ಮಡಿಕೇರಿ, ಫೆ. 24: ಕೊಡಗು ಪ್ರೆಸ್ ಕ್ಲಬ್ 20ನೇ ವಾರ್ಷಿಕೋತ್ಸವವು ಪತ್ರಿಕಾ ಭವನದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ನಡೆಯಿತು. ಜಿಲ್ಲೆಯ ವಿವಿಧೆಡೆಯ ಪತ್ರಕರ್ತರು, ಕುಟುಂಬ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮಕ್ಕಳಿಗೆ ವಿವಿಧ ಮನೋರಂಜನೆ ಸ್ಪರ್ಧೆ ನಡೆಯಿತು. ಪತ್ರಕರ್ತರಿಗೆ ಗೀತಾ ಗಾಯನ ಸ್ಪರ್ಧೆ ನಡೆಯಿತು. ರೆಜಿತ್‍ಕುಮಾರ್ ಗುಹ್ಯ ಪ್ರಥಮ, ಚೆನ್ನನಾಯಕ್ ದ್ವಿತೀಯ ಬಹುಮಾನ ಪಡೆದುಕೊಂಡರು. ಛದ್ಮವೇಷ ಸ್ಪರ್ಧೆಯಲ್ಲಿ ಕಪಟ ಸನ್ಯಾಸಿ ವೇಷ ಧರಿಸಿದ್ದ ವಿಶ್ವ ಕುಂಬೂರು ಪ್ರಥಮ, ಯೋಧನಾಗಿ ಬಂದ ಕಿಶೋರ್ ರೈ ಕತ್ತಲೆಕಾಡು ದ್ವಿತೀಯ ಬಹುಮಾನ ಪಡೆದರು. ಪತ್ರಕರ್ತರ ಮಕ್ಕಳಿಗೂ ಗೀತಾ ಗಾಯನ, ಛದ್ಮವೇಷ ಸ್ಪರ್ಧೆ ನಡೆಯಿತು. ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಅಧ್ಯಕ್ಷತೆಯಲ್ಲಿ ರಾತ್ರಿ ಸಭಾ ಕಾರ್ಯಕ್ರಮ ನಡೆಯಿತು. ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕೊಡಗಿನ ಪತ್ರಕರ್ತರು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆಂದು ಮೆಚ್ಚುಗೆ ವ್ಯಕ್ತ ಪಡಿಸಿದರು. ಜಿಲ್ಲೆಯ ಪತ್ರಕರ್ತರ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸುವದಾಗಿ ಭರವಸೆ ನೀಡಿದರು.ಮುಖ್ಯಅತಿಥಿಗಳಾಗಿ ಪಾಲ್ಗೊಂಡಿದ್ದ ‘ಪ್ರಜಾಸತ್ಯ’ ಸಂಪಾದಕ ಡಾ.ಬಿ.ಸಿ. ನವೀನ್, ಕಾವೇರಿ ಟೈಮ್ಸ್ ಸಂಪಾದಕ ಡಾ.ಬಿ.ಸಿ. ನಂಜಪ್ಪ ಮಾತನಾಡಿ, ಪತ್ರಿಕಾ ವೃತ್ತಿಯಲ್ಲಿ ಇರುವವರು ನೈತಿಕತೆ ಉಳಿಸಿಕೊಳ್ಳಬೇಕು ಹಾಗೂ ಸಮಾಜಮುಖಿ ವರದಿಗಳನ್ನು ಮಾಡಬೇಕೆಂದು ಕರೆ ನೀಡಿದರು. ಮುಖ್ಯ ಅತಿಥಿಯಾಗಿ ಕೊಡಗು ಪ್ರೆಸ್‍ಕ್ಲಬ್ ಮಾಜಿ ಪ್ರಧಾನ ಕಾರ್ಯದರ್ಶಿ ಬಿ.ಸಿ. ದಿನೇಶ್ ಇದ್ದರು. ರೆಜಿತ್‍ಕುಮಾರ್ ಗುಹ್ಯ ನಿರೂಪಿಸಿದರು. ಬಿ.ಎಸ್. ಲೋಕೇಶ್‍ಸಾಗರ್ ಪ್ರಾರ್ಥಿಸಿದರು. ಆರ್.ಸುಬ್ರಮಣಿ ಸ್ವಾಗತಿಸಿದರು.

ಸನ್ಮಾನ

ವಿವಿಧ ಕ್ಷೇತ್ರದಲ್ಲಿ ಸಾಧನೆಗೈದಿರುವ ಕ್ಲಬ್ ಸದಸ್ಯರನ್ನು ಸನ್ಮಾನಿಸಲಾಯಿತು. ಪ್ರಕೃತಿ ವಿಕೋಪ ವೇಳೆ ಸಂಕಷ್ಟಕ್ಕೆ ಸಿಲುಕಿದವರನ್ನು ರಕ್ಷಿಸುವ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಕಿಶೋರ್ ರೈ ಕತ್ತಲೆಕಾಡು, ನವೀನ್ ಡಿಸೋಜ, ಸತೀಶ್ ನಾರಾಯಣ (ಅಪ್ಪಿ), ಪರಿಹಾರ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಪುತ್ತರಿರ ಪಪ್ಪು ತಿಮ್ಮಯ್ಯ, ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷೆ ಬಿ.ಆರ್. ಸವಿತಾ ರೈ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಅಜ್ಜಮಾಡ ರಮೇಶ್ ಕುಟ್ಟಪ್ಪ, ವೀರಾಜಪೇಟೆ ತಾಲೂಕು ಪತ್ರಕರ್ತರ ಸಂಘ ಅಧ್ಯಕ್ಷ ಸಣ್ಣುವಂಡ ಶ್ರೀನಿವಾಸ್ ಚಂಗಪ್ಪ, ಚೊಚ್ಚಲ ಕನ್ನಡ ಕೃತಿ ಪ್ರಕಟಿಸಿರುವ

(ಮೊದಲ ಪುಟದಿಂದ) ವಿಘ್ನೇಶ್ ಎಂ. ಭೂತನಕಾಡು, 22 ಕೃತಿ ಪ್ರಕಟಿಸಿದ ಬೊಳ್ಳಜೀರ ಬಿ. ಅಯ್ಯಪ್ಪ, ವೀರಾಜಪೇಟೆ ಪಟ್ಟಣ ಪಂಚಾಯಿತಿ ಸದಸ್ಯ ಡಿ.ಪಿ. ರಾಜೇಶ್, ಕೊಡಗು ಜಿಲ್ಲಾ ಪತ್ರಕರ್ತರ ಸಂಘದಿಂದ ಅತ್ಯುತ್ತಮ ಸುದ್ದಿ ಛಾಯಾಚಿತ್ರ ಪ್ರಶಸ್ತಿ ಪಡೆದಿರುವ ಪೊನ್ನೆಟಿ ಸುನೀಲ್ ಅವರನ್ನು ಸನ್ಮಾನಿಸಲಾಯಿತು.

ಪ್ರಶಸ್ತಿ ಪ್ರದಾನ

ಕೆ.ಬಿ. ಮಹಂತೇಶ್ ಸ್ಮರಣಾರ್ಥ ಕೊಡಗು ಪ್ರೆಸ್ ಕ್ಲಬ್ ವತಿಯಿಂದ ನೀಡುವ ಅತ್ಯುತ್ತಮ ಪರಿಣಾಮಕಾರಿ ವರದಿ 2018 ಪ್ರಶಸ್ತಿಯನ್ನು ಶಕ್ತಿ ಉಪಸಂಪಾದಕ ಕಾಯಪಂಡ ಶಶಿ ಸೋಮಯ್ಯ ಅವರಿಗೆ ಪ್ರದಾನ ಮಾಡಲಾಯಿತು. ಶಕ್ತಿಯಲ್ಲಿ ಜಿಲ್ಲಾ ಕ್ರೀಡಾಂಗಣ ಕುರಿತು ಪ್ರಟಕವಾದ ವಿಶೇಷ ವರದಿ ಪ್ರಶಸ್ತಿಗೆ ಆಯ್ಕೆಯಾಗಿತ್ತು. ಪ್ರಶಸ್ತಿಯೊಂದಿಗೆ 5 ಸಾವಿರ ರೂ. ನಗದು ಬಹುಮಾನ ನೀಡಲಾಯಿತು.

ವಿಶ್ವ ಛಾಯಾಗ್ರಾಹಕ ದಿನಾಚರಣೆ ಪ್ರಯುಕ್ತ ಮಾನವೀಯ ಸುದ್ದಿ ಕುರಿತ ಛಾಯಾಚಿತ್ರ ಹಾಗೂ ವೀಡಿಯೋಗ್ರಫಿ ಸ್ಪರ್ಧೆಯಲ್ಲಿ ಪ್ರಥಮ ಮೂರು ಸ್ಥಾನ ಪಡೆದವರಿಗೆ ನಗದು ಬಹುಮಾನ ವಿತರಿಸಲಾಯಿತು. ಛಾಯಾಚಿತ್ರ ಸ್ಪರ್ಧೆ ವಿಜೇತರಾದ ವಿಘ್ನೇಶ್ ಭೂತನಕಾಡು, ಎಂ.ಎ. ಅಜೀಜ್, ಆರ್. ಸುಬ್ರಮಣಿ, ವಿಡಿಯೋಗ್ರಫಿ ಸ್ಪರ್ಧೆಯಲ್ಲಿ ವಿಜೇತರಾದ ವಿಶ್ವ ಕುಂಬೂರು, ಗೋಪಾಲ್ ಸೋಮಯ್ಯ, ಚೀಯಂಡಿ ತೇಜಸ್ ಪಾಪಯ್ಯ ಬಹುಮಾನ ಸ್ವೀಕರಿಸಿದರು. ಪ್ರಥಮ ಮೂರು ಸ್ಥಾನಕ್ಕೆ ಕ್ರಮವಾಗಿ 5 ಸಾವಿರ, 3 ಸಾವಿರ, 2 ಸಾವಿರ ನಗದು ಬಹುಮಾನ ನೀಡಲಾಯಿತು. ಪ್ರೆಸ್ ಕ್ಲಬ್ ಡೇ ಪ್ರಯುಕ್ತ ಪತ್ರಕರ್ತರಿಗೆ ನಡೆದ ಒಳಾಂಗಣ ಕ್ರೀಡಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಟ್ರೋಫಿ ವಿತರಿಸಲಾಯಿತು. ಪದಾಧಿಕಾರಿ ನಾಗರಾಜಶೆಟ್ಟಿ ವಂದಿಸಿದರು.