ಮಡಿಕೇರಿ, ಫೆ. 22: ಎರಡು ತಲೆ ಹಾವು ಮಾರಾಟ ಯತ್ನದ ಪ್ರಕರಣವೊಂದನ್ನು ಹುಣಸೂರು ನಗರ ಪೊಲೀಸರು ಬೇಧಿಸಿದ್ದಾರೆ. ಈ ಕೃತ್ಯಕ್ಕೆ ಸಂಬಂಧಿಸಿದಂತೆ ಕೊಡಗಿನ ಮೂವರು ವ್ಯಕ್ತಿಗಳೂ ಭಾಗಿಯಾಗಿದ್ದು, ಇವರು ಸೇರಿದಂತೆ ಒಟ್ಟು ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ರಾಷ್ಟ್ರೀಯ ಉದ್ಯಾನವನ ನಾಗರಹೊಳೆ ಕಾಡಿನಿಂದ ಹಿಡಿದು ತಂದ ಎರಡು ತಲೆ ಹಾವುಗಳನ್ನು ಮಾರಲು ಆರೋಪಿಯೋರ್ವ ಯತ್ನಿಸುತ್ತಿದ್ದಾಗ ಆತನನ್ನು ಬಂಧಿಸಿ ಒಂದು ಗೂಡ್ಸ್ ವಾಹನ ಹಾಗೂ ಒಂದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿತ್ತು. ಈ ಬಗ್ಗೆ ತನಿಖೆ ಮುಂದುವರಿದಾಗ ಇತರರು ಸೆರೆಯಾಗಿದ್ದಾರೆ. ಮಾಲ್ದಾರೆಯ ಅಭಿಷೇಕ್, ಮಡಿಕೇರಿ ಸನಿಹದ ಕೆ. ನಿಡುಗಣೆಯ ಕಾವೇರಪ್ಪ ಹಾಗೂ ಸೋಮಯ್ಯ ಬಂಧನಕ್ಕೊಳಗಾದ ಕೊಡಗಿನ ವ್ಯಕ್ತಿಗಳಾಗಿದ್ದಾರೆ.
ಹೆಚ್.ಡಿ. ಕೋಟೆಯ ಅರವಿಂದ್ (30) ಎಂಬಾತ ಮಾಲು ಸಹಿತ ಪೊಲೀಸರಿಗೆ ಸಿಕ್ಕಿಬಿದ್ದಿದ್ದ ಬಳಿಕ ಈ ಜಾಲದ ಮಾಹಿತಿ ಹೊರಬಿದ್ದಿದೆ. ನಾಗರಹೊಳೆಯ ವೀರನ ಹೊಸಳ್ಳಿ ಕಾಡಿನಲ್ಲಿ ಎರಡು ತಲೆ ಹಾವು ಹಿಡಿದು ಇದರನ್ನು ಮಾಲ್ದಾರೆಯ ಅಭಿಷೇಕ್ ಎಂಬಾತನ ಮೂಲಕ ಮಾರಾಟ ಮಾಡಲು ಬಂಧಿತ ಅರವಿಂದ ಯತ್ನಿಸಿದ್ದಾನೆ. ಈ ಕೃತ್ಯಕ್ಕೆ ಕಾವೇರಪ್ಪ ಹಾಗೂ ಸೋಮಯ್ಯ ‘ಸಾಥ್’ ನೀಡಿದ್ದು, ಹಾವನ್ನು ಕೇರಳದವರಿಗೆ ರೂ. 10 ಲಕ್ಷಕ್ಕೆ ಮಾರಾಟ ಮಾಡಲು ಪ್ರಯತ್ನ ನಡೆದಿತ್ತು. ಈ ವಿಚಾರವಾಗಿ ಹುಣಸೂರು ಹೊರ ವಲಯದ ಹಾಳಗೆರೆ ಸನಿಹ ವ್ಯವಹಾರ ಕುದುರಿಸುವಾಗ ಗಲಾಟೆಯಾಗಿದ್ದು, ಈ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು ಎನ್ನಲಾಗಿದೆ. ಕಾರ್ಯಾಚರಣೆಯಲ್ಲಿ ಈ ಹಿಂದೆ ಕುಶಾಲನಗರ, ಗೋಣಿಕೊಪ್ಪದಲ್ಲಿ ಠಾಣಾಧಿಕಾರಿಯಾಗಿದ್ದ ಎಸ್‍ಐ ಮಹೇಶ್ ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದಾರೆ.
- ಟಿ.ಜಿ. ಸತೀಶ್