ಕುಶಾಲನಗರ, ಫೆ. 24: ವಾಣಿಜ್ಯ ಕಟ್ಟಡಗಳಿಂದ ತ್ಯಾಜ್ಯವನ್ನು ನೇರವಾಗಿ ಚರಂಡಿಗೆ ಹರಿಸುವ ಕಟ್ಟಡ ಮಾಲೀಕರ ಮೇಲೆ ಕಾನೂನು ಕ್ರಮಕೈಗೊಳ್ಳುವದರೊಂದಿಗೆ ಪರವಾನಗಿ ರದ್ದುಗೊಳಿಸಲು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಕುಶಾಲನಗರ ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಕುಶಾಲನಗರಕ್ಕೆ ಭೇಟಿ ನೀಡಿ ಪಟ್ಟಣದ ವಿವಿಧ ಭಾಗಗಳಲ್ಲಿ ಪರಿಶೀಲನೆ ನಡೆಸಿದ ಮಂಡಳಿಯ ಪ್ರಬಾರ ಪ್ರಾದೇಶಿಕ ಪರಿಸರ ಅಧಿಕಾರಿ ಡಾ. ಸುಧಾ ಅವರು ಈ ಸೂಚನೆ ನೀಡಿದ್ದಾರೆ. ಕುಶಾಲನಗರದ ತಾವರೆಕೆರೆಗೆ ಕಲುಷಿತ ತ್ಯಾಜ್ಯವನ್ನು ನೇರವಾಗಿ ಹರಿಸುತ್ತಿರುವ ಹಿನ್ನೆಲೆಯಲ್ಲಿ ಕೆರೆಯ ಸಮೀಪದಲ್ಲಿರುವ ಎರಡು ಕಟ್ಟಡಗಳ ಪರವಾನಗಿಯನ್ನು ತಕ್ಷಣ ರದ್ದುಗೊಳಿಸುವಂತೆ ಸ್ಥಳದಲ್ಲಿದ್ದ ಪಂಚಾಯಿತಿ ಅಧಿಕಾರಿಗಳಿಗೆ ತಿಳಿಸಿದ ಅವರು, ಕಟ್ಟಡಗಳಿಂದ ನೇರವಾಗಿ ಕಲುಷಿತ ನೀರನ್ನು ಚರಂಡಿ ಮೂಲಕ ತಾವರೆಕೆರೆಗೆ ಹರಿಸುವದನ್ನು ಕೂಡಲೆ ಸ್ಥಗಿತಗೊಳಿಸುವಂತೆ ನಿರ್ದೇಶನ ನೀಡಿದರು. ಇದರೊಂದಿಗೆ ಕಟ್ಟಡದ ಮಾಲೀಕರ ಮೇಲೆ ಕಾನೂನು ಕ್ರಮಕೈಗೊಳ್ಳಲು ತಿಳಿಸಿದರು.

ಪಟ್ಟಣದ ಕನ್ನಡ ಭಾರತಿ ಕಾಲೇಜಿನ ಬಳಿ, ದಂಡಿನಪೇಟೆ, ಮಾರುಕಟ್ಟೆ ಮತ್ತಿತರ ಪ್ರದೇಶಗಳಲ್ಲಿ ಬಡಾವಣೆಗಳಿಂದ ಕಾವೇರಿ ನದಿಗೆ ನೇರವಾಗಿ ತ್ಯಾಜ್ಯ ಹರಿಸುವದನ್ನು ಕೂಡಲೇ ಸ್ಥಗಿತಗೊಳಿಸುವದು, ಮಾರುಕಟ್ಟೆ ರಸ್ತೆಯಲ್ಲಿರುವ ಸರ್ವೀಸ್ ಸ್ಟೇಷನ್‍ನಿಂದ ವಾಹನಗಳನ್ನು ತೊಳೆದ ನೀರು ನದಿಗೆ ಸೇರುತ್ತಿರುವ ಬಗ್ಗೆ ಮಾಲೀಕರ ಮೇಲೆ ಕ್ರಮಕೈಗೊಳ್ಳುವದು, ಕುಶಾಲನಗರ ಅರಣ್ಯ ತಪಾಸಣಾ ಗೇಟ್ ಬಳಿ ಮಾರ್ಬಲ್ ಅಂಗಡಿಯಿಂದ ನದಿಗೆ ತ್ಯಾಜ್ಯ ಸೇರುತ್ತಿರುವ ಬಗ್ಗೆ ಪರಿಶೀಲಿಸಿ ಕ್ರಮಕ್ಕೆ ಸೂಚಿಸಿದರು. ಪಟ್ಟಣದ ಕೆಲವೆಡೆ ಲಾಡ್ಜ್‍ನಿಂದ ಶೌಚ ತ್ಯಾಜ್ಯ ಚರಂಡಿಗೆ ಪಂಪ್ ಮಾಡಿ ಹರಿಸುತ್ತಿರುವ ಪ್ರಕರಣಗಳ ಬಗ್ಗೆ ಪರಿಶೀಲನೆ ಮಾಡಿ ಕಟ್ಟಡ ಮಾಲೀಕರ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ವಾಣಿಜ್ಯ ಕಟ್ಟಡಗಳು ತಮ್ಮಲ್ಲಿ ಉತ್ಪತ್ತಿಯಾಗುವ ತ್ಯಾಜ್ಯಗಳ ವಿಲೇವಾರಿಗೆ ಪ್ರತ್ಯೇಕ ಸಂಸ್ಕರಣಾ ಘಟಕಗಳನ್ನು ನಿರ್ಮಿಸದಿದ್ದಲ್ಲಿ ಅಂತಹ ವ್ಯಾಪಾರ ವಹಿವಾಟು ಪರವಾನಗಿಯನ್ನು ತಕ್ಷಣ ಅಮಾನತುಗೊಳಿಸುವಂತೆ ಪಟ್ಟಣ ಪಂಚಾಯಿತಿ ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ತಿಳಿಸಿರುವ ಡಾ. ಸುಧಾ, ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಲಾಗಿದೆ ಎಂದು ತಿಳಿಸಿದ್ದಾರೆ.

ಕಾವೇರಿ ನದಿ ಸಂರಕ್ಷಣೆಗೆ ಜಿಲ್ಲೆಯ ಪ್ರತಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಕಟ್ಟುನಿಟ್ಟಿನ ಕ್ರಮಕ್ಕೆ ಮಂಡಳಿ ಮುಂದಾಗಿದೆ. ನೆಲ್ಲಿಹುದಿಕೇರಿ ಬಳಿ ಕಾಫಿ ಫಲ್ಪರ್ ನದಿಗೆ ಹರಿಸುತ್ತಿದ್ದ ಹಿನ್ನೆಲೆಯಲ್ಲಿ ತೋಟದ ಮಾಲೀಕರಿಗೆ ನೋಟಿಸ್ ನೀಡಲಾಗಿದೆ. ಸ್ವಚ್ಛ ಕಾವೇರಿ ನಿರ್ಮಾಣಕ್ಕಾಗಿ ಪ್ರತಿಯೊಬ್ಬರೂ ಕೈಜೋಡಿಸಬೇಕೆಂದು ಡಾ. ಸುಧಾ ಮನವಿ ಮಾಡಿದ್ದಾರೆ.

ಕುಶಾಲನಗರ ಪಟ್ಟಣದ ವಿವಿಧೆಡೆ ಪರಿಶೀಲನೆ ಸಂದರ್ಭ ಪ.ಪಂ. ಅಭಿಯಂತರೆ ಶ್ರೀದೇವಿ, ಆರೋಗ್ಯಾಧಿಕಾರಿ ಉದಯ್, ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಂಚಾಲಕ ಎಂ.ಎನ್. ಚಂದ್ರಮೋಹನ್, ಪ್ರಮುಖರಾದ ಡಿ.ಆರ್. ಸೋಮಶೇಖರ್, ಕೆ.ಆರ್. ಶಿವಾನಂದನ್, ಕೆ.ಜಿ. ಮನು, ಮಂಡೇಪಂಡ ಬೋಸ್ ಮೊಣ್ಣಪ್ಪ ಮತ್ತಿತರರು ಇದ್ದರು.