ಪೂರ್ವ ಸಿದ್ಧತಾ ಪರೀಕ್ಷೆಗಳನ್ನು ತನಗಿಷ್ಟ ಬಂದಂತೆ ಬರೆದು ಮುಗಿಸಿದ ಶಶಾಂಕನಿಗೆ ಈಗ ತಳಮಳ ಶುರುವಾಗಿದೆ. ಕಾಲೇಜಿಗೆ ಹೋದರೆ ತರಗತಿಗಳಲ್ಲಿ ಪಾಠ ಪ್ರವಚನಗಳೆಲ್ಲಾ ಮುಗಿದ ಕಾರಣ ಎಲ್ಲಾ ಉಪನ್ಯಾಸಕರು ಹಾಗೂ ಸಹಪಾಠಿಗಳ ಮಧ್ಯ ಹಳೆ ಪ್ರಶ್ನೆ ಪತ್ರಿಕೆಗಳು, ಪ್ರಶ್ನಾ ಕೋಠಿ (ಕಿuesಣioಟಿ ಃಚಿಟಿಞ) ಗಳಲ್ಲಿರುವ ಪ್ರಶ್ನೆ-ಉತ್ತರಗಳ ಚರ್ಚೆ ನಡೆಯುತ್ತಿದೆ. ತನಗಾದರೋ ಅದು ಯಾವ ಪಾಠ, ಪಠ್ಯದ ಪ್ರಮುಖ ಅಂಶಗಳು ಯಾವುದೂ ಸ್ಪಷ್ಟವಾಗಿ ತಿಳಿಯುತ್ತಿಲ್ಲ. ತನ್ನಂತೆಯೇ ಕುಳಿತ ಕೆಲವು ಗೆಳೆಯರನ್ನು ಹೊರತು ಪಡಿಸಿ, ಉಳಿದವರೆಲ್ಲರೂ ಕಲಿಕೆಯಲ್ಲಿ ಮಗ್ನರಾಗಿದ್ದಾರೆ ಹಾಗೂ ಹೀಗೂ ಕಾಲೇಜು ತರಗತಿಗಳನ್ನು ಮುಗಿಸಿ ಮನೆಗೆ ತೆರಳಿದರೆ, ಮನೆಯಲ್ಲಿಯೂ ಪೋಷಕರಿಂದ ಪುಸ್ತಕಗಳನ್ನು ಅಭ್ಯಸಿಸುವಂತೆ ಒತ್ತಡ ಹೆಚ್ಚಾದಾಗ ‘ಪರೀಕ್ಷಾ ಭಯ’ ಆವರಿಸುತ್ತದೆ. ಪರೀಕ್ಷಾ ದಿವಸಗಳು ಬೇಗ ಬೇಗನೆ ಸಮೀಸುತ್ತಿವೆ ಎಂಬ ಆತಂಕ ಕಾಡತೊಡಗುತ್ತದೆ. ಪರೀಕ್ಷೆಯ ಬಗ್ಗೆ ಜಿಗುಪ್ಸೆಯಾಗುತ್ತಿದೆ.

ಇಂತಹ ಸಂದರ್ಭಗಳಲ್ಲಿ ಕೆಲವು ವಿದ್ಯಾರ್ಥಿಗಳು, ಪೋಷಕರು ಮಾಡುವ ಪ್ರಮುಖ ತಪ್ಪೆಂದರೆ ಮಾರುಕಟ್ಟೆಗಳಲ್ಲಿ ದೊರೆಯುವ ಡೈಜೆಸ್ಟ್, ಗೈಡ್‍ಗಳನ್ನು ಕೊಂಡುಕೊಳ್ಳುವುದು. ಇದರಿಂದ ವಿದ್ಯಾರ್ಥಿಗೆ ಕಲಿಕೆಯಲ್ಲಿ ಗೊಂದಲ ಉಂಟಾಗುತ್ತದೆ. ಯಾವ ಉತ್ತರ ಕಲಿಯುವುದು? ಹೇಗೆ ಉತ್ತರಗಳನ್ನು ಅರ್ಥೈಸಿಕೊಳ್ಳುವುದು? ಇತ್ತ ವರ್ಷವಿಡೀ ಕಲಿಕೆಯ ಅವಧಿಗಳನ್ನು ‘ಮೊಬೈಲ್’ ಎಂಬ ಪೆಡಂಭೂತ ಆಕ್ರಮಿಸಿಕೊಂಡಿದ್ದರೆ ಮತ್ತೊಂದೆಡೆ ಟಿ.ವಿ. ಸೀರಿಯಲ್‍ಗಳು, ಕ್ರಿಕೆಟ್‍ಗಳು, ಮನರಂಜನೆ ಯುವಜನತೆ ಕಲಿಕೆಯಿಂದ ವಿಮುಖರಾಗುವಂತೆ ಮಾಡುತ್ತಿವೆ. ಇಂದಿನ ಪಠ್ಯ ವಿಷಯಗಳು ವಿದ್ಯಾರ್ಥಿಗಳು ಸ್ವಾವಲಂಬಿ ಜೀವನ ನಡೆಸಲು ಪೂರಕವಾದ ವಾತಾವರಣ ಕಲ್ಪಿಸುತ್ತಿಲ್ಲ. ದಿನೇ ದಿನೇ ಹೆಚ್ಚಾಗುತ್ತಿರುವ ನಿರುದ್ಯೋಗ ಸಮಸ್ಯೆ. ನೀರಸ ತಮ್ಮ ಪರಿಸರಕ್ಕೆ ಸಂಬಂಧಿಸದ ತಮ್ಮ ಜೀವನಕ್ಕೆ ಅನಗತ್ಯವಾದ ಪಠ್ಯ ವಿಷಯಗಳೂ ವಿದ್ಯಾರ್ಥಿಗಳ ಜಿಗುಪ್ಸೆ, ತಳಮಳ, ಭಯ, ಆತಂಕಗಳನ್ನು ಹೆಚ್ಚಿಸುತ್ತಿವೆ. ಕಲಿಯುವ ಆಸಕ್ತಿಯೇ ಇದರಿಂದಾಗಿ ಕಡಿಮೆಯಾಗುತ್ತಿವೆ.

ನಮ್ಮ ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ‘ಪರೀಕ್ಷೆ’ ಒಂದು ಪ್ರಮುಖ ಹಂತವಾಗಿದೆ. ಏಕೆಂದರೆ ಉನ್ನತ ವ್ಯಾಸಂಗ, ಉದ್ಯೋಗ, ಸಂದರ್ಶನ, ವಿದ್ಯಾರ್ಥಿಗಳ ಭವಿಷ್ಯವೇ ವಾರ್ಷಿಕ ಫಲಿತಾಂಶವನ್ನು ಅವಲಂಬಿಸಿರುತ್ತದೆ. ಪ್ರತಿಯೊಂದು ವಿಷಯದಲ್ಲೂ ಜೂನ್‍ನಿಂದ ಫೆಬ್ರವರಿ ತನಕ ಕಲಿತ, ಅಭ್ಯಸಿಸಿದ ಪಠ್ಯ ವಿಷಯಗಳನ್ನು ಮಾರ್ಚ್ -ಏಪ್ರಿಲ್ ತಿಂಗಳಿನಲ್ಲಿ ಕೇವಲ ಮೂರು ಗಂಟೆಗಳ ಅವಧಿಯಲ್ಲಿ ಬರೆಯುವುದೇ ವಿದ್ಯಾರ್ಥಿಗಳ ಭವಿಷ್ಯ ನಿರ್ಧರಿಸುವ ಅಡಿಗೋಲು ಆಗಿರುವದರಿಂದ ಪರೀಕ್ಷಾ ದಿವಸಗಳು ಸಮೀಸುತ್ತಿದ್ದಂತೆ ಶೈಕ್ಷಣಿಕ ವರ್ಷದ ಪ್ರಾರಂಭದಿಂದಲೇ ಕಲಿಕೆಯಲ್ಲಿ ಆಸಕ್ತಿ ವಹಿಸದಿದ್ದರೆ ತಳಮಳ, ಜಿಗುಪ್ಸೆ, ಆತಂಕ, ಭಯ, ಕೀಳೆರಿಮೆ ಉಂಟಾಗುತ್ತದೆ. ಇದರಿಂದಾಗಿ ಕೆಲವೊಮ್ಮೆ ಚೆನ್ನಾಗಿ ಕಲಿತ ಪಠ್ಯವಿಷಯಗಳೂ ಪ್ರಶ್ನೆಪತ್ರಿಕೆ ನೋಡಿದೊಡನೆ ಮರೆತು ಹೋಗಬಹುದು. ಪರಿಣಾಮವಾಗಿ ವಿದ್ಯಾರ್ಥಿ ಅನುತ್ತೀರ್ಣನಾಗಿ ಆತ್ಮಹತ್ಯೆಯಂತಹ ಹೀನಕೃತ್ಯಗಳು ಇಲ್ಲವೇ ಸಮಾಜಘಾತುಕ ಕೃತ್ಯಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಬದುಕು ದುರಂತಮಯವಾಗಬಹುದು. ಹೀಗೆ ಅಮೂಲ್ಯವಾದ ವಿದ್ಯಾರ್ಥಿ ಜೀವನದಲ್ಲಿ ಎದುರಾಗುವ ಪ್ರಮುಖ ಹಂತವಾದ ಪರೀಕ್ಷೆಯನ್ನು ‘ಭೂತ’ದಂತೆ ಕಲ್ಪಿಸಿಕೊಂಡು ಭಯಪಡುವ ಬದಲಾಗಿ ‘ಗೆಳೆಯ’ ಮಾರ್ಗದರ್ಶಕನಂತೆ ತಿಳಿದುಕೊಂಡು ಪರೀಕ್ಷೆಯೊಂದಿಗೆ ಗೆಳೆತನ ಬೆಳೆಸಿಕೊಂಡಾಗ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗುತ್ತದೆ. ಆದುದರಿಂದಲೇ ಪಿಯುಸಿ ವಿದ್ಯಾರ್ಥಿಗಳಿಗೆ ಹದಿನೈದು ನಿಮಿಷ ಮುಂಚಿತವಾಗಿ ನೀಡುವ ಮೂಲಕ ಹೆಚ್ಚುವರಿ ಸಮಯಾವಕಾಶ ನೀಡಿ, ಪ್ರಶ್ನೆಪತ್ರಿಕೆಗಳನ್ನು ಪೂರ್ಣವಾಗಿ ಗಮನಿಸಲು, ವಿದ್ಯಾರ್ಥಿಗಳು ಪ್ರಶ್ನೆಪತ್ರಿಕೆಗಳಿಗೆ ಉತ್ತರಿಸಲು ಮಾನಸಿಕವಾಗಿ ಸಿದ್ಧತೆ ನಡೆಸಲು ಭಯ-ಆತಂಕ ದೂರ ಮಾಡಿಕೊಳ್ಳಲು ಸಾಧ್ಯವಾಗುತ್ತಿದೆ. ಇದಲ್ಲದೆ ವರ್ತಮಾನ ಪತ್ರಿಕೆಗಳು, ರೇಡಿಯೋ, ದೂರದರ್ಶನದಂತಹ ಮಾಧ್ಯಮಗಳೂ ಟಿಪ್ಸ್ಸ್ ನೀಡುವುದು, ಸಲಹೆ-ಸೂಚನೆ, ಮಾರ್ಗದರ್ಶನ ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಎಸ್‍ಎಸ್‍ಎಲ್‍ಸಿ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆ ವತಿಯಿಂದಲೂ ‘ಸಹಾಯವಾಣಿ’ ಎಂಬ ‘ಫೋನ್‍ಇನ್’ ಕಾರ್ಯಕ್ರಮಗಳನ್ನು ಅಳವಡಿಸಿ ವಿದ್ಯಾರ್ಥಿಗಳ ಮನಸ್ಸಿನಿಂದ ಪರೀಕ್ಷೆ ಎಂಬ ಭಯದ ಗುಮ್ಮನನ್ನು ಓಡಿಸಲು ಪ್ರಯತ್ನಿಸುತ್ತಿವೆ. (ಮುಂದುವರಿಯುವುದು)

?ಡಾ|| ಕೆ. ಕೆ. ಅವನಿಜಾ ಸೋಮಯ್ಯ, ಉಪನ್ಯಾಸಕರು,

ಸ.ಪ.ಪೂ. ಕಾಲೇಜು, ನಾಪೋಕ್ಲು