ಗೋಣಿಕೊಪ್ಪಲು, ಫೆ.21: ಕಳ್ಳತನವನ್ನೇ ವೃತ್ತಿಯಾಗಿಸಿಕೊಂಡಿದ್ದ ಮೂವರು ಅಂತರರಾಜ್ಯ ಖದೀಮರನ್ನು ಇಲ್ಲಿನ ಪೊಲೀಸರು ವಶಕ್ಕೆ ಪಡೆಯುವದರೊಂದಿಗೆ; ಎರಡು ಬೈಕ್ ಹಾಗೂ ಮೂರು ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಆರೋಪಿಗಳು ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ; ಆಗಿಂದಾಗ್ಗೆ ಸ್ಥಳ ಬದಲಾಯಿಸುತ್ತಿದ್ದರು. ಕಳ್ಳತನದ ಆರೋಪದಲ್ಲಿ ಕೇರಳದ ಕಣ್ಣೂರು ಜಿಲ್ಲೆ ಇರಟಿ ತಾಲೂಕಿನ ಉಳಿಕಲ್ ಪಂಚಾಯಿತಿಯ ಮಂಡವ ಪರಂಬು ಗ್ರಾಮದ ಮೊಯ್ದು ಪುತ್ರ ಟಿ.ಎ. ಸಲೀಂ (39), ಮಟ್ಟನೂರಿನ ನಡುವ ಕಾಡು ಗ್ರಾಮದ ಕೀಯಕ್ಕೆ ವೀಡುವಿನ ಹುಸೇನ್ ಪುತ್ರ ಕೆ.ಅನ್ಸಾರ್ (24) ಹಾಗೂ ವೀರಾಜಪೇಟೆ ನೆಹರು ನಗರದ ಮೊಹಮ್ಮದ್ ಪುತ್ರ ಎನ್.ಪಿ. ಅಜೀಜ್ ಎಂಬವರನ್ನು ವಶಕ್ಕೆ ಪಡೆದು; (ಮೊದಲ ಪುಟದಿಂದ) ಇವರಿಂದ ಕಳ್ಳತನ ಮಾಡಿದ್ದ ಎರಡು ಮೋಟಾರ್ ಸೈಕಲ್, 80 ಗ್ರಾಂ ಚಿನ್ನಾಭರಣ ಹಾಗೂ ನಗದು ಸೇರಿದಂತೆ ಅಂದಾಜು ಮೂರು ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ವಶ ಪಶಪಡಿಸಿಕೊಂಡಿದ್ದಾರೆ. ತಿತಿಮತಿಯಲ್ಲಿ ಮುಂಜಾನೆ ಪೊಲೀಸರು ಗಸ್ತು ತಿರುಗುತ್ತಿದ್ದ ಸಂದರ್ಭ ಆರೋಪಿಗಳು ಬೈಕ್‍ನಲ್ಲಿ ಆಗಮಿಸಿ ಕಳ್ಳತನಕ್ಕೆ ಹೊಂಚು ಹಾಕುತ್ತಿದ್ದರು. ಈ ಸಂದರ್ಭ ಸಂಶಯಗೊಂಡ ಪೊಲೀಸರು ವಿಚಾರಿಸಿದ ಸಂದರ್ಭ ಆರೋಪಿಗಳು ಸತ್ಯ ಬಾಯಿ ಬಿಟ್ಟಿದ್ದಾರೆ.
ಪೊಲೀಸರ ತೀವ್ರ ವಿಚಾರಣೆಯ ನಂತರ ಆರೋಪಿಗಳು ಪೊನ್ನಂಪೇಟೆ, ತಿತಿಮತಿ, ವೀರಾಜಪೇಟೆಯ ಪಂಜರಪೇಟೆ, ಸುಭಾಶ್‍ನಗರ, ಗೋಣಿಕೊಪ್ಪದ ವೆಂಕಟಪ್ಪ ಬಡಾವಣೆ, ಸುಂಟಿಕೊಪ್ಪ ಹಾಗೂ ಹುಣಸೂರು ನಗರಗಳಲ್ಲಿ ಮನೆ ಕಳ್ಳತನ ಮಾಡಿ ಜೀವನ ಸಾಗಿಸುತ್ತಿರುವ ಬಗ್ಗೆ ತಪ್ಪು ಒಪ್ಪಿಕೊಂಡಿದ್ದಾರೆ. ಆರೋಪಿಗಳ ಮೇಲೆ ಹಲವಾರು ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದು, ಜಾಮೀನಿನ ನಂತರ ಇದೇ ಕಾಯಕ ಮುಂದುವರೆಸುತ್ತಿದ್ದರು. ಇತ್ತೀಚೆಗೆ ತಿತಿಮತಿಯ ಪ್ರವೀಣ್ ಕುಮಾರ್ ಎಂಬವರ ಮನೆ ಮುಂದೆ ನಿಲ್ಲಿಸಿದ್ದ ಮೋಟಾರು ಬೈಕನ್ನು ಅಪಹರಿಸಿದ್ದರು.
ನಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗೆ ಬಲೆ ಬೀಸಿದ್ದರು. ಜಿಲ್ಲೆಯ ಪೊಲೀಸ್ ಅಧೀಕ್ಷಕಿ ಡಾ.ಡಿ.ಸುಮನ್ ಪನ್ನೇಕರ್, ವೀರಾಜಪೇಟೆ ಡಿವೈಎಸ್‍ಪಿ ನಾಗಪ್ಪ ಮಾರ್ಗದರ್ಶನದಲ್ಲಿ ಗೋಣಿಕೊಪ್ಪ ವೃತ್ತ ನಿರೀಕ್ಷಕ ದಿವಾಕರ್ ಮತ್ತು ಪೊನ್ನಂಪೇಟೆ ಠಾಣಾಧಿಕಾರಿ ಬಿ.ಜಿ.ಮಹೇಶ್, ಗೋಣಿಕೊಪ್ಪ ಠಾಣಾಧಿಕಾರಿ ಶ್ರೀಧರ್, ವೀರಾಜಪೇಟೆ ಠಾಣಾಧಿಕಾರಿ ಸಂತೋಷ್ ಕಷ್ಯಪ್, ಎ.ಎಸ್.ಐ. ಗಣಪತಿ, ಸಿಬ್ಬಂದಿಗಳಾದ ಲೋಕೇಶ್, ಎಂ.ಡಿ.ಮನು, ಸುನೀಲ್, ಮೊಹಮ್ಮದ್ ಅಲಿ, ಪ್ರಮೋದ್ ಕುಮಾರ್, ಅಬ್ದುಲ್ ಅಜೀಜ್, ಹರೀಶ್ ಕುಮಾರ್, ಮುನೀರ್, ಸತೀಶ್, ಸುಗಂಧ, ಮೋಹನ್, ಶೋಭ, ರಾಜೇಶ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದು ಜಿಲ್ಲಾ ಪೊಲೀಸ್ ಅಧೀಕ್ಷಕರು ಇವರ ಕಾರ್ಯವನ್ನು ಶ್ಲಾಘಿಸಿದ್ದಾರೆ.
- ಹೆಚ್.ಕೆ. ಜಗದೀಶ್