ಮಡಿಕೇರಿ, ಫೆ.22 : ಜಿಲ್ಲೆಯ ಬೂತ್ ಮಟ್ಟದ ಮತಗಟ್ಟೆಗಳಲ್ಲಿ ಮೊದಲ ಹಂತದಲ್ಲಿ ತಾ. 23 ಮತ್ತು 24 ರಂದು ಹಾಗೂ ಎರಡನೇ ಹಂತದಲ್ಲಿ ಮಾರ್ಚ್ 2 ಮತ್ತು 3 ರಂದು ಮತದಾರರ ವಿಶೇಷ ನೋಂದಣಿ ಅಭಿಯಾನ ನಡೆಯಲಿದ್ದು, ಅರ್ಹರು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಕೋರಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ಜಿಲ್ಲೆಯಲ್ಲಿ 18 ರಿಂದ 19 ವರ್ಷದೊಳಗಿನ ಯುವ ಮತದಾರರ ಸಂಖ್ಯೆ ಕಡಿಮೆ ಇದ್ದು, ಯುವ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡುವಂತಾಗಬೇಕು ಎಂದು ಮನವಿ ಮಾಡಿದರು. ಜಿಲ್ಲೆಯಲ್ಲಿ 4,35,526 ಮತದಾರರು ಇದ್ದು, ವಿಕಲಚೇತನ ಮತದಾರರು ಹೆಸರು ನೋಂದಣಿಗೆ ಗಮನ ಹರಿಸಬೇಕಿದೆ ಎಂದು ತಿಳಿಸಿದರು. ಇವಿಎಂ ಮತ್ತು ವಿವಿಪ್ಯಾಟ್ ಮತಯಂತ್ರಗಳಿಗೆ ಸಂಬಂಧಿಸಿದಂತೆ ಜಿಲ್ಲೆಯ ಎಲ್ಲಾ ಮತಗಟ್ಟೆ ಕೇಂದ್ರಗಳಲ್ಲಿ ಮಾಹಿತಿ ನೀಡಲಾಗುತ್ತಿದೆ ಎಂದು ತಿಳಿಸಿದರು.

ಜನವರಿ 1, 2019 ಕ್ಕೆ 18 ವರ್ಷ ಪೂರ್ಣಗೊಂಡಿರುವ ಯುವಕ, ಯುವತಿಯರು ಮತ್ತು 18 ವರ್ಷ ಮೇಲ್ಪಟ್ಟ ನಾಗರಿಕರು ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾಗದೆ ವಂಚಿತರಾಗಿದ್ದಲ್ಲಿ ಮತದಾರರ ಪಟ್ಟಿಗೆ ಹೆಸರು ಸೇರಿಸಲು ಮತ್ತು ಈಗಾಗಲೇ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾಗಿದ್ದು, ಮತದಾರರು ಮೃತ, ಸ್ಥಳಾಂತರ, ಪುನರಾವರ್ತನೆ ಆಗಿದ್ದಲ್ಲಿ ಹೆಸರುಗಳನ್ನು ತೆಗೆಯಲು ಮತ್ತು ಮತದಾರರ ಗುರುತಿನ ಚೀಟಿಯಲ್ಲಿನ ನಮೂದುಗಳು ತಪ್ಪಾಗಿದ್ದಲ್ಲಿ ತಿದ್ದುಪಡಿ ಮಾಡಲು ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಅವರು ಮಾಹಿತಿ ನೀಡಿದರು.

ಒಂದು ವಿಧಾನಸಭಾ ಕ್ಷೇತ್ರದ ಒಂದು ಮತಗಟ್ಟೆಯಿಂದ ಇನ್ನೊಂದು ಮತಗಟ್ಟೆಗೆ ವರ್ಗಾವಣೆ ಮಾಡಲು ಹಾಗೂ ಅನಿವಾಸಿ ಭಾರತೀಯರು ಮತದಾರರ ಪಟ್ಟಿಗೆ ಹೆಸರು ಸೇರಿಸಲು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲೆಯ 208-ಮಡಿಕೇರಿ ಮತ್ತು 209-ವೀರಾಜಪೇಟೆ ವಿಧಾನಸಭಾ ಕ್ಷೇತ್ರಗಳ ಎಲ್ಲಾ ಮತಗಟ್ಟೆಗಳಲ್ಲಿ ವಿಶೇಷ ಅಭಿಯಾನ ಕಾರ್ಯಕ್ರಮ ನಡೆಯಲಿದೆ ಎಂದರು.

ವಿಶೇಷ ಅಭಿಯಾನ ದಿನಗಳಂದು ಆಯಾಯ ಮತಗಟ್ಟೆಯ ಬೂತ್ ಮಟ್ಟದ ಅಧಿಕಾರಿಗಳು ಮತಗಟ್ಟೆಯಲ್ಲಿ ಹಾಜರಿದ್ದು, ನಮೂನೆ-6, ನಮೂನೆ-6 ಎ, ನಮೂನೆ-7, ನಮೂನೆ-8, ನಮೂನೆ-8 ಎ ಅರ್ಜಿಗಳನ್ನು ಸ್ವೀಕರಿಸಲಿದ್ದಾರೆ. ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾಗದೆ ಇರುವ ಮತದಾರರು ನಮೂನೆ-6 ರಲ್ಲಿ ಹಾಗೂ ಈಗಾಗಲೇ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾಗಿರುವ ಮತದಾರರು ಮೃತ, ಸ್ಥಳಾಂತರ, ಪುನರಾವರ್ತನೆ ಆಗಿದ್ದಲ್ಲಿ ಹೆಸರುಗಳನ್ನು ತೆಗೆಯಲು ನಮೂನೆ-7 ರಲ್ಲಿ ಮತ್ತು ಮತದಾರರ ಗುರುತಿನ ಚೀಟಿಯಲ್ಲಿನ ನಮೂದುಗಳು ತಪ್ಪಾಗಿದ್ದಲ್ಲಿ ತಿದ್ದುಪಡಿ ಮಾಡಲು ನಮೂನೆ-8 ರಲ್ಲಿ ಹಾಗೂ ಒಂದು ವಿಧಾನಸಭಾ ಕ್ಷೇತ್ರದ ಒಂದು ಮತಗಟ್ಟೆಯಿಂದ ಇನ್ನೊಂದು ಮತಗಟ್ಟೆಗೆ ವರ್ಗಾವಣೆ ಮಾಡಲು ನಮೂನೆ-8 ಎ ರಲ್ಲಿ ಹಾಗೂ ಅನಿವಾಸಿ ಭಾರತೀಯರು ಮತದಾರರ ಪಟ್ಟಿಗೆ ಹೆಸರು ಸೇರಿಸಲು ನಮೂನೆ-6 ಎ ರಲ್ಲಿ ಅರ್ಜಿಗಳನ್ನು ಪೂರಕ ದಾಖಲೆಗಳೊಂದಿಗೆ ಆಯಾಯ ಮತಗಟ್ಟೆಯ ಬೂತ್ ಮಟ್ಟದ ಅಧಿಕಾರಿಗೆ ಸಲ್ಲಿಸಬಹುದಾಗಿದೆ ಎಂದು ಅವರು ಹೇಳಿದರು. ಮತದಾರರ ಪಟ್ಟಿಯಲ್ಲಿ ನೋಂದಣಿಯಾಗಿರುವ ಮತದಾರರು ತಮ್ಮ ಮೊಬೈಲ್ ಸಂಖ್ಯೆಯನ್ನು ಬೂತ್ ಮಟ್ಟದ ಅಧಿಕಾರಿಗಳಿಗೆ ನೀಡುವಂತೆ ಕೋರಿದರು.

ಹೆಚ್ಚಿನ ಮಾಹಿತಿಗೆ ಜಿಲ್ಲಾಧಿಕಾರಿಗಳ, ಉಪ ವಿಭಾಗಾಧಿಕಾರಿಗಳ ಮತ್ತು ತಹಶೀಲ್ದಾರರ ಕಚೇರಿಯನ್ನು ಸಂಪರ್ಕಿಸಬಹುದು ಹಾಗೂ ತಿತಿತಿ.ಛಿeoಞಚಿಡಿಟಿಚಿಣಚಿಞಚಿ.ಞಚಿಡಿ.ಟಿiಛಿ.iಟಿ ಮತ್ತು ತಿತಿತಿ.ಞoಜಚಿgu.ಟಿiಛಿ.iಟಿ ವೆಬ್‍ಸೈಟ್‍ನಲ್ಲಿಯೂ ಸಹ ಹೆಚ್ಚಿನ ಮಾಹಿತಿ ಲಭ್ಯವಿದ್ದು, ಮಾಹಿತಿಯನ್ನು ಪಡೆಯಬಹುದು ಎಂದು ತಿಳಿಸಿದರು.

ನಮೂನೆ-6, 7, 8 ಮತ್ತು 8ಎಗಳನ್ನು ನಾಗರಿಕರು ತಿತಿತಿ.ಛಿeoಞಚಿಡಿಟಿಚಿಣಚಿಞಚಿ.ಞಚಿಡಿ.ಟಿiಛಿ.iಟಿ ಮತ್ತು ತಿತಿತಿ.ಟಿvsಠಿ.iಟಿ ಮೂಲಕವು ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಬಹುದಾಗಿರುತ್ತದೆ. ಈಗಾಗಲೇ ನೋಂದಣಿಯಾಗಿರುವ ಮತದಾರರು 2019ರ ಜನವರಿ, 16 ರಂದು ಪ್ರಕಟಿಸಿರುವ ಅಂತಿಮ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇರುವ ಬಗ್ಗೆ ತಿತಿತಿ.ಛಿeoಞಚಿಡಿಟಿಚಿಣಚಿಞಚಿ.ಞಚಿಡಿ.ಟಿiಛಿ.iಟಿ ಮತ್ತು ತಿತಿತಿ.ಟಿvsಠಿ.iಟಿ ನಲ್ಲಿ ಪರಿಶೀಲಿಸಿ ಖಾತರಿ ಪಡಿಸಿಕೊಳ್ಳಬಹುದಾಗಿದೆ ಎಂದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಇರುವ ಮತದಾರರ ಸಹಾಯವಾಣಿ ಕೇಂದ್ರ ಸಂಖ್ಯೆ 1950 ಕ್ಕೆ (ಜಿಲ್ಲೆಯ ಒಳಗೆ ಕರೆ ಮಾಡುವವರು 1950 ಗೆ ಮತ್ತು ಜಿಲ್ಲೆಯ ಹೊರ ಭಾಗದಿಂದ ಕರೆ ಮಾಡುವವರು 08272-1950 ಗೆ ಕರೆ ಮಾಡುವದು) ಕರೆ ಮಾಡುವದರ ಮೂಲಕ, 1950 ಗೆ ಎಸ್‍ಎಂಎಸ್ ಮಾಡುವದರ ಮೂಲಕ ಮತ್ತು ವೋಟರ್ ಸಹಾಯವಾಣಿ ಮೊಬೈಲ್ ಆಪ್ ಮೂಲಕ ತಮ್ಮ ಹೆಸರು ನೋಂದಣಿಯಾಗಿರುವ ಬಗ್ಗೆ ಖಾತರಿ ಪಡಿಸಿಕೊಳ್ಳಬಹುದಾಗಿದೆ ಎಂದರು. ಹೆಚ್ಚುವರಿ ಜಿಲ್ಲಾಧಿಕಾರಿ ಟಿ.ಯೋಗೇಶ ಇತರರು ಇದ್ದರು.