ಧಾಳಿ ಖಂಡಿಸಿದ ಸೌದಿ ರಾಜ

ನವದೆಹಲಿ, ಫೆ. 20: ಪುಲ್ವಾಮದಲ್ಲಿ ಪಾಕಿಸ್ತಾನ ನಡೆಸಿರುವ ಭಯೋತ್ಪಾದಕ ಧಾಳಿಯ ನಂತರ ಭಾರತಕ್ಕೆ ಆಗಮಿಸಿ ಪ್ರಧಾನಿ ಮೋದಿ ಜೊತೆ ದ್ವಿಪಕ್ಷೀಯ ಮಾತುಕತೆ ನಡೆಸಿರುವ ಸೌದಿ ಅರೇಬಿಯಾ ರಾಜ ಮೊಹಮ್ಮದ್ ಬಿನ್ ಸಲ್ಮಾನ್ ಪಾಕಿಸ್ತಾನ ಪ್ರೇರಿತ ಉಗ್ರ ಧಾಳಿಯನ್ನು ಖಂಡಿಸಿದ್ದಾರೆ. ಮೋದಿ-ಸಲ್ಮಾನ್ ನಡುವಿನ ದ್ವಿಪಕ್ಷೀಯ ಮಾತುಕತೆ ವೇಳೆ ಜಮ್ಮು-ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಭಯೋತ್ಪಾದಕ ಧಾಳಿಯ ಬಗ್ಗೆಯೂ ಮಾತುಕತೆ ನಡೆದಿದ್ದು, ವಿಶ್ವಸಂಸ್ಥೆಯಿಂದ ಭಯೋತ್ಪಾದಕ ಸಂಘಟನೆಗಳು ಹಾಗೂ ಭಯೋತ್ಪಾದಕರಿಗೆ ನಿಷೇಧ ವಿಧಿಸುವ ತುರ್ತನ್ನು ಇಬ್ಬರೂ ನಾಯಕರೂ ಮನಗಂಡಿದ್ದಾರೆ. ದ್ವಿಪಕ್ಷೀಯ ಮಾತುಕತೆ ಬಗ್ಗೆ ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದ್ದು, ಪುಲ್ವಾಮ ಧಾಳಿಯಲ್ಲಿ ಪಾಕಿಸ್ತಾನದ ಕೈವಾಡ ಇರುವದನ್ನು ಮಾತುಕತೆ ವೇಳೆ ಸೌದಿಯ ರಾಜ ಬಿನ್ ಸಲ್ಮಾನ್‍ಗೆ ಮನವರಿಕೆ ಮಾಡಿಕೊಡಲಾಗಿದೆ ಎಂದು ಹೇಳಿದೆ. ಇದೇ ವೇಳೆ ದ್ವಿಪಕ್ಷೀಯ ಮಾತುಕತೆ ಪುನಾರಂಭಗೊಳ್ಳುವದಕ್ಕೆ ಅಗತ್ಯವಿರುವ ವಾತಾವರಣವನ್ನು ನಿರ್ಮಿಸುವ ಅಗತ್ಯತೆ ಕುರಿತೂ ಚರ್ಚಿಸಲಾಗಿದೆ.

ವೈಮಾನಿಕ ಪ್ರದರ್ಶನಕ್ಕೆ ಚಾಲನೆ

ಬೆಂಗಳೂರು, ಫೆ. 20: ಏರೋ ಇಂಡಿಯಾ 2019 ವೈಮಾನಿಕ ಪ್ರದರ್ಶನಕ್ಕೆ ಅಧಿಕೃತ ಚಾಲನೆ ದೊರೆಯುತ್ತಿದ್ದಂತೆ, ದೇಶ ವಿದೇಶಗಳ ಅತ್ಯುನ್ನತ ಯುದ್ಧ ಹಾಗೂ ನಾಗರಿಕಯಾನ ವಿಮಾನಗಳು ಮೈನವಿರೇಳಿಸುವ ಪ್ರದರ್ಶನ ನೀಡಿದವು. ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ನಾಗರಿಕ ವಿಮಾನಯಾನ ಸಚಿವ ಸುರೇಶ್ ಪ್ರಭು, ಕೇಂದ್ರ ಸಾಂಖ್ಯಿಕ ಮತ್ತು ದತ್ತಾಂಶ ಇಲಾಖೆ ಸಚಿವ ಡಿ.ವಿ. ಸದಾನಂದ ಗೌಡ, ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಸೇನೆಯ ಮುಖ್ಯಸ್ಥರು ಸೇರಿ ಅನೇಕ ಗಣ್ಯರ ಸಮ್ಮುಖದಲ್ಲಿ ವಿಮಾನಗಳು ಕಸರತ್ತು ನಡೆಸಿದವು. ಆದರೆ, ಈ ಪ್ರದರ್ಶನದ ಉತ್ಸಾಹದ ಬೆನ್ನಲ್ಲೇ ನಿನ್ನೆ ನಡೆದ ಯುದ್ಧ ವಿಮಾನಗಳ ಅಪಘಾತದ ಕರಿನೆರಳು ಢಾಳಾಗಿ ಕಾಣಿಸಿತು. ಹೆಚ್‍ಎಎಲ್‍ನ ಸುಖೋಯ್, ಜಾಗ್ವಾರ್, ತೇಜಸ್ ಯುದ್ಧ ವಿಮಾನಗಳು ಒಟ್ಟಾಗಿ ‘ಮಿಸ್ಸಿಂಗ್ ಮ್ಯಾನ್’ ಹಾರಾಟ ನಡೆಸುವ ಮೂಲಕ ನಿನ್ನೆ ಅಪಘಾತದಲ್ಲಿ ಮೃತಪಟ್ಟ ಪೈಲಟ್ ವಿಂಗ್ ಕಮಾಂಡರ್ ಸಾಹಿಲ್ ಗಾಂಧಿಗೆ ಶ್ರದ್ಧಾಂಜಲಿ ಸಲ್ಲಿಸಿದವು. ನಂತರ ಹೆಚ್‍ಎಎಲ್‍ನಿಂದ ಭಾರತೀಯ ಸೇನೆಗೆ ಸೇರ್ಪಡೆಗೊಂಡಿರುವ ಹಗುರ ಯುದ್ಧ ವಿಮಾನ ತೇಜಸ್, ವಿಮಾನಕ್ಕೆ “ತೇಜಸ್” ಎಂದು ನಾಮಕರಣ ಮಾಡಿದ ಮಾಜಿ ಪ್ರಧಾನಿ ದಿ. ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿತು. ನಂತರ, ಇದೇ ಮೊದಲ ಬಾರಿಗೆ ರಫೇಲ್ ಯುದ್ಧ ವಿಮಾನ ಬಾನಿನಲ್ಲಿ ಚೆಲ್ಲಾಟವಾಡಿತು. ಗಾಳಿಯನ್ನು ತೂರಿಕೊಂಡು ವೇಗವಾಗಿ ನುಗ್ಗುವ ಜೊತೆಗೆ, ಅಷ್ಟೇ ವೇಗವಾಗಿ ಪಲ್ಟಿ ಹೊಡೆಯುವ ಮೂಲಕ ತನ್ನ ಶಕ್ತಿ ಪ್ರದರ್ಶನ ಮಾಡಿತು. ಕೊನೆಯಲ್ಲಿ ಗಂಟೆಗೆ 150 ಕಿ.ಮೀ. ವೇಗದಲ್ಲಿ ನಿಧಾನವಾಗಿ ಚಲಿಸಿ, ಮೃತ ಪೈಲೆಟ್ ಸಾಹಿಲ್ ಗಾಂಧಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದು ವಿಶೇಷವಾಗಿತ್ತು.

ಮಹತ್ವದ ಒಪ್ಪಂದಗಳಿಗೆ ಸೌದಿ ಸಹಿ

ನವದೆಹಲಿ, ಫೆ. 20: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಪರಿಕಲ್ಪನೆಯಾದ ಅಂತರರಾಷ್ಟ್ರೀಯ ಸೌರ ಶಕ್ತಿ ಮೈತ್ರಿಕೂಟ (ಐಎಸ್‍ಎ) ಸೇರ್ಪಡೆಗೆ ಸಂಬಂಧಿಸಿದ ಕಾಗದ ಪತ್ರಗಳನ್ನು ಸೌದಿ ಅರೆಬಿಯಾ ದೆಹಲಿಯಲ್ಲಿ ಬುಧವಾರ ವಿನಿಮಯ ಮಾಡಿಕೊಂಡಿತು. ಸೌದಿ ಅರೇಬಿಯಾದ ರಾಜ ಮೊಹಮ್ಮದ್ ಬಿನ್ ಸಲ್ಮಾನ್ ಭಾರತಕ್ಕೆ ಭೇಟಿ ನೀಡಿದ್ದು ಪ್ರಧಾನಿ ನರೇಂದ್ರ ಮೋದಿ, ವಿದೇಶಾಂಗ ಇಲಾಖೆ ಸಚಿವೆ ಸುಷ್ಮಾ ಸ್ವರಾಜ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ಈ ವೇಳೆ ಭಾರತ ಹಾಗೂ ಸೌದಿ ಅರೆಬಿಯಾ ದೇಶಗಳು, ಪ್ರವಾಸೋದ್ಯಮ, ವಸತಿ, ಪ್ರಸಾರ ಹಾಗೂ ರಾಷ್ಟ್ರೀಯ ಹೂಡಿಕೆ ಮತ್ತು ಮೂಲಸೌಕರ್ಯನಿಧಿಯಲ್ಲಿ ಹೂಡಿಕೆಗೆ ಸಂಬಂಧಿಸಿದ ಮಹತ್ವದ ಒಪ್ಪಂದ ಹಾಗೂ ತಿಳುವಳಿಕೆ ಪತ್ರಗಳಿಗೆ ಸಹಿಹಾಕಿದವು. ದ್ವಿಪಕ್ಷೀಯ ಮಾತುಕತೆ ನಂತರ ಜಂಟಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, “ನವೀಕರಿಸಬಲ್ಲ ಇಂಧನ ವಲಯದಲ್ಲಿ ಸಹಕಾರ ಬಲಪಡಿಸಲು ನಾವು ಸಮ್ಮತಿಸಿದ್ದೇವೆ. ಅಂತರರಾಷ್ಟ್ರೀಯ ಸೌರ ಇಂಧನ ಮೈತ್ರಿಕೂಟಕ್ಕೆ ಸೌದಿ ಅರೆಬಿಯಾವನ್ನು ಹೃದಯ ಪೂರ್ವಕವಾಗಿ ಸ್ವಾಗತಿಸುವದಾಗಿ ಹೇಳಿದರು. ಪರಮಾಣು ಇಂಧನವನ್ನು ಶಾಂತಿಯುತ ಉದ್ದೇಶಗಳಿಗೆ ಬಳಸುವುದು, ಆರೋಗ್ಯ ಮತ್ತು ಸಮುದ್ರ ನೀರನ್ನು ಕುಡಿಯುವ ನೀರನ್ನಾಗಿ ಪರಿವರ್ತಿಸುವದು ಉಭಯ ದೇಶಗಳ ನಡುವಣ ಸಹಕಾರದ ಮತ್ತೊಂದು ಮಜಲು ಎಂದು ಪ್ರಧಾನಿ ಬಣ್ಣಿಸಿದರು.

ಜನÀ ಪ್ರದೇಶದಲ್ಲಿ ಡ್ರೋನ್ ಕಣ್ಗಾವಲು

ಬೆಂಗಳೂರು, ಫೆ. 20: ಸಾರ್ವಜನಿಕ ಕಾರ್ಯಕ್ರಮಗಳು, ಉತ್ಸವಗಳು ನಡೆದಾಗ ಭದ್ರತೆಯ ಕಣ್ಗಾವಲು ಇಡುವುದು ಪೆÇಲೀಸರಿಗೆ ಬಹುದೊಡ್ಡ ಸವಾಲಿನ ಕೆಲಸ. ಅಲ್ಲಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸಿದ್ದರೂ, ಅದರ ವ್ಯಾಪ್ತಿ, ವಿಸ್ತಾರ ಸೀಮಿತ, ಇಂತಹ ಪರಿಸ್ಥಿತಿಯಲ್ಲಿ ಜನನಿಬಿಢ ಪ್ರದೇಶದ ಮೇಲೆ ಕಣ್ಗಾವಲು ಇಡುವ ಪೆÇಲೀಸರ ಸವಾಲಿಗೆ ಉತ್ತರವಾಗಿ ಇಲ್ಲೊಂದು ಮಿನಿ ಡ್ರೋನ್ ಕಣ್ಗಾವಲು ಸಿದ್ಧವಾಗಿದೆ. ಯಲಹಂಕದ ವಾಯುನೆಲೆಯಲ್ಲಿ ನಡೆಯುತ್ತಿರುವ 2019ರ ವೈಮಾನಿಕ ಪ್ರದರ್ಶನದಲ್ಲಿ ಈ ಮಿನಿ ಡ್ರೋನ್ ಅನ್ನು ಪ್ರದರ್ಶನಕ್ಕಿಡಲಾಗಿದೆ. ಡ್ರೋನ್ ಮಾದರಿಯಲ್ಲಿ ನೆಲದಿಂದ ಚಿಟ್ಟೆಯಂತೆ 100 ಮೀಟರ್ ಎತ್ತರಕ್ಕೆ ಹಾರಿ ಸುಮಾರು 2 ಕಿ.ಮೀ. ವರೆಗಿನ ಚಟುವಟಿಕೆಗಳ ಮೇಲೆ ಕಣ್ಣಿಟ್ಟು ಆ ಎಲ್ಲವನ್ನೂ ಸೆರೆ ಹಿಡಿಯುವ ಶಕ್ತಿ ಹೊಂದಿರುವ ಇದಕ್ಕೆ ‘ಪತಂಗ’ ಎಂದು ಹೆಸರಿಡಲಾಗಿದೆ. ಸದ್ಯ ಈ ಉಪಕರಣವನ್ನು ಭಾರತ್ ಎಲೆಕ್ಟ್ರಾನಿಕ್ ಲಿ. ಬಿಇಎಲ್ ಖರೀದಿಸಿದ್ದು, ಶೀಘ್ರದಲ್ಲೇ ಸೇನೆ ಹಾಗೂ ಪೆÇಲೀಸ್ ಪಡೆಯಲ್ಲಿ ಇದನ್ನು ಅಳವಡಿಸುವ ಸಾಧ್ಯತೆಯಿದೆ. ಪತಂಗದ ಕುರಿತು ಯುಎನ್‍ಐ ಕನ್ನಡ ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿದ ಚೆನ್ನೈನ ಎಂಐಟಿ ಕಾಲೇಜಿನ ಯೋಜನಾ ತಂತ್ರಜ್ಞ ರುಶೇಂದರ್, ತಮಿಳುನಾಡು ಸರ್ಕಾರದ ಅನುದಾನದೊಂದಿಗೆ ಎಂಐಟಿ ಕಾಲೇಜಿನಲ್ಲಿ ಈ ಕಣ್ಗಾವಲು ಉಪಕರಣವನ್ನು ತಯಾರಿಸಲಾಗಿದೆ.

ಕಂಪ್ಲಿ ಶಾಸಕ ಗಣೇಶ್ ಬಂಧನ

ಬೆಂಗಳೂರು, ಫೆ. 20: ಬಿಡದಿಯ ಈಗಲ್ಟನ್ ರೆಸಾರ್ಟ್‍ನಲ್ಲಿ ವಿಜಯನಗರ ಶಾಸಕ ಆನಂದ್ ಸಿಂಗ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ಕಂಪ್ಲಿ ಶಾಸಕ ಜೆ.ಎನ್. ಗಣೇಶ್ ಅವರನ್ನು ಪೆÇಲೀಸರು ಬಂಧಿಸಿದ್ದಾರೆ. ಹಲ್ಲೆ ನಡೆಸಿದ ಬಳಿಕ ತಲೆಮರೆಸಿಕೊಂಡಿದ್ದ ಶಾಸಕ ಗಣೇಶ್ ಅವರನ್ನು ಬಿಡದಿ ಪೆÇಲೀಸರು ಬಂಧಿಸಿದ್ದಾರೆ. ವಿಧಾನ ಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಗೃಹ ಸಚಿವ ಎಂ.ಬಿ. ಪಾಟೀಲ್ ಅವರು, ಇಂದು ಮಧ್ಯಾಹ್ನ 2 ಗಂಟೆ ಸಮಯದಲ್ಲಿ ಗುಜರಾತ್‍ನ ಸೋಮನಾಥದಲ್ಲಿ ಕಂಪ್ಲಿ ಗಣೇಶ್ ಅವರನ್ನು ಬಂಧಿಸಲಾಗಿದೆ. ಇಂದು ರಾತ್ರಿ ಬೆಂಗಳೂರಿಗೆ ವಿಮಾನದ ಮೂಲಕ ಕರೆತಂದು ನಾಳೆ ರಾಮನಗರ ಜೆಎಂಎಫ್‍ಸಿ ಕೋರ್ಟ್ ಮುಂದೆ ಹಾಜರುಪಡಿಸುತ್ತೇವೆ ಎಂದರು. ಜನವರಿ 20 ರಂದು ನಡೆದ ಘಟನೆಯಲ್ಲಿ ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಅವರ ಮೇಲೆ ಅದೇ ಪಕ್ಷದ ಶಾಸಕ ಗಣೇಶ್ ಹಲ್ಲೆ ನಡೆಸಿದ್ದರು ಈ ಹಲ್ಲೆಯಿಂದ ಆನಂದ್ ಸಿಂಗ್ ಅವರ ಕಣ್ಣು, ಮುಖದ ಭಾಗ ಸೇರಿ ಹಲವು ಕಡೆ ಗಂಭೀರ ಗಾಯವಾಗಿದ್ದವು. ಹಲ್ಲೆ ನಡೆಸಿದ್ದ ಗಣೇಶ್ ವಿರುದ್ಧ ಬಿಡದಿ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿತ್ತು. ಆದರೆ ತನ್ನ ಬಂಧನ ವಿರುದ್ಧ ನಿರೀಕ್ಷಣಾ ಜಾಮೀನು ಸಲ್ಲಿಸಿದ್ದ ಗಣೇಶ್ ನಿನ್ನೆ (ಮಂಗಳವಾರ) ಅರ್ಜಿಯನ್ನು ಹಿಂಪಡೆದಿದ್ದರು.

ಜೈಲಿನಲ್ಲಿ ಪಾಕ್ ಖೈದಿಯ ಹತ್ಯೆ

ನವದೆಹಲಿ, ಫೆ. 20: ಪುಲ್ವಾಮಾ ಉಗ್ರ ಧಾಳಿಯಲ್ಲಿ 40 ಭಾರತೀಯ ಯೋಧರ ಹುತಾತ್ಮರಾದ ಬೆನ್ನಲ್ಲೇ ಇದೀಗ ದೇಶದೆಲ್ಲೆಡೆ ಆಕ್ರೋಶ ಹೆಚ್ಚುತ್ತಲೇ ಇದ್ದು ಜೈಪುರದ ಕೇಂದ್ರ ಕಾರಾಗೃಹದಲ್ಲಿ ಪಾಕ್ ಖೈದಿಯನ್ನು ಭಾರತೀಯ ಖೈದಿಗಳು ಬಡಿದು ಕೊಂದಿದ್ದಾರೆ. ಇಬ್ಬರು ಭಾರತೀಯ ಖೈದಿಗಳು ಈ ಕೃತ್ಯವನ್ನೆಸಗಿದ್ದು ಪುಲ್ವಾಮಾ ಉಗ್ರ ಧಾಳಿಗೆ ಪ್ರತೀಕಾರವಾಗಿ ಈ ಕೃತ್ಯವನ್ನೆಸಗಿದ್ದಾರೆ ಎಂಬದು ಪ್ರಾಥಮಿಕ ಮಾಹಿತಿ ಪ್ರಕಾರ ತಿಳಿದು ಬಂದಿದೆ. ಅಂತಾರಾಷ್ಟ್ರೀಯ ಜಲ ಗಡಿ ಉಲ್ಲಂಘಿಸಿದ ಆರೋಪದಡಿ ಭಾರತ, ಪಾಕ್, ಶ್ರೀಲಂಕಾ ಸೇರಿದಂತೆ ನೆರೆಹೊರೆಯ ದೇಶಗಳ ಮೀನುಗಾರರು ಆಗಾಗ ಬಂಧನಕ್ಕೊಳಪಡುತ್ತಲೇ ಇರುತ್ತಾರೆ. ಅದೇ ರೀತಿ ಈ ಪಾಕ್ ಮೂಲದವನನ್ನು ಬಂಧಿಸಲಾಗಿತ್ತು.