*ಗೋಣಿಕೊಪ್ಪಲು, ಫೆ. 20: ಹಾತೂರು ಗ್ರಾ.ಪಂ. ವ್ಯಾಪ್ತಿಯ ಕುಂದ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾದ ಪುನರ್‍ವಸತಿ ಕೇಂದ್ರ ಬಸವೇಶ್ವರ ಬಡಾವಣೆ ನಿವಾಸಿಗಳು ಬಡಾವಣೆಗೆ ಶೀಘ್ರದಲ್ಲೆ ಶೌಚಾಲಯ ಸೇರಿದಂತೆ ಮೂಲಭೂತ ಸೌಕರ್ಯಗಳು ಒದಗಿಸಿಕೊಡಬೇಕೆಂದು ಶಾಸಕ ಕೆ.ಜಿ. ಬೋಪಯ್ಯ ಅವರಲ್ಲಿ ಮನವಿ ಸಲ್ಲಿಸಿದರು.

ಪೊನ್ನಂಪೇಟೆ ಶಾಸಕರ ಕಚೇರಿಯಲ್ಲಿ ಬಡಾವಣೆಯ ನಿವಾಸಿಗಳು ಮನವಿ ಸಲ್ಲಿಸಿ ಬಸವೇಶ್ವರ ಬಡಾವಣೆಯಲ್ಲಿ ಹಲವು ತಿಂಗಳುಗಳಿಂದ ಮೂವತ್ತಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿದ್ದಾರೆ. ಆದರೆ ಹಾತೂರು ಗ್ರಾ.ಪಂ ಈ ಬಡಾವಣೆಗೆ ಶೌಚಾಲಯ ನಿರ್ಮಿಸಲು ಮುಂದಾಗಿಲ್ಲ ಎಂದು ಶಾಸಕರಲ್ಲಿ ಹಾತೂರು ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ವಿರುದ್ಧ ಆದಿವಾಸಿ ಹೋರಾಟಗಾರರ ಸಮಿತಿ ಅಧ್ಯಕ್ಷ ಗಪ್ಪು ನೇತೃತ್ವದಲ್ಲಿ ದೂರು ನೀಡಿದರು. ಕೂಡಲೇ ಶಾಸಕರು ಸಂಬಂಧಪಟ್ಟ ಅಧಿಕಾರಿಯನ್ನು ಕಚೇರಿಗೆ ಕರೆಹಿಸಿಕೊಂಡು ಸ್ವಚ್ಛ ಭಾರತ್ ಅಭಿಯಾನದಲ್ಲಿ ಶೌಚಾಲಯ ನಿರ್ಮಿಸಿ ಕೊಡುವಂತೆ ಮತ್ತು ಕುಡಿಯುವ ನೀರು ಒದಗಿಸಿಕೊಡುವಂತೆ ಸೂಚಿಸಿದರು.