ಸಿದ್ದಾಪುರ, ಫೆ.25: ಯುವತಿಯನ್ನು ಚುಡಾಯಿಸಿದ ಆಟೋ ಚಾಲಕನೋರ್ವನಿಗೆ ಗ್ರಾಮಸ್ಥರು ಥಳಿಸಿ ಪೊಲೀಸರಿಗೊಪ್ಪಿಸಿದ ಘಟನೆ ಸಿದ್ದಾಪುರದಲ್ಲಿ ನಡೆದಿದೆ.ಸಿದ್ದಾಪುರದ ಆಟೋ ಚಾಲಕ ಮುರುಗೇಶ್ ಅಲಿಯಾಸ್ ಡಿಂಗ ಎಂಬಾತನು ಅಮ್ಮತ್ತಿಯ ಯುವತಿಯೊಂದಿಗೆ ಅಸಭ್ಯ ರೀತಿಯಲ್ಲಿ ವರ್ತಿಸಿದ್ದು, ತನ್ನನ್ನು ಪ್ರೀತಿಸಬೇಕೆಂದು ಒತ್ತಾಯಿಸಿದ್ದಾನೆ ಎನ್ನಲಾಗಿದೆ. ಯುವತಿಯು ಸಿದ್ದಾಪುರದಿಂದ ಅಮ್ಮತ್ತಿಯ ಮನೆಗೆ ಹಿಂತಿರುಗುತ್ತಿದ್ದ ವೇಳೆ ಮುರುಗೇಶ್ ತನ್ನ ಆಟೋದಲ್ಲಿ ಬಸ್ಸನ್ನು ಹಿಂಬಾಲಿಸಿ, ನಿಲ್ಲಿಸಿ ಆಕೆಯ ಬಳಿ ತೆರಳಿ ತನ್ನ ದೂರವಾಣಿಗೆ ಕರೆ ಮಾಡುವಂತೆ ಹಾಗೂ ಕರೆ ಮಾಡದಿದ್ದಲ್ಲಿ ಪ್ರಾಣಾಪಾಯದ ಬೆದರಿಕೆ ಒಡ್ಡಿದ್ದಾನೆ ಎನ್ನಲಾಗಿದೆ. ಯುವತಿಯು ಮುರುಗೇಶ್ ನೀಡುತ್ತಿದ್ದ ಕಿರುಕುಳದ ಬಗ್ಗೆ ತನ್ನ ಅಣ್ಣನ ಬಳಿ ತಿಳಿಸಿದ್ದು, ಅಮ್ಮತ್ತಿಯ ಕೆಲ ಗ್ರಾಮಸ್ಥರು ಮುರುಗೇಶ್‍ಗೆ ಥಳಿಸಿ, ಬಳಿಕ ಪೊಲೀಸರಿಗೊಪ್ಪಿಸಿದ್ದಾರೆ. ಯುವತಿಯು ಮುರುಗೇಶ್‍ಗೆ ತನ್ನ ಚಪ್ಪಲಿಯಿಂದ ಥಳಿಸುವ ವೀಡಿಯೋ ವೈರಲ್ ಆಗಿದೆ. ಆರೋಪಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಆರೋಪಿ ಆಟೋ ಚಾಲಕನಿಂದ ತಪ್ಪೊಪ್ಪಿಗೆ ಬರೆಸಿಕೊಂಡು ಸಿದ್ದಾಪುರ ಪೊಲೀಸರು ಪ್ರಕರಣವನ್ನು ಮುಕ್ತಾಯಗೊಳಿಸಿದ್ದಾರೆ.