ವೀರಾಜಪೇಟೆ, ಫೆ. 24: ಕೊಡಗಿನಲ್ಲಿ ರೈತರು ಬೆಳೆದ ಭತ್ತಕ್ಕೆ ಸರಕಾರ ಬೆಂಬಲ ಬೆಲೆಯನ್ನು ಘೋಷಿಸಿ ಭತ್ತದ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಬೇಕು. ಕರಿಮೆಣಸು ಆಮದಿನಿಂದ ಕೊಡಗಿನ ಬೆಳೆಗಾರರಿಗೆ ತೊಂದರೆಯಾಗಿದ್ದು, ಇದರ ಆಮದನ್ನು ರದ್ದುಪಡಿಸಬೇಕೆಂದೂ ವೀರಾಜಪೇಟೆ ತಾಲೂಕು ಹಿತ ರಕ್ಷಣಾ ಸಮಿತಿ ಅಧ್ಯಕ್ಷ ಕೇಚಂಡ ಕುಶಾಲಪ್ಪ ಹೇಳಿದರು.

ವೀರಾಜಪೇಟೆ ತಾಲೂಕು ಸಾರ್ವಜನಿಕ ಹಿತ ರಕ್ಷಣಾ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿದ್ದ ಕುಶಾಲಪ್ಪ ಅವರು ಹಿತ ರಕ್ಷಣಾ ಸಮಿತಿಯು ನ್ಯಾಯಬದ್ಧ ಹೋರಾಟಕ್ಕೆ ಸದಾ ಸಿದ್ಧವಾಗಿದೆ. ಈಗಾಗಲೇ ಸರ್ಕಾರಿ ಅಧಿಕಾರಿಗಳಿಂದ ಶೋಷಣೆಗೊಳಗಾದ ಸಾಕಷ್ಟು ಮಂದಿಗೆ ನ್ಯಾಯ ಒದಗಿಸಿ ಪರಿಹಾರ ಕೊಡಲಾಗಿದೆ. ಇನ್ನು ಮುಂದೆಯೂ ಈ ಕೆಲಸ ಮುಂದುವರೆಯಲಿದೆ. ಜನತೆಯ ನ್ಯಾಯ ಸಮ್ಮತವಾದ ಬೇಡಿಕೆಗಳನ್ನು ಈಡೇರಿಸುವದು ಸಂಘಟನೆಯ ಉದ್ದೇಶ. ಸದ್ಯದ ಮಟ್ಟಿಗೆ ತಾಲೂಕಿನ ಎಡಿಎಲ್‍ಆರ್ ಕಚೇರಿ ಶುದ್ಧೀಕರಣ, ಮಿನಿ ವಿಧಾನಸೌಧದ ದುರಸ್ತಿ, ಸಾರ್ವಜನಿಕ ಆಸ್ಪತ್ರೆಯಲ್ಲಿರುವ ಹಳೆ ಯಂತ್ರಗಳ ದುರಸ್ತಿ ಹಾಗೂ ವೈದ್ಯರುಗಳ ನೇಮಕದ ಬೇಡಿಕೆಗಳನ್ನೊಳಗೊಂಡಂತೆ ಸರಕಾರವನ್ನು ಖುದ್ದು ಆಗ್ರಹಿಸಲಾಗುವದು. ಅವರ ನ್ಯಾಯಯುತ ಬೇಡಿಕೆಗಳನ್ನು ನೇರವಾಗಿ ಸ್ಪಂದಿಸಲಾಗುವದು ಎಂದರು. ಸಂಘಟನೆಯ ಕಾನೂನು ಸಲಹೆಗಾರ ಸಿ.ಕೆ. ಪೂವಣ್ಣ ಮಾತನಾಡಿ, ಸಮಾಜದ ಹಿತ, ಶಾಂತಿ ಸಹಬಾಳ್ವೆಗಾಗಿ ಸಂಘಟನೆ ಹೋರಾಡುತ್ತಿದ್ದು, ಮುಂದೆಯೂ ಇದನ್ನು ಮುಂದುವರೆಸಲಿದೆ. ಕಡು ಬಡವರು, ನಿರ್ಗತಿಕರು ಹಾಗೂ ಸಾಮಾನ್ಯ ಜನರಿಗೆ ನ್ಯಾಯ ಒದಗಿಸುವದು ಸಂಘಟನೆಯ ಆದ್ಯ ಕರ್ತವ್ಯ ಎಂದು ಹೇಳಿದರು. ವೀರಾಜಪೇಟೆ ಸೌತ್ ಕೂರ್ಗ್ ಕ್ಲಬ್ ಸಭಾಂಗಣದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಉಪಾಧ್ಯಕ್ಷ ಬಿ.ಬಿ. ಮಾಚಯ್ಯ, ಗೌರವ ಕಾರ್ಯದರ್ಶಿ ಕೆ.ಎಸ್. ಬೋಪಯ್ಯ, ಖಜಾಂಚಿ ಎಂ.ಬಿ. ಲೋಕೇಶ್, ಕಾರ್ಯದರ್ಶಿ ಕೆ. ಮಣಿ ಕಾರ್ಯಪ್ಪ, ಜಂಟಿ ಕಾರ್ಯದರ್ಶಿ ಕೆ. ತಂಗಮ್ಮ, ಬಿ.ಬಿ. ಹಸೈನಾರ್ ಉಪಸ್ಥಿತರಿದ್ದರು.