ಬೆಂಗಳೂರು, ಫೆ. 26: ಹಾಸನ ಜಿಲ್ಲೆಗೆ ಕುಡಿಯುವ ನೀರನ್ನೊದಗಿಸುವ ಸಲುವಾಗಿ ಕೊಡಗು ಜಿಲ್ಲೆಯಿಂದ ನೀರು ಸರಬರಾಜು ಮಾಡುವ ಯೋಜನೆಗೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಸೋಮವಾರಪೇಟೆ ತಾಲೂಕಿನ ಕಟ್ಟೆಪುರ ಗ್ರಾಮದ ಬಳಿಯ ಹೇಮಾವತಿ ನದಿಯಿಂದ 387.50 ಎಂ.ಸಿ.ಎಫ್.ಟಿ. ನೀರನ್ನು ಎತ್ತಿ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಮಲ್ಲಿಪಟ್ಟಣ, ಕೊಣನೂರು, ದೊಡ್ಡಮಗ್ಗೆ ಹೋಬಳಿಯ ಗ್ರಾಮಗಳ 150 ಕೆರೆಗಳ ಹಾಗೂ 50 ಕಟ್ಟೆಗಳಿಗೆ ಕುಡಿಯುವ ನೀರಿಗಾಗಿ ತುಂಬಿಸುವ ರೂ. 190 ಕೋಟಿ ವೆಚ್ಚದ ಯೋಜನೆಗೆ ತಾತ್ವಿಕ ಅನುಮೋದನೆ ನೀಡಲಾಗಿದೆ. - ಬಿ.ಜಿ.ಆರ್.