ಮಡಿಕೇರಿ, ಫೆ. 20: ಶೈಕ್ಷಣಿಕ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಕಳೆದ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಬರುತ್ತಿರುವ ವೀರಾಜಪೇಟೆ ತಾಲೂಕಿನ ಅರಮೇರಿ ಕಳಂಚೇರಿ ಮಠ ಇದೀಗ ‘ದಿಶಾ’ ಎನ್ನುವ ಕಾರ್ಯಾಗಾರದ ಮೂಲಕ ವಿದ್ಯಾರ್ಥಿಗಳಲ್ಲಿ ಸ್ವ ಚಿಂತನೆಯನ್ನು ಜಾಗೃತಗೊಳಿಸುವ ವಿಶಿಷ್ಟ ಪ್ರಯತ್ನಕ್ಕೆ ಮುಂದಾಗಿದೆ. ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿಗಳು, ಸ್ವ ನಿರ್ಧಾರಗಳನ್ನು ತೆಗೆದುಕೊಳ್ಳಲು ಅಸಮರ್ಥರಾಗಿರುವ 9 ರಿಂದ 13 ವರ್ಷ ವಯೋಮಿತಿಯ ವಿದ್ಯಾರ್ಥಿಗಳನ್ನು ಪ್ರಮುಖವಾಗಿಸಿಕೊಂಡು ದಿಶಾ ಕಾರ್ಯಕ್ರಮ ರೂಪಿಸಲಾಗಿದೆ ಎಂದರು. ಇಲ್ಲಿಯವರೆಗೆ 300 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳ ಕಲಿಕಾ ವಿಧಾನಕ್ಕೆ ಅನುಗುಣವಾಗಿ ಕಾರ್ಯಾಗಾರವನ್ನು ರೂಪಿಸಿ, ಮಾರ್ಗದರ್ಶನವನ್ನು ನೀಡಲಾಗಿದೆ ಎಂದು ತಿಳಿಸಿದರು.

ಯುವ ಸಮೂಹಕ್ಕೆ ಸೂಕ್ತ ಮಾರ್ಗದರ್ಶನ ನೀಡುವ ಪ್ರಾಮಾಣಿಕ ಪ್ರಯತ್ನವೆ ದಿಶಾ ಕಾರ್ಯಾಗಾರವಾಗಿದ್ದು, ಟ್ರಸ್ಟ್ ರಚನೆಯ ಮೂಲಕ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತದೆ ಎಂದು ಸ್ವಾಮೀಜಿ ಹೇಳಿದರು. ಅರಮೇರಿಯ ಎಸ್‍ಎಂಎಸ್ ವಿದ್ಯಾಸಂಸ್ಥೆಗಳ ಪ್ರಾಂಶುಪಾಲೆ ಕುಸುಮ್ ಕೆ.ಪಿ. ಮಾತನಾಡಿ, ಇಲ್ಲಿಯವರೆಗೆ ಒಟ್ಟು 7 ದಿಶಾ ಕಾರ್ಯಾಗಾರ ನಡೆಸಲಾಗಿದ್ದು, ಪ್ರಸಕ್ತ ಸಾಲಿನ ಏ. 3 ರಿಂದ ಐದು ದಿನಗಳ ಕಾಲ ಕಾರ್ಯಾಗಾರ ನಡೆಯಲಿದೆ ಎಂದರು. ಜಿಲ್ಲಾ ಸಾಮಾಜಿಕ ಲೆಕ್ಕ ಪರಿಶೋಧಕ ಪ್ರೀತಂ ಪೊನ್ನಪ್ಪ ಮಾತನಾಡಿ, ಮಕ್ಕಳ ಅನುಭವ, ಅನಿಸಿಕೆಗಳನ್ನು ಆಧರಿಸಿ ಕಾರ್ಯಾಗಾರ ನಡೆಯಲಿದೆ. ಈ ಬಾರಿಯ ಕಾರ್ಯಾಗಾರದಲ್ಲಿ ಸುಮಾರು 40 ವಿದ್ಯಾರ್ಥಿಗಳಿಗೆ ಅವಕಾಶವನ್ನು ಕಲ್ಪಿಸಲಾಗುತ್ತಿದೆ ಎಂದು ತಿಳಿಸಿದರು.

ಶ್ರೀ ಅರಮೇರಿ ಕಳಂಚೇರಿ ಮಠದಲ್ಲಿ ಕಳೆದ 17 ವರ್ಷಗಳಿಂದ ‘ಹೊಂಬೆಳಕು’ ಎನ್ನುವ ಮಾಸಿಕ ಚಿಂತನ ಗೋಷ್ಠಿಯನ್ನು ನಡೆಸುವ ಮೂಲಕ, ವಿಷಯ ಪರಿಣತರಿಂದ ವಿವಿಧ ವಿಷಯಗಳ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಿಕೊಂಡು ಬರಲಾಗುತ್ತಿದ್ದು, ಮಾರ್ಚ್ 3 ರಂದು ನಡೆಯುವ 187ನೇ ಹೊಂಬೆಳಕು ಕಾರ್ಯಕ್ರಮದಲ್ಲಿ ಸಾಹಿತಿ ಪ್ರಭಾಕರ ಶಿಶಿಲ ಬರೆದಿರುವ ‘ದೊಡ್ಡ ವೀರರಾಜೇಂದ್ರ್ರ’ ಪುಸ್ತಕದ ಅನಾವರಣ ಕಾರ್ಯಕ್ರಮ ನಡೆಯಲಿದೆ ಎಂದು ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಇದೇ ಸಂದÀರ್ಭ ಮಾಹಿತಿ ನೀಡಿದರು.