ಬೆಂಗಳೂರು, 21: ಕೊಡಗಿನ ಸಂಪೂರ್ಣ ಅಭಿವೃದ್ಧಿಯತ್ತ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಆರ್. ಮಹೇಶ್ ಅವರು ಆದ್ಯ ಗಮನ ಹರಿಸಲಿ ಎಂದು ಕೊಡಗಿನ ಮಾಜಿ ಉಸ್ತುವಾರಿ ಸಚಿವರಾದ ಎಂ.ಆರ್. ಸೀತಾರಾಂ ಅವರು ಸಲಹೆಯಿ ತ್ತಿದ್ದಾರೆ. ಇಲ್ಲಿ “ಶಕ್ತಿ” ಪ್ರತಿನಿಧಿಯೊಂದಿಗೆ ಅವರು ಮಾತನಾಡುತ್ತಿದ್ದರು. ಈ ಹಿಂದಿನ ಸರಕಾರದ ಆಡಳಿತಾವಧಿಯಲ್ಲಿ ಕೊಡಗಿನ ಅನೇಕ ಅಭಿವೃದ್ಧಿ ಕಾರ್ಯಗಳ ಬಗ್ಗೆ ತಾನು ಸರಕಾರದ ಪರವಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿದ್ದರೂ ಅದರ ಮುಂದುವರಿದ ಕಾರ್ಯಗಳು ಈಗಿನ ಮೈತ್ರಿ ಸರಕಾರದಲ್ಲಿ ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು. ಮಡಿಕೇರಿಯ ಮಿನಿ ವಿಧಾನ ಸೌಧ ಕೆಲಸ ನೆನೆಗುದಿಗೆ ಬಿದ್ದಿದೆ. ಖಾಸಗಿ ಬಸ್ ನಿಲ್ದಾಣ ಕೆಲಸ ಪೂರ್ಣಗೊಂಡಿದ್ದರೂ ನಗರದಲ್ಲಿ ಅಗತ್ಯವಾದ ರಸ್ತೆ ಅಭಿವೃದ್ಧಿಯಾಗದೆ, ಏಕಮುಖ ಸಂಚಾರ ವ್ಯವಸ್ಥೆಗೊಳಿಸದೆ ಬಸ್ ನಿಲ್ದಾಣ ಉಪಯೋಗವಾಗುತ್ತಿಲ್ಲ. ವೀರಾಜಪೇಟೆಯಲ್ಲಿ ಆಗ ಇಂದಿರಾ ಕ್ಯಾಂಟಿನ್ ಕೆಲಸ ಪ್ರಾರಂಭಗೊಂಡಿದ್ದು ತ್ವರಿತಗತಿಯಲ್ಲಿ

(ಮೊದಲ ಪುಟದಿಂದ) ಕಾಮಗಾರಿ ನಡೆಯಬೇಕಿದೆ. ಈ ಹಿಂದಿನ ಸಿದ್ಧರಾಮಯ್ಯ ನೇತೃತ್ವದ ಸರಕಾರದಲ್ಲಿ ಗ್ರಾಮೀಣ ರಸ್ತೆ ಅಭಿವೃದ್ಧಿಗಾಗಿ ರೂ. 50 ಕೋಟಿ ಪ್ಯಾಕೇಜ್ ಬಿಡುಗಡೆಗೊಂಡಿದ್ದು ಈ ಕೆಲಸಗಳು ಸಮರ್ಪಕ ನಿರ್ವಹಣೆ ಯಾಗಲು ಸಚಿವ ಮಹೇಶ್ ಅವರು ಆದ್ಯ ಗಮನ ಹರಿಸಲಿ ಎಂದು ಸೀತಾರಾಂ ಸಲಹೆಯಿತ್ತಿದ್ದಾರೆ.ಅಲ್ಲದೆ ದಿಡ್ಡಳ್ಳಿಯ ಆದಿವಾಸಿಗಳಿಗೆ ಪುನರ್ವಸತಿಗೆ ವ್ಯವಸ್ಥೆ ಮಾಡಲಾಗಿದ್ದರೂ ಸಕಾಲದಲ್ಲಿ ಕಾರ್ಯ ನಿರ್ವಹಿಸಲ್ಪಡುತ್ತಿಲ್ಲ. ಈ ಬಗ್ಗೆಯೂ ಗಮನ ಹರಿಸಿ ಅಧಿಕಾರಿ ಗಳಿಗೆ ನಿರ್ದೇಶನ ನೀಡಬೇಕಾಗಿದೆ. ಮಡಿಕೇರಿಯಲ್ಲಿ ಯು.ಜಿ.ಡಿ. ಕೆಲಸದಿಂದ ಹಾಳಾದ ರಸ್ತೆಗಳ ದುರಸ್ತಿ ಮಳೆಗಾಲದ ಮುನ್ನ ನಡೆಯಬೇಕಿದೆ. ಇಲ್ಲದಿದ್ದಲ್ಲಿ ಮಳೆಗಾಲದಲ್ಲಿ ನಾಗರಿಕರು ದುರವಸ್ಥೆ ಅನುಭವಿಸ ಬೇಕಾಗುತ್ತದೆ. ಕುಂಡಾಮೇಸ್ತ್ರಿ ನೀರು ಸರಬರಾಜನ್ನು ಕೂಡ ಸುಗಮಗೊಳಿಸುವಂತಾಗಲಿ. ಈ ಹಿಂದೆ ಪ್ರಾರಂಭಗೊಂಡಿದ್ದ ಕಾರ್ಯ ಯೋಜನೆಗಳು ಸಮರ್ಪಕವಾಗಿ ಪೂರ್ಣಗೊಳ್ಳಲು ವಿಶೇಷ ಸಭೆ ನಡೆಸಿ ಸಂಬಂಧಿಸಿದ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಲಿ ಎಂದು ಮಾಜಿ ಸಚಿವ ಸೀತಾರಾಂ ಸಲಹೆಯತ್ತಿದ್ದಾರೆ.

ಈ ಸಂದರ್ಭ ಸೀತಾರಾಂ ಅವರ ಆಪ್ತರಾದ ಕದ್ದಣಿಯಂಡ ಹರೀಶ್ ಬೋಪಣ್ಣ ಉಪಸ್ಥಿತರಿದ್ದರು.