿನಲ್ಲಿ ಭಾರತದ ವಾಯುಸೇನೆ ಪ್ರತೀಕಾರದೊಂದಿಗೆ, ಪಾಕಿಸ್ತಾನದ ನೂರಾರು ಉಗ್ರರನ್ನು ಸದೆಬಡಿದಿರುವ ಬೆನ್ನಲ್ಲೇ ಕೊಡಗಿನಲ್ಲಿ ವಿಜಯೋತ್ಸವದೊಂದಿಗೆ ರಣಘೋಷ ಮೊಳಗಿತು.ಭಾರತದ ಪ್ರಧಾನಿ ನರೇಂದ್ರ ಮೋದಿ, ದೇಶದ ಸೈನಿಕರಿಗೆ ಮತ್ತು ಭಾರತ ಮಾತೆಗೆ ಜೈಕಾರ ಮೊಳಗಿದ ಜನತೆ, ವೀರ ಸೈನಿಕರೇ, ಪ್ರಧಾನಮಂತ್ರಿಗಳೇ ಮುನ್ನಡೆಯಿರಿ, ನಾವು ನಿಮ್ಮೊಂದಿಗಿದ್ದೇವೆ ಎಂಬ ರಣಘೋಷ ಮೊಳಗಿಸುತ್ತಾ, ಪಾಕ್ ವಿರುದ್ಧ ಆಕ್ರೋಶದಿಂದ ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸಿದರು.ನಗರ ಬಿಜೆಪಿ ನೇತೃತ್ವದಲ್ಲಿ, ನಗರದ ಇಂದಿರಾಗಾಂಧಿ ವೃತ್ತದಲ್ಲಿ ವಿಜಯೋತ್ಸವದೊಂದಿಗೆ ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು. ಮೇಲ್ಮನೆ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಮಾತನಾಡಿ, ಯೋಧರನ್ನು ಅಮಾನುಷವಾಗಿ ಹತ್ಯೆ ಮಾಡಿದ ದಿನವೇ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸುವದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದು, ಭಾರತದ ವೀರ ಸೈನಿಕರು ಕೇವಲ 12 ದಿನಗಳಲ್ಲಿ ಅದನ್ನು ಸಾಧಿಸಿ ತೋರಿಸಿದ್ದಾರೆ ಎಂದು ನೆನಪಿಸಿದರು. ಇಂದು ಇಡೀ ಭಾರತ ಏಕತಾಭಾವದಿಂದ ನಮ್ಮ ಸೈನ್ಯಕ್ಕೆ (ಮೊದಲ ಪುಟದಿಂದ) ಬೆಂಬಲವಾಗಿದೆ ಎಂದು ಹರ್ಷವ್ಯಕ್ತಪಡಿಸಿದರು. ಬಿಜೆಪಿ ಪದಾಧಿಕಾರಿಗಳಾದ ಮಹೇಶ್ ಜೈನಿ, ಅನಿತಾ ಪೂವಯ್ಯ, ಶಜಿಲ್ ಕೃಷ್ಣ, ಕನ್ನಿಕೆ, ಸಿ.ಕೆ. ಬಾಲಕೃಷ್ಣ, ಉಮೇಶ್ ಸುಬ್ರಮಣಿ, ಅರುಣ್ ಕುಮಾರ್, ಜಗದೀಶ್, ರಾಜೇಶ್, ರೋಷನ್, ಮನು ಮಂಜುನಾಥ್, ಧನಂಜಯ್, ನಿವೃತ್ತ ಸೈನಿಕರಾದ ಲಕ್ಷ್ಮಣ, ಚಂದ್ರಶೇಖರ್ ಸಹಿತ ಸಂಘ ಪರಿವಾರದ ಪ್ರಮುಖರು ಪಾಲ್ಗೊಂಡಿದ್ದರು.

ಪಾಕ್‍ಗೆ ಪ್ರತ್ಯುತ್ತರ : ಭಾರತದ ಇತಿಹಾಸದಲ್ಲಿ ಇನ್ನೆಂದಿಗೂ ಪಾಕಿಸ್ತಾನ ಸಹಿತ ಇತರರ ಕೆಂಗಣ್ಣು ಬೀರದಂತೆ ಇಂದು ನಸುಕಿನ ವೇಳೆಯಲ್ಲಿ ಮೊದಲ ಬಾರಿಗೆ ವಾಯುಸೇನೆಯ ವೈಮಾನಿಕ ಧಾಳಿ ನಡೆದಿದೆ ಎಂದು ವಿ.ಹಿಂ.ಪ. ದಕ್ಷಿಣ ಭಾರತ ಸಂಘಟನಾ ಕಾರ್ಯದರ್ಶಿ ಕೇಶವಹೆಗಡೆ ನೆನಪಿಸಿದರು. ಜನರಲ್ ತಿಮ್ಮಯ್ಯ ವೃತ್ತದಲ್ಲಿ ವಿ.ಹಿಂ.ಪ., ಬಜರಂಗದಳ ಹಾಗೂ ಸಂಘ ಪರಿವಾರ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು.

ಭಾರತೀಯ ಸೇನೆ ಮತ್ತು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರಕ್ಕೆ ಬೆಂಗಾವಲಾಗಿದ್ದು, ದೇಶದ ಜನಕೋಟಿ ಪಾಕಿಸ್ತಾನಕ್ಕೆ ತಕ್ಕ ಶಾಸ್ತಿ ಮಾಡಬೇಕೆಂದು ಅವರು ಕರೆ ನೀಡಿದರು. ಆ ದಿಸೆಯಲ್ಲಿ ಸಂಘಟನೆಯಿಂದ ವೀರ ಸೈನಿಕರ ನಾಡು ಕೊಡಗಿನಲ್ಲಿ ಇಂದು ವಿಜಯೋತ್ಸವ ಆಚರಿಸಲಾಗುತ್ತಿದೆ ಎಂದು ಇತಿಹಾಸವನ್ನು ನೆನಪಿಸಿದರು.

ವಿ.ಹಿಂ.ಪ. ರಾಜ್ಯ ಕಾರ್ಯಾಧ್ಯಕ್ಷ ಎಂ.ಬಿ. ಪುರಾಣಿಕ್ ಮಾತನಾಡಿ, ನಸುಕಿನಲ್ಲಿ ನಡೆದಿರುವ ವೈಮಾನಿಕ ಧಾಳಿಯಿಂದ ಪಾಕಿಸ್ತಾನದ ಉಗ್ರರನ್ನು ಸದೆಬಡಿದಿರುವ ಸುದ್ದಿಯಿಂದ ಇಡೀ ಭಾರತ ಸಂಭ್ರಮದಲ್ಲಿದೆ ಎಂದು ನೆನಪಿಸುತ್ತಾ, ಸಮಾಜದಲ್ಲಿ ಸದಾ ಜಾಗೃತಿಯೊಂದಿಗೆ ರಾಷ್ಟ್ರದ್ರೋಹಿ ಶಕ್ತಿಗಳ ಹುಟ್ಟಡಗಿಸಬೇಕೆಂದು ಕರೆ ನೀಡಿದರು.

ಪರಿಷತ್ತಿನ ಪ್ರಾಂತ ಕಾರ್ಯದರ್ಶಿ ಶರಣ್ ಪಂಪ್‍ವೆಲ್, ಜಿಲ್ಲಾ ಅಧ್ಯಕ್ಷ ಬೋಪಯ್ಯ, ಕಾರ್ಯಾಧ್ಯಕ್ಷ ಅಪ್ಪಯ್ಯ ಸೇರಿದಂತೆ ಬಿಜೆಪಿ ಜಿಲ್ಲಾಧ್ಯಕ್ಷ ಭಾರತೀಶ್, ಬಜರಂಗದಳದ ಚೇತನ್, ಹಿಂಜಾವೆ ಅಜಿತ್‍ಕುಮಾರ್, ಸಂಘಪರಿವಾರದ ಚಂದ್ರ ಉಡೋತ್, ರಾಬಿನ್ ದೇವಯ್ಯ, ಅರುಣ್ ಶೆಟ್ಟಿ, ಧನಂಜಯ್, ಮೇದಪ್ಪ, ನರಸಿಂಹ, ಪವನ್, ಸತ್ಯ ಸಹಿತ ಹೆಚ್ಚಿನ ಕಾರ್ಯಕರ್ತರು ಪಾಲ್ಗೊಂಡಿದ್ದರು. ಜ. ತಿಮ್ಮಯ್ಯ ವೃತ್ತದಲ್ಲಿ ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸಿದರು.

ಗೋಣಿಕೊಪ್ಪ : ಪಾಕ್ ಉಗ್ರರ ಅಡಗುತಾಣದ ಮೇಲೆ ಭಾರತೀಯ ಸೈನಿಕರು ನಡೆಸಿದ ಕಾರ್ಯಾಚರಣೆಗೆ ಗೋಣಿಕೊಪ್ಪದಲ್ಲಿ ಹಿಂದೂ ಸಂಘಟನೆಗಳಿಂದ ವಿಜಯೋತ್ಸವ ಆಚರಿಸಿ ಸಂಭ್ರಮಿಸಲಾಯಿತು. ಪಟ್ಟಣದ ಬಸ್ ನಿಲ್ದಾಣದ ಎದುರು ಜಮಾಯಿಸಿದ ಹಿಂದೂ ಸಂಘಟನೆಗಳ ಕಾಯಕರ್ತರುಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ನಮ್ಮ ಸೈನಿಕರ ಮೇಲೆ ಧಾಳಿ ನಡೆಸಿ ಬಲಿ ಪಡೆದ ಪಾಕ್‍ಗೆ ತಕ್ಕ ಉತ್ತರ ನೀಡಿದೆ. ಭಾರತೀಯರಾದ ನಾವುಗಳು ಇದನ್ನೆ ಬಯಸಿದ್ದೆವು ಎಂದು ಆರ್‍ಎಸ್‍ಎಸ್ ಸಂಘ ಚಾಲಕ್ ಚೆಕ್ಕೇರ ಮನು ಕಾವೇರಪ್ಪ ನುಡಿದರು. ಪಾಕ್ ಉಗ್ರ ಚಟುವಟಿಕೆಗೆ ಭಾರತ ದಿಟ್ಟ ಉತ್ತರ ನೀಡಿದೆ. ಇದನ್ನು ಅರಿತುಕೊಂಡು ಪಾಕಿಸ್ತಾನ ಪಾಠ ಕಲಿಯಬೇಕಾದ ಅನುವಾರ್ಯತೆ ಇದೆ ಎಂದರು.

ದೇಶದ ಒಳಗೂ ವಿರೋಧಿಗಳಿಗೆ ಇದು ಎಚ್ಚರಿಕೆಯ ಕರೆಗಂಟೆಯಾಗಿದೆ. ದೇಶ ರಕ್ಷಣೆಗೆ ನಾವು ಸೈನಿಕರ ಪರವಾಗಿ ಎದ್ದು ನಿಲ್ಲಬೇಕಿದೆ. ಯಾವ ಕ್ಷಣದಲ್ಲೂ ದೇಶಾಭಿಮಾನದಿಂದ ಉಗ್ರರ ಶಮನಕ್ಕೆ ಹೋರಾಟಕ್ಕೆ ಸಿದ್ದರಾಗಬೇಕಿದೆ ಎಂದರು. ತಾ. ಪಂ. ಉಪಾಧ್ಯಕ್ಷ ನೆಲ್ಲೀರ ಚಲನ್‍ಕುಮಾರ್ ಮಾತನಾಡಿ, ನಮ್ಮ ಸೈನಿಕರಿಗೆ ಧೈರ್ಯ ತುಂಬುವ ಪ್ರಯತ್ನ ಆಗಬೇಕಿದೆ ಎಂದರು.

ಈ ಸಂದರ್ಭ ಪ್ರಮುಖರುಗಳಾದ ಸುಬ್ರಮಣಿ ಸಂಘ ಪರಿವಾರದ ಸುಬ್ರಮಣ್ಯ, ಮಂಜುರೈ, ಪ್ರವೀಣ್ ಪೂಜಾರಿ, ಗಣೇಶ್, ಸುರೇಶ್ ಮುಂತಾದವರು ಹಾಜರಿದ್ದರು.

ವೀರಾಜಪೇಟೆ: ಗಡಿ ನಿಯಂತ್ರಣ ರೇಖೆಯ ಬಳಿ ಜೈಎಷ್-ಏ-ಮೊಹಮ್ಮದ್ ಉಗ್ರ ಸಂಘಟನೆಯ ನೆಲೆಗಳ ಮೇಲೆ ಭಾರತದ ವಾಯು ಸೇನೆ ಇಂದು ಮುಂಜಾನೆ ಧಾಳಿ ನಡೆಸಿ ಉಗ್ರರನ್ನು ಧಮನ ಮಾಡಿದರಿಂದ ಹಿಂದೂಪರ ಸಂಘಟನೆಗಳು ವಿಜಯೋತ್ಸವ ಆಚರಿಸಿದವು.

ಹಿಂದೂ ಪರ ಸಂಘಟನೆಗಳು ಉಗ್ರ ನೆಲೆಗಳ ಮೇಲೆ ಬಾಂಬ್ ಧಾಳಿ ಮಾಡಿದ ವಾಯುಸೇನೆಯ ಕಾರ್ಯವನ್ನು ಶ್ಲಾಫಿಸಿ ಸಂಜೆ ಗಡಿಯಾರ ಕಂಬದ ಬಳಿ ಸಿಹಿ ಹಂಚಿ ಸಿಡಿಮದ್ದು ಸಿಡಿಸಿ ವಿಜಯೋತ್ಸವ ಆಚರಿಸಿದವು. ಸಂಘಟನೆಗಳ ಪರವಾಗಿ ಮಾತನಾಡಿದ ನಿವೃತ್ತ ಯೋಧ ತಿಮ್ಮಯ್ಯ ಅವರು ಪುಲ್ವಾಮಾದಲ್ಲಿ ನಡೆದ ಭೀಕರ ದುರಂತಕ್ಕೆ ಸಾಕ್ಷಿಯಾಗಿ ಸೇನೆಯು ಪ್ರತಿರೋದವನ್ನು ಉಗ್ರ ನೆಲೆಗಳ ಮೇಲೆ ವಾಯು ಧಾಳಿ ನಡೆಸಿ ಉಗ್ರರನ್ನು ಧಮನ ಮಾಡಿರುವದು ಸಂತೋಷದಾಯಕ ವಿಷಯವಾಗಿದೆ. ಪಾಕಿಸ್ತಾನವು ಉಗ್ರರಿಗೆ ನೆರವು ನೀಡುತ್ತಾ ಉಗ್ರರನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ದೇಶದ ದಿಟ್ಟ ಪ್ರಧಾನಿಯು ಮುಂದಿನ ದಿನಗಳಲ್ಲಿ ನೇರವಾಗಿ ಉತ್ತರ ನೀಡುತ್ತಾರೆ .ಇದು ಪುಲ್ವಾಮಾ ಧಾಳಿಯಲ್ಲಿ ವೀರ ಮರಣವನ್ನಪ್ಪಿದ ಯೋಧರಿಗೆ ಸಿಕ್ಕ ಜಯವಾಗಿದೆ ಎಂದರು.

ವಿಶ್ವ ಹಿಂದೂ ಪರಿಷತ್ ತಾ.ಕಾರ್ಯದರ್ಶಿ ಬಿ.ಎಂ ಕುಮಾರ್, ಭಜರಂಗದಳ ತಾ.ಸಂಚಾಲಕ ವಿವೇಕ್ ರೈ, ರಾ.ಸ್ವ.ಸೇ ಪ್ರಮುಖ್ ಬಿ.ವಿ ಹೇಮಂತ್, ರದೀಶ್, ವಿ.ಹೆಚ್.ಪಿ ಪ್ರಮುಖ ಪೊನ್ನಪ್ಪ ರೈ, ನಾಗೇಶ್, ಪಟ್ಟಣ ಪಂಚಾಯಿತಿ ಸದಸ್ಯರಾದ ಹರ್ಷವರ್ಧನ್. ಕೆ.ಬಿ. , ಆಶಾ ಸುಬ್ಬಯ್ಯ, ನಗರ ಅಧ್ಯಕ್ಷ ಅನಿಲ್ ಮಂದಣ್ಣ, ಭಾ.ಜ.ಪ ಪ್ರಮುಖರಾದ ರಘು ನಾಣಯ್ಯ ಮತ್ತು ಸಂಘಟನೆಗಳ ಕಾರ್ಯಕರ್ತರು ಹಾಗೂ ಪಕ್ಷದ ಕಾರ್ಯಕರ್ತರು ಹಾಜರಿದ್ದರು.

ಭಾಗಮಂಡಲ: ಇಲ್ಲಿನ ಕಾವೇರಿ ಆಟೋ ಚಾಲಕ ಸಂಘದ ಸದಸ್ಯರು ಹಾಗೂ ಸಾರ್ವಜನಿಕ ವತಿಯಿಂದ ಉಗ್ರರ ಅಡಗುದಾಣಗಳ ಮೇಲೆ ಭಾರತೀಯ ಸೇನೆ ಧಾಳಿ ಹಿನ್ನೆಲೆ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಇತರರು ಭಾಗವಹಿದ್ದರು.

ಸುಂಟಿಕೊಪ್ಪ: ಭಾರತೀಯ ಸೇನಾಪಡೆಯು ಪಾಕಿಸ್ತಾನದ ಮೇಲೆ ವೈಮಾನಿಕ ಸರ್ಜಿಕಲ್ ಧಾಳಿ ನಡೆಸಿ ಪಾಕ್ ನೆಲದಲ್ಲೇ ಉಗ್ರರನ್ನು ಸದೆಬಡಿದಿದ್ದುಕ್ಕೆ ಸುಂಟಿಕೊಪ್ಪದ ಸಾರ್ವಜನಿಕರು ಕನ್ನಡವೃತ್ತದಲ್ಲಿ ವಿಜಯೋತ್ಸವ ಆಚರಿಸಿದರು.

ಬ್ಲೂಬಾಯ್ಸ್ ಯೂತ್ ಕ್ಲಬ್ ಅಧ್ಯಕ್ಷ ಆದಿಶೇಷ, 7ನೇ ಮೈಲು ಆಟೋಚಾಲಕ ಪ್ರಕಾಶ್ ವೇದ ಡ್ರೈವಿಂಗ್ ಸ್ಕೂಲ್ ಚಾಲಕ ಸುರೇಶ್, ಡ್ರೈವರ್ ರಾಜ, ಶಿವು ಹಾಗೂ ರೋಶನ್ ಮತ್ತಿತರರು ಕನ್ನಡ ವೃತ್ತದಲ್ಲಿ ಜಮಾವಣೆಗೊಂಡು ದೇಶದ ಯೋಧರ ಸಾಧನೆಗೆ ಜಯಘೋಷಗಳನ್ನು ಮೊಳಗಿಸುತ್ತಾ, ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.

ನಾಪೋಕ್ಲು: ಪಾಕಿಸ್ತಾನಕ್ಕೆ ಇದೇ ಮೊದಲ ಬಾರಿಗೆ ಬೆನ್ನುಮೂಳೆ ಮುರಿದಂತಾಗಿದೆ. ಪುಲ್ವಾಮ ಧಾಳಿಗೆ ಪ್ರತೀಕಾರ ತೀರಿಸಿಕೊಳ್ಳಲು ಕಾತರಿಸುತ್ತಿದ್ದ ಭಾರತ, ರಾತೋರಾತ್ರಿ ಉಗ್ರರ ನೆಲೆಗಳನ್ನು ಧ್ವಂಸ ಮಾಡುವ ಮೂಲಕ, ಶತಕೋಟಿ ಭಾರತೀಯರ ಆಭಿಲಾಷೆಯನ್ನು ಎತ್ತಿಹಿಡಿದಿದೆ. ಮಂಗಳವಾರ ನಸುಕಿನಲ್ಲಿ ನಡೆದ ಉಗ್ರರ ಮೇಲಿನ ಧಾಳಿಯನ್ನು ಇಡೀ ದೇಶದಲ್ಲಿ ಸಂಭ್ರಮಿಸಲಾಗುತ್ತಿದೆ. ನಾಪೋಕ್ಲಿನಲ್ಲಿ ಹಿಂದೂಪರ ಸಂಘಟನೆಗಳ ಬಿಜೆಪಿ ಪ್ರಮುಖರು ಕಾರ್ಯಕರ್ತರು ಹಾಗೂ ಸಾರ್ವಜನಿಕರು ಪಟಾಕಿ ಸಿಡಿಸಿ, ಪಾಕ್ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗುವ ಮೂಲಕ ಸಂಭ್ರಮೋತ್ಸವ ಆಚರಿಸಿದರು.

ನಾಪೋಕ್ಲು ಬಸ್ ನಿಲ್ದಾಣದಲ್ಲಿ ಸಮಾವೇಶಗೊಂಡ ನಾಗರಿಕರು, ಪಾಕಿಸ್ತಾನದ ಉಗ್ರನೀತಿಯನ್ನು ತೀವ್ರವಾಗಿ ಖಂಡಿಸಿದರು. ಇದೇ ವೇಳೆ, ಪುಲ್ವಾಮ ಧಾಳಿಗೆ ಪ್ರತೀಕಾರ ತೀರಿಸಿಕೊಂಡ ಭಾರತೀಯ ಸೇನಾ ಯೋಧರ ಶಕ್ತಿ ಸಾಮಥ್ರ್ಯಗಳನ್ನು ಕೊಂಡಾಡಿದರು. ಪಟಾಕಿ ಸಿಡಿಸಿ ಸಂಭ್ರಮಿಸಿದ ನಾಗರಿಕರು, ಯೋಧರಿಗೆ ಜೈಕಾರ ಕೂಗುತ್ತಾ ಹರ್ಷ ವ್ಯಕ್ತಪಡಿಸಿದರು. ಜಿಲ್ಲಾ ಪಂಚಾಯ್ತಿ ಸದಸ್ಯ ಮುರುಳಿ ಕರುಂಬಮಯ್ಯ, ಪ್ರಮುಖರಾದ ಅಂಬಿ ಕಾರ್ಯಪ್ಪ, ಕಗಂಡ ಜಾಲಿ ಪೂವಪ್ಪ, ಪ್ರತಿಪ, ಶಿವಚಾಳಿಯಂಡ ಜಗದೀಶ್, ಚೋಕಿರ ಪ್ರಭು, ಕನ್ನಂಬಿರ ಸುದಿ, ಕೇಟೋಳಿರ ಜಾಲಿ ಅಪ್ಪಚ್ಚ, ಚೇನಂಡ ಗಿರೀಶ್, ಕೇಲೇಟಿರ ದೀಪು ಮತ್ತಿತರರು ಪಾಲ್ಗೊಂಡಿದ್ದರು.

ಪೆರಾಜೆ: ಭಾರತೀಯ ಸೇನೆಯ ಸೈನಿಕರ ಪ್ರಾಣವನ್ನು ಬಲಿ ಪಡೆದ ಪಾಕಿಸ್ತಾನಕ್ಕೆ ಸರಿಯಾದ ಪ್ರತ್ಯುತ್ತರ ನೀಡಿ ಭಾರತೀಯ ಸೇನೆಯ ಬಲ ಪ್ರದರ್ಶನವನ್ನು ಇಂದು ಮುಂಜಾನೆ ಉಗ್ರರ ಅಡಗು ತಾಣವನ್ನು ಧ್ವಂಸ ಮಾಡುವ ಮೂಲಕ ವೀರ ಮರಣ ಹೊಂದಿದ ಹುತಾತ್ಮ ಯೋಧರ ಬಲಿದಾನಕ್ಕೆ ಪ್ರತಿಕಾರವನ್ನು ತೀರಿಸಿಕೊಂಡ ದಿನದ ವಿಜಯೋತ್ಸವವನ್ನು ಪೆರಾಜೆಯ ದಾಸರಹಿತ್ತಲಿನಿಂದ ಪೆರಾಜೆ ಜಂಕ್ಷನ್ ವರೆಗೆ ಬೈಕ್ ರ್ಯಾಲಿ ಮೂಲಕ ಬಂದು ತದನಂತರ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಲಾಯಿತು.

ಈ ಸಂದರ್ಭ ಗ್ರಾಮಪಂಚಾಯತ್ ಸದಸ್ಯ ಉದಯಚಂದ್ರ ಕುಂಬಳಚೇರಿ, ಮಾಜಿ ಸದಸ್ಯ ಗಾಂಧಿಪ್ರಸಾದ್ ಬಂಗಾರಕೋಡಿ, ಬಾಲಚಂದ್ರ ತೊಕ್ಕುಳಿ, ರಕ್ಷಿತ್ ಬಂಗಾರಕೋಡಿ, ಸುಭಾಷ್ ಚಂದ್ರ ಬಂಗಾರಕೋಡಿ ಅಲ್ಲದೆ, ಸಾರ್ವಜನಿಕರು ಅಧಿಕ ಸಂಖ್ಯೆಯಲ್ಲಿ ಹಾಜರಿದ್ದರು.

ಅಮ್ಮತ್ತಿ - ಒಂಟಿಯಂಗಡಿ: ಪಾಕ್ ಉಗ್ರಗಾಮಿಗಳ ಮೇಲೆ ಪ್ರತೀಕಾರವಾಗಿ ಇಂದು ಬೆಳಗಿನ ಜಾವ ಸುಮಾರು 340ಮಂದಿ ಉಗ್ರರನ್ನು ಹತ್ಯೆಗೈದ ಭಾರತದ ವೀರ ಯೋಧರ ಪರವಾಗಿ ಇಂದು ರಾತ್ರಿ ಅಮ್ಮತ್ತಿ ಒಂಟಿಯಂಗಡಿಯಲ್ಲಿ ಭಾರತದ ಧ್ವಜ ಹಿಡಿದು ಸಂಭ್ರಮ ಆಚರಿಸಲಾಯಿತು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಾರ್ಗದರ್ಶನದಲ್ಲಿ ವಿವಿಧ ಹಿಂದೂ ಪರ ಸಮಘಟನೆಗಳು, ವರ್ತಕರು, ಸಾರ್ವಜನಿಕರು, ಗ್ರಾಮಸ್ತರು ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಕುಶಾಲನಗರ: ಪಾಕಿಸ್ತಾನದಲ್ಲಿ ಅಡಗಿದ್ದ ಉಗ್ರರನ್ನು ಹೊಡೆದುರುಳಿಸಿದ ಕೇಂದ್ರ ಸರಕಾರದ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿ ದೇಶ ಪ್ರೇಮಿ ಯುವಕರ ತಂಡ ಪಟ್ಟಣದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಸಂಭ್ರಮಾಚರಣೆ ಮಾಡಿದರು. ವೃತ್ತದಲ್ಲಿ ಜಮಾಯಿಸಿದ ವಿವಿಧ ಸಂಘಸಂಸ್ಥೆಗಳ, ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಯೋಧರ ಮತ್ತು ಭಾರತದ ಪರ ಜಯಘೋಷ ಕೂಗಿದರು.

ಪಟಾಕಿ ಸಿಡಿಸಿ ಸಾರ್ವಜನಿಕರಿಗೆ ಸಿಹಿ ಹಂಚಿ ಸಂಭ್ರಮ ವ್ಯಕ್ತಪಡಿಸಿದರು.

ಈ ಸಂದರ್ಭ ಹಿರಿಯರಾದ ಜಿ.ಎಲ್.ನಾಗಾರಾಜ್, ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಬಿ. ಭಾರತೀಶ್, ನಗರಾಧ್ಯಕ್ಷ ಕೆ.ಜಿ.ಮನು, ಪ್ರಮುಖರಾದ ಎಂ.ಡಿ. ಕೃಷ್ಣಪ್ಪ ಚರಣ್, ನವನೀತ್, ದಿನೇಶ್, ಭಾಸ್ಕರ್‍ನಾಯಕ್, ರಾಜೀವ್, ಅನಂತ, ನಿಸಾರ್ ಅಹಮದ್ ಮತ್ತಿತ್ತರರು ಇದ್ದರು.