ಮಡಿಕೇರಿ, ಫೆ. 24: ಭಾರತ ಮಹಿಳಾ ಹಾಕಿ ತಂಡದ ಆಯ್ಕೆಯ ಸಿದ್ಧತೆಗಾಗಿ ತಾ. 25 ರಿಂದ ಬೆಂಗಳೂರಿನಲ್ಲಿ ಆರಂಭಗೊಳ್ಳಲಿರುವ ಅಂತಿಮ ಹಂತದ ರಾಷ್ಟ್ರೀಯ ಶಿಬಿರದಲ್ಲಿ ಕೊಡಗಿನ ಆಟಗಾರ್ತಿ ಮಲ್ಲಮಾಡ ಲೀಲಾವತಿ ಸ್ಥಾನ ಪಡೆದಿದ್ದಾರೆ. ಹಾಕಿ ಇಂಡಿಯಾ 33 ಆಟಗಾರರನ್ನು ಈ ಶಿಬಿರಕ್ಕೆ ಆಯ್ಕೆ ಮಾಡಿದ್ದು, ಇದರಲ್ಲಿ ಕರ್ನಾಟಕದಿಂದ ಕೊಡಗಿನ ಆಟಗಾರ್ತಿ ಲೀಲಾವತಿ ಓರ್ವಳಾಗಿದ್ದಾಳೆ. ಈ ಹಿಂದೆ ಇನ್ನು ಹಲವು ಹಂತದ ಶಿಬಿರಗಳನ್ನು ನಡೆಸಲಾಗಿದ್ದು, ಈ ಶಿಬಿರಗಳಲ್ಲಿ ಉತ್ತಮ ಸಾಧನೆ ತೋರಿರುವ 33 ಮಂದಿಯನ್ನು ಅಂತಿಮ ಆಯ್ಕೆಗಾಗಿ ಆರಿಸಲಾಗಿದೆ.ಈ ಹಿಂದೆ ಭಾರತ ಜೂನಿಯರ್ ತಂಡವನ್ನು ಪ್ರತಿನಿಧಿಸಿರುವ ಲೀಲಾವತಿ ಇದೀಗ ಮಹಿಳಾ ಸೀನಿಯರ್ ತಂಡದ ಕೊನೆಯ ಹಂತದ ಶಿಬಿರಕ್ಕೆ ಆಯ್ಕೆಯಾಗಿದ್ದಾರೆ. ತಾ. 25ರಿಂದ ಮಾರ್ಚ್ 1ರವರೆಗೆ ಬೆಂಗಳೂರಿನ ಸಾಯಿ ಕ್ಯಾಂಪಸ್‍ನಲ್ಲಿ ಶಿಬಿರ ನಡೆಯಲಿದೆ ಎಂದು ಹಾಕಿ ಕರ್ನಾಟಕದ ಕಾರ್ಯದರ್ಶಿ ಡಾ. ಎ.ಬಿ. ಸುಬ್ಬಯ್ಯ ತಿಳಿಸಿದ್ದಾರೆ.