ಮಡಿಕೇರಿ, ಫೆ. 22: ಕೊಡಗು ಜಿಲ್ಲೆಯ ಕಾಫಿ ಬೆಳೆಗಾರರು ಸೇರಿದಂತೆ ಕಾಫಿ ಬೆಳೆಯುವ ಪ್ರದೇಶಗಳ ಬೆಳೆಗಾರರ ಸದಸ್ಯತ್ವ ಹೊಂದಿರುವ ಮೈಸೂರು ಕಾಫಿ ಸಂಸ್ಕರಣಾ ಸಹಕಾರ ಸಂಘದ ಮಹಾಸಭೆ ಹಲವು ಬೆಳವಣಿಗೆಗಳ ಬಳಿಕ ಇದೀಗ ತಾ. 26 ರಂದು ನಿಗದಿಯಾಗಿದೆ. ಅಂದು ಬೆಳಿಗ್ಗೆ 11 ಗಂಟೆಗೆ ಮೈಸೂರಿನ ಯಾದವಗಿರಿಯಲ್ಲಿರುವ ಕಚೇರಿ ಆವರಣದಲ್ಲಿ ಮಹಾಸಭೆಯನ್ನು ನಡೆಸಲು ಈ ಹಿಂದೆ ನಿಯೋಜನೆಗೊಂಡಿರುವ ಸಂಘದ ಸಮಾಪನಾಧಿಕಾರಿಗಳು ಇದೀಗ ಸದಸ್ಯರಿಗೆ ಸಭಾ ತಿಳುವಳಿಕೆ ಪತ್ರ ಕಳುಹಿಸಿರುವದಲ್ಲದೆ, ಪತ್ರಿಕಾ ಪ್ರಕಟಣೆಯನ್ನು ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ ಸದಸ್ಯರು ಈ ಸಭೆಗೆ ಹಾಜರಾಗಿ ಸಂಸ್ಥೆಯ ಪುನಶ್ಚೇತನಕ್ಕೆ ಒತ್ತಡ ಹೇರುವಂತೆ ಮೈಸೂರು ಕಾಫಿ ಸಂಸ್ಕರಣಾ ಸಹಕಾರ ಸಂಘ ಸದಸ್ಯರ ಹಿತರಕ್ಷಣಾ ಸಮಿತಿಯ ಸಂಚಾಲಕರಾಗಿ ಈ ಹೋರಾಟದ ರೂವಾರಿಯಾಗಿರುವ ಅಮ್ಮತ್ತಿಯ ಮೂಕೋಂಡ ಬೋಸ್ ದೇವಯ್ಯ ಅವರು ಕೋರಿದ್ದಾರೆ.

ಹಿನ್ನಲೆ - ಹೋರಾಟದ ಹಾದಿ

ಮೈಸೂರು ಕಾಫಿ ಪ್ರೋಸೆಸಿಂಗ್ ಕೋಪರೇಟಿವ್ ಸೊಸೈಟಿ (ಎಂಸಿಪಿಸಿಎಸ್) 1959ರಲ್ಲಿ ಸ್ಥಾಪನೆಯಾಗಿ ಆಗಿನ ಆಡಳಿತ ಸಮಿತಿಯ ಸದಸ್ಯರು ಮೈಸೂರಿನ ಯಾದವ ಗಿರಿಯಲ್ಲಿ 10.25 ಎಕ್ರೆ ಜಾಗ ಖರೀದಿಸಿ ಸ್ವಂತ 20 ಗೋದಾಮು ಮತ್ತು ಕಾಫಿ ಕ್ಯೂರಿಂಗ್ ವಕ್ರ್ಸ್‍ಗಳನ್ನು ಸ್ಥಾಪನೆ ಮಾಡಿ ಕೊಡಗು, ಹಾಸನ, ಚಿಕ್ಕಮಗಳೂರು ಮತ್ತು ಮೈಸೂರು ರೈತ ಸದಸ್ಯರಿಂದ ಕಾಫಿ ಖರೀದಿಸಿ ವ್ಯಾಪಾರ ಮಾಡುತ್ತಾ 1996ರವರೆಗೆ ಲಾಭದಲ್ಲಿ ನಡೆದಿತ್ತು. 1997ರಲ್ಲಿ ಕಾಫಿ ಮುಕ್ತ ಮಾರುಕಟ್ಟೆಯಾದುದರಿಂದ ಖಾಸಗಿ ಕಂಪೆನಿಗಳ ಜೊತೆ ಸ್ಪರ್ಧೆ ಮಾಡಲು ಸಾಧ್ಯವಾಗದೆ ನಷ್ಟವಾಗಿ ನೌಕರರ ಮತ್ತು ಆಡಳಿತ ವರ್ಗದ ಸಂಘರ್ಷದಿಂದ ಸರಕಾರ 1999ರಲ್ಲಿ ಸಂಸ್ಥೆಗೆ ಸಮಾಪನಾಧಿಕಾರಿಯನ್ನು ನೇಮಿಸಿತ್ತು.

ಸಮಾಪನಾದೇಶ ಮಾಡಿ ನೇಮಿಸಿದ ಕೆಲವು ಸರ್ಕಾರಿ ಅಧಿಕಾರಿಗಳು ಸಂಸ್ಥೆಯ 1.50 ಎಕ್ರೆ ಜಾಗವನ್ನು ಖಾಸಗಿ ವ್ಯಕ್ತಿಗಳ ಜೊತೆ ಸೇರಿ ಮಾರಾಟ ಮಾಡಿ ಬಂದ ಹಣದಲ್ಲಿ ಸಂಘದ ಅಲ್ಪಸಾಲವನ್ನು ತೀರಿಸಿ, ಕಾನೂನು ದುರುಪಯೋಗ ಮಾಡಿ ಸಂಘಕ್ಕೆ ನಷ್ಟವನ್ನುಂಟು ಮಾಡಿ ಉಳಿಕೆ ಹಣವನ್ನು ಇಷ್ಟ ಬಂದ ರೀತಿಯಲ್ಲಿ ಖರ್ಚು ಮಾಡಿ ಸಂಘಕ್ಕೆ ಮತ್ತಷ್ಟು ನಷ್ಟವುಂಟು ಮಾಡಿ, ಉತ್ತಮ ಸ್ಥಿತಿಯಲ್ಲಿದ್ದ ಬಾಡಿಗೆ ಬರುತ್ತಿದ್ದ 20 ಗೋದಾಮುಗಳ ಪೈಕಿ 10 ಗೋದಾಮುಗಳನ್ನು ಮತ್ತು ಕಾಫಿ ಕ್ಯೂರಿಂಗ್ ವಕ್ರ್ಸ್‍ಗಳನ್ನು ಒಡೆದು ಮಾರಾಟ ಮಾಡಿ ಅಧಿಕಾರ ದುರುಪಯೋಗ ಮಾಡಿ ಸಂಸ್ಥೆಗೆ ಕೋಟ್ಯಾಂತರ ರೂ. ನಷ್ಟವುಂಟು ಮಾಡಿರುವ ಆರೋಪ ನಂತರ ವ್ಯಕ್ತಗೊಂಡಿತ್ತು. ಇದು ಇನ್ನು ಮುಂದುವರಿದು ಸಂಸ್ಥೆಯ ಹೆಸರಿನಲ್ಲಿ ಉಳಿಕೆಯಾಗಿದ್ದ 5 ಎಕ್ರೆ ಜಾಗವನ್ನು ಸಂಘಕ್ಕೆ ಯಾವದೇ ಸಾಲವಿಲ್ಲದಿದ್ದರೂ ಪತ್ರಿಕೆಯಲ್ಲಿ ಹರಾಜು ಪ್ರಕಟಣೆ ಹಾಕಿ ಮಾರಾಟ ಮಾಡಿ ಹಣವನ್ನು ನುಂಗಲು ಯತ್ನಿಸಿದಾಗ ಇದರ ವಿರುದ್ಧ ಸಮಿತಿ ರಚಿಸಲಾಗಿತ್ತು.

ಸದಸ್ಯರ ಮತ್ತು ಸಾರ್ವಜನಿಕರ ಬೆಂಬಲವನ್ನು ಪಡೆದು ಕರ್ನಾಟಕ ರಾಜ್ಯ ಹೈಕೋರ್ಟ್‍ನಿಂದ ಜಾಗ ಮಾರಾಟವಾಗದಂತೆ ತಾ. 9.7.2015 ರಂದು ತಡೆಯಾಜ್ಞೆ ತಂದಿರುವದಲ್ಲದೆ, ಸಂಘದ ಸಮಾಪನಾಧಿಕಾರಿಯನ್ನು ಮಹಾಸಭೆ ನಡೆಸುವಂತೆ ಒತ್ತಾಯಿಸಿದ್ದು, ಇದರಂತೆ ತಾ. 1.1.2015ರಂದು ನಡೆದ ಸರ್ವ ಸದಸ್ಯರ ಸಭೆಯಲ್ಲಿ ಸಂಘವನ್ನು ಪುನಶ್ಚೇತನಗೊಳಿಸಬೇಕೆಂದು ತೀರ್ಮಾನಿಸುವದರಲ್ಲಿ ಈ ಹಿತರಕ್ಷಣಾ ಸಮಿತಿ ಯಶಸ್ವಿಯಾಗಿತ್ತು.

ತದನಂತರ 2017-18ರಲ್ಲಿ ಹಲವು ಬಾರಿ ಸಹಕಾರ ಇಲಾಖೆಯ ಮುಖ್ಯ ಕಾರ್ಯದರ್ಶಿ, ನಿಬಂಧಕರನ್ನು, ಸಹಕಾರ ಮಂತ್ರಿಗಳನ್ನು ಭೇಟಿ ಮಾಡಿ ಸಂಘದ ಪುನಶ್ಚೇತನಕ್ಕೆ ಕ್ರಿಯಾಯೋಜನೆ ತಯಾರಿಸಿ, ಸಂಸ್ಥೆಯ ಪುನಶ್ಚೇತನಕ್ಕೆ ಒತ್ತಾಯಿಸಲಾಗಿತ್ತು. ಆದರೆ ಹಿಂದೆ ಅಧಿಕಾರ ದುರುಪಯೋಗ ಪಡಿಸಿ ಸಂಘಕ್ಕೆ ನಷ್ಟವುಂಟು ಮಾಡಿದ ಇಲಾಖೆಯ ಕೆಲವು ಅಧಿಕಾರಿಗಳು ಈಗಲೂ ಸಹಕಾರ ಇಲಾಖೆಯ ಪ್ರಮುಖ ಹುದ್ದೆಯಲ್ಲಿ ಮುಂದುವರೆಯುತ್ತಿದ್ದು, ಸಮಿತಿಯ ಪ್ರಯತ್ನಕ್ಕೆ ಅಡ್ಡಗಾಲು ಆಗಿರುತ್ತಾರೆ.

ಕೆಲವು ಅಧಿಕಾರಿಗಳ ಮೇಲೆ ಈಗಾಗಲೇ ಕ್ರಿಮಿನಲ್ ಕೇಸ್ ದಾಖಲೆ ಮಾಡಲು ಸರ್ಕಾರಕ್ಕೆ ನೋಟೀಸ್ ನೀಡಿರುತ್ತೇವೆ, ಈಗಾಗಲೇ ಮೈಸೂರು ವೇರ್ ಹೌಸಿಂಗ್ ಸಹಕಾರ ಸಂಘವಾಗಿ ಪರಿವರ್ತನೆ ಮಾಡಿ ಸಂಸ್ಥೆಯನ್ನು ಪುನಶ್ಚೇತನಗೊಳಿಸಲು ಕ್ರಿಯಾಯೋಜನೆಯನ್ನು ತಯಾರಿಸಿ, ಸಮಾಪನಾಧಿಕಾರಿಯವರಿಗೆ ನೀಡಿ ಸರ್ವ ಸದಸ್ಯರ ಸಭೆ ಕರೆಯುವಂತೆ ಸಹಕಾರ ಕಾಯ್ದೆ 1959 ಕಲಂ 28 ರಂತೆ ನೋಟೀಸ್ ನೀಡಿರುತ್ತೇವೆ. ಇದರ ಹಿನ್ನೆಲೆಯಲ್ಲಿ ಕ್ರಿಯಾಯೋಜನೆಯ ಅಂಗೀಕಾರಕ್ಕಾಗಿ ತಾ. 26.2.2019ರ ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಸಂಘದ ಮೈಸೂರಿನ ಯಾದವಗಿರಿ ಕಚೇರಿಯ ಆವರಣದಲ್ಲಿ ಮಹಾಸಭೆಯನ್ನು ನಡೆಸಲು ಸಮಾಪನಾಧಿಕಾರಿಯವರು ಈಗಾಗಲೇ ಸರ್ವ ಸದಸ್ಯರಿಗೆ ಸಭಾ ತಿಳುವಳಿಕೆ ಪತ್ರ ಕಳುಹಿಸಿರುವದೇ ಅಲ್ಲದೇ ಪತ್ರಿಕಾ ಪ್ರಕಟಣೆ ನೀಡಿರುತ್ತಾರೆ. ಇದರಿಂದ ಸರ್ವ ಸದಸ್ಯರು ಮಹಾಸಭೆಗೆ ಹಾಜರಾಗಿ ಸಂಸ್ಥೆಯ ಪುನಶ್ಚೇತನಕ್ಕೆ ಒತ್ತಾಯಿಸಬೇಕಾಗಿ ಬೋಸ್ ದೇವಯ್ಯ ಕೋರಿದ್ದಾರೆ.