ಶನಿವಾರಸಂತೆ, ಫೆ. 21: ಕೊಡ್ಲಿಪೇಟೆ ಪಟ್ಟಣ ಸಮಸ್ಯೆಗಳ ಆಗರವಾಗಿದ್ದು, ಸಮಸ್ಯೆಗಳನ್ನು ಬಗೆಹರಿಸಿಕೊಡುವಂತೆ ನಾಗರಿಕ ಸಮಿತಿ ಪದಾಧಿಕಾರಿಗಳು, ಕಾಂಗ್ರೆಸ್ ಮುಖಂಡ ಹಾಗೂ ಸರಕಾರಿ ಅಭಿಯೋಜಕ ಹೆಚ್.ಎಸ್. ಚಂದ್ರಮೌಳಿ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಕೊಡ್ಲಿಪೇಟೆ ಹೋಬಳಿಯಲ್ಲಿ ಎರಡು ಪ್ರಮುಖ ಸೇತುವೆಗಳಾದ ಕೆಲಕೊಡ್ಲಿ ಸೇತುವೆ ಹಾಗೂ ಮಾವಿನಹಳ್ಳಿ (ಭರತ್ತೂರÀು) ಸೇತುವೆಗಳ ಕಾಮಗಾರಿ 7-8 ವರ್ಷಗಳಿಂದ ನಡೆದು ಸಂಪೂರ್ಣಗೊಂಡಿದೆ. ಆದರೆ, ಇದುವರೆಗೂ ಅಧಿಕೃತವಾಗಿ ವಾಹನಗಳ ಸಂಚಾರ ಪ್ರಾರಂಭವಾಗಿರುವದಿಲ್ಲ. ಆದ್ದರಿಂದ ತ್ವರಿತವಾಗಿ ಸೇತುವೆಗಳನ್ನು ವಾಹನ ಸಂಚಾರ ಮಾಡಲು ಅವಕಾಶ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿದ್ದಾರೆ.
ಬೆಂಗಳೂರಿನಿಂದ ಮಧ್ಯಾಹ್ನ 2 ಗಂಟೆಯ ನಂತರ ಕೊಡ್ಲಿಪೇಟೆಗೆ ಬರಲು ನೇರ ಬಸ್ ಸೌಕರ್ಯ ಇರುವದಿಲ್ಲ. ಒಂದೆರಡು ನೇರ ಬಸ್ ಸೌಕರ್ಯಗಳನ್ನು ಕಲ್ಪಿಸಿಕೊಡಬೇಕು. ಕೊಡ್ಲಿಪೇಟೆಯಲ್ಲಿ ಕೆ.ಎಸ್.ಆರ್.ಟಿ.ಸಿ. ಬಸ್ ಡಿಪೋ ಅವಶ್ಯಕತೆಯೂ ಇದ್ದು ಘಟಕಕ್ಕೆ ಅಗತ್ಯವಾದ ಸರಕಾರಿ ಜಾಗವೂ ಇದೆ. ಆದ್ದರಿಂದ ಕೊಡ್ಲಿಪೇಟೆಯಲ್ಲಿ ಬಸ್ ಡಿಪೋ ಮಾಡಿಸಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.
ಬೆಸೂರು ಸೇತುವೆಯಿಂದ ನಿಲುವಾಗಿಲು ಗೇಟ್‍ವರೆಗೆ ರಸ್ತೆ ಸಂಪೂರ್ಣ ಹಾಳಾಗಿದ್ದು, ವಾಹನ ಸಂಚಾರ ತ್ರಾಸದಾಯಕವಾಗಿದೆ. ಅರಕಲಗೂಡಿಗೆ ಹೋಗಲು ತೊಂದರೆಯಾಗಿದೆ. ರಸ್ತೆಗೆ ಹೊಸದಾಗಿ ಡಾಂಬರೀಕರಣ ಮಾಡಿಸಿಕೊಡಬೇಕು ಎಂದು ನಾಗರಿಕ ಸಮಿತಿ ಅಧ್ಯಕ್ಷ ಎಸ್.ಎಸ್. ನಾಗರಾಜ್, ಕಾರ್ಯದರ್ಶಿ ಜಿ.ಆರ್. ಸುಬ್ರಮಣ್ಯ, ಸದಸ್ಯರಾದ ಶಿವಪ್ರಸಾದ್, ಸಿ.ಎಸ್. ವಿಜಯಕುಮಾರ್, ಸೋಮಶೇಖರ್, ಸಿ.ಎಸ್. ಷಣ್ಮುಖ ಮತ್ತಿತರರು ಒತ್ತಾಯಿಸಿದ್ದಾರೆ.