ಮಡಿಕೇರಿ ಫೆ.21 :ಕೊಡಗಿನ ಅಭಿವೃದ್ಧಿಗೆ ತೊಡಕಾಗಿರುವ ಡೋಂಗಿ ಪರಿಸರವಾದಿಗಳ ವಿರುದ್ಧ ಜನಜಾಗೃತಿ ಮೂಡಿಸುವದಕ್ಕಾಗಿ ತಾ.25 ರಂದು ಗೋಣಿಕೊಪ್ಪಲಿನಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿದ್ದು, ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳ ಸಹಕಾರವನ್ನು ಪಡೆಯಲಾಗುತ್ತಿದೆ. ಈ ಹೋರಾಟ ಜನಪರವಾಗಿದೆಯೇ ಹೊರತು ಯಾವದೇ ರಾಜಕೀಯ ದುರುದ್ದೇಶ ದಿಂದ ಕೂಡಿಲ್ಲವೆಂದು ಸೇವ್ ಕೊಡಗು ಆಂದೋಲನ ವೇದಿಕೆ ಸ್ಪಷ್ಟಪಡಿಸಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಪ್ರಮುಖ ಮಧು ಬೋಪಣ್ಣ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸುವ ಅವಕಾಶವನ್ನು ಪ್ರತಿಯೊಬ್ಬರಿಗೆ ನೀಡಲಾಗಿದೆ. ನಮ್ಮ ಹೋರಾಟದ ವಿರುದ್ಧ ಧ್ವನಿ ಎತ್ತಿರುವ ಸಂಘÀಟನೆ ಯೊಂದು ಹೋರಾಟಗಾರರನ್ನು ಬಂಧಿಸಬೇಕೆಂದು ಹೇಳಿಕೆ ನೀಡಿರು ವದನ್ನು ಖಂಡಿಸುವದಾಗಿ ತಿಳಿಸಿದರು. ಕೊಡಗಿನ ಭವಿಷ್ಯದ ಚಿಂತನೆ ಯೊಂದಿಗೆ ಮುಂದಿನ ಪೀಳಿಗೆಗಾಗಿ ಅಭಿವೃದ್ಧಿ ಕಾರ್ಯಗಳು ನಡೆಯಬೇಕು ಎನ್ನುವ ಉದ್ದೇಶದಿಂದ ಹೋರಾಟ ವನ್ನು ನಡೆಸಲಾಗುತ್ತಿದೆ. ನಾವುಗಳು ಅತ್ಯಾಚಾರ, ಕೊಲೆ ಅಥವಾ ಛಾಪಾ ಕಾಗದದ ಹಗರಣದಲ್ಲಿ ಭಾಗಿಯಾಗಿಲ್ಲ. ಆದರೂ ಜನಪರ ಹೋರಾಟಗಾರರ ಬಂಧನಕ್ಕೆ ಕರೆ ನೀಡುವದು ಎಷ್ಟು ಸರಿ ಎಂದು ಮಧು ಬೋಪಣ್ಣ ಪ್ರಶ್ನಿಸಿದರು.ನಮ್ಮನ್ನು ಟೀಕಿಸುವ ಸಂಘಟನೆ ಭ್ರಷ್ಟಾಚಾರ

(ಮೊದಲ ಪುಟದಿಂದ) ಮಾಡುತ್ತಿಲ್ಲವೆಂದು ಹೇಳಿಕೊಂಡಿದೆ. ಆದರೆ ಒಂದು ದಶಕದ ಹಿಂದೆ ಬಾಳೆಲೆಯ ತೊಟವೊಂದರಲ್ಲಿ ಮರಗಳನ್ನು ಕಡಿತಲೆ ಮಾಡುವ ವಿಚಾರದಲ್ಲಿ ಆಕ್ಷೇಪಣೆÉಯನ್ನು ಸಲ್ಲಿಸಿ ನಂತರದ ದಿನಗಳಲ್ಲಿ ಆಕ್ಷೇಪಣಾ ಅರ್ಜಿಯನ್ನು ಹಿಂದಕ್ಕೆ ಪಡೆದದ್ದು ಯಾಕೆ ಎಂದು ಅವರು ಪ್ರಶ್ನಿಸಿದರು.

ಸಿಪಿಐಎಂ ಕಾರ್ಯದರ್ಶಿ ದುರ್ಗಾಪ್ರಸಾದ್ ಅವರು, ನಾವು ಕರೆ ನೀಡಿರುವ ಹೋರಾಟವನ್ನು ರಾಜಕೀಯ ನೆಲೆಯಲ್ಲಿ ಟೀಕಿಸುವ ಮೂಲಕ ಡೋಂಗಿ ಪರಿಸರವಾದಿ ಗಳಿಗೆ ಅಸ್ತ್ರವನ್ನು ನೀಡಿದ್ದಾರೆ ಎಂದು ಮಧು ಬೋಪಣ್ಣ ಅಸಮಾಧಾನ ವ್ಯಕಪಡಿಸಿದರು. ಸಿಪಿಐಎಂ ಒಂದು ವರ್ಗಕ್ಕೆ ಸೀಮಿತವಾದ ಹೋರಾಟವನ್ನು ನಡೆಸುತ್ತದೆ. ಆದರೆ, ನಾವು ಇಡೀ ಜಿಲ್ಲೆಯ ಜನತೆಯ ಭವಿಷ್ಯದ ದೃಷ್ಟಿಯಿಂದ ಹೋರಾಟವನ್ನು ನಡೆಸುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಪುಟ್ಟ ಜಿಲ್ಲೆ ಕೊಡಗಿನ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಲು ಜನಪ್ರತಿನಿಧಿಗಳನ್ನು ತೊಡಗಿಸಿಕೊಂಡು ಹೋರಾಟವನ್ನು ನಡೆಸಬೇಕಾಗಿದೆ. ಇದೇ ಕಾರಣಕ್ಕೆ ಬಿಜೆಪಿ ಹಾಗೂ ಕಾಂಗ್ರೆಸ್ ಪ್ರಮುಖರವನ್ನು ನಾವು ಆಹ್ವಾನಿಸಿದ್ದೇವೆ. ಬಾಣೆ ಸಮಸ್ಯೆಯನ್ನು ಬಗೆಹರಿಸಲು ವಿಧಾನಸಭೆಯಲ್ಲಿ ಹೋರಾಟ ನಡೆಸಿ ರಾಷ್ಟ್ರಪತಿಗಳ ಅಂಕಿತದವರೆಗೂ ಪ್ರಯತ್ನಿಸಿದವರು ನಮ್ಮ ಜನಪ್ರತಿನಿಧಿಗಳೇ ಆದ್ದರಿಂದ ಜನಪ್ರತಿನಿಧಿಗಳನ್ನು ಹೋರಾಟದಲ್ಲಿ ತೊಡಗಿಸಿಕೊಳ್ಳುವ ಅನಿವಾರ್ಯತೆ ಇದೆಯೇ ಹೊರತು ಕಮ್ಯೂನಿಸ್ಟ್ ಮಾದರಿಯ ಹೋರಾಟ ಸಾಧ್ಯವಿಲ್ಲವೆಂದರು.

ಜಿಲ್ಲೆಯಲ್ಲಿ ಪ್ರತ್ಯೇಕ ಆಡಳಿತ ವ್ಯವಸ್ಥೆಯಂತೆ ಪರಿಸರವಾದಿಗಳು ತಮ್ಮ ಕಾರ್ಯಾಚಟುವಟಿಕೆಯನ್ನು ವಿಸ್ತರಿಸಿದ್ದು, ಪ್ರಭಾವಿ ರಾಜಕಾರಣಿಗಳು, ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳನ್ನು ಬಳಸಿಕೊಂಡು ಜನಾಭಿಪ್ರಾಯಕ್ಕೆ ವಿರುದ್ಧವಾದ ಕ್ರಮಗಳನ್ನು ಕೈಗೊಳ್ಳುವಲ್ಲಿ ಯಶಸ್ವಿಯಾಗುತ್ತಿದ್ದಾರೆ ಎಂದು ಆರೋಪಿಸಿದರು.

ವನ್ಯಧಾಮಗಳಾದ ಪುಷ್ಪಗಿರಿ, ಬ್ರಹ್ಮಗಿರಿ, ತಲಕಾವೇರಿ ಹಾಗೂ ನಾಗರಹೊಳೆÉ ಅಭಯಾರಣ್ಯದ ಅಂಚಿನಿಂದ 10 ಕಿ.ಮೀ. ವ್ಯಾಪ್ತಿಯನ್ನು ಸೂಕ್ಷ್ಮ ಪರಿಸರ ವಲಯವನ್ನಾಗಿ ಘೋಷಿಸುವ ನಿಟ್ಟಿನಲ್ಲಿ ಡೋಂಗಿ ಪರಿಸರವಾದಿಗಳು ಕಾರ್ಯ ಪ್ರವೃತ್ತರಾಗಿದ್ದಾರೆ. ಇದು ಯಶಸ್ವಿಯಾದರೆ ಇಡೀ ಕೊಡಗು ಸೂಕ್ಷ್ಮ ಪರಿಸರವಲಯವಾಗಿ ಮಾರ್ಪಟ್ಟು, ಇಲ್ಲಿ ಯಾವದೇ ಅಭಿವೃದ್ಧಿ ಕಾರ್ಯಗಳನ್ನು ನಡೆಸಲಾಗದ ಪರಿಸ್ಥಿತಿ ನಿರ್ಮಾಣವಾಗಲಿದೆ. ನಾಗರಹೊಳೆ ಅರಣ್ಯವನ್ನು ಬಳಸಿ ಮೈಸೂರು, ತಿತಿಮತಿ ಮೂಲಕ ಕೊಡಗನ್ನು ಸಂಪರ್ಕಿಸುವ ರಸ್ತೆಯಲ್ಲಿ ರಾತ್ರಿಯ ವೇಳೆ ವಾಹನ ಸಂಚಾರವನ್ನು ನಿರ್ಬಂಧಿಸುವ ಪ್ರಯತ್ನವೂ ನಡೆದಿದೆ ಎಂದು ಮಧುಬೋಪಣ್ಣ ಆರೋಪಿಸಿದರು.

ದಕ್ಷಿಣ ಕೊಡಗಿನ ಕೂಟಿಯಾಲ ಸೇತುವೆಗೆ ಸಂಪರ್ಕ ರಸ್ತೆ ನಿರ್ಮಿಸಲು ಅವಕಾಶವನ್ನು ನೀಡುತ್ತಿಲ್ಲ. ಈ ಸೇತುವೆ ಸಂಪರ್ಕ ಸಾಧ್ಯವಾದಲ್ಲಿ ಜನಸಾಮಾನ್ಯರಿಗೆ ಸಾಕಷ್ಟು ಅನುಕೂಲವಾಗುತ್ತದೆ. ಆದರೆ ಪರಿಸರ ಸಂರಕ್ಷಣೆÉಯ ಹೆಸರಿನಲ್ಲಿ ಅನಗತ್ಯ ತೊಡಕುಗಳನ್ನು ಉಂಟು ಮಾಡಲಾಗುತ್ತ್ತಿದೆ. ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಕಾರ್ಬನ್ ಗುಂಡಿಯನ್ನಾಗಿ ಕೊಡಗನ್ನು ಪರಿಗಣಿಸುವದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ, ಇಲ್ಲಿನ ಪರಿಸರ ಸಂರಕ್ಷಣೆÉಗೆ ಪೂರಕವಾಗಿ ಬೆಳೆಗಾರರಿಗೆ ಅಗತ್ಯ ನೆರವನ್ನು ಒದಗಿಸಲೇಬೇಕೆಂದು ಆಗ್ರಹಿಸಿದರು.

ಮಂಡ್ಯ ಮೈಸೂರು, ತಮಿಳುನಾಡು ಜನರಿಗೆ ಕಾವೇರಿ ನೀರು ಬೇಕೆಂದು ಅಪೇಕ್ಷೆ ಪಡುವ ಪರಿಸರವಾದಿಗಳು, ರಾಜ್ಯದ ಇತರ ಭಾಗದ ಜನರನ್ನು ನಮ್ಮ ಮೇಲೆ ಎತ್ತಿ ಕಟ್ಟುತ್ತಿದ್ದಾರೆ. ಆದರೆ, ಪರಿಸರವಾದಿಗಳು ಕಾಳಜಿ ತೋರುವ ಜಿಲ್ಲೆ ಮತ್ತು ರಾಜ್ಯದ ಜನ ಕಾವೇರಿ ನೀರನ್ನು ಪುಕ್ಕಟ್ಟೆಯಾಗಿ ಪಡೆಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಕಾವೇರಿ ನೀರಿಗೆ ರಾಯಲ್ಟಿ ನೀಡಬೇಕೆಂದು ಒತ್ತಾಯಿಸುವುದಾಗಿ ಮಧು ಬೋಪಣ್ಣ ತಿಳಿಸಿದರು.

ಜಿಲ್ಲೆಯಲ್ಲಿ ಪರಿಸರವಾದಿಗಳ ಕಿರುಕುಳ ನಿರಂತರವಾಗಿದ್ದು, ಬಡವರ ಜಾಗಗಳ ಭೂ ಪರಿವರ್ತನೆಗೆ ಅಡ್ಡಿಪಡಿಸಲಾಗುತ್ತಿದೆ. ಆದರೆ, ದೊಡ್ಡ ದೊಡ್ಡ ರೆಸಾರ್ಟ್‍ಗಳ ಭೂ ಪರಿವರ್ತನೆಯ ಪರವಾಗಿ ಇದೇ ಪರಿಸರವಾದಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರು.

ಮತ್ತೊಬ್ಬ ಪ್ರಮುಖ ಬಿ.ಟಿ. ದಿನೇಶ್ ಮಾತನಾಡಿ, ಕೊಡಗಿನ ಪರಿಸರ ಸಂರಕ್ಷಣೆÉಯ ನೆಪವೊಡ್ಡಿ ರಾಜ್ಯದ 5 ಕೊಟಿ ಜನರನ್ನು ಪುಟ್ಟ ಜಿಲ್ಲೆ ಕೊಡಗಿನ 5 ಲಕ್ಷ ಜನರ ವಿರುದ್ಧ ಎತ್ತ್ತಿ ಕಟ್ಟಲಾಗುತ್ತಿದೆ ಎಂದು ಆರೋಪಿಸಿದರು. ವೇದಿಕೆ ಡೋಂಗಿ ಪರಿಸರವಾದಿಗಳ ವಿರುದ್ಧ ಜನ ಜಾಗೃತಿ ಕಾರ್ಯಕ್ರಮಗಳನ್ನು ಮುಂದುವರಿಸಲಿದ್ದು, ಮುಂದೊಂದು ದಿನ ಸತ್ಯಕ್ಕೆ ಜಯದೊರೆತು ಪರಿಸರವಾದಿಗಳಿಗೆ ಸೋಲಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಾ. .25 ರಂದು ಬೆಳಿಗ್ಗೆ 10.30 ಗಂಟೆಗೆ ಗೋಣಿಕೊಪ್ಪ ಆರ್‍ಎಂಸಿ ಯಿಂದ ಬಸ್ ನಿಲ್ದಾಣದವರೆಗೆ ಪ್ರತಿಭಟನಾ ರ್ಯಾಲಿ ನಡೆಯಲಿದ್ದು, ನಂತರÀ ಬಹಿರಂಗ ಸಭೆÉಯನ್ನು ಆಯೋಜಿಸಲಾಗಿದೆ ಎಂದು ದಿನೇಶ್ ತಿಳಿಸಿದರು.

ಬೇಡಿಕೆಗಳು : ಡೋಂಗಿ ಪರಿಸರವಾದಿಗಳನ್ನು ಕೊಡಗಿನಿಂದ ಗಡಿಪಾರು ಮಾಡಬೇಕು, 2013ರ ರಾಷ್ಟ್ರಪತಿ ಅಂಕಿತ ಭೂ ಕಾಯ್ದೆಯನ್ನು ಅನುಷ್ಠಾನಗೊಳಿಸಬೇಕು, ಕೊಡಗಿನ ಎಲ್ಲಾ ಬಾಣೆ ಜಮೀನುಗಳನ್ನು ಕಂದಾಯಕ್ಕೆ ಒಳಪಡಿಸಿ ಪರಾಧೀನ ವೆಂದು ಘೋಷಿಸಬೇಕು, ಡಾ.ಕಸ್ತೂರಿ ರಂಗನ್ ವರದಿ ಮತ್ತು ಸೂಕ್ಷ್ಮ ಪರಿಸರ ವಲಯದಿಂದ ಕೊಡಗಿನ ಜನ ವಸತಿ ಪ್ರದೇಶ ಮತ್ತು ಬಾಣೆ ಹಿಡುವಳಿಗಳನ್ನು ಹೊರಗಿಡಬೇಕು, ಅಕ್ರಮವಾಗಿ ಜಾಗ ಖರೀದಿಸಿ ರೆಸಾರ್ಟ್ ನಿರ್ಮಿಸುತ್ತಿರುವ ಪರಿಸರವಾದಿ ಗುಂಪಿನ ಭೂ ಮಾಫಿಯಾಗಳನ್ನು ಗಡಿಪಾರು ಮಾಡಬೇಕು, ಪ್ರವಾಸೋದ್ಯಮದಲ್ಲಿ ಕೊಡಗಿನವರಿಗೆ ಆದ್ಯತೆ ನೀಡಿ ಆರ್ಥಿಕ ಪುನಶ್ಚೇತನಕ್ಕೆ ಸಹಕಾರ ನೀಡಬೇಕು, ಕಾಡಾನೆ ಹಾವಳಿಯನ್ನು ತಪ್ಪಿಸಲು ಅರಣ್ಯ ಪ್ರದೇಶದ ಸುತ್ತಲು ಕಂದಕ ರೂಪಿಸಿ ರೈಲ್ವೆ ಹಳಿ ಬೇಲಿ ನಿರ್ಮಿಸಬೇಕು ಸೇರಿದಂತೆ ಕೊಡಗಿನ ಅಭಿವೃದ್ಧಿಗೆ ಪೂರಕವಾದ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನಾ ರ್ಯಾಲಿಯಲ್ಲಿ ಒತ್ತಾಯಿಸುವದಾಗಿ ಪ್ರಮುಖರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ವೇದಿಕೆಯ ಪ್ರಮುಖರಾದ ಜಿನ್ನು ನಾಣಯ್ಯ, ಉದಯ ಶಂಕರ್ ಹಾಗೂ ಮನು ಮಹೇಶ್ ಉಪಸ್ಥಿತರಿದ್ದರು.