ಸೋಮವಾರಪೇಟೆ, ಫೆ. 24: ಸೋಮವಾರಪೇಟೆ ಪಟ್ಟಣದ ಬಹುತೇಕ ಕೊಳಚೆ ನೀರು ಹರಿಯುವ ರಾಜಕಾಲುವೆ ಒತ್ತುವರಿಗೆ ಸಿಲುಕಿ ಸಣ್ಣ ಚರಂಡಿಯಂತಾಗಿದ್ದು, ಈ ಕಾಲುವೆ ಅಕ್ಕಪಕ್ಕದ ಮಂದಿಯ ಬದುಕು ಗಬ್ಬೇಳುವಂತೆ ಮಾಡಿದೆ.

11ನೇ ವಾರ್ಡ್‍ನಲ್ಲಿರುವ ಪೌರಕಾರ್ಮಿಕರ ಕಾಲೋನಿ ಮತ್ತು ಲೋಡರ್ಸ್ ಕಾಲೋನಿ ಮಂದಿಗೆ ರಾಜಕಾಲುವೆಯಿಂದ ನೆಮ್ಮದಿ ಇಲ್ಲದಂತಾಗಿದೆ. ಪಟ್ಟಣದ ಮುಕ್ಕಾಲು ಭಾಗದ ಕೊಳಚೆ ನೀರು ಹರಿಯುವ ರಾಜ ಕಾಲುವೆ, ಈ ಎರಡು ಕಾಲೋನಿ ಮೂಲಕ ಹಾದುಹೋಗಿರುವದರಿಂದ ಇಡೀ ಪ್ರದೇಶ ಗಬ್ಬೆದ್ದು ನಾರುತ್ತಿದೆ. ದಶಕಗಳಿಂದ ಕಾಲುವೆ ದುರಸ್ತಿಯಾಗದೆ ಕಸ, ಪ್ಲಾಸ್ಟಿಕ್ ಬಾಟಲಿ ತುಂಬಿರುವದರಿಂದ ಸೊಳ್ಳೆ ಸೇರಿದಂತೆ ಇನ್ನಿತರ ಕ್ರಿಮಿಕೀಟಗಳ ಆವಾಸ ಕೇಂದ್ರವಾಗಿದ್ದು, ಸಾಂಕ್ರಾಮಿಕ ರೋಗ ಹರಡುವ ಭೀತಿಯಲ್ಲಿ ಇಲ್ಲಿನ ನಿವಾಸಿಗಳಿದ್ದಾರೆ.

ಇಡೀ ಪಟ್ಟಣದ ಶುಚಿತ್ವ ಕಾರ್ಯವನ್ನು ನಿರ್ವಹಿಸುವ ಪೌರಕಾರ್ಮಿಕರು, ತಾವು ವಾಸಿಸುವ ಪ್ರದೇಶದಲ್ಲೇ ದುರ್ವಾಸನೆಯೊಂದಿಗೆ ಬದುಕು ಸಾಗಿಸುವಂತಾಗಿದೆ. ರಾಜಕಾಲುವೆಗೆ ಒತ್ತಿಕೊಂಡಂತೆ ಪೌರಕಾರ್ಮಿಕರ ಕಾಲೋನಿಯಿದ್ದು, ಅಂಗನವಾಡಿಯೂ ಇದೆ.

ಇದರೊಂದಿಗೆ ಅತೀ ಹೆಚ್ಚು ಕೂಲಿ ಕಾರ್ಮಿಕರು ವಾಸ ಮಾಡುತ್ತಿರುವ ಈ ವಾರ್ಡ್ ಪ್ರಾಥಮಿಕ ಸೌಲಭ್ಯಗಳಿಂದ ವಂಚಿತವಾಗಿ ಸಮಸ್ಯೆಗಳನ್ನೇ ಹೊದ್ದು ಮಲಗಿವೆ. ಶುದ್ಧ ಕುಡಿಯುವ ನೀರು, ಚರಂಡಿ ವ್ಯವಸ್ಥೆ, ರಸ್ತೆಯನ್ನು ಕಲ್ಪಿಸುವಲ್ಲಿ ಪಟ್ಟಣ ಪಂಚಾಯಿತಿ ಆಡಳಿತ ಇಲ್ಲಿಯವರೆಗೆ ಸಂಪೂರ್ಣ ವಿಫಲವಾಗಿದೆ.

ಒತ್ತುವರಿಯ ಪರಿಣಾಮ: ಪಟ್ಟಣ ವ್ಯಾಪ್ತಿಯ ಕೊಳಚೆ ನೀರನ್ನು ಕೆಳಭಾಗದ ರಾಜಕಾಲುವೆಗೆ ಹರಿಯಬಿಡಲಾಗಿದೆ. ಆದರೆ ರಾಜಕಾಲುವೆಯನ್ನು ಸೂಕ್ತ ನಿರ್ವಹಣೆ ಮಾಡದೇ ಇರುವದರಿಂದ ಕಾಲುವೆಯಲ್ಲಿ ನೀರು ಸರಾಗವಾಗಿ ಹರಿಯದೆ ಅಲ್ಲಲ್ಲಿ ಸಂಗ್ರಹವಾಗುತ್ತಿದೆ. ರಾಜಕಾಲುವೆಯ ಸುತ್ತ ಕಾಡು ಆವೃತ್ತವಾಗಿರುವದರಿಂದ ಪಂಚಾಯಿತಿ ಅಧಿಕಾರಿಗಳಾಲಿ, ಈ ಹಿಂದಿನ ಅವಧಿಯ ಜನಪ್ರತಿನಿಧಿಗಳಾಗಲಿ ರಾಜಕಾಲುವೆಯ ದುರಸ್ತಿಗೆ ಮುಂದಾಗಿಲ್ಲ ಎಂಬ ಆರೋಪವಿದೆ. ಈ ಅವಕಾಶವನ್ನು ಸದುಪಯೋಗ ಪಡಿಸಿಕೊಂಡ, ಕೆಲವು ಪ್ರಭಾವಿಗಳು ರಾಜಕಾಲುವೆಯ ಪಕ್ಕದ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಕೆಲವರು ಕಟ್ಟಡವನ್ನು ನಿರ್ಮಿಸಿಕೊಂಡಿದ್ದಾರೆ. ಪಟ್ಟಣದ ಕಲುಷಿತ ನೀರು ಹರಿಯುವ ಕಾಲುವೆ ಅಗಲ ಕೇವಲ 2ರಿಂದ 3 ಅಡಿಗಳಿಷ್ಟಿದೆ. ಕಾಲುವೆಯಲ್ಲಿ ತ್ಯಾಜ್ಯ ವಸ್ತುಗಳು ಸಂಗ್ರಹವಾಗುತ್ತಿರುವದರಿಂದ ಕೊಳಚೆ ಪ್ರದೇಶವಾಗಿ ನಿರ್ಮಾಣವಾಗಿದೆ. ಸುಮಾರು ಅರ್ಧ ಕಿ.ಮೀ.ನಷ್ಟು ರಾಜಕಾಲುವೆಯಲ್ಲಿ ಈಗಲೂ ಕೊಳಚೆ ನೀರು ಸಂಗ್ರಹವಾಗಿದೆ.

ಲೋಡರ್ಸ್ ಕಾಲೋನಿಯಲ್ಲಿ 25 ಕುಟುಂಬಗಳಿದ್ದು, ಮಧ್ಯಭಾಗದಲ್ಲಿ ಎರಡು ಕಾಲುವೆಯಲ್ಲಿ ಕೊಳಚೆ ನೀರು ಹರಿಯುತ್ತಿದೆ. ಇಲ್ಲಿನ ನಿವಾಸಿಗಳು ಗಬ್ಬುವಾಸನೆಯನ್ನು ಸಹಿಸಿಕೊಂಡು ಬದುಕುತ್ತಿದ್ದಾರೆ. ವೈಜ್ಞಾನಿಕ ರೀತಿಯಲ್ಲಿ ರಾಜಕಾಲುವೆ ಕಾಮಗಾರಿ ನಡೆಯಬೇಕಾಗಿದೆ. ಹಾಗಾದಾಗ ಮಾತ್ರ ಇಲ್ಲಿನ ನಿವಾಸಿ ನೆಮ್ಮದಿಯಿಂದ ಬದುಕಬಹುದು.

ಲೋಡರ್ಸ್ ಕಾಲೋನಿಯ ಒಳಗಿನ ರಸ್ತೆಯನ್ನು ಕಾಂಕ್ರೀಟೀಕರಣ ಮಾಡಿಲ್ಲ. ಕೆಲ ಮನೆಗಳ ಸಮೀಪದ ಚರಂಡಿಗಳನ್ನು ದುರಸ್ತಿ ಮಾಡಿಲ್ಲ. ಈ ಬಗ್ಗೆ ಅನೇಕ ಬಾರಿ ಮನವಿ ಮಾಡಿದ್ದರೂ ಸ್ಪಂದನೆಯಿಲ್ಲ. ಸರ್ಕಾರದಿಂದ ಬಿಡುಗಡೆಯಾಗುವ ಅನುದಾನವನ್ನು ಪಟ್ಟಣದ ಶ್ರೀಮಂತ ಬಡಾವಣೆಗಳಿಗೆ, ಮುಖ್ಯ ರಸ್ತೆ ಕಾಂಕ್ರೀಟೀಕರಣಕ್ಕೆ ವಿನಿಯೋಗಿಸುತ್ತಿದ್ದಾರೆ. ನಮ್ಮ ವಾರ್ಡ್ ಅಭಿವೃದ್ಧಿ ಕಾಣದೆ ಕೊಳಚೆ ಪ್ರದೇಶವಾಗಿ ಮಾರ್ಪಾಡಾಗಿದೆ ಎಂದು ನಿವಾಸಿಗಳು ದೂರಿದ್ದಾರೆ. ಇದರೊಂದಿಗೆ ಶುದ್ಧ ಕುಡಿಯುವ ನೀರಿನ ಕೊರತೆಯೂ ಈ ವಾರ್ಡ್‍ನಲ್ಲಿದೆ.

ಪೌರಕಾರ್ಮಿಕರಿಗೆ ರೋಗಭೀತಿ: ಪಟ್ಟಣವನ್ನು ಸ್ವಚ್ಛ ಮಾಡುವ ಪೌರಕಾರ್ಮಿಕರ ಕಾಲೋನಿಯಲ್ಲಿ ಸ್ವಚ್ಛತೆ ಇಲ್ಲದಂತಾಗಿದೆ. ಈ ಕಾಲೋನಿಯ ಪಕ್ಕದಲ್ಲೇ ರಾಜಕಾಲುವೆಯಿದ್ದು ಅಲ್ಲಿಯೂ ಕೊಳಚೆ ನೀರು ಸಂಗ್ರಹವಾಗಿ ಕೆಟ್ಟ ವಾಸನೆ ಬರುತ್ತಿದೆ. ಇಲ್ಲಿಯೂ ಚರಂಡಿಗಳು ಹಾಳಾಗಿವೆ. ಕಾಲುವೆ ದುರಸ್ತಿ ಪಡಿಸದೆ ದಶಕಗಳೇ ಕಳೆದಿರುವದರಿಂದ ಸಮಸ್ಯೆ ಜೀವಂತವಿದೆ.

ಒಟ್ಟಾರೆ ಪಟ್ಟಣದ ಕೊಳಚೆ ನೀರು ಹರಿಯುವ ರಾಜಕಾಲುವೆಯನ್ನು ತಕ್ಷಣ ದುರಸ್ತಿಗೊಳಿಸಬೇಕು. ಕೊಳಚೆ ನೀರು ಸರಾಗವಾಗಿ ಹರಿಯಲು ಅವಕಾಶ ಕಲ್ಪಿಸುವ ಮೂಲಕ ಎರಡೂ ಕಾಲೋನಿಗಳ ಜನರು ಶುಚಿತ್ವದೊಂದಿಗೆ ನೆಮ್ಮದಿಯಿಂದ ಬದುಕಲು ಅನುವು ಮಾಡಿಕೊಡಬೇಕು ಎಂದು ವಾರ್ಡ್‍ನ ಕುಮಾರ್, ಲಕ್ಷ್ಮೀ, ಮಂಜುಳಾ ಸೇರಿದಂತೆ ಇತರರು ಮನವಿ ಮಾಡಿದ್ದಾರೆ.

- ವಿಜಯ್ ಹಾನಗಲ್