ಪುರಾತನ ಕಾಲದಿಂದಲೇ ಜನತೆ ತರಕಾರಿಯಾಗಿ ಹಲಸಿನ ಮಿಡಿಗಳನ್ನು ಬಳಸುತ್ತಿರುವರು. ಇದು ಬಹುಜನರ ಮೆಚ್ಚುಗೆಯ ಆಹಾರಗಳಲ್ಲಿ ಒಂದು. ನಮ್ಮ ದೇಶದ ಹವಾಮಾನವನ್ನು ಅವಲಂಬಿಸಿ, ಹಲವಾರು ತಳಿಯ, ವೈವಿಧ್ಯಮಯ ಹಲಸಿನ ಜಾತಿಗಳನ್ನು ನಾವು ಕಾಣಬಹುದಾಗಿದೆ.

ಕರ್ನಾಟಕ, ಕೇರಳ, ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಇದನ್ನು ತರಕಾರಿಯ ರೂಪದಲ್ಲಿ ಬಳಸಲಾಗುತ್ತದೆ. ಹಲವಾರು ಕಡೆಗಳಲ್ಲಿ ಇದನ್ನು ಉಪ್ಪಿನೊಂದಿಗೆ ಶೇಖರಿಸಿ, ವರ್ಷದ ಎಲ್ಲ ದಿನಗಳಲ್ಲಿ ತರಕಾರಿಯಂತೆ ಬಳಸಲಾಗುವುದು.

ಇದರಲ್ಲಿ ರಾಸಾಯನಿಕ ಅಂಶವಿಲ್ಲದಿರುವುದರಿಂದ ಇದಕ್ಕೆ ಅಪಾರ ಬೇಡಿಕೆ ಇದೆ. ಕೊಡಗಿನ ಹಲವಾರು ಸಣ್ಣಪುಟ್ಟ ಪಟ್ಟಣಗಳಲ್ಲಿಯೂ ಇದು ಅಪಾರ ಪ್ರಮಾಣದಲ್ಲಿ ಮಾರಾಟವಾಗುತ್ತಿದೆ. ಬಾಟಲಿಗಳಲ್ಲಿ ಸಂಗ್ರಹಿತವಾದ ಮಿಡಿಹಲಸಿನ ತುಂಡುಗಳು ಆನ್‍ಲೈನ್‍ನಲ್ಲಿ ಅಧಿಕ ಪ್ರಮಾಣದಲ್ಲಿ ಮಾರಾಟವಾಗುತ್ತಿದೆ. ಹಲವಾರು ದೇಶಗಳು ಇದನ್ನು ಅಧಿಕ ಪ್ರಮಾಣದಲ್ಲಿ ರಪ್ತು ಮಾಡಿ ಭಾರೀ ವಿದೇಶಿ ವಿನಿಮಯವನ್ನು ಗಳಿಸುತ್ತಿದೆ. ವಿಯಾಟ್ನಾಂ, ಶ್ರೀಲಂಕಾದಂತಹ ದೇಶಗಳಲ್ಲಿ ಇದು ಅಪಾರ ಬೇಡಿಕೆ ಪಡೆದಿರುವ ತರಕಾರಿ. ಅಲ್ಲಿ ಎಳೆಯ ಹಲಸಿಗಾಗಿಯೇ ವಿಶೇಷ ಕಸಿ ಗಿಡಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಸಸ್ಯಾಹಾರಿಗಳಿಗೆ ಇದು ಅಚ್ಚುಮೆಚ್ಚಿನ ಆಹಾರವೂ ಹೌದು.

ಇದರಲ್ಲಿ ಅಪಾರ ವಿಟಮಿನ್ ಅಂಶಗಳಿವೆ. ಈ ಹಿನ್ನೆಲೆಯಲ್ಲಿ ಮಿಡಿ ಹಲಸನ್ನು ಪಶ್ಚಿಮ ಬಂಗಾಳದಲ್ಲಿ “ಮರ ಮಟನ್” ಎಂದು ಕರೆಯಲಾಗುತ್ತದೆ. ಇದರಲ್ಲಿ ಮಾನವನ ಶರೀರಕ್ಕೆ ಅಗತ್ಯವಾದ ಕಾರ್ಬೋ ಹೈಡೇಟ್ ಹೊಂದಿರುವುದರಿಂದ ಬರೇ ಮಿಡಿ ಹಲಸನ್ನು ಬೇಯಿಸಿ ಸೇವಿಸಲಾಗುತ್ತದೆ. ಜೊತೆಗೆ ಅನ್ನ, ರೊಟ್ಟಿ ಮತ್ತು ಇತರ ಆಹಾರಗಳಿಗೆ ಮೇಲೋಗರವಾಗಿಯೂ ಬಳಕೆಯಾಗುತ್ತದೆ. ಕೆಲವು ಕಡೆ ಇದರೊಂದಿಗೆ ಕಡಲೆ, ಮೀನು ಇತ್ಯಾದಿಗಳನ್ನು ಬೆರೆಕೆಯಾಗಿ ಬಳಸಿ ಖಾದ್ಯಗಳನ್ನು ತಯಾರಿಸಲಾಗುತ್ತದೆ. ಇದನ್ನು ಹಲವೆಡೆಗಳಲ್ಲಿ ಮಾವಿನಕಾಯಿ ಮತ್ತು ಇತರ ತರಕಾರಿಗಳಂತೆ ಉಪ್ಪಿನಕಾಯಿ ತಯಾರಿಸಲು ಬಳಸಲಾಗುವುದು. ಇದನ್ನು ಹಲವಾರು ಶುಭ ಕಾರ್ಯಗಳಲ್ಲಿ ಬಳಸಲಾಗುವುದು. ಇದು ಅಧಿಕ ಕ್ಯಾಲೋರಿಗಳನ್ನು, ನಾರಿನಂಶವನ್ನು ಹೊಂದಿದೆ. ಪರಿಣಾಮ ಇದು ತೂಕ ಇಳಿಸಲು ನೆರವಾಗಬಲ್ಲದು. ಇದು ದೇಹದಲ್ಲಿನ ಸಕ್ಕರೆ ನಿಯಂತ್ರಣಕ್ಕೆ ಸಹಕಾರಿಯಾಗಿದೆ. ಮಾನವ ದೇಹದಲ್ಲಿನ ಕೆಟ್ಟ ಕೊಲೆಸ್ಟಾರಾಲ್ ಅನ್ನು ಕಡಿಮೆ ಮಾಡುತ್ತದೆ. ಕರುಳಿನ ಚಲನೆಗೆ ನೆರವು ನೀಡುವುದರಿಂದ ಕರುಳಿನ ಕ್ಯಾನ್ಸರ್ ತಡೆಯಬಲ್ಲದು. ಕರುಳಿನ ಶುದ್ಧೀಕರಣಕ್ಕೆ ಸಹಾಯ ಮಾಡುವುದು.

ಮಿಡಿ ಹಲಸಿನ ನಿರಂತರ, ನಿಯಮಿತ ಬಳಕೆಯಿಂದ ಆಯಸ್ಸು ಹೆಚ್ಚಾಗುತ್ತದೆ. ಈ ಹಿನ್ನಲೆಯಲ್ಲಿ ಭಾರತೀಯ ಅಡುಗೆಯಲ್ಲಿ ಹಲಸಿನ ಮಿಡಿಯು ಹಾಸು ಹೊಕ್ಕಾಗಿದೆ.

-ಕೂಡಂಡ ರವಿ,

ಹೊದ್ದೂರು