ಮಡಿಕೇರಿ, ಫೆ. 25: ವಸತಿ ರಹಿತ ಪರಿಶಿಷ್ಟ ಪಂಗಡಗಳ ಕುಟುಂಬಗಳಿಗೆ ನಿವೇಶನವನ್ನು ವಿಳಂಬ ಮಾಡದೆ ಹಂಚಿಕೆ ಮಾಡ ಬೇಕೆಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಸಂಬಂಧ ಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣ ದಲ್ಲಿ ವಸತಿ ರಹಿತ ಪರಿಶಿಷ್ಟ ಪಂಗಡ ಗಳ ಕುಟುಂಬಗಳಿಗೆ ನಿವೇಶನ ಒದಗಿಸುವ ಸಂಬಂಧ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ದರು. ಐಟಿಡಿಪಿ ಅಧಿಕಾರಿ ಶಿವಕುಮಾರ್ ಅವರು ಜಿಲ್ಲೆಯಲ್ಲಿ ವಸತಿ ರಹಿತ ಪರಿಶಿಷ್ಟ ಪಂಗಡಗಳ ಕುಟುಂಬಗಳಿಗೆ ನಿವೇಶನ ಒದಗಿಸಲು ಗುರುತಿಸಿರುವ ಜಾಗದ ಬಗ್ಗೆ ಮಾಹಿತಿ ನೀಡಿ ಬಿರುನಾಣಿ, ತೆರಾಲು, ಹೆಗ್ಗಳ, ರಾಂಪುರ ಗ್ರಾಮಗಳ ಜಾಗದಲ್ಲಿ ಇರುವ ತೊಡಕುಗಳ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.

ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ಗಳು ಈಗಾಗಲೇ ಗುರುತಿಸಿರುವ ಜಾಗದಲ್ಲಿನ ಅಡೆತಡೆಗಳನ್ನು ಜಂಟಿ ಸರ್ವೇ ಕಾರ್ಯ ನಡೆಸಿ ಇರುವ ಸಮಸ್ಯೆ ಯನ್ನು ಬಗೆಹರಿಸಿ ಅರ್ಹ ಫಲಾನುಭವಿಗಳಿಗೆ ಸೂಕ್ತ ಜಾಗದಲ್ಲಿ ನಿವೇಶನ ಹಂಚಿಕೆ ಮಾಡಲು ಅಗತ್ಯ ಕ್ರಮಕೈಗೊಳ್ಳುವಂತೆ ಸೂಚನೆ ನೀಡಿದರು. ತಾಲೂಕು ಮಟ್ಟದಲ್ಲಿ ವಸತಿ ರಹಿತ ಪರಿಶಿಷ್ಟ ಪಂಗಡಗಳ ಕುಟುಂಬಗಳ ಅಭಿವೃದ್ಧಿಗೆ ಸಮಿತಿ ರಚಿಸಿ ಅಂತಹ ಕುಟುಂಬದ ಮಕ್ಕಳ ಶಿಕ್ಷಣ, ಮೂಲಭೂತ ಸೌಲಭ್ಯ ಮತ್ತು ಸರ್ಕಾರದ ಸವಲತ್ತುಗಳನ್ನು ತಲಪಿಸಲು ಕ್ರಮ ಕೈಗೊಳ್ಳಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಸಭೆಯಲ್ಲಿ ಉಪವಿಭಾಗಾಧಿಕಾರಿ ಜವರೇಗೌಡ, ತಹಶೀಲ್ದಾರ್ ಗೋವಿಂದರಾಜು, ತಾ.ಪಂ. ಇಒಗಳು, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಸಚಿನ್ ಇತರರು ಇದ್ದರು.