ಸೋಮವಾರಪೇಟೆ, ಫೆ. 21: ಸಮೀಪದ ಯಡೂರು ಗ್ರಾಮದ ಬಿ.ಟಿ.ಸಿ.ಜಿ. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಚುನಾವಣಾ ಸಾಕ್ಷರತಾ ಕ್ಲಬ್ ವತಿಯಿಂದ ಯಡೂರು ಗ್ರಾಮದ ಸುತ್ತಮುತ್ತಲಿನ ರಸ್ತೆಗಳಲ್ಲಿ ಮತದಾನದ ಬಗ್ಗೆ ಜಾಗೃತಿ ಜಾಥಾ ನಡೆಯಿತು.
ಕಾಲೇಜಿನ ವಿದ್ಯಾರ್ಥಿಗಳು ‘ಮತದಾನ ನಮ್ಮ ಹಕ್ಕು, ಹದಿನೆಂಟು ವರ್ಷ ತುಂಬಿದ ಎಲ್ಲರೂ ಮತದಾನಕ್ಕೆ ಅರ್ಹರು, ಮತದಾನ ಒಂದು ಪವಿತ್ರ ಕಾರ್ಯ, ಮತದಾನ ಮಾಡುವಾಗ ಯಾವದೇ ಪ್ರಲೋಭನೆಗಳಿಗೆ ಒಳಗಾಗಬೇಡಿ’ ಇತ್ಯಾದಿ ಘೋಷಣೆಗಳೊಂದಿಗೆ ಭಿತ್ತಿಪತ್ರಗಳನ್ನು ಪ್ರದರ್ಶಿಸುತ್ತಾ ಸಾಗುವ ಮೂಲಕ ಮತದಾರರಲ್ಲಿ ಮತದಾನದ ಕುರಿತು ಅರಿವು ಮೂಡಿಸಿದರು.
ಈ ಸಂದರ್ಭ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಶ್ರೀಧರ, ಇಂಗ್ಲೀಷ್ ಸಹಾಯಕ ಪ್ರಾಧ್ಯಾಪಕ ಎಂ.ಎಸ್. ಶಿವಮೂರ್ತಿ, ರಾಜ್ಯಶಾಸ್ತ್ರ ಉಪನ್ಯಾಸಕರಾದ ಹೆಚ್.ಎ.ಶೈಲಾ, ಕನ್ನಡ ಉಪನ್ಯಾಸಕರಾದ ಕೆ.ಪಾಪಣ್ಣ, ಚುನಾವಣಾ ಸಾಕ್ಷರತಾ ಕ್ಲಬ್ ಸಂಚಾಲಕರಾದ ಕೆ.ಹೆಚ್. ಧನಲಕ್ಷ್ಮಿ, ಅಧ್ಯಕ್ಷ ಕೆ.ವಿಶ್ವನಾಥ್, ಕ್ಯಾಂಪಸ್ ರಾಯಭಾರಿಗಳಾದ ಪಿ.ಯು. ಅರ್ಚನಾ, ಬಿ.ಪಿ. ಪವನ್ ಮತ್ತು ಕಾಲೇಜಿನ ವಿದ್ಯಾರ್ಥಿಗಳು ಜಾಥಾದಲ್ಲಿ ಭಾಗವಹಿಸಿದ್ದರು.