ಶ್ರೀಮಂಗಲ, ಫೆ. 27: ಕೇವಲ ಗ್ರಾಮ ಅಥವಾ ನಾಡಿನ ವ್ಯಾಪ್ತಿಯಲ್ಲದೆ ಜಿಲ್ಲೆ, ರಾಜ್ಯ ಹಾಗೂ ಹೊರರಾಜ್ಯಗಳ ಭಕ್ತಾದಿಗಳನ್ನು ಸೆಳೆಯುತ್ತಿರುವÀ ದಕ್ಷಿಣ ಕೊಡಗಿನ ಬಾಡಗರಕೇರಿಯ ಶ್ರೀ ಮೃತ್ಯುಂಜಯ ದೇವಸ್ಥಾನದ ವಾರ್ಷಿಕ ಉತ್ಸವ ನಿನ್ನೆ ದೇವರ ಅವಭೃತ ಸ್ನಾನದೊಂದಿಗೆ ಮುಕ್ತಾಯಗೊಂಡಿತು.
ಫೆ.16ರಂದು ಕೊಡಿಮರ ನಿಲ್ಲಿಸುವ ಮೂಲಕ ಪ್ರಸಕ್ತ ಸಾಲಿನ ವಾರ್ಷಿಕ ಉತ್ಸವಕ್ಕೆ ಚಾಲನೆ ದೊರೆತಿತ್ತು. ಈ ದಿನದ ಬಳಿಕ ನಿತ್ಯಪೂಜೆ, ಹರಕೆ ಬಳಕು, ತುಲಾಭಾರ, ಶ್ರೀವಿಷ್ಣು ದೇವರ ಅಲಂಕಾರ ಪೂಜೆ ಸೇರಿದಂತೆ ವಿವಿಧ ದೈವಿಕ ಕೈಂಕರ್ಯಗಳು, ವಿವಿಧ ಪೂಜೆಗಳು ಜರುಗಿದ್ದು ಅಂತಿಮ ದಿನವಾದ ನಿನ್ನೆ ದೇವರ ಅವಭೃತ ಸ್ನಾನದೊಂದಿಗೆ ಉತ್ಸವ ಸಂಪನ್ನಗೊಂಡಿತು.
ಬೆಳಿಗ್ಗೆಯಿಂದ ಮೃತ್ಯುಂಜಯ ಹೋಮ, ರುದ್ರಾಭಿಷೇಕ, ತುಲಾಭಾರ, ಸೇರಿದಂತೆ ವಿವಿಧ ಪೂಜಾ ವಿಧಿವಿಧಾನಗಳು ದೇವಾಲಯದ ಅರ್ಚಕರಾದ ಗಿರೀಶ್, ಹರೀಶ್ ಅವರ ನೇತೃತ್ವದಲ್ಲಿ ಜರುಗಿತು.
ಅಪರಾಹ್ನ ತೆಂಗಿನಕಾಯಿಗೆ ಗುಂಡು ಹಾರಿಸುವ ಮೂಲಕ ಹಬ್ಬದ ಕಟ್ಟನ್ನು ಮುರಿಯಲಾಯಿತು. ಸಂಜೆ ಉತ್ಸವ ಮೂರ್ತಿದರ್ಶನದೊಂದಿಗೆ ದೂರದ ಕಕ್ಕಟ್ಟು ಹೊಳೆಯಲ್ಲಿ ದೇವರ ಅವಭೃತ ಸ್ನಾನ ಜರುಗಿದ್ದು ರಾತ್ರಿ ಮತ್ತೆ ಉತ್ಸವ ಮೂರ್ತಿ ದರ್ಶನ, ವಸಂತ ಪೂಜಾ ಕೈಂಕರ್ಯ ನೆರವೇರಿತು. ಬೆಳಿಗ್ಗೆಯಿಂದ ತಡರಾತ್ರಿಯ ತನಕವೂ ಪೂಜಾ ವಿಧಿ ವಿಧಾನಗಳು ಜರುಗಿದವು.
ಎಂದಿನಂತೆ ಅಪರಾಹ್ನ ದೇವಾಲಯದ ವತಿಯಿಂದ ಭಕ್ತಾದಿಗಳಿಗೆ ಅನ್ನಸಂತರ್ಪಣೆ, ಸಂಜೆ ಸ್ಥಳೀಯ ಮರೆನಾಡು ಸ್ಪೋಟ್ಸ್ ಕ್ಲಬ್ ವತಿಯಿಂದ ಪ್ರಸಾದ ವಿತರಣೆ ನಡೆಯಿತು. ವಿದ್ಯುತ್ ಅಲಂಕಾರ, ಸಿಡಿಮದ್ದು ಪ್ರದರ್ಶನದೊಂದಿಗೆ ಬೆಕ್ಕೆಸೊಡ್ಲೂರುವಿನ ಶ್ರೀ ಮಂದತವ್ವ ಸಂಸ್ಥೆಯ ಕಲಾವಿದರಿಂದ ಸಾಂಸ್ಕøತಿಕ ಕಾರ್ಯಕ್ರಮ, ಸ್ಥಳೀಯರಿಂದ ಹಾಡುಗಾರಿಕೆ ನಡೆಯಿತು. ರಾತ್ರಿ ದೇವರ ಅವಭೃತ ಸ್ನಾನದ ಬಳಿಕ ದೇವಾಲಯದ ಸುತ್ತಲೂ 11 ಸುತ್ತು ಉತ್ಸವ ಮೂರ್ತಿಯ ದರ್ಶನದಲ್ಲಿ ಭಕ್ತಾದಿಗಳು ಶ್ರದ್ಧಾಭಕ್ತಿಯಿಂದ ಪಾಲ್ಗೊಂಡಿದ್ದರು. ಬಳಿಕ ವಸಂತ ಪೂಜೆಯೊಂದಿಗೆ ಉತ್ಸವ ಮುಕ್ತಾಯ ಗೊಂಡಿತು. ತಾ. 27 ರಂದು ಕೊಡಿಮರ ಇಳಿಸುವ ಮೂಲಕ ಪ್ರಸಕ್ತ ಸಾಲಿನ ಉತ್ಸವದ ಕಾರ್ಯಕ್ರಮಗಳು ಮುಕ್ತಾಯಗೊಂಡಿದ್ದು, ದೇವಾಲಯ ದಲ್ಲಿ ಇನ್ನು ಎಂದಿನಂತೆ ಪೂಜಾ ವಿಧಿವಿಧಾನಗಳು ಮುಂದುವರಿಯಲಿವೆ.
ಉತ್ಸವದಲ್ಲಿ ನಾಡು ತಕ್ಕರಾದ ಕಾಯಪಂಡ ಕುಟುಂಬಸ್ಥರು ದೇವತಕ್ಕರಾದ ಅಣ್ಣೀರ ಕುಟುಂಬಸ್ಥರು ಸೇರಿದಂತೆ ಗ್ರಾಮ ವ್ಯಾಪ್ತಿಯ ಎಲ್ಲಾ ಕುಟುಂಬಸ್ಥರು, ಭಕ್ತಾದಿಗಳು, ಆಡಳಿತ ಮಂಡಳಿ ಅಧ್ಯಕ್ಷರಾದ ಕಾಯಪಂಡ ಎಸ್.ಕಾವೇರಪ್ಪ ಹಾಗೂ ತಂಡದವರು ತೊಡಗಿಸಿಕೊಂಡಿದ್ದರು.