ಸೋಮವಾರಪೇಟೆ,ಫೆ.22 : ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ವಿಭಾಗಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ಕಾಮಗಾರಿಗಳು ಕಳಪೆಯಾಗಿವೆ ಎಂದು ಗ್ರಾಮಸ್ಥರು ಆರೋಪಿಸಿದರು.

ಸಮೀಪದ ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮ ಸಭೆ ಅಧ್ಯಕ್ಷ ಸುಭಾಷ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂದರ್ಭ ಗ್ರಾಮಸ್ಥರು ಈ ಬಗ್ಗೆ ಆರೋಪಿಸಿದರು. ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ವಿಭಾಗದಿಂದ ನಡೆಯುತ್ತಿರುವ ಸೇತುವೆ ಕಾಮಗಾರಿ ತೀರಾ ಕಳಪೆಯಾಗಿದೆ. ಈ ಬಗ್ಗೆ ಗಮನಹರಿಸಬೇಕಾದ ಅಭಿಯಂತರರು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸಾರ್ವಜನಿಕರು ದೂರಿದರು.

ಸೂರ್ಲಬ್ಬಿ ಗ್ರಾಮದ ಅಡ್ಡಂಡ ಮತ್ತು ಅಪ್ಪುಡ ಕುಟುಂಬಸ್ಥರ ಮನೆಗಳಿಗೆ ತೆರಳುವ ರಸ್ತೆಯಲ್ಲಿ ಪ್ರಗತಿಯಲ್ಲಿರುವ ಕಲ್ಲುಕುಂಡ್ ಸೇತುವೆ ಕಾಮಗಾರಿ ಕಳಪೆಯಾಗಿದೆ. ಈ ಸೇತುವೆಯ ಬಗ್ಗೆ ಮಾಹಿತಿ ಕೇಳಿದರೆ ಗುತ್ತಿಗೆದಾರರು ಸಮರ್ಪಕ ಉತ್ತರ ನೀಡುತ್ತಿಲ್ಲ. ಮಣ್ಣು ಮತ್ತು ಕೆಸರನ್ನು ಕಾಮಗಾರಿಗೆ ಬಳಸಲಾಗಿದೆ. ಗುತ್ತಿಗೆದಾರರು 3 ಲಕ್ಷದ ಕಾಮಗಾರಿ ಎಂದು ಉತ್ತರ ನೀಡುತ್ತಾರೆ. ಇಲಾಖೆಯವರನ್ನು ಕೇಳಿದರೆ 5 ಲಕ್ಷದ ಕಾಮಗಾರಿ ಎನ್ನುತ್ತಿದ್ದಾರೆ. ಒಟ್ಟಾರೆ ಸರ್ಕಾರದ ಹಣವನ್ನು ಕಳಪೆ ಕಾಮಗಾರಿಯ ಮೂಲಕ ದುರ್ಬಳಕೆ ಮಾಡಿಕೊಳ್ಳಲು ಯತ್ನಿಸಲಾಗುತ್ತಿದೆ ಎಂದು ಸಾರ್ವಜನಿಕರಾದ ಬೋಪಣ್ಣ, ಸೋಮಯ್ಯ, ಮನು ಸೇರಿದಂತೆ ಇತರರು ಅಭಿಯಂತರ ವೀರೇಂದ್ರ ಅವರನ್ನು ತರಾಟೆಗೆ ತೆಗೆದುಕೊಂಡರು.

ಇದೇ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೀಜಿಗಂಡ-ದೊಡ್ಡೇರ ಕುಟುಂಬಸ್ಥರ ಮನೆಗೆ ತೆರಳುವ ಸ್ಥಳದಲ್ಲಿ ಕಾಮಗಾರಿ ನಿರ್ವಹಿಸದೇ ಬಿಲ್ ಪಾವತಿಸಲಾಗಿದೆ. ಮೋರಿ ನಿರ್ಮಾಣ ಮಾಡದೇ ಹಣ ಡ್ರಾ ಮಾಡಿಕೊಳ್ಳಲಾಗಿದ್ದು, ಇದೀಗ ಮಳೆಹಾನಿ ದುರಸ್ತಿ ಕಾಮಗಾರಿಯಡಿ ಮತ್ತೆ 8 ಲಕ್ಷಕ್ಕೆ ಅನುಮೋದನೆ ಪಡೆಯಲಾಗಿದೆ ಎಂದು ಗಣಪತಿ ಸಭೆಯ ಗಮನ ಸೆಳೆದರು. ಈ ಬಗ್ಗೆ ಗಂಭೀರ ಚರ್ಚೆ ನಡೆದು ಸಭೆಯಲ್ಲಿ ಸಾರ್ವಜನಿಕರು ಸಂಬಂಧಿಸಿದ ಅಭಿಯಂತರರನ್ನು ತೀವ್ರವಾಗಿ ತರಾಟೆಗೆತ್ತಿಕೊಂಡರು.

ಗರ್ವಾಲೆ ವ್ಯಾಪ್ತಿಯಲ್ಲಿ ವಿದ್ಯುತ್ ಸಮಸ್ಯೆ ಬಿಗಡಾಯಿಸಿದ್ದು, ಸಾರ್ವಜನಿಕರು ತೀವ್ರ ತೊಂದರೆಗೆ ಒಳಗಾಗಿದ್ದಾರೆ. ಈ ಬಗ್ಗೆ ಇಲಾಖಾಧಿಕಾರಿಗಳು ಸ್ಪಂದಿಸುತ್ತಿಲ್ಲ. ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ಲೈನ್‍ಮೆನ್ ವಿಫಲರಾಗಿದ್ದು, ತಕ್ಷಣ ಅವರನ್ನು ಇಲ್ಲಿಂದ ವರ್ಗಾಯಿಸುವಂತೆ ಸಾರ್ವಜನಿಕರು ಆಗ್ರಹಿಸಿದರು.

ಸಭೆಗೆ ನೋಡಲ್ ಅಧಿಕಾರಿಯಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಯನ್ನು ನೇಮಿಸಿದ್ದರೂ ಸಹ ಅವರು ಸಭೆಗೆ ಹಾಜರಾಗದ ಹಿನ್ನೆಲೆ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು. ಈ ಬಗ್ಗೆ ಕೆಲಕಾಲ ಚರ್ಚೆ ನಡೆದು ಸಭೆಯ ತೀರ್ಮಾನದಂತೆ ಪಶುವೈದ್ಯಕೀಯ ಇಲಾಖೆಯ ಖಾನ್ ಅವರನ್ನು ನೋಡಲ್ ಅಧಿಕಾರಿಯಾಗಿ ನೇಮಿಸಿ ಸಭೆಯನ್ನು ಮುಂದುವರೆಸಲಾಯಿತು.

ಸಭೆಯಲ್ಲಿ ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ತಾ.ಪಂ. ಉಪಾಧ್ಯಕ್ಷ ಎಂ.ಬಿ. ಅಭಿಮನ್ಯುಕುಮಾರ್, ಗ್ರಾ.ಪಂ. ಉಪಾಧ್ಯಕ್ಷ ಪಳಂಗಪ್ಪ, ಕಂದಾಯ ಇಲಾಖೆಯ ಉಮೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು. ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಂಕ್ಯ, ಕುಂಬಾರಗಡಿಗೆ, ಸೂರ್ಲಬ್ಬಿ, ಶಿರಂಗಳ್ಳಿ, ಗರ್ವಾಲೆ ಗ್ರಾಮಗಳಿಂದ ಸಾರ್ವಜನಿಕರು ಸಭೆಯಲ್ಲಿ ಭಾಗವಹಿಸಿದ್ದರು.