ಮಡಿಕೇರಿ, ಫೆ. 21: ಮಡಿಕೇರಿ ನಗರಸಭೆಯ ಆಡಳಿತಾವಧಿ ಅಂತಿಮ ಘಟ್ಟದಲ್ಲಿದೆ. ಮಾರ್ಚ್ 13ಕ್ಕೆ ಹಾಲಿ ಇರುವ ಆಡಳಿತ ಪೂರ್ಣಗೊಳ್ಳಲಿದೆ. ಆದರೆ ನಗರ ವ್ಯಾಪ್ತಿಯಲ್ಲಿ ಹಲವು ಸಮಸ್ಯೆಗಳು ಜೀವಂತವಾಗಿಯೆ ಉಳಿದುಕೊಂಡಿವೆ. ಅಧಿಕಾರಾವಧಿ ಮುಗಿಯಲು 20 ದಿನ ಮಾತ್ರ ಬಾಕಿಯಿದ್ದು, ಐದು ವರ್ಷಗಳಲ್ಲಿ ಪೂರ್ಣಗೊಳ್ಳದ ಕೆಲಸಗಳನ್ನು ಇನ್ನುಳಿದ ಕೆಲವೇ ಕೆಲವು ದಿನಗಳಲ್ಲಿ ನಗರಸಭೆ ಮಾಡಿ ತೋರಿಸಲಿದೆ! ಎಂದುಕೊಂಡರೆ ಅದು ನಮ್ಮ ದಡ್ಡತನ!
ಸದ್ಯದಲ್ಲಿಯೇ ನಗರಸಭೆ ಚುನಾವಣೆಯೂ ಘೋಷಣೆಯಾಗಲಿದ್ದು, ಚುನಾವಣಾ ನೀತಿ ಸಂಹಿತೆ ಜಾರಿಯಾದರೆ ಅಲ್ಲಿಗೆ ಮಡಿಕೇರಿಯ ಅಭಿವೃದ್ಧಿ ಕೆಲಸಗಳಿಗೆ ಮುಕ್ತಿ ದೊರಕಿದಂತೆಯೇ!ಕುಂಡಾಮೇಸ್ತ್ರಿ ಕುಂಟುತಿದೆ!ಮಡಿಕೇರಿ ನಗರಕ್ಕೆ ಕುಡಿಯುವ ನೀರನ್ನು ಕಲ್ಪಿಸುವ ನಿಟ್ಟಿನಲ್ಲಿ ನಗರಸಭೆ ಕೈಗೆತ್ತಿಕೊಂಡ ಕುಂಡಾಮೇಸ್ತ್ರಿ ಕುಡಿಯುವ ನೀರಿನ ಯೋಜನೆ ಇಂದಿಗೂ ಕುಂಟುತ್ತಲೇ ಸಾಗಿದೆ. ಮಡಿಕೇರಿ ನಗರಕ್ಕೆ ನೀರು ಸರಬರಾಜು ಮಾಡಲು ಕೈಗೊಳ್ಳಬೇಕಾದ ವ್ಯವಸ್ಥೆಗಳು ಇನ್ನು ನಡೆದಿಲ್ಲ. ಬೇಸಿಗೆಯಲ್ಲಿ ನೀರನ್ನು ಸಂಗ್ರಹಿಸಿಡುವ ನಿಟ್ಟಿನಲ್ಲಿ ಚೆಕ್ ಡ್ಯಾಂ ನಿರ್ಮಿಸುವ ಚಿಂತನೆಯಿತ್ತಾದರೂ ಅದು ಕಾರ್ಯಗತಗೊಂಡಿಲ್ಲ. ಇದೀಗ ಸ್ಪಾಂಡ್‍ಬಂಡ್ ಅಳವಡಿಸಲಾಗುತ್ತಿದ್ದು, ಇದು ಎಷ್ಟರಮಟ್ಟಿಗೆ ಸಫಲತೆ ಕಾಣುತ್ತದೆ ಎಂಬ ಬಗ್ಗೆ ಖಚಿತತೆ ಇಲ್ಲ.
ಕುಂಡಾಮೇಸ್ತ್ರಿಯಿಂದ ಹರಿದು ಬರುವ ನೀರು ಕೂಟು ಹೊಳೆ ತಲಪಲಿದ್ದು, ಕೂಟು ಹೊಳೆಯಲ್ಲಿ ಇದುವರೆಗೂ ಹೂಳೆತ್ತದ ಕಾರಣ ಅಲ್ಲಿ ನೀರು ಎಷ್ಟು ದಿನ ಸಂಗ್ರಹಿಸಲ್ಪಡುತ್ತದೆ ಎಂಬ ಬಗ್ಗೆ ಊಹಿಸಲಸಾಧ್ಯ. ದಿನೆ ದಿನೇ ಬಿಸಿಲಿನ ಬೇಗೆ ಹೆಚ್ಚಾಗುತ್ತಿದೆ. ಇನ್ನೆರಡು ತಿಂಗಳಲ್ಲಿ ಬಿಸಿಲ ತಾಪ ಮತ್ತಷ್ಟು ಏರಿಕೆಯಾಗಲಿದ್ದು, ಕೋಟಿಗಟ್ಟಲೇ ಹಣ ವ್ಯಯಿಸಿ ಕೈಗೆತ್ತಿಕೊಂಡ ಕುಂಡಾಮೇಸ್ತ್ರಿ ಯೋಜನೆ ಇನ್ನುಳಿದಿರುವ 21 ದಿನದಲ್ಲಿ ಸದ್ಬಳಕೆಯಾಗುವದು ಕನಸಿನ ಮಾತು!
ಯುಜಿಡಿ ‘ಟ್ರಾಜಿಡಿ’
ಇನ್ನು ಮಡಿಕೇರಿ ನಗರ ವ್ಯಾಪ್ತಿಯಲ್ಲಿ ನಡೆದ ಯುಜಿಡಿ (ಒಳಚರಂಡಿ) ಕಾಮಗಾರಿಯ ಕಥೆ ಮಂಜಿನ ನಗರಿಯ ಮತ್ತೊಂದು ವ್ಯಥೆ! ಒಳಚರಂಡಿ ಹೆಸರಿನಲ್ಲಿ ಬಹುತೇಕ ಎಲ್ಲ ರಸ್ತೆಗಳನ್ನು ಅಗೆದು ಬಗೆದು ಹಾಕಿದ ಇಲಾಖೆ ಇನ್ನು ಕೂಡ ಕೆಲಸ ಪೂರ್ಣಗೊಳಿಸಿಲ್ಲ. ನಗರಸಭೆಯ ಹಿಡಿತಕ್ಕೂ ಸಿಗದೆ ಆನೆ ನಡೆದದ್ದೇ ದಾರಿ ಎಂಬಂತೆ ನಗರ ವ್ಯಾಪ್ತಿಯಲ್ಲಿ ನಡೆದ ಯುಜಿಡಿ ಕಾಮಗಾರಿಯಿಂದಾಗಿ ಇದ್ದ ಕೆಲವು ಒಳ್ಳೆಯ ರಸ್ತೆಗಳು ಕೂಡ ಸಂಪೂರ್ಣ ಹಾಳಾಗಿದ್ದು, ಇನ್ನುಳಿದಿರುವ ಅಲ್ಪ ಅವಧಿಯಲ್ಲಿ ಯುಜಿಡಿ ಕಾಮಗಾರಿ ಪೂರ್ಣಗೊಳ್ಳುವದು; ಇದರಿಂದಾಗಿ ಹಾಳಾದ ರಸ್ತೆಗಳಿಗೆ ಕಾಯಕಲ್ಪ ಸಿಗುವದು ಎರಡೂ ಕೂಡ ಅಸಾಧ್ಯ!
ಖಾಸಗಿ ಬಸ್ ನಿಲ್ದಾಣ ಯಾವದು?
ಹೌದು ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಹೀಗೊಂದು ಪ್ರಶ್ನೆ ಎಲ್ಲರನ್ನು ಕಾಡಲಾರಂಭಿಸಿದೆ. ಮಳೆಯಿಂದ ಮಣ್ಣು ಕುಸಿದ ಹಿನ್ನೆಲೆಯಲ್ಲಿ ಹಳೆಯ ಖಾಸಗಿ ಬಸ್ ನಿಲ್ದಾಣವನ್ನು ಸಂಪೂರ್ಣ ಕೆಡವಲಾಯಿತು. ನೂತನ ಖಾಸಗಿ ಬಸ್ ನಿಲ್ದಾಣಕ್ಕೆ ಹಳೆಯ ನಿಲ್ದಾಣವನ್ನು
(ಮೊದಲ ಪುಟದಿಂದ) ಸ್ಥಳಾಂತರಿಸಲಾಗಿದೆ ಎಂದು ನಗರಸಭೆ ಹೇಳಿತಾದರೂ ನೂತನ ಬಸ್ ನಿಲ್ದಾಣದ ಬಗ್ಗೆ ಹಲವರ ಜಿಜ್ಞಾಸೆ ಇದ್ದು, ಹಿಂದಿನ ಜಿಲ್ಲಾಧಿಕಾರಿಗಳ ಒತ್ತಾಯದ ಮೇಲೆ ರಸ್ತೆ ವಿಸ್ತರಣೆ ಆರಂಭಗೊಂಡಿದೆ. ಸ್ಥಳಾಂತರವಾಗದ ಕಾರಣ ಪ್ರಯಾಣಿಕರು ಹಳೆಯ ಬಸ್ ನಿಲ್ದಾಣದಲ್ಲೇ ಬಸ್‍ಗಳಿಗಾಗಿ ಕಾದು ನಿಲ್ಲುತ್ತಿದ್ದಾರೆ. ನೂತನ ಬಸ್ ನಿಲ್ದಾಣ ಪ್ರಯಾಣಿಕರ ಪಾಲಿಗೆ ಇದ್ದೂ ಇಲ್ಲದಂತಾಗಿದ್ದು, ಸದ್ಯಕ್ಕೆ ಸ್ಥಳಾಂತರ ಕುರುಹು ಕಾಣುತ್ತಿಲ್ಲ.
ಮುಖ್ಯ ರಸ್ತೆ ಮಣ್ಣಾಗದಿದ್ದರೆ ಸಾಕು!
ಮಳೆಯ ಅವಾಂತರದಿಂದಾಗಿ ಹೊಸ ಬಸ್ ನಿಲ್ದಾಣ ಬಳಿ ಸಾಯಿ ಹಾಸ್ಟೆಲ್ ಎದುರಿನ ರಸ್ತೆಯಲ್ಲಿ ತೋಡಿಗೆ ಹೊಂದಿಕೊಂಡಂತೆ ನಿರ್ಮಿಸಲಾಗಿದ್ದ ಬೃಹತ್ ತಡೆಗೋಡೆ ಕುಸಿದಿದ್ದು, ತೋಡಿನ ಎರಡೂ ಬದಿಗಳಲ್ಲೂ ಬಹಳಷ್ಟು ಮಣ್ಣು ಕುಸಿಯಲ್ಪಟ್ಟಿದೆ. ಈ ಸ್ಥಳದಲ್ಲಿ ಮತ್ತಷ್ಟು ಮಣ್ಣು ಇನ್ನು ಕೂಡ ಕುಸಿಯುವ ಹಂತದಲ್ಲಿದೆ. ಇದನ್ನು ಸರಿಪಡಿಸುವ ಬಗ್ಗೆ ಜೆಸಿಬಿಯಲ್ಲಿ ಮಣ್ಣು ತೆಗೆಯಿಸಿ ರಾಶಿ ಹಾಕಲಾಗಿದೆ. ಮೂಲಗಳ ಪ್ರಕಾರ ಈ ತಡೆಗೋಡೆ ಪುನರ್ ನಿರ್ಮಾಣ ಕಾಮಗಾರಿಗೆ ಗುತ್ತಿಗೆದಾರರೊಬ್ಬರಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎನ್ನಲಾಗಿದ್ದು, ಕಾಮಗಾರಿ ಆರಂಭಿಸಲು ಜಿಲ್ಲಾಧಿಕಾರಿಯವರ ಅನುಮತಿಗಾಗಿ ಕಡತವನ್ನು ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.
ಅನುಮತಿ ಸಿಗುವದೆಂದು? ಕಾಮಗಾರಿ ಪ್ರಾರಂಭವಾಗುವದೆಂದು? ದೇವರೇ ಬಲ್ಲ. ಇನ್ನೆರಡು ತಿಂಗಳ ಬಳಿಕ ಮತ್ತೆ ಮಳೆಗಾಲ ಆರಂಭವಾಗಲಿದ್ದು, ಅಷ್ಟರೊಳಗೆ ಈ ಕಾಮಗಾರಿ ಪೂರ್ಣಗೊಳ್ಳದಿದ್ದರೆ ಮೇಲಿನ ಮನೆಗಳು ತೋಡಿನ ಮೇಲೆ ಮಲಗಿರುತ್ತವೆ.
ಅಶುಚಿತ್ವ-ಗುಂಡಿಬಿದ್ದ ರಸ್ತೆಗಳು
ಮಡಿಕೇರಿ ನಗರ ವ್ಯಾಪ್ತಿಯಲ್ಲಿ ಶುಚಿತ್ವದ ಕಾರ್ಯಗಳು ಕುಂಠಿತಗೊಂಡಿವೆ. ಶುಚಿತ್ವ ಕೆಲಸಗಳಿಗೆ ಅಗತ್ಯವಾಗಿ ಬೇಕಾದ ಕಾರ್ಮಿಕರೂ ಇಲ್ಲ. ಕೆಲವೊಂದು ಕಡೆಗಳಲ್ಲಿ ಮಾತ್ರ ಶುಚಿತ್ವದ ಕಾರ್ಯ ನಡೆಯುತ್ತಿದೆಯಾದರೂ ಮಡಿಕೇರಿಯ ಗಲ್ಲಿ ಗಲ್ಲಿಗಳಲ್ಲಿ ಸಾಗಿದರೆ ದುರ್ವಾಸನೆ ಮೂಗು ಮುಚ್ಚುವಂತೆ ಮಾಡುತ್ತದೆ. ನಗರದ ಕಸ ಸಂಗ್ರಹಣೆಗೆ ಕಸ ವಿಲೇವಾರಿ ಘಟಕ ಸ್ಥಾಪನೆಯಾಗಿಲ್ಲ. ಸುಬ್ರಮಣ್ಯ ನಗರದ ಗುಡ್ಡದ ಮೇಲೆ ಸುರಿಯುತ್ತಿರುವ ಕಸದ ರಾಶಿ ಕೊಳೆತು ನಾರುತ್ತಿದೆ. ರಸ್ತೆಗಳ ಸ್ಥಿತಿಯಂತೂ ಹೇಳಿ ಪ್ರಯೋಜನವಿಲ್ಲ. ಮುಖ್ಯ ರಸ್ತೆಗಳಲ್ಲಿಯೆ ಅಲ್ಲಲ್ಲಿ ಮರಣ ಗುಂಡಿಗಳು ಬಾಯ್ತೆರೆದು ನಿಂತಿದ್ದರೂ ರಿಪೇರಿ ಕೆಲಸ ನಡೆದಿಲ್ಲ. ರಸ್ತೆ ಅವ್ಯವಸ್ಥೆಯಿಂದ ವಾಹನ ಸವಾರರು, ನಾಗರಿಕರು, ವಿದ್ಯಾರ್ಥಿಗಳು ಪ್ರತಿನಿತ್ಯ ಪರದಾಡುತ್ತಿದ್ದಾರೆ.
ಮೇಲ್ಕಾಣಿಸಿದ ಸಮಸ್ಯೆಗಳು ಸ್ಯಾಂಪಲ್‍ಗಳು ಮಾತ್ರ
ಕಾಂಗ್ರೆಸ್‍ನ ಅಧ್ಯಕ್ಷರು-ಬಿಜೆಪಿಯ ಉಪಾಧ್ಯಕ್ಷರು, ಎಲ್ಲ ಪಕ್ಷಗಳ ಸದಸ್ಯರುಗಳು ಇದ್ದರೂ, ಒಗ್ಗಟ್ಟಿನಿಂದ ಕೆಲಸ ನಿರ್ವಹಿಸಿದ್ದರೆ ಆಡಳಿತದ ಕೊನೆಯ ಹಂತದಲ್ಲಿ ಈ ಸ್ಥಿತಿ ಇರುತ್ತಿರಲಿಲ್ಲ. ಇವರ ಅಧಿಕಾರಾವಧಿ ಮುಗಿದ ಬಳಿಕ ಜಿಲ್ಲಾಧಿಕಾರಿಗಳಿಗೆ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸುವ ಜವಾಬ್ದಾರಿ ಬರುತ್ತದೆ. ಆದರೆ ಅದೇ ವೇಳೆಗೆ ಲೋಕಸಭಾ ಚುನಾವಣೆ ಘೋಷಣೆ ಆಗಲಿರುವದರಿಂದ ಅವರ ಗಮನ ಅಲ್ಲಿರಬೇಕಾಗುತ್ತದೆ. ಹೊಸ ಕೆಲಸಗಳನ್ನು ಆರಂಭಿಸುವಂತಿಲ್ಲ; ಹಳೇ ಕೆಲಸಗಳು ಪೂರ್ಣಗೊಳ್ಳುವಂತಿಲ್ಲ. ಸಮಸ್ಯೆಗಳಿಗೆ ಎಂದಿನಂತೆ ಜನ ಒಗ್ಗಿಕೊಳ್ಳುತ್ತಾರೆ!
-ಉಜ್ವಲ್ ರಂಜಿತ್