ಸೋಮವಾರಪೇಟೆ, ಫೆ. 25: ಇಲ್ಲಿಗೆ ಸಮೀಪದ ಯಡೂರಿನ ಬಿಟಿಸಿಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕೊಡಗು ಜಿಲ್ಲಾ ಪೊಲೀಸ್ ಹಾಗೂ ಲಯನ್ಸ್ ಸಂಸ್ಥೆಯ ಆಶ್ರಯದಲ್ಲಿ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮಕ್ಕೆ ಡಿವೈಎಸ್‍ಪಿ ಮುರುಳೀಧರ್ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಶಾಲಾ, ಕಾಲೇಜು ವಾಹನಗಳ ಚಾಲಕರಿಗೆ ಸರ್ವೋಚ್ಛ ನ್ಯಾಯಾಲಯ ಕೆಲವು ಕಟ್ಟು ಪಾಡುಗಳನ್ನು ಮಾಡಿದೆ. ಚಾಲಕರು ರಸ್ತೆ ಸುರಕ್ಷತೆಯ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಭಾರಿ ವಾಹನ ಚಾಲನೆ ಮಾಡುವವರು ಕನಿಷ್ಟ 5 ವರ್ಷಗಳ ಚಾಲನಾ ಅನುಭವ ಹೊಂದಿರಬೇಕು. ಸಮವಸ್ತ್ರ ಧರಿಸಿ ವಾಹನ ಚಾಲನೆ ಮಾಡಬೇಕು ಎಂದು ಕಿವಿಮಾತು ಹೇಳಿದರು.
ನಿಗದಿತ ಸಂಖ್ಯೆಯ ವಿದ್ಯಾರ್ಥಿಗಳನ್ನು ಮಾತ್ರ ಸಾಗಿಸಬೇಕು. ವೇಗದ ಚಾಲನೆ ಮಾಡಬಾರದು, ವಾಹನಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ಹಾಗೂ ಪೋಷಕರ ಮಾಹಿತಿಯನ್ನು ವಾಹನದಲ್ಲಿ ಅಳವಡಿಸಿರಬೇಕೆಂದು ಮುರುಳೀಧರ್ ತಿಳಿಸಿದರು.
ಕಾರ್ಯಕ್ರಮದಲ್ಲಿ ಲಯನ್ಸ್ ಸಂಸ್ಥೆ ಅಧ್ಯಕ್ಷÀ ಯೋಗೇಶ್, ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಶ್ರೀಧರ್, ವೃತ್ತ ನಿರೀಕ್ಷಕ ನಂಜುಂಡೇಗೌಡ, ಠಾಣಾಧಿಕಾರಿ ಶಿವಶಂಕರ್, ಕುಶಾಲನಗರದ ಟ್ರಾಫಿಕ್ ಇನ್ಸ್‍ಪೆಕ್ಟರ್ ಸೋಮೇಗೌಡ, ಲಯನ್ಸ್ ಪದಾಧಿಕಾರಿಗಳಾದ ಎ.ಆರ್. ಮುತ್ತಣ್ಣ, ಮಂಜುನಾಥ್ ಚೌಟ ಉಪಸ್ಥಿತರಿದ್ದರು.