ಗೋಣಿಕೊಪ್ಪ ವರದಿ, ಫೆ. 25 : ಪರಿಸರದ ಹೆಸರಿನಲ್ಲಿ ಜನ ವಿರೋಧಿ ಚಟುವಟಿಕೆಯಲ್ಲಿ ತೊಡಗಿಕೊಂಡಿರುವ ಪರಿಸರವಾದಿಗಳು ಕೊಡಗಿನ ಜನತೆಯನ್ನು ಜಿಲ್ಲೆಯಿಂದ ಒಕ್ಕಲೆಬ್ಬಿಸುವ ಮುನ್ನ ನಕಲಿ ಪರಿಸರವಾದಿಗಳನ್ನು ಒಕ್ಕಲೆಬ್ಬಿಸಬೇಕು, ಅವರು ಜಿಲ್ಲೆಗೆ ಮಾರಕವಾಗಿದ್ದಾರೆ ಎಂಬ ಅಭಿಪ್ರಾಯ ಗೋಣಿಕೊಪ್ಪದಲ್ಲಿ ಸೇವ್ ಕೊಡಗು ಸಂಘಟನೆ ಪರಿಸರವಾದಿಗಳ ವಿರುದ್ಧ ಆಯೋಜಿಸಿದ್ದ ಪ್ರತಿಭಟನಾ ರ್ಯಾಲಿಯಲ್ಲಿ ವ್ಯಕ್ತವಾಯಿತು. ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಪ್ರಮುಖರುಗಳು ಒಂದಾಗಿ ಅಭಿಪ್ರಾಯವ್ಯಕ್ತಪಡಿಸಿ, ನಕಲಿ ಪರಿಸರವಾದಿಗಳ ವಿರುದ್ಧ ಜನಜಾಗೃತಿಯೇ ಉತ್ತಮ ಮಾರ್ಗ ಎಂಬ ನಿರ್ಧಾರ ಪ್ರಕಟಿಸಿದರು. ಜಿಲ್ಲೆಯ ಜನರನ್ನು ಒಕ್ಕಲೆಬ್ಬಿಸುವ ಹುನ್ನಾರ ಪರಿಸರವಾದಿಗಳಿಂದ ನಡೆಯುತ್ತಿದೆ ಎಂದು ಗಂಭೀರ ಆರೋಪ ವ್ಯಕ್ತಪಡಿಸಿದ ವಿವಿಧ ರಾಜಕೀಯ ಪಕ್ಷದ ಮುಖಂಡರುಗಳು, ನಕಲಿ ಪರಿಸವಾದಿಗಳಿಂದ ಕೊಡಗನ್ನು ರಕ್ಷಿಸಲು ಸಾರ್ವಜನಿಕರು ಜಾಗೃತವಾಗಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಶಾಸಕ ಕೆ. ಜಿ. ಬೋಪಯ್ಯ ಮಾತನಾಡಿ, ಅಭಿವೃದ್ಧಿ ಕಾರ್ಯಗಳಿಗೆ ವಿರೋಧ ವ್ಯಕ್ತಪಡಿಸುವ ಕೆಲವು ಪರಿಸರವಾದಿಗಳು ಪರೋಕ್ಷವಾಗಿ ನಕ್ಸಲ್ ಚಟುವಟಿಕೆಯನ್ನು ಪ್ರೋತ್ಸಾಹಿಸಿದಂತಾಗಿದೆ ಎಂದು ಗಂಭೀರ ಆರೋಪ ಮಾಡಿದರು. ವಾಹನ ಸಂಖ್ಯೆ ಜಿಲ್ಲೆಯಲ್ಲಿ ಹೆಚ್ಚಾಗಿರುವದರಿಂದ ರಸ್ತೆ ಅಭಿವೃಧ್ಧಿ ಅವಶ್ಯಕವಾಗಿದೆ. ರಸ್ತೆ ಅಭಿವೃದ್ಧಿಗೂ ವಿರೋಧ ವ್ಯಕ್ತಪಡಿಸಲಾಗುತ್ತಿದೆ. ರಾತ್ರಿ ಗೋಣಿಕೊಪ್ಪ-ಮೈಸೂರು ರಸ್ತೆ ಸಂಚಾರ ತಡೆಗೆ ಮುಂದಾಗುವ ಮೂಲಕ ಜಿಲ್ಲೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣಕ್ಕೆ ಕಾರಣವಾಗುತ್ತಿದ್ದಾರೆ ಎಂದರು.ಡೋಂಗಿ ಪರಿಸರವಾದಿಗಳನ್ನು ಮಟ್ಟ ಹಾಕದೆ ಜಿಲ್ಲೆಯ ಅಭಿವೃದ್ಧಿ ಅಸಾಧ್ಯ, ಪರಿಸರದ ಬಗೆ ಯಾವದೇ ಮಾಹಿತಿ ಇಲ್ಲದಿದ್ದರು ಅಭಿವೃದ್ಧಿ ಕಾರ್ಯಗಳಿಗೆ ವಿರೋಧ ಚಟುವಟಿಕೆ ನಡೆಸುತ್ತಿರುವ ಪರಿಸರವಾದಿಗಳು ಜಿಲ್ಲೆಗೆ ಮಾರಕವಾಗಿದ್ದಾರೆ ಎಂದು ಶಾಸಕ ಕೆ.ಜಿ.ಬೋಪಯ್ಯ ಡೋಂಗಿ ಪರಿಸರವಾದಿಗಳ ವಿರುದ್ಧ ಕಿಡಿಕಾರಿದರು.

ಕೊಡಗಿನ ಜನರ ಬದುಕನ್ನು ನರಕ ಮಾಡಲು ಹೊರಟಿರುವ ಕೆಲವು ಪರಿಸರವಾದಿಗಳನ್ನು ಜಿಲ್ಲೆಯಿಂದ ಹೊರಗಟ್ಟಬೇಕಾಗಿದೆ. ಇಲ್ಲವಾದಲ್ಲಿ ಕೊಡಗು ಅಭಿವೃದ್ಧಿಯಿಂದ ದೂರ ಉಳಿದುಕೊಳ್ಳುತ್ತದೆ ಎಂದು ಅಸಮಾಧಾನ ವ್ಯಕ್ತ ಪಡಿಸಿದರು.

(ಮೊದಲ ಪುಟದಿಂದ) ಪರಿಸರ ರಕ್ಷಣೆ ಎಂಬ ಹೆಸರಿನಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ತೊಡಕು ಉಂಟು ಮಾಡುವ ಪರಿಸರವಾದಿಗಳು ಹವನಿಯಂತ್ರಿತ ಕೋಣೆಯಲ್ಲಿ ಕುಳಿತು ಕೊಡಗಿನ ಅರಣ್ಯ ಪರಿಸರದ ಬಗ್ಗೆ ಮಾತನಾಡುತ್ತಾರೆ. ಎಲ್ಲೋ ಕುಳಿತು ನ್ಯಾಯಾಲಗಳಿಗೆ ತಪ್ಪು ಮಾಹಿತಿಯನ್ನು ನೀಡುವ ಮೂಲಕ ಜನರ ಹಾದಿ ತಪ್ಪಿಸುತ್ತಿದ್ದಾರೆ. ಇದರಿಂದ ಜಿಲ್ಲೆಯ ಅಭಿವೃದ್ಧಿ ಕೊಂಠಿತಗೊಳ್ಳುತ್ತಿದೆ. ಬಡ ಜನರ ಅಭಿವೃದ್ಧಿಗೆ ಮೂಲಭೂತ ಸೌಕರ್ಯ ಒದಗಿಸಲು ಮುಂದಾದರೆ ನ್ಯಾಯಾಲದಲ್ಲಿ ದೂರು ದಾಖಲಿಸಿ ಅಭಿವೃದ್ಧಿಗೆ ತಡೆ ಒಡ್ಡುತ್ತಾರೆ ಎಂದರು.

ಕೊಡಗಿಗೆ ರೈಲು ಬೇಡ ಇದರಿಂದ ಅರಣ್ಯ ನಾಶವಾಗುತ್ತದೆ ಎಂದು ಹೇಳುವ ಇವರು ಅದೆಷ್ಟು ಮರಗಳನ್ನು ನೆಟ್ಟು ಬೆಳೆಸಿದ್ದಾರೆ ಎಂಬವದರ ಅಂಕಿ ಅಂಶ ನೀಡಲಿ. ವಿದೇಶ ಹಣದ ಆಮಿಷಕ್ಕೆ ಬಲಿಯಾಗಿ ಕೊಡಗಿನ ಪರಿಸರ ರಕ್ಷಣೆಯ ಹೊಣೆಹೊತ್ತಿರುವ ಡೋಂಗಿ ಪರಿಸರವಾದಿಗಳು ಇಲ್ಲಿನ ಗಿರಿಜನರ ಬದುಕಿನ ಬಗ್ಗೆ ಮತ್ತು ಬೆಳೆಗಾರ ರೈತರ ಬಗ್ಗೆ ಧ್ವನಿ ಎತ್ತುವದಿಲ್ಲ. ಜಮ್ಮ ಬಾಣೆಯನ್ನು ಸರ್ಕಾರದ ಆಸ್ತಿ ಎಂದು ಹೇಳುತ್ತಾರೆ. ಇದು ಪರಿಸರದ ಬಗ್ಗೆ ಕಾಳಜಿ ಇರುವವರು ಮಾಡುವ ಕಾರ್ಯವೇ ಎಂಬವದು ಪ್ರಶ್ನೆಯಾಗಿದೆ. ಇಂದು ಅರಣ್ಯ ಉಳಿದುಕೊಂಡಿದ್ದರೆ, ಅರಣ್ಯದಲ್ಲಿ ವಾಸಮಾಡುವ ಗಿರಿಜನರೇ ಕಾರಣ. ಇವರನ್ನು ಒಕ್ಕಲೆಬ್ಬಿಸುವ ಕಾರ್ಯಕ್ಕೆ ಈ ಡೋಂಗಿ ಪರಿಸರವಾದಿಗಳು ಮುಂದಾಗಿದ್ದಾರೆ. ಇದರಿಂದ ಮುಂದಿನ ದಿನಗಳಲ್ಲಿ ನಕ್ಸಲ್ ವಾದ ಚಟುವಟಿಕೆಗಳಿಗೆ ಕಾರಣವಾಗಬಲ್ಲದು ಎಂದು ವಿಷಾದ ವ್ಯಕ್ತಪಡಿಸಿದರು.

ಹಿರಿಯ ರಾಜಕೀಯ ಮುಖಂಡ ಎ.ಕೆ. ಸುಬ್ಬಯ್ಯ ಮಾತನಾಡಿ, ಪಕ್ಷಗಳಲ್ಲಿ ಹೈಕಮಾಂಡ್ ಮಟ್ಟದಲ್ಲಿ ವಿರೋಧವಿದ್ದರೂ ಜಿಲ್ಲಾ ಮಟ್ಟದಲ್ಲಿ ಒಂದಾಗಿರುವದು ಮೆಚ್ಚಬೇಕಾದ ವಿಚಾರವಾಗಿದೆ. ಕೊಡಗು ರಕ್ಷಣೆಗೆ ನಕಲಿ ಪರಿಸರವಾದಿಗಳ ವಿರುದ್ಧ ಜಾಗೃತಿ ಮೂಡಿಸಲು ಮೂರು ಪಕ್ಷಗಳು ಮುಂದಾಗಿರುವದು ಸ್ವಾಗತಾರ್ಹ. ಪಕ್ಷಗಳು ಒಂದಕ್ಕೊಂದು ಎದುರಾಳಿಗಳು ಮಾತ್ರ. ಶತ್ರುಗಳಾಗಲು ಸಾಧ್ಯವಿಲ್ಲ. ರಾಜಕೀಯದಿಂದ ಹೊರ ಬಂದು ಪರಿಸರವಾದಿಗಳ ವಿರುದ್ಧ ನಿರಂತರ ಹೋರಾಟ ಮಾಡುವ ಮೂಲಕ ಜನಜಾಗೃತಿ ಮೂಡಿಸಬೇಕಿದೆ ಎಂದರು.

ಯುದ್ಧದಲ್ಲಿ ಪರಿಸರ ನಾಶವಾಗಲಿದೆ ಎಂದು ಯುದ್ಧಕ್ಕೆ ಹೋಗದೇ ಇದ್ದರೆ, ದೇಶ ರಕ್ಷಣೆ ಅಸಾಧ್ಯ. ಅಭಿವೃದ್ಧಿ ದೃಷ್ಠಿಯಲ್ಲಿ ಪರಿಸರ ನೆಪ ಹೇಳುವದನ್ನು ನಿಲ್ಲಿಸಬೇಕು ಎಂದರು.

ಮೊಬೈಲ್ ಬೇಕು ಟವರ್ ಬೇಡ, ವಾಹನಗಳು ಬೇಕು ಆದರೆ ರಸ್ತೆ ಅಭಿವೃದ್ಧಿ ಆಗುವದು ಬೇಡ ಎಂಬ ನಿಲುವು ಕೆಲವು ಪರಿಸರವಾದಿಗಳದಾಗಿದೆ ಎಂಬವದನ್ನು ನೋಡಿದಾಗ ಈ ಪರಿಸರವಾದಿಗಳ ಹೋರಾಟದ ಉದ್ದೇಶ ಜನ ವಿರೋಧಿ ಎಂಬವದು ಸ್ಪಷ್ಟವಾಗುತ್ತದೆ ಎಂದು ಹೇಳಿದರು.

ಒಬ್ಬ ನಿವೃತ್ತ ಸೇನಾಧಿಕಾರಿ ಪರಿಸರ ತಜ್ಞನಂತೆ ವರ್ತಿಸುತ್ತಿರುವದರ ಹಿಂದೆ ಇರುವ ಹುನ್ನಾರ ಏನು ಎಂಬವದು ಪ್ರಶ್ನೆಯಾಗಿದ್ದಾರೂ, ಇದರ ಮೂಲ ಉದ್ದೇಶ ವಿದೇಶಿ ಹಣ ಎಂಬವದು ತಿಳಿಯಬಹುದಾಗಿದೆ ಎಂದು ಕುಟುಕಿದರು.

ಜಿಲ್ಲೆ ಕೃಷಿ ಪ್ರಧಾನವಾದದ್ದು. ಕೃಷಿ ಉಳಿಯ ಬೇಕಾದರೆ ಅಭಿವೃದ್ಧಿಯಾಗಬೇಕು ಇದಕ್ಕೆ ಉತ್ತಮ ರಸ್ತೆಗಳು ಬೇಕು. ಹಾಗಾದರೆ ಮಾತ್ರ ಇಲ್ಲಿ ಬೆಳೆದ ಬೆಳೆಗಳನ್ನು ರಫ್ತು ಮಾಡಲು ಮತ್ತು ಹೊರ ಜಿಲ್ಲೆಗಳಿಂದ ವಸ್ತುಗಳನ್ನು ಆಮದು ಮಾಡಿಕೊಳ್ಳಲು ಸಹಕಾರಿ ಆಗಲಿದೆ. ಇದರಿಂದ ರೈತ ಬೆಳವಣಿಗೆಯೂ ಸಾಧ್ಯ ಎಂಬವದು ಕೆಲವು ಪರಿಸರವಾದಿಗಳಿಗೆ ತಿಳಿಯದ ವಿಚಾರವಾಗಿದೆ ಎಂದು ಹೇಳಿದರು.

ಪರಿಸರ ನಾಶವಾದಲ್ಲಿ ಅದನ್ನು ಸರಿಪಡಿಸಲು ಯೋಜನೆ ರೂಪಿಸಬೇಕು,ಕೃಷಿ ಆಧಾರಿತ ಕೊಡಗು ಜಿಲ್ಲೆಯ ಅಭಿವೃದ್ಧಿಗೆ ರಸ್ತೆ ಹಾಗೂ ರೈಲ್ವೆ ಮಾರ್ಗ ಅವಶ್ಯಕ. ಇಲ್ಲಿನ ಬೆರಳೆಣಿಕೆಯ ಪರಿಸರ ವಾದಿಗಳು ವಿದೇಶಿ ಹಣವನ್ನು ನುಂಗಲು ಕೊಡಗು ಜಿಲ್ಲೆಯನ್ನು ಪರಿಸರದ ಹೆಸರಿನಲ್ಲಿ ಹಾಳು ಮಾಡುತ್ತಿದ್ದಾರೆ. ಇವರುಗಳು ಸಮಾಜ ದ್ರೋಹಿ ಮಾತ್ರವಲ್ಲ. ದೇಶದ್ರೋಹಿಗಳು ಎಂದು ಸುಬ್ಬಯ್ಯ ಹೇಳಿದರು.

ಈ ಹೋರಾಟವು ಜನಪರವಾಗಿದೆಯೇ ಹೊರತು ಯಾವದೇ ರಾಜಕೀಯ ದುರುದ್ದೇಶದಿಂದ ಕೂಡಿಲ್ಲವೆಂದು ಸೇವ್ ಕೊಡಗು ಆಂದೋಲನ ವೇದಿಕೆ ಸಂಘಟನೆಯ ಸಂಚಾಲಕರಾದ ಮಧು ಬೋಪಣ್ಣ ಹೇಳಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಇವರು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸುವ ಅವಕಾಶ ಪ್ರತಿಯೊಬ್ಬ ನಾಗರಿಕನಿಗೂ ಇದೆ.ಆದರೆ ಹೋರಾಟದ ವಿರುದ್ಧ ಧ್ವನಿ ಎತ್ತಿರುವ ಸಂಘಟನೆಯೊಂದು ಹೋರಾಟಗಾರರನ್ನು ಬಂಧಿಸುವಂತೆ ತೆರೆಮರೆಯಲ್ಲಿ ಪ್ರಯತ್ನ ನಡೆಸಿರುವದು ಹಾಸ್ಯಾಸ್ಪದವಾಗಿದೆ ಎಂದರು.ಕೊಡಗಿನ ಭವಿಷ್ಯದ ಚಿಂತನೆಯೊಂದಿಗೆ ಮುಂದಿನ ಪೀಳಿಗೆಗಾಗಿ ಅಭಿವೃದ್ಧಿ ಕಾರ್ಯಗಳು ನಡೆಯಬೇಕು ಎನ್ನುವ ಉದ್ದೇಶದಿಂದ ಹೋರಾಟವನ್ನು ಹಮ್ಮಿಕೊಳ್ಳಲಾಗಿದೆ ಎಂದರು.ಕೊಡಗಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಜನಪ್ರತಿನಿಧಿಗಳನ್ನೊಳಗೊಂಡಂತೆ ಹೋರಾಟ ನಡೆಸಬೇಕಾದ ಅನಿವಾರ್ಯತೆ ಇದೆ. ಜಿಲ್ಲೆಯಲ್ಲಿ ಪ್ರತ್ಯೇಕ ಆಡಳಿತ ವ್ಯವಸ್ಥೆಯಂತೆ ಪರಿಸರವಾದಿಗಳು ತಮ್ಮ ಕಾರ್ಯಚಟುವಟಿಕೆಯನ್ನು ವಿಸ್ತರಿಸಿದ್ದು ಪ್ರಭಾವಿ ರಾಜಕಾರಣಿಗಳ, ಅಧಿಕಾರಿಗಳ, ಕೆಲವು ಪೊಲೀಸ್ ಹಿರಿಯ ಅಧಿಕಾರಿಗಳನ್ನು ಬಳಸಿಕೊಂಡು ಜನಾಭಿಪ್ರಾಯಕ್ಕೆ ವಿರುದ್ಧವಾದ ಕ್ರಮಗಳನ್ನು ಕೈಗೊಳ್ಳುವಲ್ಲಿ ಯಶಸ್ವಿಯಾಗುತ್ತಿರುವದು ಆತಂಕಕಾರಿ ಬೆಳವಣಿಗೆ. ಯಾವದೇ ಕಾರಣಕ್ಕೂ ಕೊಡಗನ್ನು ಉಳಿಸುವ ಜವಾಬ್ದಾರಿ ಕೊಡಗಿನ ಜನತೆಯ ಮೇಲಿದೆ. ಇದೀಗ ಸುಪ್ರೀಂ ಕೋರ್ಟಿನ ಆದೇಶದಂತೆ ಇಲ್ಲಿಯ ಆದಿವಾಸಿಗಳನ್ನು ಒಕ್ಕಲೆಬ್ಬಿಸುವ ಪ್ರಯತ್ನ ನಡೆಯುತ್ತಿದೆ. ಮುಂದೆ ಕೊಡಗಿನ ಜನತೆಗೆ ಈ ಪರಿಸ್ಥಿತಿ ಬರಲಿದೆ. ಬಾಣೆ ಸಮಸ್ಯೆಗೆ ವಿಧಾನ ಮಂಡಲದಲ್ಲಿ ವಿದೇಯಕ ಅಂಗೀಕಾರವಾಗಿದ್ದರೂ, ನಂತರ ಅಡ್ಡಗಾಲು ಹಾಕಲಾಗಿದೆ ಸಿಎಜಿ ವರದಿಯಲ್ಲಿ ಸರ್ಕಾರದ ಅರಣ್ಯವೆಂದು ಘೋಷಣೆಯಾಗಿದೆ. ನಕಲಿ ಪರಿಸರವಾದಿಗಳಿಂದ ಮುಂದೆ ಕೊಡಗು ಜಿಲ್ಲೆಯ ಜನತೆ ದೊಡ್ಡ ದುರಂತ ಎದುರಿಸಬೇಕಾಗಿದೆ ಆ ನಿಟ್ಟಿನಲ್ಲಿ ಎಲ್ಲರು ಬಾಣೆ ಹಕ್ಕು ನಮ್ಮದಾಗಲು ಹೋರಾಟಕ್ಕೆ ಮುಂದೆ ಬರಬೇಕು, ನಕಲಿ ಪರಿಸರವಾದಿಗಳ ಕಪಿಮುಷ್ಠಿಯಲ್ಲಿ ಸಿಲುಕಿರುವ ಜನತೆ ಹೊರಬರಬೇಕು. ಮುಂದೆ ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳಿ ಜಿಲ್ಲೆಯ ಬಾಣೆ ಹಕ್ಕು ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಲಾಗುವದು. ಎಂದು ಹೇಳಿದರು.

ಕಾಫಿ ಮಂಡಳಿ ಸದಸ್ಯ ಬೊಟ್ಟಂಗಡ ರಾಜು ಮಾತನಾಡಿ, ಬೆರಳೆಣಿಕೆಯ ನಕಲಿ ಪರಿಸರವಾದಿಗಳನ್ನು ನಿಷ್ಕ್ರಿಯಗೊಳಿಸಬೇಕು. ನಮ್ಮ ಅಸ್ತಿತ್ವಕ್ಕೆ ಬೆಂಕಿ ಬೀಳುತ್ತಿದೆ. ಆದರೆ ಯಾರು ಕೂಡ ಚಿಂತನೆ ನಡೆಸುತ್ತಿಲ್ಲ. ಕೊಡಗನ್ನು ಸಂಪೂರ್ಣ ಅರಣ್ಯ ಮಾಡಲು ಡೋಂಗಿ ಪರಿಸರವಾದಿಗಳು ಹಿಂಭಾಗಿನಿಂದ ಹೊರಟಿದ್ದಾರೆ. ಟ್ರಸ್ಟ್ ರಚಿಸಿಕೊಂಡು ಹಣ ಮಾಡುವ ದಂಧೆಗೆ ಇಳಿದಿದ್ದಾರೆ. ಇವರ ತೋಟದಲ್ಲಿರುವ ಮರಗಳನ್ನು ಕಡಿದು ಮಾರಾಟ ಮಾಡುತ್ತಿದ್ದಾರೆ. ಇವರಿಂದ ಪರಿಸರ ಉಳಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್‍ನ ಅಧ್ಯಕ್ಷ ತೀತೀರ ಧರ್ಮಜ ಮಾತನಾಡಿ ಜಿಲ್ಲೆಯ ಜನತೆ ಒಂದು ದಿನ ಕೂಗಾಟ ನಡೆಸಿದರೆ ಸಾಲದು ಕೊಡಗನ್ನು ಉಳಿಸಲು ಪ್ರತಿಯೊಬ್ಬರೂ ಹೋರಾಟಕ್ಕಿಳಿಯಬೇಕು. ಕೊಡಗಿನಲ್ಲಿ ಮಾತ್ರ ಪರಿಸರದ ಬಗ್ಗೆ ಹೋರಾಟ ನಡೆಯುತ್ತಿದೆ,. ಉಳಿದ ಏಳು ಜಿಲ್ಲೆಯಲ್ಲಿಯೂ ಹೋರಾಟ ನಡೆಯಬೇಕು ಕೊಡಗು ಅರಣ್ಯ ಮಾತ್ರ ಎಂದು ಕೆಲವು ಹಿರಿಯ ಅಧಿಕಾರಿಗಳು ಸರ್ಕಾರಕ್ಕೆ ತಪ್ಪು ಮಾಹಿತಿ ನೀಡುತ್ತಿದ್ದಾರೆ ಈ ಬಗ್ಗೆ ಮುಂದೆ ಪ್ರಶ್ನಿಸಬೇಕೆಂದರು.

ಭಾಗಮಂಡಲದ ಕೆ.ಜೆ.ಭರತ್, ಮಾತನಾಡಿ 1947ರಿಂದ 50ರವರೆಗೆ ಕೊಡಗು ಸಿ ರಾಜ್ಯವಾಗಿತ್ತು. ಈ ಸಂದರ್ಭ ಜಿಲ್ಲೆಯ ಜನತೆಗೆ ಸಮಸ್ಯೆ ಎದುರಾಗಿರಲಿಲ್ಲ. 1956ರಲ್ಲಿ ಕೊಡಗು ವಿಂಗಡಣೆಯಾದ ನಂತರ ಸಮಸ್ಯೆ ನಿರಂತರವಾಗಿದೆ. ಆದ್ದರಿಂದ ಸಿ ರಾಜ್ಯವಾಗಿಯೇ ಕೊಡಗು ಉಳಿಯಬೇಕೆಂದರು.

ಜೆಡಿಎಸ್ ಮುಖಂಡ ಪಾಣತ್ತಲೆ ವಿಶ್ವನಾಥ್ ಮಾತನಾಡಿ ಕಸ್ತೂರಿ ರಂಗನ್ ವರದಿಯಿಂದ ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ. 2013ರಲ್ಲಿ ಹಸಿರು ಪೀಠಕ್ಕೆ ಅಂದಿನ ಕೇಂದ್ರ ಸರ್ಕಾರ ಮುಚ್ಚಳಿಕೆ ಬರೆದುಕೊಟ್ಟಿದೆ. ಅದು ಇಂದು ಕೂಡ ಜೀವಂತವಾಗಿದೆ. ಕಾನೂನು ಹೋರಾಟದ ಮೂಲಕ ಸುಪ್ರೀಂ ಕೋರ್ಟ್ ಮೆಟ್ಟಿಲೇರಿ ಮುಚ್ಚಳಿಕೆ ಹಿಂಪಡೆಯಲು ಮುಂದಾಗಬೇಕೆಂದರು.

ವೇದಿಕೆಯಲ್ಲಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಹರೀಶ್, ಸದಸ್ಯರಾದ ಬಿ.ಎನ್.ಪ್ರಥ್ವಿ, ಸಿ.ಕೆ.ಬೋಪಣ್ಣ, ಮುರುಳಿ, ಪದ್ಮಾವತಿ, ಕಲಾವತಿ, ಅಚ್ಚಪಂಡ ಮಹೇಶ್, ಕಾಂಗ್ರೆಸ್ ಮುಖಂಡ ಟಾಟೂ ಮೊಣ್ಣಪ್ಪ ವಕೀಲರಾದ ಕವನ್, ಚೇರಂಡ ನಂದಾ ಸುಬ್ಬಯ್ಯ, ಮನು ಮುತ್ತಪ್ಪ, ,ಬಿಜೆಪಿ ತಾಲೂಕು ಅಧ್ಯಕ್ಷ ಕುಂಞಗಡ ಅರುಣ್ ಭೀಮಯ್ಯ, ಮೂಕಂಡ ಶಶಿ ಸುಬ್ರಮಣಿ ಮುಂತಾದ ಗಣ್ಯರು ಹಾಜರಿದ್ದರು. ಮಾದೇಟಿರ ಬೆಳ್ಯಪ್ಪ ಸ್ವಾಗತಿಸಿದರು.

ಬೇಡಿಕೆಗಳು:

1. ಡೋಂಗೀ ಪರಿಸರವಾದಿಗಳನ್ನು ಕೊಡಗಿನಿಂದ ಗಡಿಪಾರು ಮಾಡಬೇಕು

2. 2013ರ ರಾಷ್ಟ್ರಪತಿ ಅಂಕಿತ ಭೂ ಕಾಯ್ದೆಯನ್ನು ಅನುಷ್ಠಾನಗೊಳಿಸಬೇಕು.

3. ಕೊಡಗಿನ ಎಲ್ಲಾ ಬಾಣೆ, ಜಮೀನುಗಳನ್ನು ಕಂದಾಯಕ್ಕೆ ಒಳಪಡಿಸಿ ಪರಾಧೀನ ಎಂದು ಘೋಷಿಸಬೇಕು

4. ಡಾ.ಕಸ್ತೂರಿ ರಂಗನ್ ವರದಿ ಮತ್ತು ಸೂಕ್ಷ್ಮ ಪರಿಸರ ವಲಯದಿಂದ ಕೊಡಗಿನ ಜನವಸತಿ ಪ್ರದೇಶ ಮತ್ತು ಬಾಣೆ ಹಿಡುವಳಿಗಳನ್ನು ಹೊರಗಿಡಬೇಕು.

5. ಅಕ್ರಮವಾಗಿ ಜಾಗ ಖರೀದಿಸಿ ರೆಸಾರ್ಟ್ ನಿರ್ಮಿಸುತ್ತಿರುವ ಪರಿಸರವಾದಿ ಗುಂಪಿನ ಭೂ ಮಾಫಿಯಾಗಳನ್ನು ಗಡಿಪಾರು ಮಾಡಬೇಕು.

6. ಪ್ರವಾಸೋಧ್ಯಮದಲ್ಲಿ ಕೊಡಗಿನವರಿಗೆ ಆದ್ಯತೆ ನೀಡಿ ಆರ್ಥಿಕ ಪುನಶ್ಚೇತನಕ್ಕೆ ಸಹಕಾರ ನೀಡಬೇಕು.

7. ಕಾಡಾನೆ ಹಾವಳಿಯನ್ನು ತಪ್ಪಿಸಲು ಅರಣ್ಯ ಪ್ರದೇಶದ ಸುತ್ತಲೂ ಕಂದಕ ರೂಪಿಸಿ ರೈಲ್ವೆ ಹಳಿ ಬೇಲಿ ನಿರ್ಮಿಸಬೇಕು.

ಗೋಣಿಕೊಪ್ಪಲುವಿನ ಆರ್‍ಎಂಸಿ ಆವರಣದಿಂದ ಹೊರಟ ಮೆರವಣಿಗೆಯು ಬಸ್ ನಿಲ್ದಾಣದಲ್ಲಿ ಸಮಾಗಮಗೊಂಡಿತು. ಮೆರವಣಿಗೆ ಸಂದರ್ಭ ಗೋಣಿಕೊಪ್ಪಲುವಿನ ವರ್ತಕರು 11ರಿಂದ 12 ಗಂಟೆಯವರೆಗೆ ಒಂದು ಗಂಟೆಗಳ ಕಾಲ ತಮ್ಮ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡುವ ಮೂಲಕ ಬೆಂಬಲ ಸೂಚಿಸಿದರು.

ಕಾರ್ಯಕ್ರಮದಲ್ಲಿ ಪ್ರಮುಖರಾದ ಸೇವ್ ಕೊಡಗಿನ ಜಿನ್ನು ನಾಣಯ್ಯ,ಉದಯ್ ಶಂಕರ್, ಮನು,ಮಹೇಶ್ ಛೇಂಬರ್ ಅಧ್ಯಕ್ಷ ಕಡೇಮಾಡ ಸುನೀಲ್ ಮಾದಪ್ಪ,ಆರ್‍ಎಂಸಿ ಅಧ್ಯಕ್ಷ ವಿನು ಚಂಗಪ್ಪ,ಉಪಾಧ್ಯಕ್ಷ ಸುಬ್ರಮಣಿ,ಸದಸ್ಯರಾದ ಕಿಲನ್ ಗಣಪತಿ,ತಾ.ಪಂ.ಉಪಾಧ್ಯಕ್ಷ ನೆಲ್ಲೀರ ಚಲನ್, ಕಾಡ್ಯಮಾಡ ಗಿರೀಶ್ ಗಣಪತಿ, ಮಾಣೀರ ಕೆ.ಮುತ್ತಪ್ಪ, ಬೊಜ್ಜಂಗಡ ಪಾಪು, ಇ.ಸಿ.ಜೀವನ್, ತೀತಿರಮಾಡ ಲಾಲ, ಸುಮಿ ಸುಬ್ಬಯ್ಯ, ರಾಣಿ ನಾರಾಯಣ, ಪಟ್ರಪಂಡ ರಘು ನಾಣಯ್ಯ, ಕಾಡ್ಯಮಾಡ ಭರತ್, ರತಿ ಅಚ್ಚಪ್ಪ, ಮುಕ್ಕಾಟೀರ ಶುಭ ಮುತ್ತಪ್ಪ, ತೀತಿರ ಊರ್ಮಿಳ, ಪಂದ್ಯಂಡ ಹರೀಶ್, ಮಿಲನ್, ಮಲ್ಚೀರ ಗಾಂಧಿ ದೇವಯ್ಯ, ತಾ.ಪಂ. ಸದಸ್ಯ ಜಯ, ಕಾಂಗ್ರೆಸ್ ಮುಖಂಡ ಟಾಟೂ ಮೊಣ್ಣಪ್ಪ, ಅಬ್ದುಲ್ ಸಮ್ಮದ್, ವಿಲ್ಸನ್, ಚೇಂಬರ್ ಕಾರ್ಯದರ್ಶಿ ತೆಕ್ಕಡ ಕಾಶಿ, ಖಜಾಂಜಿ ಮನೋಹರ್, ಸೇವ್ ಕೊಡಗು ಮುಖಂಡರಾದ ಬಿದ್ದಾಟಂಡ ದಿನೇಶ್, ಜಿನ್ನು ನಾಣಯ್ಯ, ಕಾಳನ ರವಿ, ಭರತ್ ಕುಮಾರ್, ಜಪ್ಪು ಸುಬ್ಬಯ್ಯ ಸೇರಿದಂತೆ ಅನೇಕ ಸಂಘ ಸಂಸ್ಥೆಯ ಮುಖಂಡರು ಭಾಗವಹಿಸಿದ್ದರು. ಡಿವೈಎಸ್ಪಿ ನಾಗಪ್ಪ ಮುಂದಾಳತ್ವದಲ್ಲಿ ಗೋಣಿಕೊಪ್ಪ ಠಾಣಾಧಿಕಾರಿ ಶ್ರೀಧರ್, ಪೊನ್ನಂಪೇಟೆ ಠಾಣಾಧಿಕಾರಿ ಮಹೇಶ್, ಸೇರಿದಂತೆ ಇನ್ನಿತರ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.

ಚಿತ್ರ ವರದಿ : ಹೆಚ್.ಕೆ.ಜಗದೀಶ್/ ಸುದ್ದಿಪುತ್ರ/ ಎನ್.ಎನ್. ದಿನೇಶ್