ವೀರಾಜಪೇಟೆ, ಫೆ. 25: ಹತ್ತನೇ ತರಗತಿಯ ವಿದ್ಯಾರ್ಥಿಗಳು ಸದಾ ಆತ್ಮವಿಶ್ವಾಸ ಹೊಂದಿರಬೇಕು. ಯಾವದೇ ರೀತಿಯಲ್ಲಿ ವಿಚಲಿತರಾಗಬಾರದು ಎಂದು ವೀರಾಜಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಬೀಳಗಿ ಹೇಳಿದರು. ವೀರಾಜಪೇಟೆಯ ಸೈಂಟ್ ಆ್ಯನ್ಸ್ ಕಾಂಪೊಸಿಟ್ ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿದ್ದ 10ನೇ ತರಗತಿ ಪರೀಕ್ಷೆ ಎದುರಿಸುವ ವಿದ್ಯಾರ್ಥಿಗಳಿಗೆ ಒಂದು ದಿನದ ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು. ಈ ಪರೀಕ್ಷೆಯನ್ನು ಎದುರಿಸಲು ಮಾನಸಿಕವಾಗಿ ಸಿದ್ಧರಾಗಬೇಕು. ಇದಕ್ಕಾಗಿ ಬೆಳಿಗ್ಗೆ ಮತ್ತು ರಾತ್ರಿ ನಿಗದಿತ ಸಮಯವನ್ನು ಅಳವಡಿಸಿಕೊಳ್ಳಿ. ಶಾಲೆಯಲ್ಲಿ ಶಿಕ್ಷಕರು ನೀಡಿದ ಮಾರ್ಗದರ್ಶನದಂತೆ ಅಭ್ಯಾಸ ಮಾಡಿ. ಪರೀಕ್ಷೆ ಎಂಬದು ತೀರಾ ಕಠಿಣ ಎಂದು ಭಾವಿಸಿ ಭಯಪಡದೆ ಉತ್ತಮ ರೀತಿಯಲ್ಲಿ ಬರೆಯಿರಿ ಎಂದು ಸಲಹೆಯಿತ್ತರು. ವಿದ್ಯಾರ್ಥಿಗಳಿಗೆ ಮೂಡುಬಿದ್ರೆಯ ಎಕ್ಸ್ಲೆಲೆಂಟ್ ವಿದ್ಯಾಸಂಸ್ಥೆಯ ಉಪನ್ಯಾಸಕ ಯುವರಾಜ್ ಉಪನ್ಯಾಸ ನೀಡಿ, ವಿದ್ಯಾರ್ಥಿಗಳು ಪರೀಕ್ಷಾ ಸಮಯದಲ್ಲಿ ಅನುಸರಿಸಬೇಕಾದ ಕ್ರಮಗಳು, ನಿತ್ಯದ ಕಲಿಕಾ ಅಭ್ಯಾಸವನ್ನು ಯಾವ ರೀತಿ ಮಾಡಬೇಕು. ದೈಹಿಕವಾಗಿ ಮನೋಬಲವನ್ನು ಹೇಗೆ ಕಾದು ಕೊಳ್ಳಬೇಕು ಎಂಬಿತ್ಯಾದಿ ಮಾಹಿತಿಗಳನ್ನು ನೀಡಿದರು.

ಕಾರ್ಯಾಗಾರದಲ್ಲಿ ವೀರಾಜಪೇಟೆ ತಾಲೂಕಿನ ಸುಮಾರು 350 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಸಂದರ್ಭ ಇ.ಸಿ.ಓ. ಅಯ್ಯಪ್ಪ, ಉತ್ತಪ್ಪ ಸಂತ ಅನ್ನಮ್ಮ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಮಾರ್ಗರೆಟ್ ಲಸ್ರಾದೊ ಶಿಕ್ಷಕ ಜೋನಾಥನ್ ಮತ್ತಿತರರು ಉಪಸ್ಥಿತರಿದ್ದರು.