ಕುಶಾಲನಗರ, ಫೆ. 25: ಧಾರ್ಮಿಕ ಕೇಂದ್ರಗಳ ಮೂಲಕ ಏಕಾಗ್ರತೆ ಕಂಡುಕೊಂಡು ಮನುಷ್ಯನ ಚಂಚಲ ಸ್ವಭಾವ ತೊಲಗಿಸಲು ಸಾಧ್ಯ ಎಂದು ಅರಮೇರಿ ಕಳಂಚೇರಿ ಮಠಾಧೀಶರಾದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅವರು ಕುಶಾಲನಗರದ ಜನತಾ ಕಾಲೋನಿಯಲ್ಲಿ ಶ್ರೀ ಗೌರಿ ಗಣೇಶ ದೇವಸ್ಥಾನ ಸೇವಾ ಟ್ರಸ್ಟ್ ಮತ್ತು ಗೌರಿ ಗಣೇಶ ದೇವಾಲಯ ಸೇವಾ ಸಮಿತಿ ಆಶ್ರಯದಲ್ಲಿ ನಡೆದ ಶ್ರೀ ಗೌರಿ ಗಣೇಶ ವಿಗ್ರಹ ಮತ್ತು ನವಗ್ರಹ ಪ್ರತಿಷ್ಠಾಪನೆ, ಕುಂಬಾಭಿಷೇಕ ಮಹೋತ್ಸವದಲ್ಲಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ, ಧಾರ್ಮಿಕ ಕೇಂದ್ರಗಳ ಮೂಲಕ ಮಾತ್ರ ಮನುಷ್ಯ ಅಂಧಕಾರ ಹೋಗಲಾಡಿಸಿ ಸಂತೃಪ್ತ ಭಾವವನ್ನು ಪಡೆಯಬಹುದು ಎಂದರು.ಆದಿಚುಂಚನಗಿರಿ ಮಹಾಸಂಸ್ಥಾನದ ಹಾಸನ ಮತ್ತು ಕೊಡಗು ಶಾಖಾ ಮಠಾಧೀಶರಾದ ಶ್ರೀ ಶಂಭುನಾಥ ಸ್ವಾಮೀಜಿ ಮಾತನಾಡಿ, ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಸಮಾಜಕ್ಕೆ ಒಳಿತು ಮಾಡಬಹುದು ಎಂದರು.

ನೂತನವಾಗಿ ನಿರ್ಮಾಣಗೊಂಡ ಶ್ರೀ ಮಹಾಗೌರಿ, ಬಾಲಗಣಪತಿ ಮತ್ತು ನವಗ್ರಹ ಪ್ರತಿಷ್ಠಾಪನೆ ಮಹೋತ್ಸವದ ಅಂಗವಾಗಿ ವೇ.ಬ್ರ.ಶೈವಾಗಮ ಪ್ರವೀಣ್ ಕೆ ಸುದರ್ಶನ ಬಾಬು ಮತ್ತು ತಂಡದವರಿಂದ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು. 3 ದಿನಗಳ ಕಾಲ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಹೋಮ, ಹವನ, ಕಳಶ ಪ್ರತಿಷ್ಠಾಪನೆ, ವಾಸ್ತು ಹೋಮ, ವಿಗ್ರಹ ಸಂಸ್ಕಾರ, ವಿಗ್ರಹ ಪ್ರತಿಷ್ಠಾಪನೆ, ಅಭಿಷೇಕ, ವಿಮಾನ ಗೋಪುರ ಕಳಶ ಸ್ಥಾಪನೆ, ಕುಂಬಾಭಿಷೇಕ ನಡೆಯಿತು. ಶ್ರೀ ಗೌರಿ ಗಣೇಶ ದೇವಸ್ಥಾನ ಸೇವಾ ಟ್ರಸ್ಟ್ ಅಧ್ಯಕ್ಷೆ, ಸುಚಿತ್ರ, ಮತ್ತಿತರರು ಇದ್ದರು.