ಮಡಿಕೇರಿ, ಫೆ. 24: ಕೊಡಗಿನ ಇತಿಹಾಸದಲ್ಲಿ ಈ ಶತಮಾನಕ್ಕೆ ಕಂಡು ಕೇಳರಿಯದ ಜಲಸ್ಫೋಟದೊಂದಿಗೆ ಭೂಕುಸಿತ ಕಂಡಿದ್ದರೆ, ಇನ್ನಷ್ಟು ಕಾಲದ ಹಿಂದೆಯೇ ಬೆಂಕಿಯು ಕೆಂಡಗಳನ್ನು ಸುರಿಸಿರುವ ಮಳೆ ಗೋಚರಿಸಿರುವ ಸಂಗತಿಯನ್ನು ಉತ್ತರ ಕೊಡಗಿನ ನೇರುಗಳಲೆ ಗ್ರಾ.ಪಂ. ವ್ಯಾಪ್ತಿಯ ಜನತೆ ಕೇಳಿದ್ದನ್ನು ಇಂದಿಗೂ ನೆನಪಿಸಿಕೊಳ್ಳುತ್ತಾರೆ. ಹೀಗಾಗಿ ಒಂದೊಮ್ಮೆ ನೇರುಗಳಲೆ ಗ್ರಾ.ಪಂ. ವ್ಯಾಪ್ತಿಯ ನಾಲ್ಕಾರು ಗ್ರಾಮಗಳೇ ನಾಶವಾಗಿ ಹೋಗಿತ್ತಂತೆ.ಬಳಿಕ ದೂರದ ಶಾಂತಳ್ಳಿ ಹಾಗೂ ಇತರೆಡೆಗಳಿಂದ ಕೆಲವರು ಆ ಕಾಲಘಟ್ಟದಲ್ಲಿ ವಲಸೆ ಹೋಗಿ ನೇರುಗಳಲೆ ವ್ಯಾಪ್ತಿಯಲ್ಲಿ ನೆಲೆ ಕಂಡುಕೊಂಡು ಕೃಷಿ ಕಾಯಕ ಆರಂಭಿಸಿದರಂತೆ. ಮಾತ್ರವಲ್ಲದೆ ಯಥೇಚ್ಚವಾಗಿ ಸೀಬೆಕಾಯಿ ಬೆಳೆದು ಬದುಕು ಕಂಡುಕೊಂಡಿದ್ದರಂತೆ. ವರ್ಷಗಳು ಉರುಳಿದಂತೆ ಈ ಪ್ರದೇಶಗಳಲ್ಲಿ ಭತ್ತ, ಕಾಫಿ, ಒಳ್ಳೆಮೆಣಸು ಬೆಳೆಯಲಾರಂಭಿಸಿದ್ದು, ಇತ್ತೀಚಿನ ವರ್ಷಗಳಲ್ಲಿ ಶುಂಠಿ, ಸುವರ್ಣ ಗಡ್ಡೆಯಂತಹ ಕಸುಬು ಕಂಡುಕೊಂಡಿದ್ದಾರೆ.ಊರು ಬಾಗಿಲಿನ ಕೂಡು ರಸ್ತೆಗಳ ಮುಖ್ಯ ಸ್ಥಳಕ್ಕೆ ಅಬ್ಬೂರುಕಟ್ಟೆ ಎಂಬ ಹೆಸರಿದೆ. ಆದರೆ ಅದೂ ಕೂಡ ರೂಡಿಯಲ್ಲಿ ಮಾತ್ರ ಬಳಕೆಯಿದ್ದು, ನೇರುಗಳಲೆ ಗ್ರಾಮ ಪಂಚಾಯಿತಿ ಮುಖ್ಯಪಟ್ಟದ್ದಾಗಿದೆ. ಆ ಮೂಲಕ ಪಂಚಾಯಿತಿ ವ್ಯಾಪ್ತಿಯಲ್ಲಿ ಮಸಗೋಡು, ಹೊಸಳ್ಳಿ, ದೊಡ್ಡ ಅಬ್ಬೂರು, ನೇಗಳೆ ಕರ್ಕಳ್ಳಿ, ಯಲಕನೂರು ಇತ್ಯಾದಿ ಹಳ್ಳಿಗಳಿಂದ ಕೂಡಿದ್ದಾಗಿದೆ.

ಈ ಗ್ರಾಮದಲ್ಲಿ ದಶಕಗಳಿಂದ ಗಣಿಗಾರಿಕೆ ಇಲಾಖೆ ಮೂಗಿನಡಿ ಒಂದಿಷ್ಟು ಕಲ್ಲುಕೋರೆಗಳಲ್ಲಿ ಗಣಿಗಾರಿಕೆ ಮುಂದುವರಿದಿದೆ. ಪರಿಣಾಮ ಒಂದೊಮ್ಮೆ ಈ ಭಾಗದಲ್ಲಿ ಪಾಂಡವರು ಅಜ್ಞಾತ ವಾಸವಿದ್ದರೆನ್ನುವ ಕುರುಹು ಗೋಚರಿಸುವ ಕಲ್ಲುಗಳಿಂದ ಕೂಡಿದ ಹಾಸುಗಲ್ಲಿನ ಬಿಲ (ಕುಟೀರ)ಗಳನ್ನು

(ಮೊದಲ ಪುಟದಿಂದ) ನೋಡಬಹುದು. ಇಂತಹ ಐದಾರು ಅಪೂರ್ವ ಬಿಲಗಳು ಇಂದು ನಶಿಸುತ್ತಾ, ಮೂರ್ನಾಲ್ಕು ಉಳಿದುಕೊಂಡಿವೆ. ಇವು ಕೂಡ ಅಲ್ಲಿ ಮೂಡಿರುವ ಹುತ್ತಗಳಲ್ಲಿ ನಾಗರ ಹಾವುಗಳ ಇರುವಿಕೆಯಿಂದ ರಕ್ಷಿಸಲ್ಪಟ್ಟಿವೆ.

ಒಣಹವೆ ಪ್ರದೇಶ: ಕೊಡಗಿನಲ್ಲೇ ವಿಶಾಲ ಬಯಲಿನಿಂದ ಕೂಡಿರುವ ಗ್ರಾಮೀಣ ಪ್ರದೇಶ ಇದಾಗಿದ್ದರೂ, ತೀರಾ ಬಿಸಿಲಿನೊಂದಿಗೆ ಒಣಹವೆಯ ತಾಪಮಾನದಿಂದ ಕೂಡಿರುವ ಗ್ರಾಮಗಳಾಗಿವೆ. ಈ ಹವಾಮಾನಕ್ಕೆ ಪೂರಕವಾಗಿ ರೈತರು ಕೃಷಿನಿರತರಾಗಿದ್ದು, ರಾಶಿ ರಾಶಿ ಸುವರ್ಣಗೆಡ್ಡೆ ಬೆಳೆದು ನೆರೆಯ ಕೇರಳ ರಾಜ್ಯದ ವ್ಯಾಪಾರಿಗಳಿಗೆ ಮಾರಾಟಗೊಳಿಸುತ್ತಾರೆ.

ನೀರಿನ ಬವಣೆ : ಇಲ್ಲಿನ ಗ್ರಾ.ಪಂ. ಅಧ್ಯಕ್ಷ ಎ.ಹೆಚ್. ತಿಮ್ಮಯ್ಯ ಹಾಗೂ ಜಿ.ಬಿ. ಸೋಮಯ್ಯ ಹೇಳುವಂತೆ, ಹಾರಂಗಿಯಿಂದ ನೇರವಾಗಿ ಸೋಮವಾರಪೇಟೆಗೆ ಕುಡಿಯುವ ನೀರು ಸರಬರಾಜು ವ್ಯವಸ್ಥೆ ಕಲ್ಪಿಸಿದರೆ, ನೇರುಗಳಲೆ ಸೇರಿದಂತೆ ಇತರ ಹತ್ತಾರು ಗ್ರಾ.ಪಂ. ವ್ಯಾಪ್ತಿಯಲ್ಲಿ ಶಾಶ್ವತ ನೀರಿನ ಅನುಕೂಲ ದೊರೆಯಲಿದ್ದು, ಬೇಸಿಗೆಯ ಬವಣೆ ತಪ್ಪಲಿದೆ. ಆ ದಿಸೆಯಲ್ಲಿ ಸರಕಾರ ಆಸಕ್ತಿ ತೋರಬೇಕೆಂದು ಆಶಿಸುತ್ತಾರೆ.

ಐತಿಹಾಸಿಕ ದೇಗುಲ : ಒಂದೊಮ್ಮೆ ಮಠಮಾನ್ಯಗಳೊಂದಿಗೆ ವೀರಶೈವ - ಲಿಂಗಾಯಿತ ಸಮುದಾಯದವರೇ ವಾಸವಿದ್ದು, ಕೆಂಡದ ಮಳೆಯಿಂದ ಎಲ್ಲಾ ಕುಟುಂಬಗಳು ಮತ್ತು ಗ್ರಾಮಕ್ಕೆ ಗ್ರಾಮವೇ ಅಳಿದು ಹೋಗಿವೆ ಎಂಬ ಪ್ರತೀತಿ ನಡುವೆ ಇಲ್ಲಿ ಐತಿಹಾಸಿಕ ಮತ್ತು ಅಪರೂಪದ ಶ್ರೀ ಕನ್ನಂಬಾಡಿಯಮ್ಮ ದೇವಾಲಯವಿದೆ. ಪಾರ್ವತಿ ಅಂಶದ ಈ ದೇವಾಲಯದೊಂದಿಗೆ ಶಾಂತಲಿಂಗೇಶ್ವರ, ಗಣಪತಿ ಸನ್ನಿಧಿ ಗೋಚರಿಸಲಿವೆ. ಮಾತ್ರವಲ್ಲದೆ ಉಪಗ್ರಾಮಗಳಲ್ಲಿ ಬಸವೇಶ್ವರ, ಈಶ್ವರ ಇನ್ನಿತರ ಸನ್ನಿಧಿಗಳು ಇದ್ದು, ಮುಂಗಾರು ಮಳೆಯ ಪ್ರವೇಶ ಮುನ್ನ ವಾರ್ಷಿಕ ಉತ್ಸವಗಳು ಜರುಗಲಿವೆ.

ಸಮುದಾಯ ಭವನ : ನೇರುಗಳಲೆ ಗ್ರಾ.ಪಂ. ಕಚೇರಿಗೆ ಹೊಂದಿಕೊಂಡಂತೆ ಕಳೆದ ಒಂದೂವರೆ ದಶಕ ಪೂರ್ಣಗೊಳ್ಳದ ಸಮುದಾಯ ಭವನ ಕಟ್ಟಡ ಕಣ್ಣಿಗೆ ಬೀಳಲಿದೆ. ಕ್ಷೇತ್ರದ ಶಾಸಕರು, ಸಂಸದರು ಇತ್ತ ಕಾಳಜಿ ತೋರಿ ಕಟ್ಟಡ ಪೂರ್ಣಗೊಳಿಸಿದರೆ, ಗ್ರಾಮೀಣ ಭಾಗದ ಚಟುವಟಿಕೆಗಳಿಗೆ ಈ ಭವನ ಆಸರೆ ಆಗುವ ಅಭಿಲಾಷೆ ಗ್ರಾಮಸ್ಥರದ್ದಾಗಿದೆ.

ಒಟ್ಟಿನಲ್ಲಿ ಕೊಡಗಿನಂತಹ ಪುಟ್ಟ ಜಿಲ್ಲೆಯಲ್ಲೂ ಒಂದೊಂದು ಹಳ್ಳಿಯತ್ತ ಚಿತ್ತ ಹರಿಸಿದರೆ, ಇಲ್ಲಿ ಕೃತಯುಗ, ತ್ರೇತಾಯುಗ, ದ್ವಾಪರಯುಗಗಳ ಐತಿಹ್ಯದೊಂದಿಗೆ ಅಚ್ಚರಿ ಪಡುವ ಸಂಗತಿಗಳು ಲಭಿಸಲಿವೆ. ಚರಿತ್ರಾಕಾರರ ಅಧ್ಯಯನಕ್ಕೂ ಇಲ್ಲಿ ವಿಪುಲ ಅವಕಾಶಗಳು ನಾಡಿನೆಲ್ಲೆಡೆ ಹರಡಿರುವದು ಎದುರಾಗಲಿವೆ. -ಶ್ರೀಸುತ