ವೀರಾಜಪೇಟೆ, ಫೆ. 24 : 2018ರ ಭಾರೀ ಮಳೆ ಹಾಗೂ ಪ್ರಕೃತಿ ವಿಕೋಪದಿಂದ ಗುಡ್ಡಗಾಡು ಪ್ರದೇಶಗಳಲ್ಲಿ ವಾಸಿಸುತ್ತಿದ್ದ ಮನೆ ಮಠ ಕಳೆದುಕೊಂಡ ಸಂತ್ರಸ್ತ ಫಲಾನುಭವಿಗಳಿಗೆ ರೂ ಮೂರು ಕೋಟಿ ವೆಚ್ಚದಲ್ಲಿ ಮನೆ ನಿರ್ಮಾಣ ಮಾಡಿಕೊಡಲಾಗುವದು. ಇಲ್ಲಿನ ತಾಲೂಕು ಕಚೇರಿಯ ಪರಿಹಾರ ವಿಭಾಗ ಹಾಗೂ ಪಟ್ಟಣ ಪಂಚಾಯಿತಿಯಿಂದ ಬಂದಿರುವ ಪ್ರಸ್ತಾವನೆ ಮೇರೆ ಸರಕಾರದೊಂದಿಗೆ ವಿಚಾರ ವಿನಿಮಯ ಮಾಡಿ ಹಣ ಬಿಡುಗಡೆ ಮಾಡಲಾಗುವದು ಎಂದು ಜಿಲ್ಲಾಧಿಕಾರಿ ಅನೀಶ್ ಕಣ್ಮಣಿ ಜಾಯ್ ಹೇಳಿದರು.ವೀರಾಜಪೇಟೆಗೆ ಇಂದು ದಿಢೀರ್ ಭೇಟಿ ನೀಡಿದ ಕಣ್ಮಣಿ ಜಾಯ್ ಅವರು ಹಾನಿಗೊಳಗಾದ ಮಳೆ ಅರಸು ನಗರ, ಮಲೆತಿರಿಕೆಬೆಟ್ಟ ಅಯ್ಯಪ್ಪಬೆಟ್ಟ, ಸುಂಕದ ಕಟ್ಟೆ, ನೆಹರೂನಗರ ಪ್ರದೇಶಗಳಿಗೆ ಭೇಟಿ ನೀಡಿ ಹಾನಿಗೊಳಗಾದ ಪ್ರದೇಶಗಳನ್ನು ಖುದ್ದು ವೀಕ್ಷಿಸಿದರು. ಪೂರ್ಣ ನೆಲಸಮಗೊಂಡ ಸಂತ್ರಸ್ತರಿಗೂ ಆದ್ಯತೆ ಮೇರೆ ಮನೆ ಕಟ್ಟಿಕೊಡಲಾಗವದು. ಖುದ್ದು ವೀಕ್ಷಿಸಿ ದಾಖಲೆಗಳನ್ನು ಪರಿಶೀಲಿಸಿ (ಮೊದಲ ಪುಟದಿಂದ) ಫಲಾನುಭವಿಗಳಿಗೆ ಮನೆ ಕಟ್ಟಿಕೊಡಲಾಗುವದು ಎಂದು ತಿಳಿಸಿದರು.

ಮಲೆತಿರಿಕೆಬೆಟ್ಟದಲ್ಲಿ ಪಟ್ಟಣ ಪಂಚಾಯಿತಿ ಗುರುತಿಸಿರುವ ಪಾರ್ಕ್ ನಿರ್ಮಾಣದ ವ್ಯೂ ಪಾಯಿಂಟ್‍ನ ಜಾಗವನ್ನು ಜಿಲ್ಲಾಧಿಕಾರಿ ವೀಕ್ಷಿಸಿದರು. ಬಟರ್ ಪ್ಲೈ ಪಾರ್ಕ್ ನಿರ್ಮಾಣಕ್ಕೆ ಈಗಾಗಲೇ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಪಟ್ಟಣ ಪಂಚಾಯಿತಿಯಿಂದ ಯೋಜನೆ ಅಂಗೀಕಾರಗೊಂಡಿರುವದನ್ನು ಈ ಸಂದರ್ಭದಲ್ಲಿ ಅಧಿಕಾರಿಗಳು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.

ಜಿಲ್ಲಾಧಿಕಾರಿ ಭೇಟಿ ಸಂದರ್ಭದಲ್ಲಿ ತಾಲೂಕು ತಹಶೀಲ್ದಾರ್ ಬಿ.ಎಂ. ಗೋವಿಂದರಾಜು, ಮುಖ್ಯಾಧಿಕಾರಿ ಎ.ಎಂ.ಶ್ರೀಧರ್, ಸಹಾಯಕ ಅಭಿಯಂತರ ಎನ್.ಪಿ.ಹೇಮ್‍ಕುಮಾರ್, ರೆವಿನ್ಯೂ ಇನ್ಸ್‍ಪೆಕ್ಟರ್ ಪಳಂಗಪ್ಪ, ಪಟ್ಟಣ ಪಂಚಾಯಿತಿ ಸದಸ್ಯರುಗಳಾದ ಎಂ.ಕೆ.ದೇಚಮ್ಮ, ಡಿ..ಪಿ.ರಾಜೇಶ್, ರಂಜಿ ಪೂಣಚ್ಚ, ಮಹಮ್ಮದ್ ರಾಫಿ, ಅಗಸ್ಟಿನ್, ಅನಿತಾ ಕುಮಾರಿ ಹಾಜರಿದ್ದರು.