ಮಡಿಕೇರಿ, ಫೆ. 25: ಕುಶಾಲನಗರ ದೇವಾಲಯಗಳ ಒಕ್ಕೂಟ, ಮಹಾಶಿವರಾತ್ರಿ ಆಚರಣಾ ಸಮಿತಿ ಹಾಗೂ ಸಾರ್ವಜನಿಕರ ಸಹಭಾಗಿತ್ವದಲ್ಲಿ ನಡೆಯಲಿರುವ ದ್ವಿತೀಯ ವರ್ಷದ ಮಹಾಶಿವರಾತ್ರಿಯ ಪ್ರಯುಕ್ತ ಮಾ. 4 ರಂದು ರಾಜ್ಯಮಟ್ಟದ ಭಾರತೀಯ ಶಾಸ್ತ್ರೀಯ ನೃತ್ಯ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ಸುದ್ದಿಗೋಷ್ಠಿಯಲ್ಲಿ ದೇವಾಲಯಗಳ ಒಕ್ಕೂಟದ ಅಧ್ಯಕ್ಷ ಎಂ.ಕೆ. ದಿನೇಶ್ ಈ ಬಗ್ಗೆ ಮಾಹಿತಿ ನೀಡಿ, ಕೊಡಗಿನ ಹೆಬ್ಬಾಗಿಲಾದ ಕುಶಾಲನಗರದ ಶ್ರೀ ಮಹಾಗಣಪತಿ ದೇವಸ್ಥಾನದ ಆವರಣದಲ್ಲಿ ಶಿವರಾತ್ರಿಯಂದು ಸಂಜೆ 6 ಗಂಟೆಗೆ ಲಿಂಗರೂಪಿ ಪರಶಿವನಿಗೆ ಗಂಗಾ-ಕಾವೇರಿ ಜಲಾಭಿಷೇಕ, ಬಿಲ್ವಾರ್ಚನೆಯ ಮೂಲಕ ವಿಶೇಷ ಪೂಜೆ ಸಲ್ಲಿಸುವ ಮೂಲಕ ಮಹಾಶಿವರಾತ್ರಿಯನ್ನು ಸಾಮೂಹಿಕವಾಗಿ ಆಚರಿಸಲಾಗುತ್ತದೆಂದು ತಿಳಿಸಿದರು.
ಮಹಾಶಿವರಾತ್ರಿ ಪ್ರಯುಕ್ತ ಇದೇ ಪ್ರಥಮಬಾರಿಗೆ ರಾಜ್ಯಮಟ್ಟದ ಭಾರತೀಯ ಶಾಸ್ತ್ರೀಯ ನೃತ್ಯ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಈ ಸ್ಪರ್ಧೆ ಮಹಾಶಿವರಾತ್ರಿಯಂದು ಸಂಜೆ 6 ಗಂಟೆಯಿಂದ ರಾತ್ರಿ 12 ಗಂಟೆಯವರೆಗೆ ನಡೆಯಲಿದೆ. ಸ್ಪರ್ಧೆಯಲ್ಲಿ ಮೊದಲು ಹೆಸರು ನೋಂದಾಯಿಸಿಕೊಳ್ಳುವ 30 ತಂಡಗಳಿಗೆ ಅವಕಾಶವನ್ನು ಕಲ್ಪಿಸಲಾಗುತ್ತದೆ, ಆಸಕ್ತ ತಂಡಗಳು ಮಾರ್ಚ್ 1 ರೊಳಗಾಗಿ ಪ್ರವೇಶ ಶುಲ್ಕದೊಂದಿಗೆ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊ. 9448332200 ಸಂಪರ್ಕಿಸಬಹುದಾಗಿದೆ.
ನೃತ್ಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆಯುವ ತಂಡಕ್ಕೆ ರೂ. 15 ಸಾವಿರ ಮತ್ತು ನಟರಾಜನ ವಿಗ್ರಹವನ್ನು ಬಹುಮಾನವಾಗಿ ನೀಡಲಾಗುತ್ತದೆ. ದ್ವಿತೀಯ ಬಹುಮಾನವಾಗಿ ರೂ. 10 ಸಾವಿರ ಮತ್ತು ಟ್ರೋಫಿ, ತೃತೀಯ ಬಹುಮಾನವಾಗಿ ರೂ. 7,500 ಮತ್ತು ಟ್ರೋಫಿ ಹಾಗೂ ಏಳು ತಂಡಗಳಿಗೆ ತಲಾ ರೂ. 2 ಸಾವಿರವನ್ನು ಸಮಾಧಾನಕರ ಬಹುಮಾನವಾಗಿ ನೀಡಲಾಗುತ್ತದೆ. ಪಾಲ್ಗೊಂಡ ಎಲ್ಲಾ ತಂಡಗಳಿಗೂ ಅಭಿನಂದನಾ ಪತ್ರವನ್ನು ನೀಡಲಾಗುತ್ತದೆಂದು ತಿಳಿಸಿದರು.
ಮಹಾಶಿವರಾತ್ರಿ ಆಚರಣಾ ಸಮಿತಿ ಪ್ರಮುಖರಾದ ಕೆ.ಎನ್. ದೇವರಾಜ್ ಸ್ಪರ್ಧೆಯ ನಿಯಮಗಳ ಬಗ್ಗೆ ಮಾಹಿತಿ ನೀಡಿ, ಸ್ಪರ್ಧೆಯಲ್ಲಿ ಭರತನಾಟ್ಯ, ಕೂಚುಪುಡಿ, ಮಣಿಪುರಿ, ಕಥಕ್ಕಳಿ ಸೇರಿದಂತೆ ಯಾವದೇ ಶಾಸ್ತ್ರೀಯ ನೃತ್ಯವನ್ನು ಪ್ರದರ್ಶಿಸಲು ಅವಕಾಶವಿದ್ದು, ಪೌರಾಣಿಕ ಹಿನ್ನೆಲೆಯ ಕಥಾ ಪ್ರಸ್ತುತಿ ಕಡ್ಡಾಯ. ಸ್ಪರ್ಧೆಯಲ್ಲಿ 3 ರಿಂದ 6 ಮಂದಿಯ ತಂಡಗಳಿಗೆ ಪಾಲ್ಗೊಳ್ಳಲು ಅವಕಾಶವಿದ್ದು, ಸೋಲೋ ಸ್ಪರ್ಧೆ ಇರುವದಿಲ್ಲ. ಪ್ರತಿ ತಂಡದ ನೃತ್ಯ ಪ್ರದರ್ಶನಕ್ಕೆ 10 ನಿಮಿಷಗಳ ಕಾಲಾವಕಾಶವನ್ನು ಒದಗಿಸಲಾಗುತ್ತದೆ. ಸ್ಪರ್ಧೆಯ ತೀರ್ಪುಗಾರರಾಗಿ ಮೈಸೂರಿನ ವಿದುಷಿ ಅನಿತಾ ಮತ್ತು ತಂಡ ಕಾರ್ಯನಿರ್ವಹಿಸಲಿರುವದಾಗಿ ಸ್ಪಷ್ಟಪಡಿಸಿದರು. ಗೋಷ್ಠಿಯಲ್ಲಿ ಕುಶಾಲನಗರದ ಗಣಪತಿ ದೇವಸ್ಥಾನ ಸಮಿತಿ ಅಧ್ಯಕ್ಷ ವಿ.ಎನ್. ವಸಂತ ಕುಮಾರ್, ಮಹಾಶಿವರಾತ್ರಿ ಆಚರಣಾ ಸಮಿತಿ ಪ್ರಮುಖರಾದ ಬಿ. ಅಮೃತರಾಜ್, ಡಿ.ವಿ. ರಾಜೇಶ್, ಕೆ.ಎಸ್. ನಾಗೇಶ್ ಹಾಜರಿದ್ದರು.