ದ.ಕೊಡಗಿನ ಗಡಿ ಭಾಗವಾದ ತಿತಿಮತಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಇದೀಗ 100ರ ಸಂಭ್ರಮ.ಸಾವಿರಾರು ಗಣ್ಯರನ್ನು, ವಿವಿಧ ಕ್ಷೇತ್ರಕ್ಕೆ ಪರಿಚಯಿಸಿದ ಈ ಶಾಲೆಯು ತಾ. 23 ಹಾಗೂ 24 ರಂದು ಎರಡು ದಿನಗಳ ಕಾಲ ಹಲವು ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ಶತಮಾನೋತ್ಸವ ಸಂಭ್ರಮ ಆಚರಿಸಿಕೊಳ್ಳಲಿದೆ. ಗ್ರಾಮದಲ್ಲಿ ಹಬ್ಬದ ಸಡಗರ ಕಂಡುಬಂದಿದ್ದು; ಶಾಲೆಯ ಆವರಣದಲ್ಲಿ ತಳಿರು ತೋರಣದೊಂದಿಗೆ ಬ್ಯಾನರ್‍ಗಳು ರಾರಾಜಿಸುತ್ತಿವೆ. ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರಿಗೂ ನೂರಾರು ಸಂಭ್ರಮದಲ್ಲಿ ಕ್ರೀಡಾಕೂಟ, ನಡೆಯಲಿದೆ. ಪ್ರಮುಖವಾಗಿ ಈ ಶಾಲೆಗೆ ದುಡಿದು ನಿವೃತ್ತಿಗೊಂಡ ಅನೇಕ ಹಿರಿಯ ಶಿಕ್ಷಕರಿಗೆ ಗೌರವ, ಸೇರಿದಂತೆ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ.

ಸ್ವಾತಂತ್ರ್ಯ ಪೂರ್ವದ 1916 ರಲ್ಲಿ ಕೊಡಗು ಜಿಲ್ಲಾ ಬೋರ್ಡ್ ವತಿಯಿಂದ ಈ ಶಾಲೆ ಆರಂಭವಾಯಿತು. ನಂತರದ ದಿನಗಳಲ್ಲಿ ಗ್ರಾಮದ ದಾನಿಗಳಾದ ಮರಾಠಿ ಮಂಜಮ್ಮ 1920ರಲ್ಲಿ 3.16 ಎಕರೆ ಜಾಗವನ್ನು ದಾನ ಮಾಡಿ, 3 ಕೊಠಡಿಗಳ ಕಟ್ಟಡ ನಿರ್ಮಿಸಿ ಶಾಲೆಯನ್ನು ಮೇಲ್ದರ್ಜೆಗೇರಿಸಿದರು. ಜಾಗ ದಾನ ಮಾತ್ರವಲ್ಲದೆ ಕೊಠಡಿ ನಿರ್ಮಾಣ ಮಾಡಿರುವದರಿಂದ ಸ್ಥಳೀಯರಿಗೆ ಶಿಕ್ಷಣ ಕಲಿಯಲು ಮತ್ತಷ್ಟು ಪ್ರಯೋಜನವಾಯಿತು. ಒಂದನೆ ತರಗತಿಯಿಂದ ಆರಂಭಗೊಂಡ ಶಾಲೆ ಪ್ರಸ್ತುತ 7ನೇ ತರಗತಿವರೆಗೆ ಶಿಕ್ಷಣ ನೀಡುವ ಕೇಂದ್ರವಾಗಿದೆ. ಬಹುತೇಕ ಆದಿವಾಸಿಗಳೇ ಅಧಿಕ ಸಂಖ್ಯೆಯಲ್ಲಿ ವಿದ್ಯಾರ್ಜನೆ ಮಾಡುತ್ತಿರುವ ಈ ಶಾಲೆಯಲ್ಲಿ ಆಗಿನ ಕಾಲದಲ್ಲಿ ಕಾಫಿ ಬೆಳೆಗಾರರು, ರೈತರು, ಕಾರ್ಮಿಕ ವರ್ಗದವರಿಗೆ ಈ ಶಾಲೆಯು ವಿದ್ಯಾದೇಗುಲವಾಗಿ ರೂಪುಗೊಂಡಿತು. ಮಾಯಮುಡಿ ಗ್ರಾಮದ ಜಪ್ಪದ ಕಟ್ಟೆ ಮಠದ ಸಮಿತಿ 1 ಎಕರೆ ಗದ್ದೆಯನ್ನು ಶಾಲೆಗೆ ನೀಡಲಾಯಿತು. ಶಾಲೆ 2 ಎಕರೆ ಮೈದಾನ ಹೊಂದಿದ್ದು, ಒಟ್ಟು 6.18 ಎಕರೆ ಜಾಗ ಹೊಂದಿದೆ. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾದಂತೆ 1952ರಲ್ಲಿ ಮನೆಯಪಂಡ ಗಣಪತಿ ಅವರು ತಮ್ಮ ಹೆತ್ತವರ ಜ್ಞಾಪಕಾರ್ಥವಾಗಿ ದೊಡ್ಡ ಮಟ್ಟದ ಕಟ್ಟಡ ನಿರ್ಮಿಸಿ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿದರು. 1991ರಲ್ಲಿ ಚೆಪ್ಪುಡೀರ ಪೊನ್ನಮ್ಮ ಅವರು ತಮ್ಮ ಹೆತ್ತವರ ಹೆಸರಿನಲ್ಲಿ ಸಭಾಂಗಣ ನಿರ್ಮಿಸಿ ಕಲೆ, ಸಂಸ್ಕøತಿ ಬಿಂಬಿಸಲು ಅವಕಾಶ ಮಾಡಿಕೊಟ್ಟರು. ಶಾಲೆಯನ್ನು ಮತ್ತಷ್ಟು ಅಭಿವೃದ್ಧಿ ಪಡಿಸುವ ಉತ್ಸಾಹದಲ್ಲಿ ಗುಂಬೀರ ಸುಬ್ಮಯ್ಯ ಹಾಗೂ ಚೆಪ್ಪುಡೀರ ಕುಶಾಲಪ್ಪ ಅವರಿಂದ ಮುಖ್ಯಧ್ವಾರ, ಗ್ರಾಮಸ್ಥ ಹೆಚ್.ಟಿ.ಸುಂದರ ಕಮಾನು ಗೇಟ್ ನಿರ್ಮಾಣ, ತಡೆಗೋಡೆಯನ್ನು ದಾನಿ ಪಾಲೇಂಗಡ ದೇಚಮ್ಮ, ಅಂದಿನ ಸಂಸದ ಧನಂಜಯಕುಮಾರ್, ನಿರ್ಮಿಸಿಕೊಟ್ಟಿದ್ದರು. ತಿತಿಮತಿ ಗ್ರಾಮ ಪಂಚಾಯ್ತಿ ಹಾಗೂ ಜಿಲ್ಲಾ ಪಂಚಾಯ್ತಿ 5 ಒಟ್ಟು 5 ಲಕ್ಷ ಅನುದಾನದಲ್ಲಿ ರಂಗಮಂದಿರ ನಿರ್ಮಿಸಲಾಗಿದೆ.

ಗಣ್ಯರ ವಿದ್ಯಾ ದೇಗುಲ

ಮಾಜಿ ಸಚಿವೆ ಸುಮವಸಂತ್, ಮಾಜಿ ಶಾಸಕ ಎ. ಎನ್. ಬೆಳ್ಯಪ್ಪ ಸೇರಿದಂತೆ ಸಾಕಷ್ಟು ಗಣ್ಯರ ವಿದ್ಯಾ ದೇಗುಲವಾಗಿದೆ. ಈ ಭಾಗದಲ್ಲಿ ಗ್ರಾಮ, ಜಿಲ್ಲಾ ಮಟ್ಟದ ಜನಪ್ರತಿನಿಧಿಗಳು, ವೈದ್ಯರು, ವಿಜ್ಞಾನಿ, ಸೇನೆ, ಕ್ರೀಡೆ, ಇಂಜಿನಿಯರ್ ಹೀಗೆ ನಾನಾ ಕ್ಷೇತ್ರಗಳಲ್ಲಿ ಉನ್ನತ ಸ್ಥಾನ ಪಡೆದುಕೊಂಡಿರುವ ಹಿರಿಯರಿಗೆ ಈ ಶಾಲೆ ಕೈ ತಿದ್ದಿದ ಶಾಲೆ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ.

ನೌಕಾಪಡೆಯ ಕಮಾಂಡೊ ಸಿ.ಎಂ ಬೆಳ್ಯಪ್ಪ, ಅಥ್ಲೆಟ್‍ಗಳಾದ ಸುಗುಣ ಪೊನ್ನಪ್ಪ, ಪಿ. ಸಿ. ಪೊನ್ನಪ್ಪ, ಹಾಕಿ ಪ್ರತಿಭೆ ಚೆಪ್ಪುಡೀರ ಕಾರ್ಯಪ್ಪ, ಇಸ್ರೋ ವಿಜ್ಞಾನಿ ಬಿ.ಎನ್. ಅಶೋಕ್, ಸಿಸಿಎಫ್ ಕರುಣಾಕರ್, ವೈದ್ಯರುಗಳಾದ ಡಾ. ಸಣ್ಣುವಂಡ ಕಾವೇರಪ್ಪ, ಪಾರುವಂಗಡ ಬೆಳ್ಯಪ್ಪ, ಜಿಲ್ಲಾ ಪಂಚಾಯ್ತಿ ಸದಸ್ಯೆ ಪಿ. ಆರ್. ಪಂಕಜ, ತಿತಿಮತಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಶಿವಕುಮಾರ್, ಮಂಗಳೂರು ವಿವಿ ಜಂಟಿ ನಿರ್ದೇಶಕ ಎಸ್. ವಿ. ಅಪ್ಪಾಜಿ ಹೀಗೆ ನೂರಾರು ಗಣ್ಯರಿಗೆ ಇದೇ ಶಾಲೆ ಶಿಕ್ಷಣದ ಮೂಲ ಕೇಂದ್ರವಾಗಿದೆ. ಗ್ರಾಮ ಮಟ್ಟದಿಂದ ರಾಜ್ಯಮಟ್ಟದವರೆಗೂ ಜನಪ್ರತಿನಿಧಿಗಳನ್ನು ನೀಡಿರುವ ಕೀರ್ತಿ ಈ ಶಾಲೆಗಿದೆ.

ಶತಮಾನೋತ್ಸವದ ಯಶಸ್ವಿಗೆ ಮಾಜಿ ಮುಜರಾಯಿ ಇಲಾಖೆ ಸಚಿವೆ ಸುಮಾವಸಂತ್ ಗೌರವ ಅಧ್ಯಕ್ಷರಾಗಿ, ಕಾರ್ಯಾಧ್ಯಕ್ಷರಾಗಿ, ಚೆಪ್ಪುಡೀರ ರಾಮಕೃಷ್ಣ, ಪ್ರಧಾನ ಕಾರ್ಯದರ್ಶಿಯಾಗಿ ಶಾಲೆಯ ಮುಖ್ಯ ಶಿಕ್ಷಕಿ ಹೆಚ್.ಎಂ.ಪಾರ್ವತಿ ಸೇರಿದಂತೆ. ಕಾರ್ಯಧ್ಯಕ್ಷರಾಗಿ ಚೆಪ್ಪುಡೀರ ರಾಮಕೃಷ್ಣ, ಉಪಾಧ್ಯಕ್ಷರಾಗಿ ಶಿವಕುಮಾರ್, ಖಜಾಂಜಿಯಾಗಿ ಫಿಲೋಮಿನಾ, ಪ್ರಮುಖರುಗಳಾಗಿ ಮನು ನಂಜಪ್ಪ, ಮಹೇಶ್, ಕೃಷ್ಣ, ಮಂಜುಳ ಗಣೇಶ್, ಅನೂಪ್, ಶಿಕ್ಷಕ ವರ್ಗ, ಸೇರಿದಂತೆ ಹಳೆಯ ವಿದ್ಯಾರ್ಥಿಗಳು, ಸ್ಥಳೀಯ ಸಾರ್ವಜನಿಕರು ಹಾಗೂ ಶಿಕ್ಷಕ ವರ್ಗ ಸಮಿತಿಯಲ್ಲಿ ಕಾರ್ಯನಿರ್ವಹಿಸಿ ಶತಮಾನೋತ್ಸವವನ್ನು ಯಶಸ್ವಿಗೊಳಿಸಲು ಅಣಿಯಾಗಿದ್ದಾರೆ. ಸುಮಾರು 5 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿರುವ ಈ ಶಾಲೆಯಲ್ಲಿ ಪ್ರಸ್ತುತ 250 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಹೆಚ್ಚು ವಿದ್ಯಾರ್ಥಿಗಳು ಇದ್ದ ಕಾರಣದಿಂದಾಗಿ ಮಾದರಿ ಪ್ರಾಥಮಿಕ ಶಾಲೆ ಹೆಸರಿನಲ್ಲಿ ಮುಂದುವರಿಯುತ್ತಿದೆ. ಕಾಫಿ ಬೆಳೆಗಾರರು, ಗಿರಿಜನರ ಕೇಂದ್ರ ಸ್ಥಾನದಲ್ಲಿರುವದರಿಂದ ಹೆಚ್ಚಿನ ಮಕ್ಕಳಿಗೆ ಶಿಕ್ಷಣ ಕೇಂದ್ರ ಸ್ಥಾನವಾಗಿದೆ. 9 ಶಿಕ್ಷಕರು ಶಿಕ್ಷಣ ನೀಡುತ್ತಿದ್ದಾರೆ. ಇಂತಹ ಕಾಲಘಟ್ಟದಲ್ಲಿ ಆಚರಣೆ ಮೂಲಕ ಶಿಕ್ಷಣ ದೇಗುಲಕ್ಕೆ ಹಾಗೂ ಹಿಂದಿನಿಂದ ದಾನದ ರೂಪದಲ್ಲಿ ಪ್ರೋತ್ಸಾಹಿಸಿದ ಶಿಕ್ಷಣ ಪ್ರೇಮಿಗಳನ್ನು ನೆನೆಪಿಸಿಕೊಳ್ಳಲು ಶತಮಾನೊತ್ಸವ ಆಚರಿಸಿಕೊಳ್ಳಲಾಗುತ್ತಿದೆ.

ಸನ್ಮಾನಿತರು

ಈ ಶಾಲೆಯಲ್ಲಿ ಶಿಕ್ಷಕರಾಗಿ ನಿರಂತರ ಸೇವೆ ಸಲ್ಲಿಸಿ ನಿವೃತ್ತಿಗೊಂಡ ಸಿದ್ದಾಪುರದ ಪುಟ್ಟಿಚಂಡ ಅಯ್ಯಣ್ಣ, ಅರುವತೋಕ್ಲುವಿನ ಕಾವೇರಮ್ಮ, ಬಿಳುಗುಂದದ ಐನಂಡ ಸೋಮಜ್ಜಿ,ಪೊನ್ನಂಪೇಟೆಯ ದೇವಕ್ಕಿ, ಚೆಂಬುವಿನ ಬುದ್ದನಾಯಕ, ಮಾಯಮುಡಿಯ ನಂಜಮಯ್ಯ,ಕುಟ್ಟಂದಿಯ ನಂಜಮಯ್ಯ,ಮೈಸೂರಿನ ಮೇದಮಯ್ಯ, ಗೋಣಿಕೊಪ್ಪಲುವಿನ ಕಮಲ,ಗೋಣಿಕೊಪ್ಪಲುವಿನ ಸೋಮಯ್ಯ,ಬಿ.ಎ.ಚಿಮ್ಮ,ಕಡೇಮಾಡ ಜಾಜಿ,ತಮ್ಮಯ್ಯ, ಚನ್ನಂಗೊಲ್ಲಿಯ ಕನಕ,ಕಾವೇರಮ್ಮ, ಗೋಣಿಕೊಪ್ಪಲುವಿನ ಲವ,ಜಯಲಕ್ಷ್ಮಿ,ಭಾರತಿ,ಪೊನ್ನಂಪೇಟೆಯ ಮೂಕಳೇರ ಕುಶಾಲಪ್ಪ, ಟಿ.ಎಂ.ಕುಶಾಲಪ್ಪ, ಕೊಕ್ಕೇಂಗಡ ಪೂಣಚ್ಚ, ಪೊನ್ನಂಪೇಟೆಯ ಪೂವಪ್ಪ,ಪೊನ್ನಂಪೇಟೆಯ ಕಾಳಯ್ಯ, ಶಕುಂತಲ,ಕಳ್ಳಿಚಂಡ ಚೋಂದಮ್ಮ,ಯಶೋಧ,ಮುಕ್ಕಾಟೀರ ನೀಲಮ್ಮ,ಸಕಲೇಶಪುರದ ಜಾನಕಿ,ಚನ್ನಂಗೊಲ್ಲಿಯ ಕಮಲ ವಿ.ಕೆ., ಮೈಸೂರಿನ ಭಾರತಿ,ಕಳ್ಳಿಚಂಡ ಶಾರದಾ,ಪೆಮ್ಮಂಡ ಅಯ್ಯಪ್ಪ,ಕುಶಾಲನಗರದ ತಾಯಮ್ಮ, ಹುದಿಕೇರಿಯ ಮಂದಣ್ಣ,ಮೈಸೂರಿನ ಗ್ರೇಸಿ, ಕೇರಳದ ಗೋಪಿನಾಥ್,ಉತ್ತಯ್ಯ,ಗಣಪತಿ ಎಂ.ಬಿ.,ತಮಿಳರ ಲೀಲಾ, ಗೋಣಿಕೊಪ್ಪದ ಗೌರಮ್ಮ,ವಿರಾಜಪೇಟೆಯ ದೇವಕ್ಕಿ, ಕೊಟ್ಟಂಗಡ ಜಾನಕಿ, ಕಳತ್ಮಾಡುವಿನ ಗುಮ್ಮಟ್ಟೀರ ರಾಮು,ಕೊಕ್ಕೇಂಗಡ ಬೋಜಮ್ಮ, ಬಿಳೂರಿನ ಕಾಂಡೇರ ಮುದ್ದಪ್ಪ, ಬಿಜ್ಜಂಡ ಕುಶಾಲಪ್ಪ,ಬೇಗೂರಿನ ಮತ್ರಂಡ ನಾಚಪ್ಪ, ಸೇರಿದಂತೆ ಅನೇಕ ಸಾಧಕರನ್ನು ಶತಮಾನೋತ್ಸವದ ಅಂಗವಾಗಿ ಸನ್ಮಾನಿಸಿ ಗೌರವಿಸುವ ಕಾರ್ಯಕ್ರಮವಿದೆ.

ಓದಿದ ಶಾಲೆ ಮರೆಯದ ಚೇತನ್

ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಜನೆ ಮಾಡುವ ಮೂಲಕ ಹೆತ್ತ ಪೋಷಕರಿಗೆ ಉತ್ತಮ ಮಗನಾಗಿ, ಶಾಲೆಯ ಶಿಕ್ಷಕರಿಗೆ ಉತ್ತಮ ವಿದ್ಯಾರ್ಥಿಯಾಗಿದ್ದ ಬಾಚಮಾಡ ಚೇತನ್ ಸೋಮಯ್ಯ ಈ ಶಾಲೆಯ ಹಳೆಯ ವಿದ್ಯಾರ್ಥಿ ತನ್ನ ತಂದೆ ಬಾಚಮಾಡ ಸೋಮಯ್ಯ, ತಾಯಿ ಚಂಗುಲಂಡ ಕಮಲರವರು ಶಿಕ್ಷಕರಾಗಿದ್ದ ಸಂದರ್ಭದಲ್ಲಿ ಇದೇ ಸರ್ಕಾರಿ ಶಾಲೆಯಲ್ಲಿ ಓದುವ ಮೂಲಕ ಸಾಧನೆ ಮಾಡಿದರು. ನಂತರ ಇಂಜಿನಿಯರಿಂಗ್ ಮುಗಿಸಿದ ಚೇತನ್‍ರವರು ಅಮೇರಿಕಾದ ಕ್ಯಾಲೀಪೋರ್ನಿಯದಲ್ಲಿ ಉನ್ನತ ಹುದ್ದೆಯನ್ನು ಸೇರಿಕೊಂಡರು.

ತನ್ನ ಶಾಲೆಯ ಶತಮಾನೋತ್ಸವ ಕಾರ್ಯಕ್ರಮದ ಮಾಹಿತಿ ತಿಳಿಯುತ್ತಿದ್ದಂತೆ ತಾನು ಓದಿದ ಶಾಲೆಯ ನೂತನ ಸಭಾಂಗಣಕ್ಕೆ 7.25 ಲಕ್ಷ ಹಣವನ್ನು ದಾನವಾಗಿ ನೀಡುವ ಮೂಲಕ ತನ್ನ ಶಾಲೆಯ ಋಣ ತೀರಿಸುವ ಪ್ರಯತ್ನ ಮಾಡಿದ್ದಾರೆ. ಚೇತನ್‍ರವರು ನಂಬುಡುಮಾಡ ಸಹನರವರನ್ನು ವಿವಾಹವಾಗಿ ಪ್ರಸ್ತುತ ತನ್ನ ಪತ್ನಿ,ಮಕ್ಕಳೊಂದಿಗೆ ಅಮೇರಿಕಾದಲ್ಲಿ ನೆಲೆಸಿದ್ದಾರೆ. ಈತನ ಸಹೋದರಿ ಚೆರಿರವರು ಶಿಕ್ಷಕಿಯಾಗಿ ಮೈಸೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ತಾಯಿ ಸಿ.ಬಿ.ಕಮಲ ,ತಂದೆ ಬಾಚಮಾಡ ಸೋಮಯ್ಯ ನಿವೃತ್ತ ಶಿಕ್ಷಕರಾಗಿ ಇದೀಗ ಗೋಣಿಕೊಪ್ಪಲುವಿನಲ್ಲಿ ವಾಸವಾಗಿದ್ದಾರೆ.

ಗ್ರಾಮೀಣ ಶಾಲೆಯ ಶತಮಾನೋತ್ಸವ ಯಶಸ್ವಿಗೆ ಟೊಂಕ ಕಟ್ಟಿ ನಿಂತಿದ್ದ ಶತಮಾನೋತ್ಸವ ಸಮಿತಿಯ ಆಡಳಿತ ಮಂಡಳಿ ಎರಡು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಜನಮಾನಸದಲ್ಲಿ ಅಚ್ಚಳಿಯದೇ ಉಳಿಯುವ ರೀತಿಯ ಕಾರ್ಯಕ್ರಮಕ್ಕೆ ಸಕಲ ಸಿದ್ದತೆ ಮಾಡಿಕೊಂಡಿದೆ.

ಶತಮಾನೋತ್ಸವ ಸಮಿತಿಯ ಕಾರ್ಯಧ್ಯಕ್ಷ ರಾಮಕೃಷ್ಣ ಉಪಾಧ್ಯಕ್ಷ ಮನು ನಂಜಪ್ಪ ಸೇರಿದಂತೆ ಸಮಿತಿಯ ಹಲವು ಸದಸ್ಯರು ಕಾರ್ಯಕ್ರಮದ ಯಶಸ್ವಿಗೆ ತಮ್ಮ ತನು,ಮನ, ಧನಗಳನ್ನು ನೀಡುವ ಮೂಲಕ ಸಹಕರಿಸಿದ್ದಾರೆ. ಅರಣ್ಯ ನಿಗಮದ ಮಾಜಿ ಉಪಾಧ್ಯಕ್ಷ ಮಾಂಗೇರ ಪದ್ಮಿನಿ ಪೊನ್ನಪ್ಪ ಅವರು ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲಕರವಾಗಲು 40 ಸಾವಿರ ಮೌಲ್ಯದ ಪ್ರೋಜೆಕ್ಟರ್‍ಅನ್ನು ನೀಡಿದ್ದಾರೆ. ಮನು ನಂಜಪ್ಪನವರು ಮಕ್ಕಳ ಕಲಿಕೆಗೆ ಲ್ಯಾಪ್‍ಟಾಪ್ ದಾನ ಮಾಡಿದ್ದಾರೆ. ಉಳಿದಂತೆ ಜಿಲ್ಲಾ ಪಂಚಾಯ್ತಿ ಸದಸ್ಯೆ ಪಿ.ಆರ್.ಪಂಕಜ ತಾಲೂಕು ಪಂಚಾಯ್ತಿ ಸದಸ್ಯರಾದ ಆಶಾಜೇಮ್ಸ್, ಗ್ರಾಮ ಪಂಚಾಯ್ತಿ ಅಧ್ಯಕ್ಷ ಶಿವು ಕುಮಾರ್‍ರವರು ಸರ್ಕಾರದ ಅನುದಾನಗಳನ್ನು ವಿಶೇಷ ರೀತಿಯಲ್ಲಿ ಶಾಲೆಯ ಅಭಿವೃದ್ದಿಗೆ ಬಳಕೆ ಮಾಡಿದ್ದಾರೆ. ಶಾಸಕÀ ಕೆ.ಜಿ.ಬೋಪಯ್ಯ, 5 ಲಕ್ಷ ಅನುದಾನವನ್ನು ಶಾಲೆಯ ಅಭಿವೃದ್ಧಿಗೆ ಬಿಡುಗಡೆ ಮಾಡಿದ್ದಾರೆ.ಶಾಲೆಯ ಹಳೆಯ ವಿದ್ಯಾರ್ಥಿಗಳು ಶತಮಾನೋತ್ಸವ ಯಶಸ್ವಿಗೆ ಕೈ ಜೋಡಿಸಿದ್ದಾರೆ. ಶಾಲೆಯ ಶಿಕ್ಷಕರು ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳಿಂದ ನಡೆಸಲು ಈಗಾಗಲೇ ತಯಾರಿ ನಡೆಸಿದ್ದಾರೆ.

ಸ್ಮರಣ ಸಂಚಿಕೆ

ಶತಮಾನೋತ್ಸವ ನೆನಪಿನಲ್ಲಿ ಸ್ಮರಣ ಸಂಚಿಕೆ ಬಿಡುಗಡೆಯಾಗಲಿದ್ದು ಈ ಸಂಚಿಕೆಯ ಜವಾಬ್ದಾರಿಯನ್ನು ಶಿಕ್ಷಕಿ ಸ್ವಾತಿ ಹೊತ್ತುಕೊಂಡಿದ್ದಾರೆ.ಇವರೊಂದಿಗೆ ಸಹಕರಿಸಲು ಶಿಕ್ಷಕರಾದ ಜಯಕುಮಾರ್, ಮಹೇಶ್ ಪಿಳ್ಳೆ, ಶಿಕ್ಷಕಿ ಮಂಜುಳ ಹಾಗೂ ಸುನೀತಾರವರು ಸಾಥ್ ನೀಡಿದ್ದು ಈಗಾಗಲೇ ಸಂಚಿಕೆಗೆ ಬೇಕಾದ ಆಯ್ದ ಬರಹಗಳು,ಲೇಖನಗಳು,ಚಿತ್ರಗಳು ಸೇರಿದಂತೆ ಧಾನಿಗಳ, ಶುಭ ಕೋರುವವರ ಜಾಹಿರಾತನ್ನು ಪಡೆದು ಕಾರ್ಯಕ್ರಮದಲ್ಲಿ ಸ್ಮರಣ ಸಂಚಿಕೆ ಬಿಡುಗಡೆಯಾಗಲಿದೆ.

ಹಿರಿಯರ ಸೇವೆ

ಶಾಲೆಯ ಹಳೆಯ ವಿದ್ಯಾರ್ಥಿಯಾಗಿ ಹಿರಿಯರಾಗಿರುವ ಕೃಷ್ಣರವರು ತಮ್ಮ ವಯಸ್ಸನ್ನು ಲೆಕ್ಕಿಸದೆ ಜಿಲ್ಲೆಯ ಉದ್ದಗಲಕ್ಕೂ ನೆಲೆಸಿರುವ; ಈ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದವರನ್ನು ಗುರುತಿಸಿ ಅವರ ನಿವಾಸಗಳಿಗೆ ತೆರಳಿ ಶತಮಾನೋತ್ಸವ ಯಶಸ್ವಿಗೆ ಸಂಪನ್ಮೂಲ ಕ್ರೊಢೀಕರಣ ಮಾಡುವದರೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಮನವಿ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಖುದ್ದು ಆಹ್ವಾನ ನೀಡಿದ್ದಾರೆ.

ಕಾರ್ಯಧ್ಯಕ್ಷರ ಸೇವೆ

ಕಾರ್ಯಕ್ರಮದ ಯಶಸ್ವಿಗೆ ಎಲ್ಲರನ್ನು ವಿಶ್ವಾಸಕ್ಕೆ ಪಡೆದು ಸರಿ ತಪ್ಪುಗಳನ್ನು ಸರಿದೂಗಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ತಮ್ಮ ಮನೆಯ ಕೆಲಸಗಳನ್ನು ಬದಿಗೊತ್ತಿ ನಿರಂತರ ಸೇವೆ ನೀಡುತ್ತಾ ಶತಮಾನೋತ್ಸವದ ಕಾರ್ಯಕ್ರಮಕ್ಕೆ ಹಗಲಿರುಳು ಶ್ರಮಿಸುತ್ತಿರುವ ಶತಮಾನೋತ್ಸವ ಸಮಿತಿಯ ಕಾರ್ಯಧ್ಯಕ್ಷರಾಗಿರುವ ರಾಮಕೃಷ್ಣರವರು ಎಲ್ಲಾರನ್ನು ಒಗ್ಗಟ್ಟಾಗಿ ಸೇರಿಸುವ ಮೂಲಕ ಊಟ,ಉಪಚಾರ,ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಅಚ್ಚುಕಟ್ಟು ಕಾರ್ಯಕ್ರಮದ ಯಶಸ್ವಿಗೆ ದುಡಿಯುತ್ತಿದ್ದಾರೆ.

ನೆನಪಿನಲ್ಲಿಡುವಂತಹ ಕಾರ್ಯಕ್ರಮ

ಶತಮಾನೋತ್ಸವ ಸಮಿತಿಯ ಕಾರ್ಯದರ್ಶಿಯಾಗಿ ಶಾಲೆಯ ಮುಖ್ಯ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ಹೆಚ್.ಎಂ.ಪಾರ್ವತಿ ಶಿಕ್ಷಕರನ್ನೊಳಗೊಂಡಂತೆ ಅಧಿಕಾರಿಗಳನ್ನು ನಾಡಿನ ಹಿರಿಯ ನಾಗರಿಕರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿ, ಬಿಡುವಿಲ್ಲದಂತೆ ಶ್ರಮ ವಹಿಸುತ್ತಿದ್ದಾರೆ.ಅನೇಕ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳಿಗೆ ಶಿಕ್ಷಕರ ಸಹಕಾರ ಪಡೆದು ಆಯೋಜಿಸಿದ್ದಾರೆ. ಸದಾ ನೆನಪಿನಲ್ಲಿಡುವಂತಹ ಕಾರ್ಯಕ್ರಮ ಆಯೋಜಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಾರ್ಯಕ್ರಮಗಳು

ತಿತಿಮತಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಶತಮಾನೋತ್ಸವ ಕಾರ್ಯಕ್ರಮವು ತಾ. 23 ಹಾಗೂ 24 ರಂದು ನಡೆಯಲಿದೆ. ತಾ. 23 ರಂದು ಕ್ರೀಡೋತ್ಸವ ನಡೆಯಲಿದೆ. ತಿತಿಮತಿ ಭಾಗದ ಪ್ರಾಥಮಿಕ, ಪ್ರೌಢ, ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ, ಹಳೇಯ ವಿದ್ಯಾರ್ಥಿ, ಸಾರ್ವಜನಿಕರಿಗೆ ಹಾಗೂ ಅಧ್ಯಾಪಕ ವೃಂದದವರಿಗೆ ವಿವಿಧ ಆಟೋಟಗಳು ನಡೆಯಲಿದೆ. ಬೆ. 10 ಕ್ಕೆ ಧ್ವಜಾರೋಹಣ, ಪಥ ಸಂಚಲನ, ಕ್ರೀಡಾಜ್ಯೋತಿ, ವಿದ್ಯಾರ್ಥಿಗಳ ಕವಾಯತು ನಡೆಯಲಿದೆ. ಕ್ರೀಡೋತ್ಸವವನ್ನು ಅಂತರಾಷ್ಟ್ರೀಯ ಕ್ರೀಡಾಪಟು ಪಾರುವಂಡ ಸಿ. ಸುಗುಣ ಪೊನ್ನಪ್ಪ ಉದ್ಘಾಟಿಸಲಿದ್ದಾರೆ. ಮಾಜಿ ರಾಷ್ಟ್ರೀಯ ಆಟಗಾರ ಚೆಪ್ಪುಡೀರ ಕಾರ್ಯಪ್ಪ, ನೌಕಾಪಡೆ (ನಿ) ಕಮಾಂಡೊ ಸಿ.ಎಂ ಬೆಳ್ಯಪ್ಪ ಬಹುಮಾನ ವಿತರಿಸಿದ್ದಾರೆ ಎಂದರು.

ತಾ. 24 ರಂದು ಶತಮೋತ್ಸವದ ಮುಖ್ಯ ಕಾರ್ಯಕ್ರಮ ನಡೆಯಲಿದ್ದು, ಬೆ. 9.30 ಕ್ಕೆ ಶೋಭಾಯಾತ್ರೆ ಮೂಲಕ ಆರಂಭಗೊಳ್ಳಲಿದೆ. ಈ ಸಂದರ್ಭ ಸಭಾ ಕಾರ್ಯಕ್ರಮ, ಶಾಲಾ ವರದಿ, ಸ್ಮರಣ ಸಂಚಿಕೆ ಬಿಡುಗಡೆ, ನಿವೃತ್ತ ಶಿಕ್ಷಕರಿಗೆ ಸನ್ಮಾನ ಇಂತಹವುಗಳು ನಡೆಯಲಿವೆ. ಸಭಾ ಕಾರ್ಯಕ್ರಮದಲ್ಲಿ ಶತಮಾನೋತ್ಸವ ಸಮಿತಿ ಗೌರವ ಅಧ್ಯಕ್ಷೆ ಸುಮ ವಸಂತ್, ಶಾಸಕ ಕೆ.ಜಿ. ಬೋಪಯ್ಯ, ವಿಶೇಷ ಅತಿಥಿಗಳಾಗಿ ಉಸ್ತುವಾರಿ ಸಚಿವ ಸಾ.ರಾ. ಮಹೇಶ್, ಸಂಸದ ಪ್ರತಾಪ್ ಸಿಂಹ, ಶಾಸಕರುಗಳಾದ ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ,ವಿಧಾನ ಪರಿಷತ್ ಸದಸ್ಯರುಗಳಾದ ಕ್ಷೇತ್ರ ಸದಸ್ಯ ಎಸ್. ಎಲ್. ಬೋಜೇಗೌಡ, ನೈರುತ್ಯ ಪದವಿಧರ ಕ್ಷೇತ್ರದ ಸದಸ್ಯ ಆಯನೂರು ಮಂಜುನಾಥ್, ಜಿ. ಪಂ. ಅಧ್ಯಕ್ಷ ಬಿ.ಎ. ಹರೀಶ್, ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಕಿರಣ್ ಕಾರ್ಯಪ್ಪ, ಜಿ. ಪಂ. ಸದಸ್ಯೆ ಪಿ.ಆರ್. ಪಂಕಜ, ತಾ.ಪಂ ಅಧ್ಯಕ್ಷೆ ಸ್ಮಿತಾ ಪ್ರಕಾಶ್, ತಾ. ಪಂ. ಸದಸ್ಯೆ ಆಶಾ ಜೇಮ್ಸ್, ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಸಿಇಒ ಲಕ್ಷ್ಮಿಪ್ರಿಯಾ, ಶಿಕ್ಷಣ ಇಲಾಖೆ ಉಪನಿರ್ದೇಶಕ ಪೆರಿಗ್ರಿನ್ ಮಚಾಡೋ, ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲಬೀಳಗಿ, ಶತಮಾನೋತ್ಸವ ಸಮಿತಿ ಕಾರ್ಯಾಧ್ಯಕ್ಷ ಚೆಪ್ಪುಡೀರ ರಾಮಕೃಷ್ಣ ಪಾಲ್ಗೊಳ್ಳಲಿದ್ದಾರೆ.

-ಹೆಚ್.ಕೆ.ಜಗದೀಶ್, ಸುದ್ದಿ ಪುತ್ರ