ಮಡಿಕೇರಿ, ಫೆ. 24: ಮಾದಾಪುರ ಬಳಿಯ ಜಂಬೂರುವಿನ ತೋಟಗಾರಿಕಾ ಇಲಾಖೆಯ ಸಸ್ಯಕ್ಷೇತ್ರದಲ್ಲಿ ಇಂದು ಮಧ್ಯಾಹ್ನ ಬೆಂಕಿ ಕಾಣಿಸಿಕೊಂಡು ಹತ್ತಾರು ಎಕರೆ ಪ್ರದೇಶದಲ್ಲಿ ವಿವಿಧ ಹಣ್ಣು ಮರ ಇತ್ಯಾದಿ ಸುಟ್ಟು ಹೋಗಿವೆ. ಅಲ್ಲದೆ ಈ ತೋಟಗಾರಿಕಾ ಕ್ಷೇತ್ರಕ್ಕೆ ಹೊಂದಿಕೊಂಡಿರುವ ಅಲ್ಲಿನ ನಿವಾಸಿ, ಎಂ.ಪಿ. ಮನುಮೇದಪ್ಪ ಅವರ ಕಾಫಿ ತೋಟದಲ್ಲಿ ಎಕರೆಯಷ್ಟು ಅಗ್ನಿಯಿಂದ ಹಾನಿಗೊಂಡಿವೆ.ಸಕಾಲದಲ್ಲಿ ಸೋಮವಾರಪೇಟೆ ಹಾಗೂ ಮಡಿಕೇರಿ ಅಗ್ನಿ ಶಾಮಕ ಠಾಣಾ ಸಿಬ್ಬಂದಿ ಟ್ಯಾಂಕರ್‍ನಲ್ಲಿ ನೀರಿನೊಂದಿಗೆ ತೆರಳಿ, ಸತತ 5 ಗಂಟೆಗಳ ಕಾರ್ಯಾಚರಣೆ ಮೂಲಕ ಬೆಂಕಿಯನ್ನು ಹತೋಟಿಗೆ ತರುವಲ್ಲಿ ಯಶಸ್ವಿಯಾಗಿದ್ದು, ಬೆಂಕಿ ಪ್ರಕರಣಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಕಾರ್ಯಾಚರಣೆಯಲ್ಲಿ ಸೋಮವಾರಪೇಟೆಯ ಅಧಿಕಾರಿ ಚೇತನ್, ಸುದೀಪ್, ಪ್ರೇಂಕುಮಾರ್, ಮಡಿಕೇರಿಯ ಸತೀಶ್, ಕೆ.ಸಿ. ರಾಜಪ್ಪ, ಬಸವರಾಜ್, ಜಯಪ್ರಕಾಶ್ ಮೊದಲಾದವರು ಪಾಲ್ಗೊಂಡಿದ್ದರು.ಮಡಿಕೇರಿ ಸ್ಟೋನ್‍ಹಿಲ್ನಗರದ ಸ್ಟೋನ್‍ಹಿಲ್ ಬಳಿ ತಾಜ್‍ಗೆ ತೆರಳುವ ಮಾರ್ಗದ ಅರಣ್ಯದಲ್ಲಿ ಇಂದು ಮಧ್ಯಾಹ್ನ ಸುಡುಬಿಸಿಲಿನ ನಡುವೆ ಬೆಂಕಿ ಕಾಣಿಸಿಕೊಂಡಿತ್ತು. ವಿಷಯ ತಿಳಿದ ಅರಣ್ಯ ಇಲಾಖೆಯ ಸಹಾಯಕ ಅಧಿಕಾರಿ ರಾಥೋಡ್ ಮತ್ತು ಸಿಬ್ಬಂದಿ ದೌಡಾಯಿಸಿ ಅಗ್ನಿಶಾಮಕ ಇಲಾಖೆಗೆ ಸುದ್ದಿ ಮುಟ್ಟಿಸಿದರು.

ಅಗ್ನಿ ಶಾಮಕ ಸಿಬ್ಬಂದಿ ಜತೆಗೂಡಿ ಅರಣ್ಯ ಇಲಾಖೆಯವರು ನೀರು ಹಾಯಿಸುವ ಮೂಲಕ ಸತತ ಎರಡೂವರೆ ಗಂಟೆಗಳ ಕಾರ್ಯಾ ಚರಣೆಯೊಂದಿಗೆ ಬೆಂಕಿ ನಂದಿಸುವ ಮೂಲಕ ಪರಿಸ್ಥಿತಿ ನಿಯಂತ್ರಣ ಗೊಳಿಸಿದರು. ಬೆಂಕಿ ಹೇಗೆ ಹೊತ್ತಿಕೊಂಡಿತು? ಯಾರೋ ತಿಳಿಗೇಡಿಗಳ ಕೃತ್ಯವೇ? ಎಂಬ ಬಗ್ಗೆ ಇನ್ನಷ್ಟೇ ತಿಳಿಯಬೇಕಿದೆ ಎಂದು ಅಧಿಕಾರಿ ರಾಥೋಡ್ ಪ್ರತಿಕ್ರಿಯೆ ನೀಡಿದರು.

(ಮೊದಲ ಪುಟದಿಂದ)

ಆಕಸ್ಮಿಕ ಬೆಂಕಿ - ನಷ್ಟ

ಶನಿವಾರಸಂತೆ : ಕೊಡ್ಲಿಪೇಟೆ ಹೋಬಳಿಯ ದೊಡ್ಡಕೊಡ್ಲಿ ಗ್ರಾಮದ ಎಂ.ಆರ್. ಇಸ್ಮಾಯಿಲ್ ಎಂಬವರಿಗೆ ಸೇರಿದ ಕಾಫಿ ತೋಟಕ್ಕೆ ಶುಕ್ರವಾರ ಆಕಸ್ಮಿಕವಾಗಿ ಬೆಂಕಿ ತಗಲಿ ಸಂಪೂರ್ಣ ಸುಟ್ಟು ಹೋಗಿದ್ದು, ಪ್ರಕರಣ ಶನಿವಾರ ಸಂತೆ ಪೊಲೀಸ್ ಠಾಣೆ ಯಲ್ಲಿ ದಾಖಲಾಗಿದೆ.

ಸೋಮವಾರಪೇಟೆ: ಸಮೀಪ ದ ಯಡವನಾಡು ಮೀಸಲು ಅರಣ್ಯದಲ್ಲಿ ಕಾಡ್ಗಿಚ್ಚು ಸಂಭವಿಸಿ ಹತ್ತಾರು ಏಕರೆ ಕುರುಚಲು ಕಾಡು ಸುಟ್ಟು ಭಸ್ಮವಾಗಿರುವ ಘಟನೆ ನಿನ್ನೆ ರಾತ್ರಿ ನಡೆದಿದೆ.

ಯಡವನಾಡು ಮೀಸಲು ಅರಣ್ಯದಲ್ಲಿ ನಿನ್ನೆ ರಾತ್ರಿ ದಿಢೀರಾಗಿ ಬೆಂಕಿ ಕಾಣಿಸಿಕೊಂಡಿದ್ದು, ಸೋಮವಾರಪೇಟೆ ವಲಯ ಅರಣ್ಯಾಧಿಕಾರಿ ಲಕ್ಷ್ಮೀಕಾಂತ್, ಸತೀಶ್ ಮತ್ತು ಸಿಬ್ಬಂದಿಗಳು ತಕ್ಷಣ ಸ್ಥಳಕ್ಕೆ ತೆರಳಿ, ಅಗ್ನಿಶಾಮಕ ದಳದ ಸಿಬ್ಬಂದಿಗಳು ಹಾಗೂ ಸ್ಥಳೀಯರ ಸಹಕಾರದೊಂದಿಗೆ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.