ಮಡಿಕೇರಿ, ಫೆ. 21 : ಪಶ್ಚಿಮ ಬಂಗಾಳ ಮೂಲದ ವಲಸೆ ಕಾರ್ಮಿಕರಿಂದ ಅತ್ಯಾಚಾರ ಮತ್ತು ಹತ್ಯೆಗೊಳಗಾದ ವಿದ್ಯಾರ್ಥಿನಿ ಸಂಧ್ಯಾಳ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿ ತಾ. 25ರಂದು ಪಾಲಿಬೆಟ್ಟದ ಟಾಟಾ ಕಾಫಿ ಸಂಸ್ಥೆಯ ಎದುರು ಬೃಹತ್ ಪ್ರತಿಭಟನೆ ಹಾಗೂ ಜನಾಂದೋಲನ ನಡೆಸಲಾಗುವದು ಎಂದು ಸಂಧ್ಯಾ ಸಾರ್ವಜನಿಕ ಹೋರಾಟ ಸಮಿತಿ ತಿಳಿಸಿದೆ.ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಸಮಿತಿಯ ಸಂಚಾಲಕ ಪ್ರವೀಣ್ ಟಾಟಾ ಕಾಫಿ ಸಂಸ್ಥೆಗೆ ಸೇರಿದ ಸಿದ್ದಾಪುರದ ಎಮ್ಮೆಗುಂಡಿ ತೋಟದಲ್ಲಿ ಹೊರ ರಾಜ್ಯದ ವಲಸೆ ಕಾರ್ಮಿಕರಿಂದ ಅತ್ಯಾಚಾರದೊಂದಿಗೆ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಸಾವಿಗೀಡಾಗಿ ಎರಡು ವಾರಗಳೇ ಕಳೆದಿದ್ದರೂ, ಸಂಸ್ಥೆ ವತಿಯಿಂದ ಯಾವದೇ ಸ್ಪಂದನೆ ದೊರಕಿಲ್ಲ. ಜಿಲ್ಲೆಯ ಜನಪ್ರತಿನಿಧಿಗಳು, ರಾಜಕೀಯ ಪಕ್ಷಗಳ ಮುಖಂಡರು ಆಕೆಯ ಮನೆಗೆ ಭೇಟಿ ನೀಡಿ ಪೋಷಕರಿಗೆ ಸಾಂತ್ವನ ಹೇಳಿದ್ದರೂ, ಕಾಫಿ ಸಂಸ್ಥೆಯ ವ್ಯವಸ್ಥಾಪಕರಾಗಲಿ, ಇತರ ಅಧಿಕಾರಿಗಳಾಗಲಿ ಸೌಜನ್ಯಕ್ಕೂ ಭೇಟಿ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ತಾ. 25ರಂದು ಬೆಳಿಗ್ಗೆ 11 ಗಂಟೆಗೆ ವಿವಿಧ ಸಂಘಸಂಸ್ಥೆಗಳು, ಮಹಿಳಾ ಸಂಘಟನೆಗಳ ಪ್ರತಿನಿಧಿಗಳು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪಾಲಿಬೆಟ್ಟ ಗಣಪತಿ ದೇವಾಲಯದ ಮುಂಭಾಗದಿಂದ ಟಾಟಾ ಕಾಫಿ ಸಂಸ್ಥೆವರೆಗೆ ಪ್ರತಿಭಟನಾ
(ಮೊದಲ ಪುಟದಿಂದ) ಮೆರವಣಿಗೆ ನಡೆಸಲಿದ್ದು, ಬಳಿಕ ಸಂಸ್ಥೆಯ ಮುಂಭಾಗ ಸಭೆ ನಡೆಸಲಾಗುವದು ಎಂದರು.
ಮಾನವೀಯ ನೆಲೆಯಲ್ಲಿ ಕಾಫಿ ಸಂಸ್ಥೆ ರೂ. 10 ಲಕ್ಷ ಪರಿಹಾರ ನೀಡಬೇಕು. ಅಲ್ಲದೆ ಸಂಸ್ಥೆಯಲ್ಲಿ ದುಡಿಯುತ್ತಿರುವ ಹೆಣ್ಣು ಮಕ್ಕಳು ಇರುವ ಕುಟುಂಬಗಳಿಗೆ ಸಂಸ್ಥೆಯೇ ರಸ್ತೆ ಬದಿಯಲ್ಲಿ ನಿವೇಶನಗಳನ್ನು ನೀಡಬೇಕು ಎಂದು ಒತ್ತಾಯಿಸಿದ ಅವರು, ಅಕ್ರಮ ವಲಸಿಗರನ್ನು ತಕ್ಷಣ ಹೊರ ಹಾಕಿ ಸ್ಥಳೀಯರನ್ನು ಕೆಲಸಕ್ಕೆ ನೇಮಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.
ತೋಟಗಳಲ್ಲಿ ಬಹುತೇಕ ಯಾವದೇ ದಾಖಲೆಗಳಿಲ್ಲದ ಅಕ್ರಮ ವಲಸಿಗರು, ಬಾಂಗ್ಲಾದಂತಹ ಹೊರ ದೇಶದ ಕಾರ್ಮಿಕರು, ರೋಹಿಂಗ್ಯಾ ಗಳು ನೆಲೆಸಿದ್ದು, ಅಂತಹವರನ್ನು ಪತ್ತೆ ಮಾಡಿ ಕೊಡಗಿನಿಂದ ಗಡಿಪಾರು ಮಾಡಬೇಕು ಎಂದರು.
ರಾಜ್ಯ ಸರಕಾರ ವಿದ್ಯಾರ್ಥಿನಿಯ ಪೋಷಕರಿಗೆ 25 ಲಕ್ಷ ರೂ.ಗಳ ಪರಿಹಾರ ನೀಡಬೇಕು, ಕುಟುಂಬದ ಒಬ್ಬ ಸದಸ್ಯರಿಗೆ ಸರಕಾರಿ ಉದ್ಯೋಗ ನೀಡುವ ಮೂಲಕ ಸರಕಾರ ಆ ಬಡ ಕುಟುಂಬಕ್ಕೆ ನೆರವಾಗಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಹಿಂದುಳಿದ ಮೋರ್ಚಾ ದ ಅಧ್ಯಕ್ಷ ಬಿ.ವೈ.ಆನಂದ ರಘು ಮಾತನಾಡಿ, ತೋಟದಲ್ಲಿ ಕಾವಲುಗಾರರಿದ್ದರೂ, ಹಗಲು ವೇಳೆಯಲ್ಲೇ ಈ ದುರ್ಘಟನೆ ನಡೆದಿದ್ದು, ಹೆಣ್ಣು ಮಕ್ಕಳು ಸ್ವತಂತ್ರವಾಗಿ ಓಡಾಡಲಾಗದ ಪರಿಸ್ಥಿತಿ ಇರುವಾಗ ಇನ್ನು ರಾತ್ರಿ ಅವರನ್ನು ರಕ್ಷಿಸುವವರು ಯಾರು ಎಂದು ಪ್ರಶ್ನಿಸಿದರು.
ಜಿಲ್ಲಾ ಮೊಗೇರ ಸೇವಾ ಸಮಾಜದ ಗೌರವ ಅಧ್ಯಕ್ಷ ಪಿ.ಎಂ.ರವಿ ಮಾತನಾಡಿ, ಈ ಹಿಂದೆ ಕೊಡಗಿನಲ್ಲಿ ಎಲ್ಲ ಕೃಷಿ ಚಟುವಟಿಕೆಗಳೂ ಸ್ಥಳೀಯ ಕಾರ್ಮಿಕರಿಂದಲೇ ನಡೆಯುತ್ತಿತ್ತು. ಆದರೆ ಇದೀಗ ಕಡಿಮೆ ವೇತನಕ್ಕೆ ಸಿಗುತ್ತಾರೆ ಎಂಬ ಕಾರಣಕ್ಕೆ ವಲಸೆ ಕಾರ್ಮಿಕರಿಗೆ ಮಣೆ ಹಾಕಲಾಗುತ್ತಿದ್ದು, ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆಗೆ ಧಕ್ಕೆ ಯಾಗುತ್ತಿದೆ ಎಂದು ಆರೋಪಿಸಿದರು.
ಆದಿ ದ್ರಾವಿಡ ಸಮಾಜದ ಮುಖಂಡ ಜನಾರ್ಧನ ಮಾತನಾಡಿ, ಕರಡಿಕಾಡು ತೋಟದ ಮಾಲೀಕರು ಅಕ್ರಮ ವಲಸೆ ಕಾರ್ಮಿಕರಿಗೆ ಆಶ್ರಯ ನೀಡಿದ್ದರೂ, ಆ ವ್ಯಾಪ್ತಿಯ ಪೊಲೀಸ್ ಠಾಣೆಗೆ ಯಾವದೇ ಮಾಹಿತಿ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಪ್ರಕರಣದ ಕುರಿತು ನ್ಯಾಯಾಂಗ ತನಿಖೆ ನಡೆಸುವದ ರೊಂದಿಗೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿ ಮುಖಂಡ ಹರೀಶ್ ಉಪಸ್ಥಿತರಿದ್ದರು.