ಮಡಿಕೇರಿ, ಫೆ. 20: ಕೊಡಗಿನ ಶಾಂತಿಗೆ ಭಂಗ ಉಂಟು ಮಾಡುತ್ತಿರುವ ಹೊರ ರಾಜ್ಯದ ಕಾರ್ಮಿಕರನ್ನು ಗಡಿಪಾರು ಮಾಡಬೇಕು ಮತ್ತು ಇತ್ತೀಚೆಗೆ ಸಿದ್ದಾಪುರದಲ್ಲಿ ವಿದ್ಯಾರ್ಥಿನಿ ಹತ್ಯೆ ಪ್ರಕರÀಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿ ತಾ. 22 ರಂದು ನಗರದಲ್ಲಿ ಪ್ರತಿಭಟನೆ ನಡೆಸುವದಾಗಿ ಬಹುಜನ ಕಾರ್ಮಿಕರ ಸಂಘ ತಿಳಿಸಿದೆ.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಬಹುಜನ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಕೆ.ಮೊಣ್ಣಪ್ಪ ಅಂದು ಬೆಳಿಗ್ಗೆ 11 ಗಂಟೆಗೆ ಇಂದಿರಾಗಾಂಧಿ ವೃತ್ತದಿಂದ ಜನರಲ್ ತಿಮ್ಮಯ್ಯ ವೃತ್ತದವರೆಗೆ ಪ್ರತಿಭಟನಾ ಜಾಥಾ ನಡೆಸಲಾಗುತ್ತದೆ. ಬಳಿಕ ಜಿಲ್ಲಾಧಿಕಾರಿಗಳ ಕಚೇರಿ ಎದುರು ಸಾಂಕೇತಿಕ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವದು ಎಂದು ತಿಳಿಸಿದರು. ಪ್ರಸ್ತುತ ಕೊಡಗು ಜಿಲ್ಲೆಯ ಎಸ್ಟೇಟ್‍ಗಳಲ್ಲಿ ಕೆಲಸದ ನೆಪದಲ್ಲಿ ನೆಲೆಸಿರುವ ಹೊರ ರಾಜ್ಯದ ಕಾರ್ಮಿಕರಿಂದ ಕೊಲೆ, ಸುಲಿಗೆ ಯಂತಹ ದುಷ್ಕøತ್ಯಗಳು ನಡೆಯುವ ಮೂಲಕ ಇಲ್ಲಿನ ಶಾಂತಿಗೆ ಭಂಗ ಉಂಟಾಗುತ್ತಿದೆ. ಇದರಿಂದ ಸ್ಥಳೀಯರಲ್ಲಿ ಆತಂಕ ಮೂಡಿದ್ದರೂ ಜಿಲ್ಲಾಡಳಿತವಾಗಲಿ, ಸರ್ಕಾರವಾಗಲಿ, ಯಾವದೇ ಕ್ರಮ ಕೈಗೊಳ್ಳುತ್ತಿಲ್ಲವೆಂದು ಆರೋಪಿಸಿದರು. ಕಳೆದ ಎರಡು, ಮೂರು ವರ್ಷ ಗಳಿಂದ ಅಸ್ಸಾಂ, ಪಶ್ಚಿಮ ಬಂಗಾಳ ಸೇರಿದಂತೆ ಬಾಂಗ್ಲಾದೇಶದ ಕಾರ್ಮಿಕರು ಕೊಡಗು ಜಿಲ್ಲೆಗೆ ದೊಡ್ಡ ಪ್ರಮಾಣದಲ್ಲಿ ಆಗಮಿಸುತ್ತಿದ್ದಾರೆ. ಕಡಿಮೆ ಕೂಲಿಗೆ ಕಾರ್ಮಿಕರು ದೊರಕುತ್ತಾರೆ ಎನ್ನುವ ಒಂದೇ ಕಾರಣಕ್ಕೆ ಕಾಫಿ ತೋಟದ ಮಾಲೀಕರು ಇವರಿಗೆ ತಮ್ಮ ಲೈನ್ ಮನೆಗಳಲ್ಲಿ ವಾಸ ಮಾಡಲು ಅವಕಾಶವನ್ನು ಒದಗಿಸುತ್ತಿದ್ದಾರೆ. ಕೆಲವು ದಿನಗಳÀ ಹಿಂದೆ ವೀರಾಜಪೇಟೆ ತಾಲೂಕಿನಲ್ಲಿ ನಡೆದ ಶಫೀಕ್ ಎಂಬಾತನ ಹತ್ಯಾ ಪ್ರಕರಣದಲ್ಲೂ ಅಸ್ಸಾಂ ವ್ಯಕ್ತಿಯೊಬ್ಬ ಭಾಗಿಯಾಗಿ ರುವದು ಗಮನಾರ್ಹವೆಂದು ಮೊಣ್ಣಪ್ಪ ಹೇಳಿದರು. ಸಿದ್ದಾಪುರದಲ್ಲಿ ವಿದ್ಯಾರ್ಥಿನಿಯನ್ನು ಅಮಾನುಷವಾಗಿ ಹತ್ಯೆಗೈದಿರುವ ಇಬ್ಬರು ಆರೋಪಿಗಳಿಗೆ ಗಲ್ಲು ಶಿಕ್ಷೆಯಾಗಬೇಕೆಂದು ಆಗ್ರಹಿಸಿದ ಅವರು, ವಿದ್ಯಾರ್ಥಿನಿಯ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿದರು. ಬಹುಜನ ಕಾರ್ಮಿಕರ ಸಂಘÀದ ಮಹಿಳಾ ಘಟಕದ ಅಧ್ಯಕ್ಷೆ ಪಿ.ಎ. ಕುಸುಮ ಮಾತನಾಡಿ, ಇತ್ತೀಚೆಗೆ ತೋಟ ಮಾಲೀಕರು ಹೊರ ರಾಜ್ಯದ ಕಾರ್ಮಿಕರಿಗೆ ತಮ್ಮ ಲೈನ್ ಮನೆಗಳಲ್ಲಿ ವಾಸಿಸಲು ಅವಕಾಶ ನೀಡುತ್ತಿರುವದೇ ಜಿಲ್ಲೆಯಲ್ಲಿ ಅಹಿತಕರ ಘಟನೆಗಳು ನಡೆಯಲು ಕಾರಣ ಎಂದು ಆರೋಪಿಸಿದರು.

ಗೋಷ್ಠಿಯಲ್ಲಿ ಮಾಯಾದೇವಿ ಮಹಿಳಾ ಸಂಘದ ಪಿ.ಜಿ. ಗೀತಾ, ಹೆಚ್.ಯು. ಉಷಾ, ಎಂ.ಎಸ್. ಗೋವಿಂದ ಹಾಗೂ ಪಿ.ಜಿ. ಸಿದ್ದು ಉಪಸ್ಥಿತರಿದ್ದರು.