ಗೋಣಿಕೊಪ್ಪಲು, ಫೆ. 22 : ಪಶ್ಚಿಮ ಬಂಗಾಳದ ವಲಸೆ ಕಾರ್ಮಿಕರಿಂದ ಅತ್ಯಾಚಾರ ಮತ್ತು ಹತ್ಯೆಗೆ ಒಳಗಾದ ವಿದ್ಯಾರ್ಥಿನಿ ಸಂಧ್ಯಾಳ ಕುಟುಂಬಕ್ಕೆ ಸೂಕ್ತ ನಷ್ಟ ಪರಿಹಾರ ನೀಡಬೇಕೆಂದು ವಿವಿಧ ಸಂಘಗಳು ಒತ್ತಾಯಿಸಿವೆ.
ಇಲ್ಲಿನ ರವಿಕಿರಣ ಕಾಂಪ್ಲೆಕ್ಸ್‍ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತುಳು ಜನಾಂಗ ಸಂಘ, ತಮಿಳು ಸಂಘ ಸಂಧ್ಯಾ ಹೋರಾಟ ಸಮಿತಿ, ಮೊಗೇರ ಸಮಾಜ ಮತ್ತು ಬಿ.ಎಂ.ಎಸ್. ಸಂಘಗಳು ಈ ವಿಚಾರವಾಗಿ ಒತ್ತಾಯಿಸಿದವು.
ಈ ಸಂದರ್ಭ ಮಾತನಾಡಿದ ಬಿ.ಎಂ.ಎಸ್. (ಭಾರತೀಯ ಮಜ್ದೂರ್) ಸಂಘದ ಜಿಲ್ಲಾ ಅಧ್ಯಕ್ಷ ಸೂದನ ಸತೀಶ್, ಬಡ ಕೂಲಿ ಕಾರ್ಮಿಕ ಮಗಳ ಮೇಲೆÀ ಸಾಮೂಹಿಕ ಅತ್ಯಾಚಾರವಾಗಿ 15 ದಿನ ಕಳೆದರೂ, ಸರ್ಕಾರ ಯುವತಿಯ ಮನೆಯವರಿಗೆ ಯಾವದೇ ಪರಿಹಾರ ನೀಡಿಲ್ಲ. ಟಾಟಾ ಸಂಸ್ಥೆಯೂ ಈ ಬಗ್ಗೆ ನಿರ್ಲಕ್ಷ ದೋರಣೆ ಹೊಂದಿದೆ. ಸರ್ಕಾರ ಯುವತಿಯ ಕುಟುಂಬಕ್ಕೆ ರೂ. 25 ಲಕ್ಷ ಪರಿಹಾರ ಧನ ನೀಡುವಂತೆ ಮತ್ತು ಟಾಟಾ ಸಂಸ್ಥೆಯೂ ಹತ್ತು ಲಕ್ಷ ಪರಿಹಾರ ಧನ ನೀಡಬೇಕೆಂದು ಒತ್ತಾಯಿಸಿದರು. ತಾ. 25 ರಂದು ಪಾಲಿಬೆಟ್ಟ ಟಾಟಾ ಕಾಫಿ ಸಂಸ್ಥೆಯ ಮುಂಭಾಗದಲ್ಲಿ ಟಾಟಾ ಕಾಫಿ ಚಲೋ ಹೋರಾಟ ನಡೆಸುವದಾಗಿ ಹೇಳಿದರು. ಬೆಳಿಗ್ಗೆ 11 ಗಂಟೆಗೆ ಪಾಲಿಬೆಟ್ಟ ಗಣಪತಿ ದೇವಸ್ಥಾನ ಮುಂಭಾಗದಿಂದ ಮೆರವಣಿಗೆ ಮುಖಾಂತರ ಪ್ರತಿಭಟಿಸಲಾಗುವದು. ಇದಕ್ಕೆ ವಿವಿಧ ಸಂಘ ಸಂಸ್ಥೆಗಳು ಬೆಂಬಲ ಸೂಚಿಸಿವೆ ಎಂದು ಮಾಹಿತಿ ನೀಡಿದರು.
ತಮಿಳು ಸಂಘದ ಅಧ್ಯಕ್ಷ ತಿರುಮಲ್ಲೇಶ್ ಮಾತನಾಡಿ, ಜಿಲ್ಲಾದ್ಯಾಂತ ಅಸ್ಸಾಂ ಹಾಗೂ ಬಾಂಗ್ಲ ವಲಸಿಗರು ತೋಟ ಕಾರ್ಮಿಕರಾಗಿದ್ದಾರೆ. ಆದರೆ ಇವರ ಬಳಿ ಯಾವದೇ ದಾಖಲಾತಿಗಳಿಲ್ಲ. ಹೀಗಾಗಿ ಈ ವಲಸಿಗರಿಂದ ಜಿಲ್ಲೆಯಲ್ಲಿ ದುರ್ಘಟನೆಗಳು ನಡೆಯಲು ಕಾರಣವಾಗುತ್ತಿದೆ. ಯಾವದೇ ಅಂಜಿಕೆ ಇಲ್ಲದೆ ಕೊಲೆ, ಅತ್ಯಾಚಾರಗಳಿಗೆ ಅಸ್ಸಾಂ ಮೂಲದ ವಲಸಿಗರು ಮುಂದಾಗುತ್ತಿದ್ದಾರೆ. ಸಿದ್ದಾಪುರದಲ್ಲಿ ನಡೆದ ಸಂಧ್ಯಾ ಅತ್ಯಾಚಾರ ಕೊಲೆ ಇವರ ವಿಕೃತ ಮುಖವಾಡವನ್ನು ಬಯಲಿಗೆಳೆದಿದೆ. ಹೀಗಾಗಿ ಇಂತಹ ಕ್ರೂರ ಮನಸ್ಥಿತಿಯ ಬಗ್ಗೆ ಜನತೆ ಎಚ್ಚರವಾಗಿರುವದು ಒಳಿತು ಎಂದು ಹೇಳಿದರು. ತೋಟ ಮಾಲೀಕರು ಈ ಬಗ್ಗೆ ಎಚ್ಚರ ವಹಿಸಿ ಮುಂದಿನ ದಿನಗಳಲ್ಲಿ ಸಂಧ್ಯಾ ಹತ್ಯೆ ನಡೆದಂತೆ ಯಾವದೆ ಘಟನೆಗಳು ಮರುಕಳಿಸದಂತೆ ಜಾಗೃತರಾಗಬೇಕಾಗಿದೆ. ಹೀಗಾಗಿ ದಾಖಲೆ ಹೊಂದಿರುವ ಕಾರ್ಮಿಕರನ್ನು ಮಾತ್ರ ತೋಟದ ಮಾಲೀಕರು ಕೆಲಸಕ್ಕೆ ಬಳಸಿಕೊಳ್ಳಬೇಕೆಂದು ಸಲಹೆ ನೀಡಿದರು.
ತುಳು ಜನಾಂಗ ಒಕ್ಕೂಟದ ಅಧ್ಯಕ್ಷ ಸುರೇಶ್ ಮಾತನಾಡಿ, ಜಿಲ್ಲಾಡಳಿತ ಅಸ್ಸಾಂ ಹಾಗೂ ಬಾಂಗ್ಲ ಮೂಲದ ಕಾರ್ಮಿಕರನ್ನು ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು.
ಭಾರತೀಯ ಜನತಾ ಪಕ್ಷದ ಖಜಾಂಜಿ ಸಿ.ಎಂ. ಗಿರೀಶ್ ಮಾತನಾಡಿ, ಸ್ಥಳೀಯ ಶಾಸಕರು ಘಟನೆಯ ಸ್ಥಳಕ್ಕೆ ಎರಡೆರಡು ಬಾರಿ ಭೇಟಿ ನೀಡಿ ಸಾಂತ್ವನ ಹೇಳಿದರು. ಆದರೆ ಉಸ್ತುವಾರಿ ಸಚಿವರು ಇತ್ತ ಹೆಜ್ಜೆ ಇಟ್ಟಿಲ್ಲ. ಇವರ ಈ ನಿಲುವು ಬಡವ, ಮೇಲ್ವರ್ಗ ಎಂಬ ತಾರತಮ್ಯವನ್ನು ಸೂಚಿಸುತ್ತದೆ ಎಂದು ಆರೋಪಿಸಿದರು.
ಗೋಷ್ಠಿಯಲ್ಲಿ ಮೊಗೇರ ಸಮಾಜದ ಅಧ್ಯಕ್ಷ ಪಿ.ಸಿ.ರಾಜು, ಸಂಧ್ಯಾ ಸಾರ್ವಜನಿಕ ಹೋರಾಟ ಸಮಿತಿ ಸಂಚಾಲಕ ರತೀಶ್ ರೈ ಉಪಸ್ಥಿತರಿದ್ದರು.