ಸುಂಟಿಕೊಪ್ಪ, ಫೆ.22: ಸಿದ್ದಾಪುರ ಎಮ್ಮೆಗುಂಡಿಯಲ್ಲಿ ಅಪ್ರಾಪ್ತ ಬಾಲಕಿಯ ಹತ್ಯೆಯನ್ನು ಹೊರ ರಾಜ್ಯದ ಕಾರ್ಮಿಕರು ಹತ್ಯೆ ಮಾಡಿರುವದನ್ನು ಖಂಡಿಸಿ ಸುಂಟಿಕೊಪ್ಪದ ವಿವಿಧ ರಾಜಕೀಯ ಪಕ್ಷದವರು ಕಾರ್ಮಿಕ ಸಂಘಟನೆಯವರು, ಸಂಘ ಸಂಸ್ಥೆಯವರು ಒಗ್ಗೂಡಿ ಮೃತ ಬಾಲಕಿಯ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಕೋದಂಡರಾಮ ಮಂದಿರದಿಂದ ಶ್ರೀಪುರಂ ಅಯ್ಯಪ್ಪ ದೇವಾಲಯದವರೆಗೆ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಮಹಿಳೆಯರು, ಪುರುಷರು, ಅಸ್ಸಾಂ, ಪಶ್ಚಿಮ ಬಂಗಾಳ ಮೂಲದ ಕಾರ್ಮಿಕರನ್ನು ತೊಲಗಿಸಿ ಅಪ್ರಾಪ್ತ ಬಾಲಕಿಯ ಕುಟುಂಬಸ್ಥರಿಗೆ ನ್ಯಾಯಕೊಡಿ ಎಂದು ಘೋಷಣೆ ಕೂಗುತ್ತಾ ಕನ್ನಡ ವೃತ್ತದಲ್ಲಿ ಸಾರ್ವಜನಿಕ ಸಭೆ ನಡೆಸಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಬಿ.ಭಾರತೀಶ್ ಮಾತನಾಡಿ ಕರ್ನಾಟಕದಲ್ಲಿ ಅದರಲ್ಲೂ ಕೊಡಗಿನಲ್ಲಿ ಹೊರ ರಾಜ್ಯದಿಂದ ಬಂದ ಕಾರ್ಮಿಕರು ಬದುಕನ್ನು ರೂಪಿಸಿಕೊಂಡಿದ್ದಾರೆ. ಅದಕ್ಕೆ ನಮ್ಮ ವಿರೋಧವಿಲ್ಲ ಆದರೆ ತೋಟ ಮಾಲೀಕರುಗಳು ಅವರುಗಳ ಆಧಾರ್‍ಕಾರ್ಡು, ಮತದಾರರ ಗುರುತಿನ ಚೀಟಿ ಪಡೆದುಕೊಂಡು ಕೆಲಸ ನೀಡಬೇಕೆಂದು 12 ವರ್ಷದಿಂದ ಹೋರಾಟ ಮಾಡಿದರೂ ಬೆಳೆಗಾರರಿಂದ ಸಕರಾತ್ಮಕ ಸ್ಪಂದನ ಸಿಗದೆ ಇರುವದರಿಂದ ಬಾಂಗ್ಲಾ ಮೂಲದಿಂದ ಬಂದವರಿಗೂ ಇಲ್ಲಿ ಮತದಾರರ ಗುರುತಿನ ಚೀಟಿ, ಆಧಾರಕಾರ್ಡು ಲಭ್ಯವಾಗಿದೆ ಇದರಿಂದ ದುರ್ಘಟನೆ ಸಂಭವಿಸುತ್ತಿದೆ. ಈ ಬಗ್ಗೆ ಸರಕಾರ, ಜಿಲ್ಲಾಡಳಿತ ಎಚ್ಚೆತ್ತುಕೊಳ್ಳದಿದ್ದಲ್ಲಿ ಇನ್ನಷ್ಟು ಅನಾಹುತ ಸಂಭವಿಸಲಿದೆ ಎಂದೂ ಹೇಳಿದರು.

ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ಮಾಜಿ ಜಿ.ಪಂ. ಸದಸ್ಯ ವಿ.ಪಿ.ಶಶಿಧರ್ ಮಾತನಾಡಿ ಬಡ ತೋಟ ಕಾರ್ಮಿಕರ ಮಗಳನ್ನು ಕ್ರೂರವಾಗಿ ಹತ್ಯೆ ನಡೆಸಿದವರಿಗೆ ಕಠಿಣ ಶಿಕ್ಷೆಯಾಗಬೇಕು; ಇನ್ನಾದರೂ ರಾಜ್ಯ ಸರಕಾರ, ಜಿಲ್ಲಾಡಳಿತ, ಶಾಸಕರು, ಜನಪ್ರತಿನಿಧಿಗಳು ಈ ಕುಟುಂಬದವರಿಗೆ ಏನೇನೂ ಸೌಲಭ್ಯ ದೊರಕಿಸಿ ಕೊಡದಿರುವದು ಮಾನವೀಯ ಸಮಾಜ ತಲೆತಗ್ಗಿಸುವಂತಾಗಿದೆ. ಕೊಡಗಿನ ಸಾಸ್ಥ್ಯ ಕೆಡಿಸುವವರನ್ನು ಮಟ್ಟ ಹಾಕುವ ಕೆಲಸ ಆಗಬೇಕು ತೋಟ ಮಾಲೀಕರು ಸ್ವಾರ್ಥಕ್ಕಾಗಿ ಕಡಿಮೆ ಕೂಲಿಗೆ ಅಸ್ಸಾಂ, ಬಂಗಾಳದ ಕಾರ್ಮಿಕರನ್ನು ಸೇರಿಸುವಾಗ ಪೂರ್ವಾಪರ ವಿಚಾರಿಸಬೇಕು ಎಂದು ಹೇಳಿದರು.

ಮುಸ್ಲಿಂ ಸಮಾಜದ ಉಸ್ತಾದ್ ಹಮೀದ್ ಮೌಲ್ವಿ ಮಾತನಾಡಿ, ಶಾಂತಿ ಸೌಹಾರ್ಧತೆಗೆ ನೆಲೆಬೀಡಾದ ಕೊಡಗಿನಲ್ಲಿ ಅಪ್ರಾಪ್ತ ಶಾಲಾ ಬಾಲಕಿಯನ್ನು ಆತ್ಯಾಚಾರ ಮಾಡಿ ಹತ್ಯೆ ಮಾಡಿದ ಕೊಲೆಗಡುಕರನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕು; ಎಲ್ಲಾ ಸಮಾಜದವರು ಇದಕ್ಕೆ ಬೆಂಬಲಿಸಬೇಕೆಂದರು.

ತಾ.ಪಂ.ಸದಸ್ಯರುಗಳಾದ ಓಡಿಯಪ್ಪನ ವಿಮಾಲಾವತಿ, ಹರದೂರು ಕ್ಷೇತ್ರ ಸದಸ್ಯೆ ಮಣಿ ಧರ್ಮು, ಗ್ರಾ.ಪಂ.ಉಪಾಧ್ಯಕ್ಷ ಪಿ.ಆರ್.ಸುಕುಮಾರ್, ಕೆ.ಎ.ಉಸ್ಮಾನ್, ಎಂ.ಎ.ಉಸ್ಮಾನ್ ಈ ಪ್ರಕರಣವನ್ನು ಖಂಡಿಸಿದರಲ್ಲದೆ ಆರೋಪಿಗಳನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕೆಂದು ಒತ್ತಾಯಿಸಿದರು.

ಜೀಪ್ ಚಾಲಕ ಗರಗಂದೂರು ನಿವಾಸಿ ಸುರೇಶ್, ಜಿಲ್ಲಾ ಕಾರ್ಮಿಕ ಹಾಗೂ ಚಾಲಕರ ಸಂಘದ ಅಧ್ಯಕ್ಷ ರಮೇಶ್ ರೈ, ನಾಗೇಶ್ ಪೂಜಾರಿ, ಎಂ.ಆರ್.ಶಶಿಕುಮಾರ್, ಸುನಿಲ್ ಕುಮಾರ್, ಅಣ್ಣಾ ಶರೀಫ್ ಇದ್ದರು. ಮಾನವ ಸರಪಳಿ ನಿರ್ಮಿಸಿ 5 ನಿಮಿಷಗಳ ಕಾಲ ರಸ್ತೆ ತಡೆ ನಡೆಸಲಾಯಿತು. ಬಿ.ಕೆ. ಪ್ರಶಾಂತ್ ಕೊಕಾ ಸ್ವಾಗತಿಸಿ, ನಿರೂಪಿಸಿದರು.