ಮಡಿಕೇರಿ, ಫೆ. 22: ಯುವ ಜನತೆಗಾಗಿ ಕೇಂದ್ರ ಹಾಗೂ ರಾಜ್ಯ ಸರಕಾರ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಯುವ ಶಕ್ತಿ ದೇಶದ ಅತೀ ದೊಡ್ಡ ಶಕ್ತಿ. ಅವರು ಮನಸ್ಸು ಮಾಡಿದರೆ ದೇಶವನ್ನು ಇನ್ನಷ್ಟು ಬಲಿಷ್ಠವಾಗಿ ಸದೃಢಗೊಳಿಸಬಹುದು. ಯುವಕರಲ್ಲಿ ದೇಶಭಕ್ತಿ ಹಾಗೂ ದೇಶಪ್ರೇಮವನ್ನು ತುಂಬಬೇಕು ಎಂದು ಶಾಸಕ ಕೆ.ಜಿ. ಬೋಪಯ್ಯ ಅವರು ಕರೆ ನೀಡಿದರು. ನೆಹರು ಯುವ ಕೇಂದ್ರ, ಜಿ.ಪಂ, ಜಿಲ್ಲಾಡಳಿತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಯುವ ಒಕ್ಕೂಟದ ಹಾಗೂ 3 ತಾಲೂಕು ಯುವ ಒಕ್ಕೂಟದ ಸಹಯೋಗದೊಂದಿಗೆ ಮಡಿಕೇರಿಯ ಕಾವೇರಿ ಕಲಾಕ್ಷೇತ್ರದಲ್ಲಿ ಶುಕ್ರವಾರ ನಡೆದ ಜಿಲ್ಲಾ ಯುವ ಸಮ್ಮೇಳನ, ಕಾರ್ಯಾಗಾರ, ತರಬೇತಿ, ಜಿಲ್ಲಾ ಯುವ ಪ್ರಶಸ್ತಿ ಹಾಗೂ ಕ್ರೀಡಾ ಸಾಮಗ್ರಿ ವಿತರಣಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಪಾಕಿಸ್ತಾನ ಪ್ರೇರಿತ ಉಗ್ರರು ಭಾರತೀಯರ ಮೇಲೆ ನಡೆಸಿದ ಧಾಳಿಯ ಮೂಲ ಸೂತ್ರಧಾರಿಗಳು ಭಾರತೀಯರೇ ಎಂಬುದು ವಿಷಾದಕರ ಸಂಗತಿ. ಭ್ರಷ್ಟ ಶಕ್ತಿಗಳು ಎಲ್ಲಾ ಕಡೆಗಳಲ್ಲೂ ಇದೆ. ಅವುಗಳನ್ನು ನಿಯಂತ್ರಿಸುವ ಉದ್ದೇಶದಿಂದ ಹಾಗೂ ಯುವಕರಲ್ಲಿ ಒಳ್ಳೆಯ ಗುಣಗಳನ್ನು ಮೈಗೂಡಿಸಲು ಇನ್ನಷ್ಟು ಉತ್ತಮ ಕಾರ್ಯಕ್ರಮಗಳು ನಡೆಯಬೇಕಿದೆ. ದೇಶದ ಏಕತೆ ಹಾಗೂ ಭದ್ರತೆಗೆ ಚ್ಯುತಿಯುಂಟಾಗುವ ಹೇಳಿಕೆಗಳನ್ನು ಯಾರೇ ನೀಡಿದರೂ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದರು.
ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಮಾತನಾಡಿ, ನಿಷ್ಠೆಯಿಂದ ಕೆಲಸ ಮಾಡುವ ಮನಸ್ಸಿಲ್ಲದ ಅಧಿಕಾರಿಗಳು ದಯವಿಟ್ಟು ಕೊಡಗಿಗೆ ಬರಬೇಡಿ. ಕ್ರೀಡಾ ಇಲಾಖೆಯಲ್ಲಿ ಹಿಂದೆ ಇದ್ದ ಅಧಿಕಾರಿ ವರ್ಗಾವಣೆಗೊಂಡು ಇಂದು ಮಂಡ್ಯ ಮೂಲದ ಅಧಿಕಾರಿಯೊಬ್ಬರು ಕಾರ್ಯ ನಿರ್ವಹಿಸುತ್ತಿದ್ದಾರೆ. ಇಲಾಖೆಯಿಂದ ದೊರಕಬೇಕಾದ ಸೌಲಭ್ಯದಿಂದ ಎಲ್ಲರೂ ವಂಚಿತರಾಗಿದ್ದಾರೆ. ಅಲ್ಲಿರುವ ಈಜು ಕೊಳ ಅತ್ಯಂತ ಹೀನಾಯ ಸ್ಥಿತಿಯಲ್ಲಿದೆ. ವಿದ್ಯುತ್ ವ್ಯವಸ್ಥೆಯೂ ಸರಿಯಾಗಿ ಇಲ್ಲ ಎಂದು ಕಿಡಿಕಾರಿದರು.
ಕೊಡಗಿನ ಜನರು ಶಾಂತಿ ಪ್ರಿಯರಾದ್ದರಿಂದ ಹೋರಾಟದ ಹಾದಿ ಹಿಡಿದಿಲ್ಲ. ಇಲ್ಲಿಗೆ ಬರುವ ಅಧಿಕಾರಿಗಳು ಜನಪ್ರತಿನಿಧಿಗಳ ಹಾಗೂ ಸ್ಥಳೀಯರ ಬೇಡಿಕೆಗೆ ಸ್ಪಂದಿಸಬೇಕಿದೆ ಎಂದು ಹೇಳಿದರು.
ಮಡಿಕೇರಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ.ಕೆ.ಸಿ.ದಯಾನಂದ್ ಪ್ರಸ್ತುತ ಸಮಾಜದಲ್ಲಿ ಯುವಜನತೆ ಕುರಿತು ಉಪನ್ಯಾಸ ನೀಡಿದ ಅವರು, ರಾಷ್ಟ್ರದ ಶಕ್ತಿ ಇಂದಿನ ಯುವಜನತೆಯಾಗಿದೆ. ಆದರೆ ಇಂದು ಯುವಜನತೆ ಸಮಾಜಘಾತಕ ಕೆಲಸಗಳಲ್ಲಿ ಭಾಗಿಯಾಗುತ್ತಿರುವದು ವಿಷಾದಕರ. ಅಲ್ಲದೆ ಯುವಶಕ್ತಿ ಮಾನವೀಯ ಮೌಲ್ಯಗಳನ್ನು ಕಳೆದುಕೊಂಡು ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿದ್ದಾರೆ. ಇಂತಹ ಯುವಕರ ಮನಸ್ಥಿತಿಯನ್ನು ಪರಿವರ್ತನೆ ಮಾಡುವ ಕೆಲಸದೊಂದಿಗೆ ಸ್ವಾಮಿ ವಿವೇಕನಂದಾ, ಸುಭಾಷ್ ಚಂದ್ರಬೋಸ್, ಭಗತ್‍ಸಿಂಗ್‍ರಂತಹ ತತ್ವಗಳನ್ನು ಮೈಗೂಡಿಸಿಕೊಂಡು ದೇಶಕಟ್ಟುವ ಕೆಲಸಕ್ಕೆ ಮುಂದಾಗಬೇಕೆಂದರು.
ಮಡಿಕೇರಿ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್, ಜಿ.ಪಂ.ಅಧ್ಯಕ್ಷ ಬಿ.ಎ.ಹರೀಶ್, ನಗರಸಭೆ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ತಾ.ಪಂ ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್, ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಪಿ.ಪಿ.ಸುಕುಮಾರ್, ಮಡಿಕೇರಿ ತಾಲೂಕು ಯುವ ಒಕ್ಕೂಟದ ಅಧ್ಯಕ್ಷ ನವೀನ್ ದೇರಳ, ನೆಹರು ಯುವ ಕೇಂದ್ರದ ಯುವ ಸಮನ್ವಯಾಧಿಕಾರಿ ಜಸಿಂತ ಡಿಸೋಜ ಮತ್ತಿತರರು ಇದ್ದರು.
ಯುವ ಸಂಘ ಪ್ರಶಸ್ತಿ
ನೆಹರು ಯುವ ಕೇಂದ್ರ ನೀಡುವ ಜಿಲ್ಲಾ ಮಟ್ಟದ ಅತ್ಯುತ್ತಮ ಯುವ ಸಂಘ ಪ್ರಶಸ್ತಿಯನ್ನು ಸೋಮವಾರಪೇಟೆ ತಾಲೂಕಿನ ನೆಲ್ಲಿಹುದಿಕೇರಿಯ ಡೋಮಿನೋಸ್ ಕಲಾ ಮತ್ತು ಕ್ರೀಡಾ ಯುವಕ ಸಂಘ ಪಡೆದುಕೊಂಡಿತು. ಸ್ವಚ್ಛ ಭಾರತ ಪ್ರಶಸ್ತಿಯನ್ನು ಮಾಲ್ದಾರೆ ಕಲಾ ಮತ್ತು ಕ್ರೀಡ ಯುವ ಸಂಘ(ಪ್ರ), ನೆಲ್ಲಿಹುದಿಕೇರಿಯ ಡೋಮಿನೋಸ್ ಕಲಾ ಮತ್ತು ಕ್ರೀಡಾ ಯುವಕ ಸಂಘ(ದ್ವಿ), ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಯುವ ಸಂಘ ಬೀಟಿಕಟ್ಟೆ ತೃತೀಯ ಸ್ಥಾನ ಪಡೆದುಕೊಂಡಿತು. ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆಯಲ್ಲಿ ಎಚ್.ಎಂ.ದರ್ಶನ್(ಪ್ರ), ಪ್ಲಾವೀಯ ಅನುಷ ಮಾರ್ಟಿಸ್(ದ್ವಿ), ಎಂ.ಕೆ.ಹರ್ಷಿತ್ ತೃತೀಯ ಬಹುಮಾನ ಪಡೆದುಕೊಂಡರು.
ಕ್ರೀಡಾ ಸಾಮಗ್ರಿ ವಿತರಣೆ
ಕ್ರೀಡಾ ಸಾಮಗ್ರಿ ವಿತರಣೆಗೆ ಜಿಲ್ಲೆಯ 25 ಸಂಘಗಳು ಆಯ್ಕೆ ಯಾಗಿತ್ತು. ಕಾರ್ಯಕ್ರಮದಲ್ಲಿ ನೆಹರು ಯುವ ಕೇಂದ್ರದಿಂದ ಸಾಂಕೇತಿಕವಾಗಿ ಮೂರು ಸಂಘಗಳಿಗೆ ಕ್ರೀಡಾ ಸಾಮಗ್ರಿಗಳನ್ನು ವಿತರಿಸಲಾಯಿತು.